ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸೂಪರ್ ಆ್ಯಪ್‌ ಜಮಾನ!

Last Updated 5 ಏಪ್ರಿಲ್ 2022, 21:30 IST
ಅಕ್ಷರ ಗಾತ್ರ

ಶಾಪಿಂಗ್‌ ಸೆಂಟರ್‌ಗಳೆಂದರೆ ಆಕರ್ಷಣೆಯ ತಾಣ. ಎಲ್ಲವೂ ಒಂದೇ ಕಡೆ ಸಿಗಬೇಕು ಎಂಬ ಜನರ ಅನುಕೂಲದ ಮನಃಸ್ಥಿತಿಯನ್ನು ಕಾಲಕಾಲಕ್ಕೆ ಹಲವು ರೀತಿಯಲ್ಲಿ ವ್ಯಾಪಾರಿಗಳು ಬಳಕೆ ಮಾಡಿಕೊಂಡಿದ್ದಾರೆ. ಪಟ್ಟಣಗಳಲ್ಲಿ ನಿರ್ಮಾಣವಾದ ಮಾರುಕಟ್ಟೆ ಎಂಬ ಕಲ್ಪನೆಗೂ ಇದೇ ಮೂಲ. ನಂತರ ಮೆಟ್ರೋ ನಗರಗಳಲ್ಲಿ ತಲೆ ಎತ್ತಿದ ಮಾಲ್‌ಗಳ ಕಲ್ಪನೆಯೂ ಇದೇ ಮೂಲದ್ದು!

ಇಲ್ಲಿ ಒಳಹೊಕ್ಕರೆ ಜನರಿಗೆ ಎಲ್ಲವೂ ಸಿಗಬೇಕು. ಲಾಲಿಪಾಪ್‌ನಿಂದ ಹಿಡಿದು ಚಿನ್ನದ ತುಂಡಿನವರೆಗೆ ಎಲ್ಲವೂ ಸಿಗಬೇಕು. ಜನರು ಹೆಚ್ಚು ಹೆಚ್ಚು ಸಮಯ ಇಲ್ಲಿ ಕಳೆಯಬೇಕು. ಅವರ ಕಣ್ಣಿಗೆ ಖರೀದಿ ಮಾಡಬಹುದಾದ್ದು ಏನಾದರೂ ಸಿಗುತ್ತಿರಬೇಕು – ಎಂಬುದು ಈ ಮಾಲ್‌ ಬ್ಯುಸಿನೆಸ್ ಮಂತ್ರ. ಒಂದು ಕರ್ಚೀಫು ಖರೀದಿ ಮಾಡಲು ಹೋದರೆ, ಐಸ್‌ಕ್ರೀಮ್ ಕಾಣಿಸುತ್ತದೆ; ಐಸ್‌ಕ್ರೀಮ್ ತಿನ್ನುತ್ತೇವೆ. ಒಂದು ಚೆಂದದ ಶರ್ಟ್ ಕಾಣಿಸುತ್ತದೆ; ಅದನ್ನೂ ಖರೀದಿಸುತ್ತೇವೆ. ಮಕ್ಕಳನ್ನು ಕರೆದುಕೊಂಡು ಹೋಗಿದ್ದರೆ, ಅವರಿಗೆ ಅಲ್ಲೇ ವಿಧ ವಿಧದ ಗೇಮ್ಸ್ ಇರುತ್ತದೆ. ಅಲ್ಲಿ ಅವರನ್ನು ಬಿಡುತ್ತೀರಿ! ಹೀಗೆ, ಎಲ್ಲಕ್ಕೂ ಅಲ್ಲೇ ಜಾಗವಿದೆ. ಇದೇ ವಿಧಾನ ಈಗ ಡಿಜಿಟಲ್‌ ರೂಪವನ್ನೂ ಪಡೆಯುತ್ತಿದೆ ಎಂದರೆ ನೀವು ನಂಬಬೇಕು!

ಇದಕ್ಕೆ ಹೆಸರು ಬೇರೆ ಅಷ್ಟೇ. ಇದನ್ನು ‘ಸೂಪರ್ ಆ್ಯಪ್’ ಎಂದು ಕರೆದಿದ್ದಾರೆ. ಈ ಸೂಪರ್ ಆ್ಯಪ್‌ ಕಲ್ಪನೆ ಶುರುವಾಗಿದ್ದು ಚೀನಾದಲ್ಲಿ. ಅಲ್ಲಿ ಚಾಟ್ ಆ್ಯಪ್ ಆಗಿ ಶುರುವಾದ ವಿ ಚಾಟ್‌ ಜನಪ್ರಿಯವಾದ ನಂತರ, ಅದು ತನ್ನನ್ನು ಹಲವು ಸೇವೆಗಳಲ್ಲಿ ತೊಡಗಿಸಿಕೊಂಡಿತು. ಸಾಲ ತೆಗೆದುಕೊಳ್ಳುವುದು, ಶಾಪಿಂಗ್ ಮಾಡುವುದು, ಹಣ ವರ್ಗಾವಣೆ ಮಾಡುವುದು – ಇಂಥ ವಿವಿಧ ರೀತಿಯ ಸೇವೆಗಳನ್ನು ಒದಗಿಸಲು ಶುರು ಮಾಡಿತು.

ಇಲ್ಲೊಂದು ರಿಯಲ್ ಎಸ್ಟೇಟ್ ಸಮಸ್ಯೆಯೂ ಇತ್ತು! ಮಾಲ್‌ಗಳು ಹೇಗೆ ಒಂದೇ ಸೂರಿನಲ್ಲಿ ಎಲ್ಲವನ್ನೂ ಕಡಿಮೆ ಸ್ಥಳವನ್ನು ಬಳಸಿಕೊಳ್ಳುತ್ತಿದ್ದವೋ ಹಾಗೆಯೇ, ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಕೊರತೆಯಿಂದಾಗಿ ಜನರು ಒಂದೊಂದು ಸಾಮಗ್ರಿಯ ಶಾಪಿಂಗ್‌ಗಾಗಿಯೇ ಹಲವು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದರು. ಇದು ಕೂಡ ಸೂಪರ್ ಆ್ಯಪ್‌ ಕಲ್ಪನೆಗೆ ಇಂಬು ನೀಡಿತು.

ಸಾಮಾನ್ಯವಾಗಿ, ಸೂಪರ್ ಆ್ಯಪ್‌ಗಳು ಎರಡು ಶೈಲಿಯಲ್ಲಿ ಚಲಾವಣೆಗೆ ಬರುತ್ತವೆ. ಯಾವುದೋ ಒಂದು ಸೇವೆಯನ್ನು ಆರಂಭಿಸಿ, ಅದು ಜನಪ್ರಿಯವಾದಾಗ ಆ ಬಳಕೆದಾರರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಲಾಭದ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳುವುದು ಒಂದು ಉದ್ದೇಶವಾದರೆ, ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕಂಪನಿಯೊಂದು ತನ್ನ ಎಲ್ಲ ಸೇವೆಗಳನ್ನೂ ಒಂದೇ ಸೂರಿನಡಿ ಗ್ರಾಹಕರಿಗೆ ಒದಗಿಸುವುದು ಇನ್ನೊಂದು ವಿಧಾನ.

ಈ ಎರಡೂ ರೀತಿಯ ಸೂಪರ್ ಆ್ಯಪ್‌ಗಳು ಭಾರತದಲ್ಲಿವೆ. ಅಷ್ಟೇ ಅಲ್ಲ, ಇನ್ನು ಮುಂದಿನ ಕೆಲವು ವರ್ಷಗಳವರೆಗೆ ಈ ಸೂಪರ್ ಆ್ಯಪ್‌ಗಳದ್ದೇ ಜಮಾನ! ಈಗಾಗಲೇ ಜನಪ್ರಿಯವಾಗಿರುವ ಆ್ಯಪ್‌ಗಳು ಒಂದೊಂದೇ ಸೇವೆಯನ್ನು ಹೆಚ್ಚಿಸುತ್ತಾ ಸೂಪರ್ ಆ್ಯಪ್‌ಗಳಾಗುತ್ತ ಹೊರಡುತ್ತಿವೆ. ಅಮೆಜಾನ್ ತನ್ನ ಆ್ಯಪ್‌ನಲ್ಲಿ ಪೇಮೆಂಟ್ ಸೌಲಭ್ಯವನ್ನೂ ಒದಗಿಸಿದೆ. ಇನ್ನು ಪೇಟಿಎಂ ಮೊದಲು ಹಣ ವರ್ಗಾವಣೆಗೆ ಶುರುವಾದ ಆ್ಯಪ್‌, ಈಗ ಎಲ್ಲ ಸೇವೆಗಳನ್ನೂ ಒದಗಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟಾಟಾ ಸಮೂಹ ತನ್ನ ಎಲ್ಲ ಅಂಗಸಂಸ್ಥೆಗಳ ಪ್ರತ್ಯೇಕ ಆ್ಯಪ್‌ಗಳನ್ನೆಲ್ಲ ಸೇರಿಸಿ ‘ಟಾಟಾ ನ್ಯೂ’ ಎಂಬ ಹೊಸ ಸೂಪರ್ ಆ್ಯಪ್ ಬಿಡುಗಡೆ ಮಾಡುವುದರಲ್ಲಿದೆ.

ವಾಟ್ಸ್‌ಆ್ಯಪ್‌ ಕೂಡ ಈಗಾಗಲೇ ಪೇಮೆಂಟ್, ಬ್ಯುಸಿನೆಸ್‌ಗೆಲ್ಲ ಕಾಲಿಟ್ಟಿದೆ. ಫೇಸ್‌ಬುಕ್ ಕೂಡ ಮಾರ್ಕೆಟ್‌ಪ್ಲೇಸ್‌ ಶುರು ಮಾಡಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಆ್ಯಪ್‌ಗಳು ಸೂಪರ್ ಆಗುವತ್ತ ಸಾಗುತ್ತವೆ.

ಇದರಲ್ಲಿ ಇರುವ ಮುಖ್ಯ ಸಮಸ್ಯೆಯೆಂದರೆ, ಇವು ಹೀಗೆ ದೈತ್ಯವಾಗುತ್ತ ಸಾಗಿದ ಹಾಗೆ, ಆ್ಯಪ್‌ಗಳು ಪ್ರತಿಕ್ರಿಯಿಸುವ ವೇಗ ನಿಧಾನವಾಗುತ್ತದೆ. ಒಂದು ಟ್ಯಾಬ್ ತೆರೆದುಕೊಳ್ಳಲು ಒಂದು ಸೆಕೆಂಡು ನಿಧಾನವಾದರೂ ಜನರು ವಿಚಲಿತರಾಗುತ್ತಾರಂತೆ! ಇದರಿಂದ ಬಳಕೆದಾರರ ಸಂತೃಪ್ತಿಯ ಮಟ್ಟ ಕಡಿಮೆಯಾಗುತ್ತದೆ ಎಂಬ ಹೆದರಿಕೆಯೂ ಉದ್ಯಮಗಳಿಗೆ ಇದೆ. ಆದರೆ, 5ಜಿ ಬಂದ ಮೇಲೆ ಈ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾದೀತು. ಇದರ ಜೊತೆಗೆ, ಬಳಕೆದಾರರ ದೃಷ್ಟಿಕೋನದಲ್ಲಾದರೆ, ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಹೆಚ್ಚು ಸ್ಥಳವನ್ನು ಇವು ತಿನ್ನುತ್ತವೆ.

ಏನೇ ಆದರೂ, ಸೂಪರ್ ಆ್ಯಪ್‌ಗಳು ಉದ್ಯಮಗಳಿಗೆ ತಮ್ಮ ಎಲ್ಲ ಸೇವೆಗಳನ್ನೂ ಗ್ರಾಹಕರಿಗೆ ಒಂದೇ ಕಡೆಗೆ ಒದಗಿಸುವ ಮೂಲಕ ತಮ್ಮ ಹೊಸ ಹೊಸ ಸೇವೆಗಳಿಗೆ ಪ್ರಚಾರದ ಖರ್ಚು ಕಡಿಮೆ ಮಾಡಿಕೊಳ್ಳುವ ಅನುಕೂಲವಾದರೆ, ಗ್ರಾಹಕರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ನೀಟಾಗಿ ಇಟ್ಟುಕೊಳ್ಳುವ ಒಂದು ವಿಧಾನವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT