ಗುರುವಾರ , ಏಪ್ರಿಲ್ 9, 2020
19 °C

ಅಂಗೈಯೊಳಗೊಂದು ಪುಸ್ತಕ ಲೋಕ

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಅಂಗೈ ಒಳಗೆ ಕುಳಿತ ಮೊಬೈಲ್ ತೆಗೆದಿಟ್ಟು ಪುಸ್ತಕ ಹಿಡಿದು ಓದಲು ಪ್ರಯಾಸಪಡುವವರಿಗಾಗಿ ‘ಮೈಲ್ಯಾಂಗ್ ಆ್ಯಪ್‌’ ಮಾರ್ಚ್‌ 1ರಂದು ಬಿಡುಗಡೆಗೊಳ್ಳುತ್ತಿದೆ. ಕರಣಂ ಪವನ್ ಪ್ರಸಾದ್, ಜೋಗಿ, ವಸುಧೇಂದ್ರ, ಗಿರಿಮನೆ ಶ್ಯಾಮರಾವ್, ಸತ್ಯೇಶ್ ಬೆಳ್ಳೂರು, ಹನುಮಂತ ಹಾಲಿಗೇರಿ, ಫಕೀರ, ಕಪಿಲ ಹುಮ್ನಾಬಾದೆ, ಗುರುಪಾದ ಬೇಲೂರು, ಗಂಗಾವತಿ ಪ್ರಾಣೇಶ್, ಅಹೋರಾತ್ರ ಮುಂತಾದವರ 100ಕ್ಕೂ ಹೆಚ್ಚು ಪುಸ್ತಕಗಳು ಇ–ಬುಕ್ ಆಗಿ ಹೊರಬರುತ್ತಿರುವುದು ಈ ಆ್ಯಪ್ ವಿಶೇಷ.

ಮನರಂಜನೆ, ಸುದ್ದಿ ಓದುವುದು ಎಲ್ಲದಕ್ಕೂ ಜನರು ಮೊಬೈಲ್ ಅವಲಂಬಿಸಿರುವ ಈ ಕಾಲಘಟ್ಟದಲ್ಲಿ, ಪುಸ್ತಕ ಓದುವ ಸಂಸ್ಕೃತಿಯನ್ನು ಉಳಿಸಿ ಬೆಳಸುವುದಕ್ಕೆ ತಂತ್ರಜ್ಞಾನದ ಸ್ಪರ್ಶ ಬೇಕಿದೆ ಎಂಬ ಆಲೋಚನೆಯೇ ‘ಮೈಲ್ಯಾಂಗ್ ಆ್ಯಪ್‌’ ಹುಟ್ಟಿಗೆ ಕಾರಣ.

ಟೆಕ್ನಾಲಜಿ ಆಧಾರಿತ ಆಧುನಿಕ ಕನ್ನಡ ಪ್ರಕಾಶನ ಸಂಸ್ಥೆಯನ್ನು ಕಟ್ಟುವುದರ ಮೂಲಕ ಕನ್ನಡ ಓದುಗರಿಗೆ ಎಲ್ಲ ಬಗೆಯ ಸಮಕಾಲೀನ ವಿಷಯ ಕುರಿತ ಪುಸ್ತಕಗಳನ್ನು ನೀಡುವುದು. ಕತೆ ಮತ್ತು ಕತೆಗೆ ಹೊರತಾದ ಪ್ರಕಾರಗಳೆರಡರಲ್ಲಿಯೂ ಹೊಸ ರೀತಿಯ ಪುಸ್ತಕಗಳನ್ನು ಕನ್ನಡಕ್ಕೆ ತರುವುದು ಎಲ್ಲ ಪ್ರಕಾಶನಗಳ ಕನ್ನಡ ಪುಸ್ತಕಗಳನ್ನು ಹೆಚ್ಚು ಜನಪ್ರಿಯಗೊಳಿಸುವುದು, ಓದುಗರಿಗೆ ಕನ್ನಡ ಪುಸ್ತಕಗಳು ಸುಲಭವಾಗಿ ದೊರೆಯುವಂತೆ ಮಾಡುವುದು ಹಾಗೂ ‌ಕನ್ನಡ ಬರಹಗಾರರಿಗೆ ಹೆಚ್ಚು ಬರೆಯುವಂತೆ ಪ್ರೇರೇಪಿಸಿ ಅವರಿಗೆ ಬರವಣಿಗೆಯ ವೃತ್ತಿಯಲ್ಲಿ ಹೆಚ್ಚು ಯಶಸ್ಸನ್ನು ತಂದುಕೊಡಬೇಕೆಂಬ ಆಶಯ ಮತ್ತು ಗುರಿಯನ್ನು ಇಟ್ಟುಕೊಂಡ ಕನಸುಗಾರ ಚಿತ್ರದುರ್ಗದ ಪವಮಾನ್ ಪ್ರಸಾದ್ ಅಥಣಿ.

ಈ ಎಲ್ಲಾ ಆಶಯ ಇಟ್ಟುಕೊಂಡ ಪವಮಾನ್ ಅವರು ಆರಂಭಿಸಿದ್ದು ‘ಮೈಲ್ಯಾಂಗ್ ಆ್ಯಪ್‌’. ಇವರ ಕನ್ನಡದ ಕನಸಿಗೆ ಹೆಗಲಾದವರು ಕನ್ನಡ ಹೋರಾಟಗಾರ, ಮುನ್ನೋಟ ಬಳಗದ ವಸಂತ ಶೆಟ್ಟಿ.

ಪವಮಾನ್ ಅವರು ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಕಂಪೆನಿಯ ಸಂಸ್ಥಾಪಕರು ಮತ್ತು ಸಿ.ಇ.ಓ. ಈ ಸಂಸ್ಥೆಯ ಮೂಲಕ ‘ಮೈಲ್ಯಾಂಗ್ ಆ್ಯಪ್‌’ ಅಭಿವೃದ್ಧಿಪಡಿಸಿದ್ದಾರೆ. ವಸಂತ ಶೆಟ್ಟಿ ಅವರು ‘ಮೈಲ್ಯಾಂಗ್ ಆ್ಯಪ್‌’ನ ಮಾರ್ಕೆಟಿಂಗ್ ಮತ್ತು ಕಂಟೆಂಟ್ ವಿಭಾಗದಲ್ಲಿ ದುಡಿಯುತ್ತಿದ್ದಾರೆ.

‘ಕನ್ನಡ ಪುಸ್ತಕಗಳ ಖರೀದಿ, ತಂತ್ರಜ್ಞಾನಕ್ಕೆ ಅದನ್ನು ಅಳವಡಿಸುವ ವಿಚಾದ ಅಥವ ಹೊಸ ಮಾಧ್ಯಮದ ಮೂಲಕ ಹೊಸ ಲೇಖಕರು ಪರಿಚಯಿಸುವುದು ಇಂಥ ವಿಚಾರಗಳಲ್ಲಿ ಕನ್ನಡ ಪುಸ್ತಕ ಜಗತ್ತು ಹಿಂದೆ ಬಿದ್ದಿದೆ. ಹಾಗಾಗಿ ಸರಿಯಾದ ಟೆಕ್ನಾಲಜಿ ಅನುಭವ ಇಟ್ಟುಕೊಂಡು ನಾವ್ಯಾಕೆ ಇ– ಬುಕ್ ಹಾಗೂ ಆಡಿಯೊ ಬುಕ್ ತಾಣ ಮಾಡಬಾರದು ಎಂಬ ಆಲೋಚನೆಯಿಂದ ‘ಮೈಲ್ಯಾಂಗ್ ಆ್ಯಪ್‌’ ಆರಂಭಿಸಿದ್ದೇವೆ’ ಎನ್ನುತ್ತಾರೆ ವಸಂತ್‌ ಶೆಟ್ಟಿ.

ಗುಣಮಟ್ಟದ ಪುಸ್ತಕಗಳ ಆಯ್ಕೆ ಮಾಡಲೆಂದೇ ತಂಡವಿದೆ. ಸಂಪಾದಕೀಯ ಮಂಡಳಿಯಲ್ಲಿ ಎಸ್. ದಿವಾಕರ್‌ ಅವರು ಇದ್ದಾರೆ. ಹಾಗೇ ಇವರೊಂದಿಗೆ ಟೆಕ್ನಾಲಜಿ ಅಭಿವೃದ್ಧಿಯಲ್ಲಿ ನೀತಾ ಅವಲಕ್ಕಿ, ಕಂಟೆಂಟ್‌ನಲ್ಲಿ ಸುಧೀಂದ್ರ ಇದ್ದಾರೆ.

ಹೆಚ್ಚುತ್ತಿರುವ ಸ್ಮಾರ್ಟ್‌ ಫೋನ್ ಮತ್ತು ಅಂತರಜಾಲ ಬಳಕೆಯಿಂದ ಈ ಆ್ಯಪ್‌ ಬಿಡುಗಡೆ ಮಾಡಲು ಸಕಾಲ ಎಂಬುವುದು ಇವರ ನಂಬಿಕೆ. ಡಿಜಿಟಲ್‌ ವ್ಯಾಲೆಟ್‌ ಆದ ಗೂಗಲ್ ಪೇ, ಫೋನ್‌ ಪೇ ಮೂಲಕ ವ್ಯವಹಾರ ಮಾಡಬಹುದು ಹಾಗಾಗಿ ಕನ್ನಡ ಪುಸ್ತಕ ಖರೀದಿ ಹಾಗೂ ಪುಸ್ತಕ ಓದಿಗೆ ತಂತ್ರಜ್ಞಾನ ಮೂಲಕ ಪೂರಕವಾದ ವೇದಿಕೆ ಕಲ್ಪಿಸಿದ್ದಾರೆ.

ಸಾವಿರ ಪ್ರತಿಗೆ ಮುಕ್ತಾಯ!
ಕೆಲವು ಜನಪ್ರಿಯ ಲೇಖಕಕರ ಪುಸ್ತಕಗಳು ಬಿಟ್ಟರೆ, ಸಾವಿರ ಪ್ರತಿಯ; ಒಂದು ಮುದ್ರಣ ಕಂಡ ಬಹುತೇಕ ಪುಸ್ತಕಗಳು ಮರು ಮುದ್ರಣ ಕಾಣುತ್ತಿಲ್ಲ. ಹಾಗೇ ಹೊಸ ಲೇಖಕರ, ಕವಿಗಳ ಪುಸ್ತಕ ಪ್ರಕಟ ಮಾಡಲು ಕಷ್ಟವಾಗುತ್ತಿದೆ. ಇದಕ್ಕೆ ‘ಮೈಲ್ಯಾಂಗ್ ಆ್ಯಪ್‌’ ಉತ್ತರವಾಗಬಲ್ಲದು. ಇವರೊಂದಿಗೆ ಮೊದಲ ಹಂತದಲ್ಲಿ ಸಾವಣ್ಣ, ಛಂದ, ಪಂಚಮಿ ಪ್ರಕಾಶನ, ಗಿರಿಮನೆ ಪ್ರಕಾಶನ, ಕಾನ್ಕೇವ್ ಮೀಡಿಯಾ ಪ್ರಕಾಶಕರು ಕೈಜೋಡಿಸಿ ತಮ್ಮ ಪ್ರಕಾಶದಿಂದ ಹೊರಬಂದ ಪುಸ್ತಕಗಳನ್ನು ಇ–ಬುಕ್ ಮಾಡಲು ಒಪ್ಪಿಗೆ ನೀಡಿದ್ದಾರೆ.

ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಕಂಪೆನಿ ಪ್ರಕಾಶನ ಸಂಸ್ಥೆಯಾಗೂ ಕೆಲಸ ಮಾಡಲಿದೆ. ಪ್ರತಿ ವರ್ಷ ಐದಾರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದೆ.

ನಾಲ್ಕು ಆಡಿಯೊ ಬುಕ್
‘ಮೈಲ್ಯಾಂಗ್ ಆ್ಯಪ್‌’ನಲ್ಲಿ ಆಡಿಯೊ ಬುಕ್‌ ಕೂಡ ಲಭ್ಯವಿದೆ. ಕರಣಂ ಪವನ್ ಪ್ರಸಾದ್ ಅವರ ಧ್ವನಿಯಲ್ಲಿ ಅವರದ್ದೇ ‘ಕರ್ಮ’ ಕಾದಂಬರಿ, ನಟ ಗೋಪಾಲಕೃಷ್ಣ ದೇಶಪಾಂಡೆ ಅವರ ಧ್ವನಿಯಲ್ಲಿ ಜೋಗಿ ಅವರ ‘ಎಲ್‌’ ಕಾದಂಬರಿ, ಗಿರಿಮನೆ ಶ್ಯಾಮರಾವ್‌ ಅವರ ಧ್ವನಿಯಲ್ಲಿ ಅವರ ‘ಮಾತು ಹೇಗಿದ್ದರೆ ಚೆಂದ’ ಪುಸ್ತಕಗಳನ್ನು ಕೇಳಬಹುದು.

ಈ ಆ್ಯಪ್‌ಗಾಗಿಯೇ ಕಾದಂಬರಿಕಾರ ಜೋಗಿ ಅವರು ‘ಅಶ್ವತ್ಥಾಮನ್‌’ ಎಂಬ ಕಾದಂಬರಿ ಬರೆದಿದ್ದಾರೆ. ಈ ಕಾದಂಬರಿ ನಟ ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಇದೆ.

‘ಮೈಲ್ಯಾಂಗ್ ಆ್ಯಪ್‌’ ಆ್ಯಪ್‌ ಬಳಕೆ
ಈ ಆ್ಯಪ್ ಆ್ಯಂಡ್ರಾಯ್ಡ್‌ ಲಭ್ಯವಿದ್ದು, ವಾರದ ನಂತರ ಐಎಸ್‌ಒ ಫೋನ್‌ಗಳಿಗೂ ಲಭ್ಯವಾಗಲಿದೆ. ಗೂಗಲ್ ಪ್ಲೇ ಮೂಲಕ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ಸಂಖ್ಯೆ ರಿಜಿಸ್ಟ್ರ್‌ ಮಾಡಿದ ಕೂಡಲೇ ಒಟಿಪಿ ಬರುತ್ತದೆ, ಇದನ್ನು ಹಾಕಿದ ನಂತರ ಆ್ಯಪ್‌ ಬಳಕೆಗೆ ಲಭ್ಯ. ಒಂದು ಅಕೌಂಟ್‌ನಿಂದ ಮೂರು ಫೋನ್‌ ಮೂಲಕ ಲಾಗ್‌ ಇನ್‌ ಆಗಬಹುದು. ಆ್ಯಪ್‌ನಲ್ಲಿ ಮಾದರಿಗಾಗಿ ಉಚಿತ ಇ–ಬುಕ್‌ ಮತ್ತು ಆಡಿಯೊ ಬುಕ್‌ ಇದೆ. ಓದಿನ ಸಂಸ್ಕಾರ ಹೆಚ್ಚಿಸಲೆಂದೇ ಇ–ಬುಕ್ ಉಡುಗೊರೆ ನೀಡುವ ಅವಕಾಶವೂ ಇದೆ.

ಇ–ಬುಕ್ ಎನ್‌ಕ್ರಿಪ್ಟ್‌
ಇಲ್ಲಿ ಪ್ರಕಟವಾದ ಇ–ಬುಕ್‌ಗಳು ಎನ್‌ಕ್ರಿಪ್ಟ್‌ ಆಗಿವೆ. ಇದನ್ನು ಡೌನ್‌ಲೋಡ್‌ ಮಾಡಲು ಸಾಧ್ಯವಿಲ್ಲ. ಇ–ಬುಕ್‌ ಆ್ಯಪ್‌ನಿಂದ ಪುಸ್ತಕಗಳು ಎಲ್ಲೂ ಹೊರಗೋಗುವುದಿಲ್ಲ. ‘ಬಹುತೇಕ ಪ್ರಕಾಶಕರಲ್ಲಿ ಇ–ಬುಕ್ ಮಾಡುವ ಬಗ್ಗೆ ಆತಂಕವಿದೆ. ಈ ಬಗ್ಗೆ ನಾವು ಮಾತನಾಡಿ ಇ–ಬುಕ್‌ ಬಳಕೆ, ಮತ್ತು ಇದರ ಸಾಧ್ಯತೆ ಬಗ್ಗೆ ವಿವರಿಸಿದ್ದೇವೆ’ ಎನ್ನುತ್ತಾರೆ ವಸಂತ್‌ ಶೆಟ್ಟಿ.

****
 


‘ಅಶ್ವತ್ಥಾಮನ್‌’ ಕಾದಂಬರಿಗೆ ಧ್ವನಿ ನೀಡುತ್ತಿರುವ ನಟ ವಸಿಷ್ಠ ಸಿಂಹ

‘ಬದುಕಿನ ಓಟದಲ್ಲಿ ಪುಸ್ತಕ ಓದಿಗೆ ಸಮಯ ಕೊಡಲು ಸಾಧ್ಯವಾಗದಿದ್ದರೆ. ಮೊಬೈಲ್‌ನಲ್ಲೇ ಕನ್ನಡ ಪುಸ್ತಕಗಳನ್ನು ಓದುವ ಅವಕಾಶವನ್ನು ‘ಮೈಲ್ಯಾಂಗ್ ಆ್ಯಪ್‌’ ನೀಡುತ್ತಿದೆ. ಈ ಆ್ಯಪ್‌ನಲ್ಲಿ ಕನ್ನಡ ಪುಸ್ತಕಗಳನ್ನು ಓದಬಹುದು. ಕೇಳಲೂ ಬಹುದು. ಜೋಗಿ ಅವರು ‘ಅಶ್ವತ್ಥಾಮನ್‌’ ಎಂಬ ಕಾದಂಬರಿಗೆ ನಾನು ಧ್ವನಿ ನೀಡಿದ್ದೇನೆ. ಒಂದು ಒಳ್ಳೆಯ ಅನುಭವ. ಕನ್ನಡ ಸಾಹಿತ್ಯ ಬೆಳೆಸುವ ಇಂಥ ಪ್ರಾಮಾಣಿಕ ಕೆಲಸದಲ್ಲಿ ಭಾಗಿಯಾದೆ. ಈ ಪ್ರಯತ್ನವನ್ನು ನಾವು ಬೆಂಬಲಿಸಬೇಕು’
-–ವಸಿಷ್ಠ ಸಿಂಹ, ನಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು