ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಟಿಕ್‌ಟಾಕ್ ಪ್ರತಿಸ್ಪರ್ಧಿ Mitron ಆ್ಯಪ್; ಅಭಿವೃದ್ಧಿ ಮೂಲ ಪಾಕಿಸ್ತಾನ!

Last Updated 1 ಜೂನ್ 2020, 8:49 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾ ವಿರೋಧಿ ಅಲೆಯ ನಡುವೆ ದೇಶೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಜೊತೆಗೆ ತಂತ್ರಜ್ಞಾನ ವಲಯದಲ್ಲಿಯೂ ಭಾರತೀಯ ಮೂಲದ ಅಪ್ಲಿಕೇಷನ್‌ಗಳ ಮೇಲಿನ ಒಲವು ಹೆಚ್ಚುತ್ತಿದೆ. ಚೀನಾ ಕಂಪನಿಗಳು ಅಭಿವೃದ್ಧಿ ಪಡಿಸಿರುವ ಆ್ಯಪ್‌ಗಳನ್ನು ಗುರುತಿಸುವ 'ರಿಮೂವ್‌ ಚೀನಾ ಆ್ಯಪ್‌' ಗಮನ ಸೆಳೆದಿದೆ. ಇದಕ್ಕೂ ಮುನ್ನ ಜನಪ್ರಿಯಗೊಂಡ ಮೊಬೈಲ್‌ ವಿಡಿಯೊ ಮೇಕಿಂಗ್‌ ಆ್ಯಪ್‌ 'ಮಿತ್ರೊನ್'(Mitron).

ಚೀನಾ ಮೂಲದ ಟಿಕ್‌ಟಾಕ್‌ ಆ್ಯಪ್‌ಗೆ ಭಾರತದ ಉತ್ತರ ಎಂಬಂತೆ Mitron ಬಿಂಬಿತವಾಯಿತು. ದೇಶದ ಯುವ ಜನತೆ ಅತಿ ಹೆಚ್ಚು ಬಳಸುತ್ತಿರುವ ಟಿಕ್‌ಟಾಕ್‌ಗೆ ಭಾರತದಲ್ಲಿ ಅಭಿವೃದ್ಧಿಯಾಗಿರುವ Mitron ಬಳಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪೋಸ್ಟ್‌ಗಳು ಹಂಚಿಕೆಯಾದವು. 50 ಲಕ್ಷಕ್ಕೂ ಅಧಿಕ ಬಾರಿ ಡೌನ್‌ಲೋಡ್‌ ಆಗಿರುವ Mitron ಆ್ಯಪ್‌ ಪಾಕಿಸ್ತಾನ ಮೂಲದ ಕಂಪನಿಯಿಂದ ಖರೀದಿಸಿರುವುದು ಎಂಬ ವಿಚಾರ ಇತ್ತೀಚೆಗಷ್ಟೇ ಹೊರ ಬಂದಿದೆ.

ಕೋಡ್‌ಕ್ಯಾನ್ಯಾನ್‌ ವೇದಿಕೆಯಿಂದ Mitron ಸೋರ್ಸ್ ಕೋಡ್‌ನ್ನು ₹2,500ಕ್ಕೆ (34 ಡಾಲರ್‌) ಖರೀದಿಸಲಾಗಿದೆ. ಕನಿಷ್ಠ 277 ಜನರು ಈ ಸೋರ್ಸ್‌ ಕೋಡ್‌ ಹೊಂದಿದ್ದಾರೆ. ಟಿಕ್‌ಟಾಕ್‌ನ ತದ್ರೂಪ ಆ್ಯಪ್‌ ಆಗಿರುವ ಟಿಕ್‌ಟಿಕ್‌ನ ಹೆಸರು ಬದಲಿಸಿಕೊಂಡ ಅಪ್ಲೇಷನ್‌ Mitron ಎಂದು ವರದಿಯಾಗಿದೆ. ಖಾಸಗಿ ಮಾಹಿತಿ ಸುರಕ್ಷತೆಯ ಕುರಿತಾದ ಪುಟದಲ್ಲಿ ವಿವರವಾದ ಮಾಹಿತಿ ನೀಡಿಲ್ಲ ಹಾಗೂ ಸೇವೆಯ ಕುರಿತಾದ ವಿವರಣೆ ಇಲ್ಲ. ಈ ಆ್ಯಪ್‌ ಬಳಕೆಯು ಸುರಕ್ಷಿತವಲ್ಲ ಎಂದು ಸೈಬರ್‌ ತಜ್ಞರು ಹೇಳಿದ್ದಾರೆ.

Mitron ಆ್ಯಪ್‌ ಜನಪ್ರಿಯಗೊಂಡಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ, ಕ್ಯುಬಾಕ್ಸಸ್ (QBoxus) ಹೆಸರಿನ ಪಾಕಿಸ್ತಾನದ ಡೆವೆಲಪ್‌ಗಳ ತಂಡ ಭಾರತದ ವರದಿಗಾರರನ್ನು ಟ್ವಿಟರ್‌ ಮೂಲಕ ಸಂಪರ್ಕಿಸಿದೆ. ಟಿಕ್‌ಟಿಕ್‌ ಆ್ಯಪ್‌ ಅಭಿವೃದ್ಧಿ ಪಡಿಸಿರುವುದು ಕ್ಯುಬಾಕ್ಸಸ್ ತಂಡ, ಅದರ ಸೋರ್ಸ್‌ ಕೋಡ್‌ನ್ನು ಕೋಡ್‌ಕ್ಯಾನ್ಯಾನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. 'ಅದರಲ್ಲಿ ಯಾವುದೇ ಬದಲಾವಣೆ ಮಾಡದೆ, Mitron ಎಂದು ಹೆಸರು ಬದಲಿಸಿಕೊಂಡು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸೇರಿದೆ' ಎಂದು ಹೇಳಿದೆ. ಸೋರ್ಸ್‌ ಕೋಡ್‌ಗೆ ಹಣ ನೀಡಿ ಖರೀದಿಸಲಾಗಿದೆ. ಆದರೆ, ಅಭಿವೃದ್ಧಿಯಾಗಿರುವುದು ಭಾರತದಲ್ಲಿ ಅಲ್ಲ ಎಂದು ತಿಳಿಸಿದೆ.

ಕೋಡ್‌ಕ್ಯಾನ್ಯಾನ್‌ನಿಂದ ಐಐಟಿ ರೂರ್ಕಿ ವಿದ್ಯಾರ್ಥಿ ಶಿವಾಂಕ್‌ ಅಗರ್ವಾಲ್‌ಗೆ ಸೋರ್ಸ್‌ ಕೋಡ್‌ ಮಾರಾಟ ಮಾಡಲಾಗಿದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ ಆಗಿರುವ Mitron ಆ್ಯಪ್‌ಗೆ 4.7 ರೇಟಿಂಗ್‌ ಇದೆ. ಆ್ಯಪ್‌ನ ವಿವರಣೆಯಲ್ಲಿ ಬೆಂಗಳೂರು ಮೂಲದ ವೇದಿಕೆ ಎಂದು ಬರೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT