ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಸಮರ ಬೆರಳ ತುದಿಯಲ್ಲಿ ಸಮಗ್ರ ಮಾಹಿತಿ!

ಕೋವಿಡ್‌ ವಿರುದ್ಧದ ಹೋರಾಟಕ್ಕೆ ತಂತ್ರಜ್ಞಾನದ ನೆರವು* ತೆರೆಯ ಮರೆಯಲ್ಲಿ ಕೆಎಸ್‌ಡಿಎಂಎ ಕೆಲಸ
Last Updated 20 ಮೇ 2020, 6:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಮತ್ತು ನಂತರದ ದಿನಗಳಲ್ಲಿ ಉದ್ಭವಿಸುವ ಕಠಿಣ ಪರಿಸ್ಥಿತಿ ನಿರ್ವಹಣೆ ಮತ್ತು ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ತಂತ್ರಜ್ಞಾನದ ನೆರವು ಪಡೆದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿದೆ.

ಇದಕ್ಕಾಗಿ ಪ್ರಾಧಿಕಾರವು ಮೂರು ಟೂಲ್‌ ಅಭಿವೃದ್ಧಿಪಡಿಸಿದೆ. ಕೊರೊನಾ ವಿರುದ್ಧ ಸರ್ಕಾರ ರೂಪಿಸುವ ಹೋರಾಟ ತಂತ್ರಗಳು ಸಿದ್ಧವಾಗುವ ವಾರ್‌ ರೂಂ ಇದು. ರಾಜ್ಯದ ಮೂಲೆ, ಮೂಲೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ನಡೆಯುವ ಕ್ಷಣ, ಕ್ಷಣದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಒದಗಿಸುತ್ತದೆ.

ಡೇಟಾ ಸೈನ್ಸ್‌ ಮತ್ತು ಭೌಗೋಳಿಕ ಮಾದರಿ ತಂತ್ರಜ್ಞಾನ ಬಳಸಿಕೊಂಡುಯುನಿಫೈಡ್ ಕೋವಿಡ್‌–19 ಪೋರ್ಟಲ್‌, ರಿಯಲ್‌ ಟೈಮ್‌ ಡೇಟಾ ಕಲೆಕ್ಷನ್‌ ಅಂಡ್‌ ಮಾನಿಟರಿಂಗ್‌ ಟೂಲ್‌ ಮತ್ತು ಕ್ರೌಡ್‌ ಸೋರ್ಸಿಂಗ್‌ ಮಾನಿಟರಿಂಗ್‌ಟೂಲ್‌ ಅಭಿವೃದ್ಧಿಪಡಿಸಲಾಗಿದೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟ ಮತ್ತು ಲಾಕ್‌ಡೌನ್‌ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಲು ಈ ಟೂಲ್‌ಗಳು ನೀಡುವ ಮಾಹಿತಿ ಮಹತ್ವದ ಪಾತ್ರ ವಹಿಸುತ್ತವೆ ಎಂದುಕೆಎಸ್‌ಡಿಎಂಎ ಆಯುಕ್ತ ಮತ್ತು ಸರ್ಕಾರದ ವಿಶೇಷ ಕಾರ್ಯದರ್ಶಿ ಮನೋಜ್‌ ಆರ್‌. ರಾಜನ್‌ ‘ಮೆಟ್ರೊ’ಗೆ ತಿಳಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್‌, ಪಿಪಿಇ ಕಿಟ್, ಕಾರ್ಮಿಕರ ವಲಸೆ, ಫುಡ್‌ ಕಿಟ್‌ ಮತ್ತು ಪಡಿತರ ವಿತರಣೆಯಂತಹ‌ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಾಗಲಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೊರೊನಾ ವಾರ್‌ ರೂಂ ಮತ್ತು ವಾರ್ತಾ ಇಲಾಖೆಯಿಂದ ಬರುವ ಕ್ಷಣಕ್ಷಣದ ಪರಿಷ್ಕೃತ ಮಾಹಿತಿಗಳು ಈ ಪೋರ್ಟ್‌ಲ್‌ಗೆ ಅಪ್‌ಲೋಡ್‌ ಆಗುತ್ತವೆ ಎಂದು ಮನೋಜ್‌ ವಿವರಿಸಿದರು.

ಹೇಗೆ ಕೆಲಸ ಮಾಡುತ್ತವೆ?

‘ಯುನಿಫೈಡ್‌ ಕೋವಿಡ್‌–19 ಪೋರ್ಟಲ್’ (covid19.karnataka.gov.in) ರಿಯಲ್ ಟೈಮ್‌ ಡ್ಯಾಶ್‌ಬೋರ್ಡ್‌ನಲ್ಲಿ ಕೋವಿಡ್‌ಗೆ ಸಂಬಂಧಿಸಿದ ದತ್ತಾಂಶ, ಮೊಬೈಲ್‌ ಆ್ಯಪ್‌, ಸಹಾಯವಾಣಿ, ಫ್ಯಾಕ್ಟ್‌ ಚೆಕ್‌ ಮಾಡಿದ ಸುದ್ದಿ, ವಾರ್‌ ರೂಂ ಮತ್ತು ಕ್ಲಿನಿಕಲ್‌ ವಿಶ್ಲೇಷಣೆ ಸಿಗುತ್ತವೆ.ಸೋಂಕಿತರು, ಗುಣಮುಖರು ಮತ್ತು ಮೃತಪಟ್ಟವರು, ಪ್ರವಾಸ ಹಿನ್ನೆಲೆ ಕೂಡ ಲಭ್ಯ.

ಪ್ರಾಧಿಕಾರ ಅಭಿವೃದ್ಧಿಪಡಿಸಿದ ‘ರಿಯಲ್‌ ಟೈಮ್‌ ಡೇಟಾ ಕಲೆಕ್ಷನ್‌ ಅಂಡ್‌ ಕೋವಿಡ್‌ ಮಾನಿಟರಿಂಗ್ ಟೂಲ್’‌ನಲ್ಲಿ ಕೊರೊನಾ ಹಾಟ್‌ಸ್ಪಾಟ್‌, ಫೀವರ್‌ ಕ್ಲೀನಿಕ್ಸ್‌, ಅಪಾಯ ವಲಯ, ಕ್ವಾರಂಟೈನ್ ಸೆಂಟರ್‌, ಐಸೊಲೇಷನ್‌ ವಾರ್ಡ್‌, ಹೋಂ ಕ್ವಾರಂಟೈನ್‌, ಕೋವಿಡ್‌ ಆಸ್ಪತ್ರೆ, ಪ್ರಯೋಗಾಲಯ ವಿವರ ಸಿಗುತ್ತವೆ.

ಶಂಕಿತರ ಮೇಲೆ ನಿಗಾ!

‘ಕ್ರೌಡ್‌ ಸೋರ್ಸಿಂಗ್‌ ಮಾನಿಟರಿಂಗ್‌ ಟೂಲ್’‌ ಕೊರೊನಾ ರೋಗಲಕ್ಷಣಗಳ ಮೇಲೆ ನಿಗಾ ಇಡಲಿದೆ. ರಾಜ್ಯದ 22,800 ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು 41 ಸಾವಿರ ಔಷಧ ಅಂಗಡಿಗಳಿಂದ ಶಂಕಿತರ ಮಾಹಿತಿ ಇಲ್ಲಿಗೆ ರವಾನೆಯಾಗುತ್ತದೆ.

ಖಾಸಗಿ ಆಸ್ಪತ್ರೆಗಳಿಂದ ಪ್ರತಿದಿನ ಉಸಿರಾಟ ತೊಂದರೆ ಮತ್ತು ಇನ್‌ಫ್ಲೂಯೆಂಜಾ ಲಕ್ಷಣ ಇರುವವರ ಮಾಹಿತಿ ಅಪ್‌ಲೋಡ್‌ ಆಗುತ್ತದೆ. ಫ್ಲೂ, ಕೆಮ್ಮು,ಶೀತಕ್ಕೆ ಔಷಧಿ ಖರೀದಿಸಿದವರ ಮಾಹಿತಿಯು ಔಷಧಿ ಅಂಗಡಿಗಳಿಂದ ರವಾನೆಯಾಗುತ್ತವೆ. ಇದನ್ನುಆಧರಿಸಿ ಸರ್ಕಾರವು ಶಂಕಿತರ ಮೇಲೆ ನಿಗಾ ಇಡಲಿದೆ.

ವಲಸೆ ಕಾರ್ಮಿಕರ ನಿಗಾಕ್ಕೆ ಆ್ಯಪ್‌

ಕೊರೊನಾ ಸೋಂಕು ತಗುಲಿದ ರೋಗಿಯೊಂದಿಗೆ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕದಲ್ಲಿರುವ ರೋಗಿಗಳ ಪತ್ತೆ ಹಚ್ಚಲು ಹಾಗೂ ವಲಸೆ ಕಾರ್ಮಿಕರ ಚಲನವಲನಗಳ ಮೇಲೆ ನಿಗಾ ಇಡಲು ಪ್ರಾಧಿಕಾರ ಎರಡು ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಕೊರೊನಾ ವಾಚ್ ಆ್ಯಪ್‌ನಲ್ಲಿ‌ ಶಂಕಿತರು ಮತ್ತು ಸೋಂಕಿತರ ಪ್ರವಾಸ ಇತಿಹಾಸ ಮತ್ತು ಭೇಟಿ ನೀಡಿದ ಸ್ಥಳದ ವಿವರ ಸಿಗುತ್ತವೆ.

***

ಇದುವರೆಗೂ ಯಾವ ಪ್ರಕೃತಿ ವಿಕೋಪಗಳು ಮಾಡದಂಥ ಹಾನಿಯನ್ನು ಕೊರೊನಾ ಸೋಂಕು ಮಾಡಿದೆ. ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್‌–19 ಅಪಾಯಕಾರಿ ವಿಕೋಪಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

– ಮನೋಜ್‌ ಆರ್‌. ರಾಜನ್‌, ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT