ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೇಬರ್‌ಜಾಬ್ಸ್’‌ನಲ್ಲಿ ಉದ್ಯೋಗ ಮಾಹಿತಿ

ಹಲವು ಭಾಷೆಗಳಲ್ಲಿ ಕಾರ್ಮಿಕರಿಗೆ ಸಿಗಲಿದೆ ಮಾಹಿತಿ
Last Updated 18 ಮೇ 2020, 5:12 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಘೋಷಣೆ ಯಾದ ಬಳಿಕ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗಿರುವುದರಿಂದ ಕಾರ್ಮಿಕರ ಕೊರತೆ ಉಂಟಾಗಿದೆ. ಹಾಗೇ ದಿನಗೂಲಿ ನೌಕರರು, ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಲಾಕ್‌ಡೌನ್‌ ಸಡಿಲಿಕೆ ಅವಧಿಯಲ್ಲಿಇಂತಹ ಕಾರ್ಮಿಕ ರಿಗೆ ಸುಲಭವಾಗಿ ಕೆಲಸ ಹುಡುಕಲುಸಾಧ್ಯವಾಗುವಂತೆ ‘ಲೇಬರ್‌ಜಾಬ್ಸ್‌’(laborjobs) ಎಂಬ ಅಪ್ಲಿಕೇಷನ್‌ ಅನ್ನು ಮೂವರು ಯುವಕರು ಅಭಿವೃದ್ಧಿಪಡಿಸಿದ್ದಾರೆ.

ಸಾಮಾನ್ಯವಾಗಿ ಎಲ್ಲಾ ಉದ್ಯೋಗ ಪೋರ್ಟಲ್‌ಗಳು ಇಂಗ್ಲಿಷ್‌ ಭಾಷೆಯಲ್ಲಿ ಇರುತ್ತವೆ. ಇಂಗ್ಲಿಷ್‌ಭಾಷೆ ಗೊತ್ತಿಲ್ಲದವರಿಗೆ ಉದ್ಯೋಗ ಹುಡುಕುವುದು ಕಷ್ಟ. ಹಾಗಾಗಿ ಇಂಗ್ಲಿಷ್‌ ಗೊತ್ತಿಲ್ಲದವರಿಗೂ ಅನುಕೂಲವಾಗುವಂತೆ ಮಂಡ್ಯಮೂಲದ ಮಾಣಿಕ್ಯ ಸತೀಶ್‌, ಆನಂದ್‌ ಕೋಡಿಹಳ್ಳಿ ಮತ್ತು ಅಮರ್ ಎಂಬ ಮೂವರು ಯುವಕರು ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.

ಇದರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತದ ಹನ್ನೆರಡು ಭಾಷೆಗಳಲ್ಲಿ ಉದ್ಯೋಗ ಮಾಹಿತಿ ಲಭ್ಯವಾಗುತ್ತದೆ.

ಪ್ಲೇಸ್ಟೋರ್‌ನಲ್ಲಿ ಈ ಅಪ್ಲಿಕೇಷನ್‌ ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿಕೊಂಡರೆ, ಎಲ್ಲ ಭಾಷೆಗಳ ಪುಟಗಳೂ ತೆರೆದುಕೊಳ್ಳುತ್ತದೆ. ಆಯಾ ಭಾಷಿಕರು ತಮ್ಮ ಮಾತೃಭಾಷೆ ಆಯ್ಕೆ ಮಾಡಿಕೊಂಡು ಲಾಗಿನ್‌ ಆಗಬಹುದು. ಬಳಿಕ ತಮಗೆ ಸೂಕ್ತವಾದ ಉದ್ಯೋಗ ಹುಡುಕಿ, ಸಂಪರ್ಕಿಸಬಹುದು.

ಈ ಅಪ್ಲಿಕೇಷನ್‌ ಉದ್ಯೋಗ ನೀಡುವವರಿಗೆ ಮತ್ತು ಉದ್ಯೋಗ ಹುಡುಕುತ್ತಿರುವವರಿಗೂ ಅನುಕೂಲವಾಗುತ್ತದೆ. ಹಾಗಾಗಿ, ಉದ್ಯೋಗ ಬೇಕಾದವರು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಕಂಪನಿ/ಸಂಸ್ಥೆಗಳು ತಮ್ಮಲ್ಲಿ ಖಾಲಿ ಇರುವ ಉದ್ಯೋಗದ ಮಾಹಿತಿಯನ್ನೂ ಉಚಿತವಾಗಿ ಈ ಅಪ್ಲಿಕೇಷನ್‌ಗೆ ಅಪ್‌ಲೋಡ್ ಮಾಡಬಹುದು. ಈಗಾಗಲೇ ಅಪ್ಲಿಕೇಷನ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಮಾಹಿತಿ ನೋಂದಣಿ ಮಾಡಿಸಿದ್ದಾರೆ. ಕಾರ್ಮಿಕರ ಅಗತ್ಯವಿದ್ದ ಕಂಪನಿಗಳು, ನೋಂದಣಿ ಮಾಡಿರುವ ಕಾರ್ಮಿಕರ ಮಾಹಿತಿಯನ್ನು ಪರಿಶೀಲಿಸಿ, ಉದ್ಯೋಗ ನೀಡಬಹುದು.

ಅಪ್ಲಿಕೇಷನ್ ರೂಪಿಸಿರುವ ಮಾಣಿಕ್ಯ ಸತೀಶ್‌ ಹಾಗೂ ಆನಂದ್‌ ಕೋಡಿಹಳ್ಳಿ ಕೃಷಿ ಪದವೀಧರರು. ಕುಣಿಗಲ್‌ ಸಮೀಪ ಗುಲಾಬಿ ತೋಟ ಮಾಡುತ್ತಿದ್ದಾರೆ. ತೋಟಕ್ಕೆ ಕಾರ್ಮಿಕರನ್ನು ಕರೆತರಲು ಅವರು ಬಹಳ ಕಷ್ಟಪಟ್ಟಿದ್ದಾರೆ. ಈ ವೇಳೆ ದಲ್ಲಾಳಿಗಳು ಮಾಡಿದ ಅವಾಂತರ ಇವರಿಗೆ ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಕಾರಣವಾಗಿದೆ.

’ಮಧ್ಯವರ್ತಿಗಳ ನೆರವು ಇಲ್ಲದೇ ಕಾರ್ಮಿಕರು ಕೆಲಸ ಹುಡುಕಿಕೊಳ್ಳಬೇಕು. ಹಾಗೆಯೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ, ತಮಗೆ ಬೇಕಾದ ಕಾರ್ಮಿಕರಿಗೆ ಕೆಲಸ ಕೊಡಬೇಕು‘ಎಂಬ ಉದ್ದೇಶದಿಂದ ಈ ಆ್ಯಪ್ ಅಭಿವೃದ್ಧಿಪಡಿಸಿದ್ದಾಗಿ ಜೋಡಿ ಹೇಳುತ್ತದೆ.

‘ಈ ಅಪ್ಲಿಕೇಷನ್‌ಗೆ ಹೆಚ್ಚು ಜನ ಬೆಂಬಲ ಸಿಕ್ಕಿತು. ಹಾಗಾಗಿ ಬೇರೆ ಬೇರೆ ಉದ್ಯೋಗಗಳ ಮಾಹಿತಿ ಸಿಗುವಂತೆ ಅಭಿವೃದ್ಧಿಪಡಿಸಿದೆವು. ಈಗ ಲಾಕ್‌ಡೌನ್‌ ಅವಧಿಯಲ್ಲಿ ಒಂದು ಕಡೆ ಕಾರ್ಮಿಕರು ಕೆಲಸ ಹುಡುಕುತ್ತಿರುತ್ತಾರೆ, ಇನ್ನೊಂದು ಕಡೆ ಕಂಪನಿಗಳು ಕಾರ್ಮಿಕರನ್ನು ಹುಡುಕುತ್ತಿರುತ್ತಾರೆ. ಅವರಿಬ್ಬರಿಗೂ ಈ ಅಪ್ಲಿಕೇಷನ್ ಉತ್ತಮ ವೇದಿಕೆಯಾಗುತ್ತದೆ’ ಎಂದು ಮಾಣಿಕ್ಯ ಸತೀಶ್‌ ವಿವರಿಸುತ್ತಾರೆ.

ಈ ಆ್ಯಪ್‌ ಉಚಿತವಾಗಿದ್ದು, ಗೂಗಲ್‌ ಪ್ಲೇಸ್ಟೋರ್‌ ಮೂಲಕ ಈ ಕೆಳಗಿನ ಕೊಂಡಿಯ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಮಾಹಿತಿಗೆ–https://www.laborjobs.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT