ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹45ಕ್ಕೆ ಫೇಸ್ ಶೀಲ್ಡ್ ಸಿದ್ಧಪಡಿಸಿದ ಐಐಟಿ ರೂರ್ಕಿ: ಏಮ್ಸ್ ಸಿಬ್ಬಂದಿಗೆ ರವಾನೆ

Last Updated 4 ಏಪ್ರಿಲ್ 2020, 3:32 IST
ಅಕ್ಷರ ಗಾತ್ರ

ರೂರ್ಕಿ (ಉತ್ತರಾಖಂಡ): ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ ಮುಖಕ್ಕೆ ರಕ್ಷಣಾ ಕವಚವಾಗಿ ಬಳಸಬಹುದಾದ ಫೇಸ್‌ ಶೀಲ್ಡ್‌ಗಳನ್ನು ಐಐಟಿ ರೂರ್ಕಿ 3ಡಿ ಪ್ರಿಂಟರ್‌ ಸಹಾಯದಿಂದ ಸಿದ್ಧಪಡಿಸಿದೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ರೂರ್ಕಿ ಕಡಿಮೆ ಬೆಲೆಗೆ ಪೂರೈಕೆ ಮಾಡಬಹುದಾದ ಫೇಸ್‌ ಶೀಲ್ಡ್‌ಗಳನ್ನು 'ಏಮ್ಸ್‌ ರಿಷಿಕೇಶ್‌' ಸಿಬ್ಬಂದಿಗಾಗಿ ಸಿದ್ಧಪಡಿಸಿದೆ. ಕವಚಕ್ಕೆ ಬಳಸಲಾಗಿರುವ ಶೀಟ್‌ ಬೆಲೆ ₹5ಕ್ಕಿಂತಲೂ ಕಡಿಮೆ ಇದೆ. ಒಂದು ಫೇಸ್‌ ಶಿಲ್ಡ್ ತಯಾರಿಸಲು ಅಂದಾಜು ₹45 ತಗಲುತ್ತದೆ ಹಾಗೂ ದೊಡ್ಡ ಮಟ್ಟದಲ್ಲಿ ಉತ್ಪಾದನೆ ನಡೆಸಿದರೆ ಒಂದು ಕವಚಕ್ಕೆ ₹25ಕ್ಕಿಂತಲೂ ಕಡಿಮೆ ವೆಚ್ಚವಾಗುತ್ತದೆ.

ಫೇಸ್‌ ಶೀಲ್ಡ್‌ ಫ್ರೇಮ್‌ನ್ನು 3ಡಿ ಪ್ರಿಂಟರ್‌ ಬಳಸಿ ಸಿದ್ಧಪಡಿಸಲಾಗುತ್ತಿದೆ. ಫ್ರೇಮ್‌ಗೆ ಪಾರದರ್ಶಕ ಶೀಟ್‌ ಸೇರಿಸಿದರೆ ರಕ್ಷಣಾ ಕವಚ ಸಿದ್ಧವಾಗುತ್ತದೆ. ಕೋವಿಡ್‌–19 ರೋಗಿಗಳಿರುವ ವಾರ್ಡ್‌ಗಳಿಗೆ ಪ್ರವೇಶಿಸುವಾಗ ಕನ್ನಡದ ರೀತಿಯಲ್ಲಿ ಇದನ್ನು ಧರಿಸಿಕೊಳ್ಳಬಹುದು. ಕನ್ನಡಕದ ರೀತಿಯಲ್ಲಿ ಫ್ರೇಮ್‌ ವಿನ್ಯಾಸಗೊಳಿಸಿರುವುದರಿಂದ ಧರಿಸುವುದು, ತೆಗೆಯುವುದು ಸುಲಭ ಹಾಗೂ ವೆಚ್ಚ ಕಡಿಮೆ ಇರುವುದರಿಂದ ಆಗಾಗ್ಗೆ ಬದಲಿಸಲು ಹೊರೆಯಾಗುವುದಿಲ್ಲ.

'ಫೇಸ್‌ ಶೀಲ್ಡ್ ಸಿದ್ಧಪಡಿಸಿರುವ ಐಐಟಿ ರೂರ್ಕಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಇದರಿಂದಾಗಿ ನಮ್ಮ ಸಂಸ್ಥೆಯ ಆರೋಗ್ಯ ಸಿಬ್ಬಂದಿಗಷ್ಟೇ ಅಲ್ಲದೇ ಇಡೀ ದೇಶದಲ್ಲಿ ಕೋವಿಡ್‌–19 ವಿರುದ್ಧ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಅನುವಾಗಲಿದೆ' ಎಂದು ಏಮ್ಸ್‌ ರಿಷಿಕೇಶದ ಪ್ರೊ.ರವಿ ಕಾಂತ್‌ ಹೇಳಿದ್ದಾರೆ.

ವಿದ್ಯಾರ್ಥಿಗಳು ದೇಶೀಯವಾಗಿ ಅಭಿವೃದ್ಧಿ ಪಡಿಸುವುದು, ಸ್ವಂತವಾಗಿ ಪ್ರಯೋಗಗಳನ್ನು ನಡೆಸುವುದು, ಹೊಸ ಆಲೋಚನೆಗಳನ್ನು ಪ್ರಯೋಗಕ್ಕೆ ಒಳಪಡಿಸಲು ಐಐಟಿ ರೂರ್ಕಿಯ 'ರಿಥಿಂಕ್‌, ಟಿಂಕರಿಂಗ್‌ ಲ್ಯಾಬೊರೇಟರಿ' ಸಹಕಾರಿಯಾಗಿದೆ. ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಅದೇ ಪ್ರಯೋಗಾಲಯದಲ್ಲಿಯೇ ಫೇಸ್‌ ಶೀಲ್ಡ್ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ ಐಐಟಿ ರೂರ್ಕಿ 100 ಫೇಸ್‌ ಶಿಲ್ಡ್‌ಗಳನ್ನು ಏಮ್ಸ್‌ಗೆ ತಲುಪಿಸುತ್ತಿದೆ.

'ಮಾನವ ಕುಲದ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗೆ ಧನ್ಯವಾದ ಅರ್ಪಿಸುವ ರೂಪದಲ್ಲಿ ನಾವು ಈ ಫೇಸ್‌ ಶೀಲ್ಡ್‌ಗಳನ್ನು ಸಿದ್ಧಪಡಿಸಿದ್ದೇವೆ' ಎಂದು ಟಿಂಕೆರಿಂಗ್‌ ಲ್ಯಾಬೊರೇಟರಿ ಸಮನ್ವಯದ ಹೊಣೆ ಹೊತ್ತಿರುವ ಪ್ರೊ.ಅಕ್ಷಯ್‌ ದ್ವಿವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT