ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ: ಬ್ಯಾಂಕ್ ಖಾತೆ ಖಾಲಿಯಾಗಲು ಒಂದೇ ಕರೆ ಸಾಕು!

ಜನಸಾಮಾನ್ಯರು ಯಾವ ಎಚ್ಚರಿಕೆ ವಹಿಸಬೇಕು?
Last Updated 20 ಅಕ್ಟೋಬರ್ 2020, 6:44 IST
ಅಕ್ಷರ ಗಾತ್ರ

ಡಿಜಿಟಲೀಕರಣ, ನಗದು ರಹಿತ ವ್ಯವಹಾರಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಂತೆ, ಹಣಕಾಸು ವಂಚನೆ ಪ್ರಕರಣಗಳೂ ಸೈಬರ್ (ಇಂಟರ್ನೆಟ್ ಮೂಲಕ ಕಂಪ್ಯೂಟರ್, ಮೊಬೈಲ್ ಮುಂತಾದ ಉಪಕರಣಗಳ ಬಳಕೆಯ) ಜಗತ್ತಿನಲ್ಲಿ ವಿಪರೀತವೆನಿಸುವಷ್ಟು ಹೆಚ್ಚಾಗಿವೆ. ಜನ ಸಾಮಾನ್ಯರು ಬ್ಯಾಂಕ್ ಖಾತೆಗಳಿಗೆ, ಟೆಲಿಕಾಂ ಸೇವೆಗಳಿಗೆ ತಮ್ಮ ಬಯೊಮೆಟ್ರಿಕ್ (ಕಣ್ಣುಪಾಪೆ, ಬೆರಳಚ್ಚು) ಮಾಹಿತಿಯೂ ಇರುವ ಆಧಾರ್ ಸಂಖ್ಯೆ ಒದಗಿಸುವುದು ಕಡ್ಡಾಯ ಎಂದಾದ ಬಳಿಕ, ಈ ರೀತಿಯ ಮಾಹಿತಿಗಳ್ಳತನವೂ ಹೆಚ್ಚಾಗತೊಡಗಿದೆ ಎಂಬುದು ಸುಳ್ಳೇನಲ್ಲ.

ನೆನಪಿಡಿ, ಯಾರೇ ಆದರೂ ಫೋನ್ ಮಾಡಿ ಒಟಿಪಿ ಕೇಳುತ್ತಾರೆಂದಾದರೆ, ಅದು ವಂಚನೆಯ ಮೊದಲ ಸುಳಿವು. ‘ಒಟಿಪಿ ಯಾರೊಂದಿಗೂ ಹಂಚಿಕೊಳ್ಳಬೇಡಿ’ ಎಂದು ಬ್ಯಾಂಕುಗಳು, ರಿಸರ್ವ್ ಬ್ಯಾಂಕ್ ಕೂಡ ಪದೇ ಪದೇ ಸಂದೇಶ ಕಳುಹಿಸುತ್ತಿವೆ. ಬ್ಯಾಂಕ್ ಅಧಿಕಾರಿ, ಟ್ಯಾಕ್ಸ್ ಅಧಿಕಾರಿ, ಕಸ್ಟಮ್ಸ್ ಅಧಿಕಾರಿ ಅಥವಾ ಪೊಲೀಸ್ ಅಂತೆಲ್ಲಾ ಹೇಳಿಕೊಂಡು ವಂಚಕರು ಒಟಿಪಿಗಾಗಿ ಕರೆ ಮಾಡುತ್ತಲೇ ಇರುತ್ತಾರೆ. ವಿದ್ಯಾವಂತರೇ ಸೈಬರ್ ಅಪರಾಧಿಗಳ ಮೋಸದ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಥೆಗಳನ್ನು ಓದುತ್ತಲೇ ಇರುವಾಗ ಏನೂ ಅರಿಯದ, ತಂತ್ರಜ್ಞಾನದ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲದ ಜನಸಾಮಾನ್ಯನ ಕಥೆ?

ಭದ್ರತೆ ನಮ್ಮ ಕೈಯಲ್ಲೇ ಇದೆ: ಮೊಬೈಲ್ ಆ್ಯಪ್ ಮೂಲಕವೇಎಲ್ಲವೂ ನಿರ್ವಹಣೆಯಾಗುತ್ತಿರುವ ಈ ಸಂದರ್ಭದಲ್ಲಿ, ಸೈಬರ್ ಕ್ರಿಮಿನಲ್‌ಗಳು ಗಾಳ ಹಾಕಿ ಕುಳಿತಿರುತ್ತಾರೆ. ಕೈಯೊಳಗಿರುವ ಮೊಬೈಲ್ ಎಂಬ ಬ್ರಹ್ಮಾಂಡವನ್ನು ಸಮರ್ಪಕವಾಗಿ ನಿಭಾಯಿಸದೇ ಹೋದರೆ ಮತ್ತು ಎಚ್ಚರ ತಪ್ಪಿ ಬಳಸಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂಬ ಅರಿವು ಇರಬೇಕಾಗುತ್ತದೆ.

ನಮ್ಮದೇ ಸ್ನೇಹಿತರಿಂದ ಇಮೇಲ್ ಬರುತ್ತದೆ. ಅದರಲ್ಲಿರುವ ಒಕ್ಕಣೆ ಹೀಗಿರುತ್ತದೆ: ‘ನಾನು ಲಂಡನ್‌ಗೆ ಬಂದಿದ್ದೆ, ಪಿಕ್ ಪಾಕೆಟ್ ಆಗೋಯ್ತು. ನನ್ನ ಕ್ರೆಡಿಟ್ ಕಾರ್ಡ್, ದುಡ್ಡೆಲ್ಲ ಹೋಗಿದೆ. ಅರ್ಜೆಂಟಾಗಿ ನನ್ನ ಇಲ್ಲಿನ ಈ ಖಾತೆಗೆ ಒಂದಿಪ್ಪತ್ತೈದು ಸಾವಿರ ರೂಪಾಯಿ ಹಾಕಿಬಿಡಿ. ಬಂದ ತಕ್ಷಣ ಮರಳಿಸುತ್ತೇನೆ’ ಅಂತ ಇಂಗ್ಲಿಷಿನಲ್ಲೇ ಸಂದೇಶವೊಂದು ನಿಮ್ಮ ಇಮೇಲ್‌ಗೆ ಬಂದಿರಬಹುದು. ಸ್ನೇಹಿತ ಎಂಬ ಕಾರಣಕ್ಕೆ ಯಾರಲ್ಲೋ ಕೇಳಿಯಾದರೂ ಆ ಖಾತೆಗೆ ನೀವು ಹಣ ಹಾಕುತ್ತೀರಿ. ಇದು ಸ್ನೇಹಿತನ ಇಮೇಲ್ ಹ್ಯಾಕ್ ಮಾಡಿದ ಸೈಬರ್ ಅಪರಾಧಿಯೊಬ್ಬ, ಅದರಲ್ಲಿರುವ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿರುವವೆಲ್ಲರಿಗೂ ಕಳುಹಿಸಿದ ಮೇಲ್! ಹೆಚ್ಚಿನವರು ಹಣ ಕಳುಹಿಸುತ್ತಾರೆ, ಸ್ನೇಹಿತನಿಗೆ ಫೋನ್ ಮಾಡಿ ಕೇಳುವ ಪ್ರಯತ್ನವನ್ನೂ ಮಾಡುವುದಿಲ್ಲ.

ಗಮನಿಸಬೇಕಾದ ಅಂಶಗಳು

* ಮೊದಲನೇ ಸೂತ್ರವೇ, ಯಾರಿಗೂ ಒಟಿಪಿ ಕೊಡಬೇಡಿ. ಮನೆಯ ಹಿರಿಯರಿಗೆ, ಮಕ್ಕಳಿಗೆ ಈ ಬಗ್ಗೆ ತಿಳಿಹೇಳಲೇಬೇಕು.

* ಎಸ್ಸೆಮ್ಮೆಸ್, ಇಮೇಲ್ ಮೂಲಕ ಬರುವ ಯಾವುದೇ ಲಿಂಕ್‌ಗಳನ್ನು ನೋಡದೆ ಕ್ಲಿಕ್ ಮಾಡಲೇಬೇಡಿ. ಈ ಲಿಂಕ್‌ಗಳಲ್ಲಿ ನಮ್ಮ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿ ಕದಿಯುವ ಕುತಂತ್ರಾಂಶಗಳಿರಬಹುದು. ಕ್ಲಿಕ್ ಮಾಡಿದ ತಕ್ಷಣ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಇನ್‌ಸ್ಟಾಲ್ ಆಗಿ, ಅದರಲ್ಲಿರುವ ಬ್ಯಾಂಕಿನ ಲಾಗಿನ್, ಪಾಸ್‌ವರ್ಡ್ ಮುಂತಾದ ಖಾಸಗಿ ಮಾಹಿತಿ ಕದ್ದು ರವಾನಿಸಬಹುದು.

* ‘ಆಧಾರ್ ಅಪ್‌ಡೇಟ್ ಮಾಡಿ, ಬ್ಯಾಂಕ್ ಖಾತೆ ದೃಢೀಕರಿಸಿ’ ಅಂತೆಲ್ಲಾ ಬರುವ ಲಿಂಕ್‌ಗಳನ್ನಾಗಲೀ, ಕರೆಗಳನ್ನಾಗಲೀ ನಂಬಲೇಬೇಡಿ. ಬ್ಯಾಂಕುಗಳೆಂದಿಗೂ ಈ ರೀತಿ ಲಿಂಕ್ ಕಳುಹಿಸಿ ಅಪ್‌ಡೇಟ್ ಮಾಡಲು ಕೇಳುವುದಿಲ್ಲ. ಫೋನ್ ಕೂಡ ಮಾಡುವುದಿಲ್ಲ.

* ಆಧಾರ್ ಸಂಖ್ಯೆಯನ್ನೂ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಈ ಸಂಖ್ಯೆಯನ್ನಿಟ್ಟುಕೊಂಡು, ನಮ್ಮ ಸಿಮ್ ಕಾರ್ಡನ್ನು ನಿಷ್ಕ್ರಿಯಗೊಳಿಸಿ, ಹೊಸತನ್ನು ತಾವಾಗಿ ಖರೀದಿಸಿ, ಅದಕ್ಕೆ ಬಂದ ಒಟಿಪಿ ಬಳಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರೂ ಇರುತ್ತಾರೆ.

* ಕೆವೈಸಿ (Know Your Customer - ನಿಮ್ಮ ಗ್ರಾಹಕನನ್ನು ತಿಳಿದುಕೊಳ್ಳಿ) ಎಂಬ ಹೆಸರಿನಲ್ಲಿಯೂ ಫೋನ್ ಕರೆಗಳು, ಲಿಂಕ್‌ಗಳು ಬರುತ್ತವೆ. ಅಂಥವನ್ನೂ ನಿರ್ಲಕ್ಷಿಸಿಬಿಡಿ.

* ನಮ್ಮ ಇಮೇಲ್ ಖಾತೆ, ಸೋಷಿಯಲ್ ಮೀಡಿಯಾ ಖಾತೆಗಳಿಗೆ ಎರಡು ಹಂತದ ದೃಢೀಕರಣ (2 ಸ್ಟೆಪ್ ವೆರಿಫಿಕೇಶನ್) ಸಕ್ರಿಯಗೊಳಿಸಿಕೊಳ್ಳಲೇಬೇಕು.

* ಸೋಷಿಯಲ್ ಮೀಡಿಯಾದಲ್ಲಿ ಎಂದಿಗೂ ಫೋನ್ ನಂಬರ್, ಆಧಾರ್ ನಂಬರ್ ಹಂಚಿಕೊಳ್ಳಬೇಡಿ.

* ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಮರುಳು ಮಾತಿನ ವಂಚಕರ ಬಗ್ಗೆ ಮನೆಯ ಮಕ್ಕಳು ಹಾಗೂ ಹಿರಿಯರಲ್ಲಿ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಲಿ.

* ಮೊಬೈಲ್ ಫೋನ್‌ನಲ್ಲಿ ಧುತ್ತನೇ ಪಾಪ್-ಅಪ್ ಆಗುವ ವಿಂಡೋಗಳಲ್ಲಿ ಸುಖಾ ಸುಮ್ಮನೆ ಕ್ಲಿಕ್ ಮಾಡಲು ಹೋಗಬೇಡಿ.

* ಹಬ್ಬಗಳು ಬಂದಾಗ, ನಮ್ಮ ಹೆಸರು ತೋರಿಸಿ ಶುಭಾಶಯ ಕಳುಹಿಸಲು ಸುಲಭವಾಗಿಸುವ ಅದೆಷ್ಟೋ ನಕಲಿ ವೆಬ್‌ಸೈಟುಗಳ ಲಿಂಕುಗಳು ಹರಿದಾಡುತ್ತಿವೆ. ‘ಇಲ್ಲಿ ಕ್ಲಿಕ್ ಮಾಡಿ, ಅಚ್ಚರಿ ನೋಡಿ’ ಅಂತೆಲ್ಲ ಸಂದೇಶಗಳಿರುತ್ತವೆ. ಅವುಗಳಲ್ಲಿ ಹೆಚ್ಚಿನವು ನಮ್ಮ ಐಡೆಂಟಿಟಿ ಕಳವು ಮಾಡಿ, ಖಾಸಗಿ ಮಾಹಿತಿ ಸಂಗ್ರಹಿಸುವ ಜಾಲತಾಣಗಳು ಎಂಬುದು ನೆನಪಿರಲಿ.

* ಸೈಬರ್ ಸೆಂಟರ್‌ಗಳಲ್ಲಿ ಅಥವಾ ಸಾರ್ವಜನಿಕ ಬಳಕೆಯ ಕಂಪ್ಯೂಟರುಗಳಲ್ಲಿ ಆನ್‌ಲೈನ್ ಹಣಕಾಸು ವ್ಯವಹಾರ ಮಾಡಲೇಬೇಡಿ.

* ಯಾವುದೇ ಆನ್‌ಲೈನ್ ಖಾತೆಗೆ ಊಹಿಸಲಾರದ, ಪ್ರಬಲವಾದ ಪಾಸ್‌ವರ್ಡ್ ಬಳಸಿ ಮತ್ತು ಅದನ್ನು ಆಗಾಗ್ಗೆ ಬದಲಿಸುತ್ತಾ ಇರಿ. ಈಗ ಒಂದು ಸಂಖ್ಯೆ, ಒಂದು ವಿಶೇಷ ಅಕ್ಷರ, ಕ್ಯಾಪಿಟಲ್ ಅಕ್ಷರ - ಇವುಗಳನ್ನು ಕಡ್ಡಾಯ ಮಾಡಿದ್ದೇ ಈ ರೀತಿಯ ಪ್ರಬಲ ಸುರಕ್ಷತೆಗಾಗಿ.

* ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪಾನ್, ಆಧಾರ್ - ಈ ಸಂಖ್ಯೆಗಳನ್ನು, ಅದರ ಪಿನ್/ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ.

* ಕಂಪ್ಯೂಟರ್ ಸಾಧನಗಳಿಗೆ ಸಮರ್ಥವಾದ ಆ್ಯಂಟಿವೈರಸ್ ತಂತ್ರಾಂಶವಿರಲಿ. ಜೊತೆಗೆ ಅದರ ತಂತ್ರಾಂಶಗಳನ್ನು, ಕಾರ್ಯಾಚರಣಾ ವ್ಯವಸ್ಥೆಯ ಅಪ್‌ಡೇಟ್‌ಗಳನ್ನು ಅಳವಡಿಸಿಕೊಳ್ಳಲೇಬೇಕು.

* ಬ್ರೌಸರ್ ಎಕ್ಸ್‌ಟೆನ್ಷನ್‌ಗಳು, ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಅವು ಸಾಚಾವೇ ಎಂಬ ಬಗ್ಗೆ ಎಚ್ಚರಿಕೆ ವಹಿಸಲೇಬೇಕು.

* ಫೋನ್ ಮತ್ತು ಕಂಪ್ಯೂಟರ್‌ಗೆ ಪ್ರಬಲವಾದ ಸ್ಕ್ರೀನ್ ಲಾಕ್ ಬಳಸಿ, ಲಾಕ್‌ಸ್ಕ್ರೀನ್ ನೋಟಿಫಿಕೇಶನ್‌ಗಳನ್ನೂ ಡಿಸೇಬಲ್ ಮಾಡಿಬಿಡಿ.

* ಬ್ಯಾಂಕ್ ಖಾತೆಗೆ ಬಳಸುವ ಇಮೇಲ್ ವಿಳಾಸ ಮತ್ತು ಫೋನ್ ನಂಬರು ನಿಮಗೆ ಮತ್ತು ಮನೆಯವರಿಗೆ ಮಾತ್ರವೇ ಗೊತ್ತಿದ್ದರೆ ಸೂಕ್ತ. ಇತರ ಆನ್‌ಲೈನ್ ವ್ಯವಹಾರಗಳಿಗೆ, ಸ್ನೇಹಿತರ ಸಂಪರ್ಕಕ್ಕೆ ಪ್ರತ್ಯೇಕ ಮೊಬೈಲ್ ನಂಬರ್, ಇಮೇಲ್ ವಿಳಾಸ ಇರುವುದು ಒಳಿತು.

* ಕೆಲವು ವೆಬ್ ತಾಣಗಳ ಸವಲತ್ತು ಪಡೆಯಬೇಕಿದ್ದರೆ ಅವುಗಳಿಗೆ ಲಾಗಿನ್ ಆಗಬೇಕಾಗುತ್ತದೆ. ಸರಿಯಾಗಿ
ಓದಿಕೊಂಡು, ಕ್ಲಿಕ್ ಮಾಡಿ.

ಎಚ್ಚರಿಕೆಯೊಂದೇ ಎಲ್ಲದಕ್ಕೂ ಪರಿಹಾರ, ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT