ಬುಧವಾರ, ಸೆಪ್ಟೆಂಬರ್ 22, 2021
23 °C

ವಿಶ್ವಾಸಾರ್ಹ ಮೂಲದಿಂದ ಮಾಹಿತಿ ಲಭ್ಯವಿರದಿದ್ದರೆ ಎಚ್ಚರಿಕೆ ನೀಡಲಾಗುವುದು: ಗೂಗಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

DH Photo

ನವದೆಹಲಿ: ವಿಶ್ವಾಸಾರ್ಹ ಮೂಲದಿಂದ ಸಾಕಷ್ಟು ಮಾಹಿತಿ ಲಭ್ಯವಿಲ್ಲದೆ ಇದ್ದಾಗ ಎಚ್ಚರಿಕೆಯ ಸಂದೇಶವನ್ನು ನೀಡುವುದಾಗಿ ಸರ್ಚ್‌ ಇಂಜಿನ್‌ ಗೂಗಲ್‌ ಹೇಳಿದೆ.

ಬಳಕೆದಾರರಿಗೆ ನಮ್ಮ ಸರ್ಚ್‌ ಇಂಜಿನ್‌ನಿಂದ ವಿಷಯಕ್ಕೆ ಸಂಬಂಧಿಸಿದ ಮತ್ತು ವಿಶ್ವಾಸಾರ್ಹ ಮಾಹಿತಿ ಸಿಗಬೇಕು. ಬಳಕೆದಾರರು ಸರ್ಚ್‌ ಇಂಜಿನ್‌ ಮೂಲಕ ಹುಡುಕಿದಾಗ ಲಭ್ಯವಾಗುವ ಮಾಹಿತಿಯು ಭರವಸೆ ಇಡಲು ಸಾಧ್ಯವಾಗದ ಮೂಲಗಳಿಂದ ಬಂದಿದ್ದರೆ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಗೂಗಲ್‌ ತಿಳಿಸಿದೆ.

ನಂಬಿಕಾರ್ಹ ಮೂಲಗಳಿಂದ ನಿರ್ದಿಷ್ಟ ವಿಷಯದ ಬಗ್ಗೆ ಅಗತ್ಯ ಮಾಹಿತಿ ಲಭ್ಯವಿರದೆ ಇದ್ದಾಗ ಎಚ್ಚರಿಕೆ ರವಾನೆಯಾಗುತ್ತದೆ.

ಪ್ರಸ್ತುತ ಸಮಂಜಸವಾದ, ನಂಬಿಕಾರ್ಹವಾದ ಮಾಹಿತಿಯನ್ನು ಒದಗಿಸುವುದು ಅತ್ಯಂತ ಅಗತ್ಯವಾಗಿದೆ. ಸಾಮಾಜಿಕ ತಾಣದಲ್ಲಿ ಯಾವುದೇ ವಿಷಯ ಸಿಕ್ಕಿದರೆ ಅಥವಾ ಸ್ನೇಹಿತನ ಜೊತೆ ಮಾತನಾಡುವಾಗ ಯಾವುದೇ ಮಾಹಿತಿ ಸಿಕ್ಕಿದರೆ ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ತಕ್ಷಣ ಗೂಗಲ್‌ ಮೊರೆ ಹೋಗುತ್ತೀರಿ. ಅಂತಹ ಸಂದರ್ಭದಲ್ಲಿ ಸೂಕ್ತ ಫಲಿತಾಂಶ ನೀಡಲು ಸದಾ ಸಿದ್ಧರಿದ್ದೇವೆ ಎಂದು ಗೂಗಲ್‌ ಬ್ಲಾಗ್‌ನಲ್ಲಿ ಉಲ್ಲೇಖಿಸಿದೆ.

ಆದರೆ ಕೆಲವೊಮ್ಮೆ ಆಗ ತಾನೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಆದ ವಿಷಯದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಬ್ರೇಕಿಂಗ್‌ ನ್ಯೂಸ್‌ಗಳು ಆನ್‌ಲೈನ್‌ ಸಂಚಲನ ಸೃಷ್ಟಿಸಿದಾಗ ಅದರ ವಿಶ್ವಾಸಾರ್ಹತೆಯನ್ನು ತಿಳಿಯಲು ಸ್ವಲ್ಪ ಸಮಯದ ಬಳಿಕ ಪುನಃ ಪರಿಶೀಲಿಸಿ ಎಂಬ ಸೂಚನೆಯನ್ನು ನೀಡುವುದಾಗಿ ಗೂಗಲ್‌ ತಿಳಿಸಿದೆ.

ನಂತರ ವಿಶ್ವಾಸಾರ್ಹ ಮೂಲಗಳಲ್ಲಿ ವಿಷಯ ಸರಿಯಾಗಿದ್ದರೆ ಸೂಚನೆಯನ್ನು ತೆಗೆದು ಹಾಕಲಾಗುತ್ತದೆ. ನಂಬಿಕಾರ್ಹ ಮೂಲಗಳಿಂದ ನಿರ್ದಿಷ್ಟ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇರದಿದ್ದರೆ ಎಚ್ಚರಿಕೆಯ ಸೂಚನೆ ನೀಡಲಾಗುತ್ತದೆ ಎಂದು ಗೂಗಲ್ ಹೇಳಿದೆ.

ಕೆಲವು ಸಂದರ್ಭಗಳಲ್ಲಿ 'ಇದು ಕೆಲವೇ ಸಮಯದಲ್ಲಿ ಬದಲಾಗುವ ಸಾಧ್ಯತೆ ಇದೆ' ಎಂಬ ಸೂಚನೆಯೊಂದಿಗೆ ಕೆಳಗೆ 'ಇದು ಹೊಸ ವಿಷಯವಾಗಿದ್ದರೆ, ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿ ಫಲಿತಾಂಶ ನೀಡಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ' ಎಂಬ ಸಂದೇಶ ಲಭ್ಯವಿರಲಿದೆ ಎಂದು ಗೂಗಲ್‌ ತಿಳಿಸಿರುವುದಾಗಿ 'ಬ್ಯುಸಿನೆಸ್‌ ಲೈನ್‌' ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು