ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಡೇಟಾ ಸೆಂಟರ್‌ಗಳು: ಏನಿದರ ವಿಶೇಷ

Last Updated 2 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತಪ್ರತಿದಿನ ದೊರೆಯುವ ಅಪಾರ ಪ್ರಮಾಣದ ಡೇಟಾ ನಿರ್ವಹಣೆಗಾಗಿ ಡೇಟಾ ಸೆಂಟರ್‌ಗಳು ದಿನದ 24 ಗಂಟೆಗಳು ಕೆಲಸ ಮಾಡುತ್ತವೆ. ಭಾರತದಲ್ಲಿ ಹೆಚ್ಚು ಪರಿಸರಸ್ನೇಹಿಯಾಗಿರುವ ಅತ್ಯಾಧುನಿಕ ಡೇಟಾ ಸೆಂಟರ್‌ಗಳು ಸ್ಥಾಪನೆಯಾಗುತ್ತಿದ್ದು, ಇವುಗಳನ್ನು ‘ಗ್ರೀನ್ ಡೇಟಾ ಸೆಂಟರ್‍’ ಅಥವಾ ‘ಹಸಿರು ಡೇಟಾ ಸೆಂಟರ್‌’ಗಳೆಂದು ಕರೆಯಲಾಗುತ್ತದೆ. ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಂದಾಜು ಒಂದು ಲಕ್ಷ 20 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿ, ನಮ್ಮ ದೇಶದ ಡೇಟಾ ಸೆಂಟರ್ ಉದ್ಯಮದ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚು ಮಾಡಲು ಉದ್ದೇಶಿಸಲಾಗಿದೆ.

ಡೇಟಾ ಸೆಂಟರ್‌ಗಳಲ್ಲಿ ಮುಂಬರುವ ದಿನಗಳಲ್ಲಿ ಆಗಲಿರುವ ಕೆಲವು ಪ್ರಮುಖ ಬದಲಾವಣೆಗಳು ಹೀಗಿವೆ:

lಡೇಟಾ ನಿರ್ವಹಣೆ ಮತ್ತು ಸಂಗ್ರಹಣೆ ವಿಧಾನ ಹಾಗೂ ತಂತ್ರಜ್ಞಾನಗಳಲ್ಲಿ ಬದಲಾವಣೆ ಅತ್ಯಗತ್ಯವಾಗಿದೆ. ಉದಾಹರಣೆಗೆ, ವಾಣಿಜ್ಯ ಸಂಸ್ಥೆಗಳು, ಬ್ಯಾಂಕುಗಳು, ಸರ್ಕಾರದ ಇಲಾಖೆಗಳು – ಹೀಗೆ ಬೃಹತ್ ಪ್ರಮಾಣದ ಡೇಟಾವನ್ನು ಬಳಸುವ ಗ್ರಾಹಕರು, ಡೇಟಾ ಸೆಂಟರ್ ಸೇವೆಗಳನ್ನು ಬಳಸುತ್ತಿದ್ದಾರ. ಆದರೆ ಈಗಿರುವ ವಿಧಾನ ಮತ್ತು ತಂತ್ರಜ್ಞಾನಗಳಲ್ಲಿರುವ ನ್ಯೂನತೆಗಳಿಂದಾಗಿ ಇಂತಹ ಗ್ರಾಹಕರ ಡೇಟಾ ನಿರ್ವಹಣೆ ಮತ್ತು ಸಂಗ್ರಹಣೆಯಲ್ಲಿ ಲೋಪಗಳಾಗುತ್ತಿವೆ.

* ಯಾವ ರೀತಿಯ ಸುಧಾರಣೆ ತರಬಹುದು – ಎಂದು ತಜ್ಞರು ನಡೆಸಿದ ಅಧ್ಯಯನ ವರದಿಯ ಪ್ರಕಾರ ಡೇಟಾ ಸೆಂಟರ್ ಗ್ರಾಹಕರು ಹೆಚ್ಚಾಗಿ ಬಳಸುವ ಡೇಟಾ ಪ್ರಮಾಣ ಶೇ. 10ರಷ್ಟು ಇದ್ದರೆ, ಅಗತ್ಯ ಬಿದ್ದಾಗ ಮಾತ್ರ ಬಳಸುವ ಡೇಟಾ ಪ್ರಮಾಣ ಶೇ. 30ರಷ್ಟು ಆಗಿದೆ. ಉಳಿದ ಶೇ. 60ರಷ್ಟು ಡೇಟಾವನ್ನು ತೀರಾ ಅಪರೂಪಕ್ಕೆ ಒಮ್ಮೆ ಗ್ರಾಹಕರು ಬಳಸುತ್ತಿದ್ದಾರೆ. ಆದರೆ ಈಗಿನ ಕೆಲವು ಡೇಟಾ ಸೆಂಟರ್‍ಗಳಲ್ಲಿ ಈ ರೀತಿ ಡೇಟಾವನ್ನು ವ್ಯವಸ್ಥಿತವಾಗಿ ವಿಂಗಡಿಸಿ, ನಿರ್ವಹಿಸಲು ಅಗತ್ಯವಾದ ಅಧುನಿಕ ವಿಧಾನಗಳು ಮತ್ತು ತಂತ್ರಜ್ಞಾನಗಳ ಬಳಕೆಯಾಗುತ್ತಿಲ್ಲವೆನ್ನುವ ಆತಂಕವನ್ನು ಈ ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗ್ರಾಹಕರ ಡೇಟಾ ಒಂದು ಕಡೆ ವ್ಯವಸ್ಥಿತವಾಗಿ ದೊರೆಯುವ ಬದಲಾಗಿ, ಹಲವಾರು ಕಡೆ ಸಂಗ್ರಹವಾಗಿರುತ್ತದೆ ಮತ್ತು ಡೇಟಾ ಪ್ರಮಾಣ ಹೆಚ್ಚಾದಂತೆ, ಗ್ರಾಹಕರಿಗೆ ಹೆಚ್ಚು ಸಮಸ್ಯೆಗಳು ಎದುರಾಗುತ್ತಿವೆ.

* ಅಪರೂಪಕ್ಕೆ ಒಮ್ಮೆ ಗ್ರಾಹಕರು ಬಳಸುವ ಶೇ. 60ರಷ್ಟು ಡೇಟಾವನ್ನು ನಿರ್ವಹಿಸಲು ಮತ್ತು ಸಂಗ್ರಹಿಸಲು ನೂರಾರು ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಹಾರ್ಡಡಿಸ್ಕ್ ಮತ್ತು ಸ್ಟೋರೇಜ್ ಅರ್ರೇಗಳನ್ನು ಡೇಟಾ ಸೆಂಟರ್‌ಗಳಲ್ಲಿ ಬಳಸುವುದರಿಂದ ಡೇಟಾ ಸೆಂಟರ್‌ಗಳ ವೆಚ್ಚವೂ ಹೆಚ್ಚಾಗುತ್ತಿದೆ; ಡೇಟಾ ಸೆಂಟರ್‌ಗಳ ಸೇವೆಗಳನ್ನು ಬಳಸಲು ಗ್ರಾಹಕರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತಿದೆ. ಇದರ ಬದಲಾಗಿ, ಗ್ರಾಹಕರ ಡೇಟಾ ಬಳಕೆಯನ್ನು ಅಧುನಿಕ ತಂತ್ರಜ್ಞಾನಗಳ ಮೂಲಕ ವಿಶ್ಲೇಷಣೆ ಮಾಡಿ, ಅನಗತ್ಯ ಡೇಟಾವನ್ನು ಡೇಟಾ ಸೆಂಟರ್‌ಗಳಲ್ಲಿ ಇಡುವುದರಿಂದ ಗ್ರಾಹಕರಿಗೂ ಹೆಚ್ಚು ವೆಚ್ಚವಾಗುತ್ತಿದೆ ಎಂದು ಮನವರಿಕೆ ಮಾಡಿಕೊಳ್ಳುವ ಕೌಶಲವನ್ನು ಹೊಂದಿರುವ ತಂತ್ರಜ್ಞರಿಗೆ ದೇಶವಿದೇಶಗಳಲ್ಲಿರುವ ಡೇಟಾ ಸೆಂಟರ್‌ಗಳಲ್ಲಿ ಬೇಡಿಕೆ ಇದೆ.

* ಕ್ಲೌಡ್ ಸೇವೆಗಳನ್ನು ನೀಡುವ ಸಂಸ್ಥೆಗಳು ಪ್ರಾರಂಭವಾದಾಗ ವಿಶ್ವಾದ್ಯಂತ ಇರುವ ಡೇಟಾ ಸೆಂಟರ್‌ಗಳನ್ನು ಬಳಸುವ ಗ್ರಾಹಕರು, ಕ್ಲೌಡ್ ಸೇವೆಗಳನ್ನು ಬಳಸಲು ಮುಂದಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 2020ರಲ್ಲಿ ಜಾಗತಿಕ ಮಟ್ಟದಲ್ಲಿ ನೆಡೆದ ಒಂದು ಅಧ್ಯಯನದ ವರದಿಯ ಪ್ರಕಾರ, ಮುಖ್ಯವಾಗಿ ಮಾಹಿತಿ ಸುರಕ್ಷತೆ ಕುರಿತು ಆತಂಕವನ್ನು ಹೊಂದಿರುವ ಗ್ರಾಹಕರು ನಿರೀಕ್ಷೆ ಮಾಡಿದಷ್ಟು ಕ್ಲೌಡ್ ಸೇವೆಗಳನ್ನು ಬಳಸುತ್ತಿಲ್ಲ. ಈಗಾಗಲೇ ಪಬ್ಲಿಕ್ ಕ್ಲೌಡ್ ಸೇವೆಗಳನ್ನು ಬಳಸಲು ಪ್ರಾರಂಭಿಸಿದ ಗ್ರಾಹಕರಲ್ಲಿ ಶೇ. 85ರಷ್ಟು ಗ್ರಾಹಕರು, ಪಬ್ಲಿಕ್ ಕ್ಲೌಡ್ ಬದಲಾಗಿ ಖಾಸಗಿ ಅಥವಾ ಪ್ರೈವೇಟ್ ಕ್ಲೌಡ್ ಸೇವೆಗಳನ್ನು ಬಳಸಲು ಮುಂದಾಗಿದ್ದಾರೆ. ಇದೇ ರೀತಿ ಅನೇಕ ಗ್ರಾಹಕರು ಪಬ್ಲಿಕ್ ಕ್ಲೌಡ್ ಸೇವೆಗಳನ್ನು ಬಿಟ್ಟು ಡೇಟಾ ಸೆಂಟರ್ ಸೇವೆಗಳನ್ನು ಮತ್ತೆ ಬಳಸಲು ಮುಂದಾಗುತ್ತಿದ್ದಾರೆ. ಹೀಗಾಗಿ ಪಬ್ಲಿಕ್ ಕ್ಲೌಡ್‍ನಿಂದ ಪ್ರೈವೇಟ್ ಕ್ಲೌಡ್ ವ್ಯವಸ್ಥೆಗೆ ಅಥವಾ ಪಬ್ಲಿಕ್ ಕ್ಲೌಡ್‍ನಿಂದ ಮತ್ತೆ ಡೇಟಾ ಸೆಂಟರ್ ವ್ಯವಸ್ಥೆಗೆ ಗ್ರಾಹಕರ ಡೇಟಾ, ತಂತ್ರಾಂಶಗಳು, ಇತ್ಯಾದಿಗಳನ್ನು ವರ್ಗಾಯಿಸುವ ಕೌಶಲವನ್ನು ಹೊಂದಿರುವವರಿಗೆ ದೇಶವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

* ಡೇಟಾ ಸೆಂಟರ್‍ನಲ್ಲಿ ಅತ್ಯಾಧುನಿಕ ಡೇಟಾ ಸುರಕ್ಷತೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳ ಬಳಕೆ ಜನಪ್ರಿಯವಾಗುತ್ತಿದೆ. ಅತ್ಯಾಧುನಿಕ ಮತ್ತು ಅಧಿಕ ಸಾಮರ್ಥ್ಯದ ಕಂಪ್ಯೂಟರ್ ಸರ್ವರ್‌ಗಳ ಬಳಕೆ ಹೆಚ್ಚಾದಂತೆ, ಇವುಗಳ ಬಳಕೆಯಿಂದ ಉತ್ಪತ್ತಿಯಾಗುವ ಶಾಖವನ್ನು ನಿಯಂತ್ರಿಸಲು ಡೇಟಾ ಸೆಂಟರ್‌ಗಳಲ್ಲಿ ಅತ್ಯಾಧುನಿಕ ದ್ರವ ಆಧಾರಿತ ಕೂಲಿಂಗ್ ವ್ಯವಸ್ಥೆ ಬಳಕೆ ಅನಿವಾರ್ಯವಾಗುತ್ತಿದೆ. ಹೀಗಾಗಿ ವಿವಿಧ ಸುರಕ್ಷತೆ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳು, ಅತ್ಯಾಧುನಿಕ ಸರ್ವರ್‌ಗಳ ನಿರ್ವಹಣೆ ಮತ್ತು ದ್ರವ ಆಧಾರಿತ ಕೂಲಿಂಗ್ ವ್ಯವಸ್ಥೆಯ ಕೌಶಲಗಳನ್ನು ಹೊಂದಿರುವವರಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

* ಸಾಂಪ್ರದಾಯಿಕ ಡೇಟಾ ಸೆಂಟರ್‌ಗಳಿಗಿಂತ ಗ್ರೀನ್ ಡೇಟಾ ಸೆಂಟರ್‌ಗಳನ್ನು ಗ್ರಾಹಕ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳುತ್ತಿವೆ. ಉದಾಹರಣೆಗೆ, ಗ್ರೀನ್ ಡೇಟಾ ಸೆಂಟರ್‌ಗಳ ದೀರ್ಘಾವಧಿಯ ನಿರ್ವಹಣೆ ವೆಚ್ಚದಲ್ಲಿ ಉಳಿತಾಯ ಸಾಧ್ಯವಾಗುತ್ತದೆ. ಬೇರೆ ಡೇಟಾ ಸೆಂಟರ್‌ಗಳಿಗಿಂತ ಗ್ರೀನ್ ಡೇಟಾ ಸೆಂಟರ್‌ಗಳಿಗೆ ಬೇಕಾಗುವ ಸ್ಥಳಾವಕಾಶ, ವಿದ್ಯುತ್ ಮತ್ತು ನೀರಿನ ಬಳಕೆಯಲ್ಲಿ ಉಳಿತಾಯ ಸಾಧ್ಯವಿದೆ. ಗ್ರೀನ್ ಡೇಟಾ ಸೆಂಟರ್‌ಗಳಿಂದ ಉಂಟಾಗುವ ಕಾರ್ಬನ್ ಮಾಲಿನ್ಯ ಹಾಗೂ ತ್ಯಾಜ್ಯ ಕೂಡ ಕಡಿಮೆಯಾಗಿರುತ್ತದೆ.

ಅಧುನಿಕ ಡೇಟಾ ಸೆಂಟರ್ ಉದ್ಯೋಗಗಳಲ್ಲಿ ಹಾರ್ಡವೇರ್, ನೆಟ್‍ವರ್ಕ್‌, ಡೇಟಾ ಮಾತ್ರವಲ್ಲದೆ, ಹಲವಾರು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಅವಕಾಶಗಳನ್ನು ನೀಡಲಾಗುತ್ತಿದೆ. ತಂತ್ರಜ್ಞರ ಕೆಲಸವನ್ನು ಕಡಿಮೆ ಮಾಡಲು ಆಟೋಮೇಷನ್ ಬಳಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಅಂತರರಾಷ್ಟ್ರೀಯ ಡೇಟಾ ಸೆಂಟರ್ ಉದ್ಯಮದಲ್ಲಿ ಭಾರತ ಪ್ರಮುಖ ಸ್ಥಾನ ಪಡೆಯಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT