ಮಂಗಳವಾರ, ಸೆಪ್ಟೆಂಬರ್ 29, 2020
21 °C

ಗೂಗಲ್‌ನಲ್ಲಿ ಸೃಷ್ಟಿಸಿಕೊಳ್ಳಿ ವರ್ಚುವಲ್ ಕಾರ್ಡ್‌; ಭಾರತದ ಬಳಕೆದಾರರಿಗೆ ಮಾತ್ರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗೂಗಲ್‌ನ ಪೀಪಲ್ ಕಾರ್ಡ್ಸ್

ಗೂಗಲ್ ಇನ್ನು ಮುಂದೆ ಬಯೊಡೇಟಾಗಳ ಸಂಗ್ರಹ ತಾಣವೂ ಆಗಲಿದೆ! ಹೆಸರು, ಕೆಲಸ ಮಾಡುವ ಸಂಸ್ಥೆ ಅಥವಾ ಹವ್ಯಾಸ ಇಂಥ ಯಾವುದೇ ಒಂದು ಮಾಹಿತಿ ಇದ್ದರೆ ಸಾಕು, ಭಾರತದ ಯಾವುದೇ ವ್ಯಕ್ತಿಯ ವರ್ಚುವಲ್ ಬಿಸಿನೆಸ್ ಕಾರ್ಡ್ ಥಟ್ಟನೆ ಪ್ರತ್ಯಕ್ಷವಾಗುತ್ತದೆ.

ಆದರೆ, ನೀವು ಹುಡುಕುವ ವ್ಯಕ್ತಿ ಗೂಗಲ್‌ಗೆ ತನ್ನೆಲ್ಲ ವಿವರ ಒಪ್ಪಿಸಿರಬೇಕಷ್ಟೇ. ಆನ್‌ಲೈನ್ ಜಗತ್ತಿನಲ್ಲಿ ತಮ್ಮನ್ನು ತಾವು ಪ್ರಸ್ತುತ ಪಡಿಸಿಕೊಳ್ಳುವುದು ಹಾಗೂ ಮತ್ತೊಬ್ಬರ ಹುಡುಕಾಟವನ್ನು 'ಪೀಪಲ್ ಕಾರ್ಡ್ಸ್' ವ್ಯವಸ್ಥೆಯು ಸುಲಭವಾಗಿಸಲಿದೆ.

ಪೀಪಲ್ ಕಾರ್ಡ್ ವಿವರ ಪಡೆಯುವುದು ಹೇಗೆ?

ಮೊಬೈಲ್‌ನಲ್ಲಿ ಗೂಗಲ್ ಖಾತೆಗೆ ಲಾಗಿನ್‌ ಆಗಿ, ಸರ್ಚ್ ಎಂಜಿನ್‌ ತೆರೆದು, ನಿಮ್ಮ ಪೂರ್ಣ ಹೆಸರು ಟೈಪಿಸಿ ಸರ್ಚ್ ಮಾಡಿ. ಆರಂಭದಲ್ಲಿಯೇ 'ನಿಮ್ಮನ್ನು ನೀವು ಗೂಗಲ್ ಸರ್ಚ್‌ಗೆ ಸೇರಿಸಿಕೊಳ್ಳಿ' (Add yourself to Google search) ಎಂಬ ಪ್ರಕಟಣೆ ಕಾಣುತ್ತದೆ. ಅದರ ಕೆಳಗೆ 'ಗೆಟ್ ಸ್ಟಾರ್ಟೆಡ್' (Get started) ಆಯ್ಕೆ ಒತ್ತಿದರೆ; ಉದ್ಯೋಗ, ಹವ್ಯಾಸ, ಹೆಸರು, ಊರು, ಮೊಬೈಲ್‌ ಸಂಖ್ಯೆ, ಸಾಮಾಜಿಕ‌ ಮಾಧ್ಯಮಗಳ ವಿವರ,...ಬಹುತೇಕ ಎಲ್ಲ ವಿವರ ಭರ್ತಿ ಮಾಡಲು ಅವಕಾಶವಿದೆ.

ವಿವರ ಪೂರ್ಣಗೊಳ್ಳುತ್ತಿದ್ದಂತೆ ನಿಮ್ಮದೇ ವರ್ಚುವಲ್ ಕಾರ್ಡ್ ಸೃಷ್ಟಿಯಾಗಿರುತ್ತದೆ. ಇದರಿಂದ ಉದ್ಯಮಿಗಳು, ಸ್ವ–ಉದ್ಯೋಗಿಗಳು, ಫ್ರೀಲಾನ್ಸರ್‌ಗಳು ಸೇರಿ ದೇಶದ ಯಾವುದೇ ವ್ಯಕ್ತಿ ಮತ್ತೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗಲಿದೆ. 'ಮಂಗಳವಾರದಿಂದ ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಪ್ರಸ್ತುತ ಇಂಗ್ಲಿಷ್‌ನಲ್ಲಿ ಪೀಪಲ್‌ ಕಾರ್ಡ್‌ ಹುಡುಕಾಟ ನಡೆಸಬಹುದಾಗಿದೆ' ಎಂದು ಗೂಗಲ್‌ ಸರ್ಚ್‌ ಪ್ರಾಡಕ್ಟ್‌ ಮ್ಯಾನೇಜರ್‌ ಲಾರೆನ್‌ ಕ್ಲಾರ್ಕ್ ಹೇಳಿದ್ದಾರೆ.


ವರ್ಚುವಲ್ ಪೀಪಲ್‌ ಕಾರ್ಡ್

ಸುರಕ್ಷತೆಯ ಕಾರಣಗಳು ಹಾಗೂ ಮಾಹಿತಿ ದುರುಪಯೋಗ ತಪ್ಪಿಸುವ ನಿಟ್ಟಿನಲ್ಲಿ ಒಂದು ಜಿಮೇಲ್‌ ಖಾತೆಗೆ ಒಂದು ಕಾರ್ಡ್‌ ಮಾತ್ರ ಸೃಷ್ಟಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಮತ್ತೊಂದು ಕಾರ್ಡ್‌ ಸೃಷ್ಟಿಸಿಕೊಳ್ಳಲು ಪ್ರತ್ಯೇಕ ಮೊಬೈಲ್‌ ನಂಬರ್‌ ಹಾಗೂ ವೆರಿಫೀಕೇಷನ್‌ ಮಾಡಿಕೊಳ್ಳಬೇಕಾಗುತ್ತದೆ.

ವಿವರ ಬದಲಿಸಲು, ಇಲ್ಲವೇ ಅಪ್‌ಡೇಟ್‌ ಮಾಡಲು ಬಳಕೆದಾರರಿಗೆ ಸಂಪೂರ್ಣ ಅವಕಾಶವಿರುತ್ತದೆ. ಸದ್ಯ ಮೊಬೈಲ್‌ ಫೋನ್‌ಗಳಲ್ಲಿ ಮಾತ್ರ ಪೀಪಲ್‌ ಕಾರ್ಡ್‌ ಹುಡುಕಾಟ ಮತ್ತು ಕಾರ್ಡ್ ರೂಪಿಸಿಕೊಳ್ಳಲು ಸಾಧ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು