ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್‌ 365 ಎಂಬ ಕ್ಲೌಡ್ ಕಂಪ್ಯೂಟರ್‌: ಶಟ್‌ಡೌನ್‌ ಮಾಡುವ ಅಗತ್ಯವೇ ಇಲ್ಲ!

Last Updated 20 ಜುಲೈ 2021, 19:45 IST
ಅಕ್ಷರ ಗಾತ್ರ

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಗಳು ಬಾಗಿಲು ಹಾಕಿ, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಒದಗಿಸುತ್ತಿರುವ ಸಮಯದಲ್ಲಿ ಕಂಪನಿಗಳಿಗೆ ಮೊದಲು ಕಾಡಿದ ಸಮಸ್ಯೆ ತಮ್ಮ ಕಂಪನಿಯ ಡೇಟಾ ಭದ್ರತೆಯದ್ದು!

ಡೇಟಾ ಭದ್ರತೆಯ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಎಲ್ಲ ಕಂಪನಿಗಳೂ ತಮ್ಮ ಉದ್ಯೋಗಿಗಳಿಗೆ ಪ್ರತ್ಯೇಕ ಲ್ಯಾಪ್‌ಟಾಪ್‌ಗಳನ್ನು ಒದಗಿಸಿವೆ. ಉದ್ಯೋಗಿಗಳ ಬಳಿ ಈಗಾಗಲೇ ವೈಯಕ್ತಿಕ ಲ್ಯಾಪ್‌ಟಾಪ್‌ ಇದ್ದರೂ ಇನ್ನೊಂದು ಲ್ಯಾಪ್‌ಟಾಪ್‌ ಕಂಪನಿಯ ಕಡೆಯಿಂದ ಬಂದು ಮನೆಯಲ್ಲಿ ಕುಳಿತಿದೆ. ಪರ್ಸನಲ್‌ ಲ್ಯಾಪ್‌ಟಾಪ್‌ ಮುಗುಮ್ಮಾಗಿ ಕುಳಿತಿದ್ದರೆ, ಕಂಪನಿ ಕೊಟ್ಟ ಲ್ಯಾಪ್‌ಟಾಪ್‌ನಲ್ಲೇ ಕೆಲಸ ನಡೆಯುತ್ತಿದೆ. ಅಂದರೆ ಮನೆಯಲ್ಲಿ ಒಂದು ಹೆಚ್ಚುವರಿ ಲ್ಯಾಪ್‌ಟಾಪ್‌ ಖಾಲಿ ಕುಳಿತಿದೆ.

ಇಂಥ ಸನ್ನಿವೇಶವನ್ನು ನಿರ್ವಹಿಸುವುದಕ್ಕೆಂದೇ ಮೈಕ್ರೋಸಾಫ್ಟ್‌ ಹೊಸದೊಂದು ಸೇವೆಗೆ ಮುಂದಾಗಿದೆ. ಅದೇ ಕ್ಲೌಡ್‌ ಓಎಸ್. ಮೈಕ್ರೋಸಾಫ್ಟ್‌ನ ಸರ್ವರ್‌ನಲ್ಲೇ ಒಂದು ಡೆಸ್ಕ್‌ಟಾಪ್‌ ಕಣ್ತೆರೆದು ಕುಳಿತಿರುತ್ತದೆ. ಇದು ದೇಹವಿಲ್ಲದ ಆತ್ಮದ ಹಾಗೆ! ನಿರ್ದಿಷ್ಟ ಹಾರ್ಡ್‌ವೇರ್ ಬೇಡ. ಯಾವ ಹಾರ್ಡ್‌ವೇರ್‌ಗಾದರೂ ಇದು ಹೊಂದಿಕೊಳ್ಳುತ್ತದೆ.

ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಒಂದು ಡೆಸ್ಕ್‌ಟಾಪ್‌ ಅನ್ನು ಸೃಷ್ಟಿ ಮಾಡಿ, ಅದಕ್ಕೆ ಬೇಕಾದ ಸೆಕ್ಯೂರಿಟಿ ಸೌಲಭ್ಯಗಳನ್ನು ಅಳವಡಿಸಿ ಕೊಟ್ಟುಬಿಡಬಹುದು. ಉದ್ಯೋಗಿಗಳು ತಮ್ಮ ವೈಯಕ್ತಿಕ ಲ್ಯಾಪ್‌ಟಾಪ್‌ನಲ್ಲೇ ಒಂದು ಬ್ರೌಸರ್‌ ತೆರೆದುಕೊಂಡು ಈ ವರ್ಚುವಲ್‌ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡಬಹುದು. ಆಗ ಹಾರ್ಡ್‌ವೇರ್‌ಗಾಗಿ ಅಂದರೆ ಹೊಸ ಲ್ಯಾಪ್‌ಟಾಪ್‌ ಖರೀದಿ ಮಾಡುವ ಹಣ ಕಂಪನಿಗಳಿಗೆ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲ, ಕೆಲವೇ ನಿಮಿಷಗಳಲ್ಲಿ ಒಂದು ವರ್ಚುವಲ್‌ ಡೆಸ್ಕ್‌ಟಾಪ್‌ ಸೃಷ್ಟಿ ಮಾಡಬಹುದಾದ್ದರಿಂದ, ಕೆಲಸಕ್ಕೆ ಕೆಲವೇ ಗಂಟೆಗಳಲ್ಲಿ ಉದ್ಯೋಗಿ ಸಿದ್ಧವಾಗುತ್ತಾನೆ. ಹಾರ್ಡ್‌ವೇರ್‌ ಖರೀದಿ ಮಾಡಿ, ಪ್ರತಿ ಹಾರ್ಡ್‌ವೇರ್ ಅನ್ನೂ ಕಾನ್ಫಿಗರ್ ಮಾಡುವ ತೊಂದರೆ ಇದರಲ್ಲಿಲ್ಲ.

ಅಲ್ಲದೆ, ಸಣ್ಣ ಕಂಪನಿಗಳು ಹಾಗೂ ಉದ್ದಿಮೆಗಳಿಗೆ ಈ ಸೌಲಭ್ಯ ಅತ್ಯಂತ ಅನುಕೂಲಕರವೂ ಆಗಲಿದೆ. ಯಾಕೆಂದರೆ, ಸಣ್ಣ ಉದ್ಯಮಗಳಿಗೆ ಪ್ರತ್ಯೇಕ ಐಟಿ ವಿಭಾಗವನ್ನು ಹೊಂದುವುದು ವೆಚ್ಚದಾಯಕ. ಅಂತ ಸಂದರ್ಭದಲ್ಲಿ ಈ ಸೌಲಭ್ಯ ಅತ್ಯಂತ ಅನುಕೂಲಕರವಾಗಿ ಕೆಲಸ ಮಾಡುತ್ತದೆ.

ಈ ಕ್ಲೌಡ್‌ ಡೆಸ್ಕ್‌ಟಾಪ್‌ಗೆ ಮೈಕ್ರೋಸಾಫ್ಟ್ 365 ಎಂಬ ಹೆಸರಿಡಲಾಗಿದೆ. ಮೈಕ್ರೋಸಾಫ್ಟ್‌ಗೂ 365 ಹೆಸರಿಗೂ ಅದೇನೋ ಆಪ್ತ ಸಂಬಂಧವಿದೆ. ಈ ಹಿಂದೆ ಕ್ಲೌಡ್ ಆಧರಿತ ಆಫೀಸ್‌ ಸೂಟ್‌ಗೂ ಆಫೀಸ್‌ 365 ಎಂದು ಹೆಸರಿಡಲಾಗಿತ್ತು.

ಕ್ಲೌಡ್ ಡೆಸ್ಕ್‌ಟಾಪ್‌ನ ಇನ್ನೊಂದು ಸೌಲಭ್ಯವೆಂದರೆ, ಇದನ್ನು ಯಾವಾಗಲೂ ಶಟ್‌ಡೌನ್‌ ಮಾಡುವ ಅಗತ್ಯ ಇರುವುದಿಲ್ಲ. ಇದು ಮೈಕ್ರೋಸಾಫ್ಟ್ ಅಜೂರ್‌ ಕ್ಲೌಡ್ ಸರ್ವರ್‌ನಲ್ಲಿ ಇರುವುದರಿಂದ ನೀವು ತೆರೆದಾಗಲೆಲ್ಲ ಈ ಹಿಂದೆ ಎಲ್ಲಿ ಕೆಲಸ ನಿಲ್ಲಿಸಿದ್ದಿರೋ ಅಲ್ಲಿಂದಲೇ ಕೆಲಸ ಆರಂಭಿಸಲು ಸಿದ್ಧವಾಗಿರುತ್ತದೆ.

ಹಾಗೆಂದ ಮಾತ್ರಕ್ಕೆ ಈ ಕ್ಲೌಡ್ ಡೆಸ್ಕ್‌ಟಾಪ್‌ ಹೊಸದೇನೂ ಅಲ್ಲ. ಈಗಾಗಲೇ ಸಣ್ಣ ಸಣ್ಣ ಪ್ರಯತ್ನಗಳು ಈ ನಿಟ್ಟಿನಲ್ಲಿ ನಡೆದಿವೆ. ಆದರೆ, ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮೈಕ್ರೋಸಾಫ್ಟ್‌ ಈ ಪ್ರಯೋಗ ನಡೆಸುತ್ತಿದ್ದು, ಇದರಲ್ಲಿ ಡೆಸ್ಕ್‌ಟಾಪ್‌ ಜೊತೆಗೆ ಮೈಕ್ರೋಸಾಫ್ಟ್‌ನ ಇತರ ಸೇವೆಗಳೂ ಸಿಗುತ್ತವೆ. ಹೀಗಾಗಿ, ಡೆಸ್ಕ್‌ಟಾಪ್‌ ತೆಗೆದುಕೊಂಡು ಅದಕ್ಕೆ ಬೇಕಿರುವ ಪ್ರಾಥಮಿಕ ಸಾಫ್ಟ್‌ವೇರ್‌ಗಳನ್ನೂ ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ತೊಂದರೆ ಇರುವುದಿಲ್ಲ. ನಿರ್ದಿಷ್ಟ ಕಂಪನಿಯ ಕೆಲಸಕ್ಕೆ ಅಗತ್ಯದ ಸಾಫ್ಟ್‌ವೇರ್‌ಗಳು ಅಥವಾ ಆ್ಯಪ್‌ಗಳನ್ನು ಈ ಕ್ಲೌಡ್‌ ಪಿಸಿಗೆ ಅಳವಡಿಸಿದರೆ ಸಾಕು.

ಆಪರೇಟಿಂಗ್‌ ಸಿಸ್ಟಮ್‌ನ ಸಂಪೂರ್ಣ ನಿರ್ವಹಣೆ, ಅದಕ್ಕೆ ಬೇಕಾದ ಅಪ್‌ಡೇಟ್‌ಗಳು, ಭದ್ರತೆ ಎಲ್ಲವನ್ನೂ ಮೈಕ್ರೋಸಾಫ್ಟ್‌ ನಿರ್ವಹಿಸಲಿದೆ. ಇದು ಸದ್ಯ ವಿಂಡೋಸ್ 10ರಲ್ಲಿ ಇರಲಿದ್ದು, ಮುಂದಿನ ದಿನಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ವಿಂಡೋಸ್ 11ಗೂ ಅಪ್‌ಗ್ರೇಡ್‌ ಆಗಲಿದೆ.

ಇನ್ನೊಂದು ಅತ್ಯಂತ ಅನುಕೂಲಕರ ಸಂಗತಿಯೆಂದರೆ, ಸ್ಮಾರ್ಟ್‌ಫೋನ್ ಬಳಸಿಯೂ ಈ ಕ್ಲೌಡ್‌ ಪಿಸಿಗೆ ಲಾಗಿನ್ ಮಾಡಬಹುದು. ಇದಕ್ಕೆ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ ಬೇಕೆಂದೇ ಇಲ್ಲ. ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ ಅಥವಾ ಯಾವುದೇ ಸಾಧನವಾದರೂ ಸರಿ. ಒಂದು ಬ್ರೌಸರ್‌ ತೆರೆಯುವ ಸೌಲಭ್ಯವಿದ್ದರೆ ಸಾಕು. ನಿಮ್ಮ ಬಳಿ ಕಂಪ್ಯೂಟರ್ ಇದ್ದ ಹಾಗೆ!

ಕೆನಡಾದ ನುನಾವತ್‌ ಸರ್ಕಾರ ಈಗಾಗಲೇ ತನ್ನ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಈ ಕ್ಲೌಡ್ ಪಿಸಿ ಸೇವೆಯನ್ನು ಬಳಸಿಕೊಳ್ಳಲು ಮೈಕ್ರೋಸಾಫ್ಟ್ ಜೊತೆಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದೆ. ಈ ಸೇವೆಗೆ ವಿವಿಧ ದರದಲ್ಲಿ ಮೈಕ್ರೋಸಾಫ್ಟ್‌ ಶುಲ್ಕ ವಿಧಿಸುತ್ತದೆ ಎಂದು ಹೇಳಲಾಗಿದೆ. ಆಗಸ್ಟ್‌ 2ರಂದು ಬಿಡುಗಡೆಯಾಗಲಿರುವ ಈ ಸೇವೆಯ ದರವಿವರವನ್ನು ಮೈಕ್ರೋಸಾಫ್ಟ್‌ ಇನ್ನೂ ಬಹಿರಂಗಗೊಳಿಸಿಲ್ಲ. ಮಾಸಿಕ ಚಂದಾದಾರಿಕೆ ಆಧಾರದಲ್ಲಿ ಈ ಸೇವೆಗೆ ದರ ವಿಧಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT