ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ತಂತ್ರಜ್ಞಾನ | ಸೃಷ್ಟಿ ಏನು, ಯಾರೂ ಮಾಡಬಹುದು; ಹೆಸರಿಡುವುದು ಬಹು ದೊಡ್ಡ ಕೆಲಸ!

Last Updated 27 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಒಂದು ತಂತ್ರಜ್ಞಾನದ ಉತ್ಪತ್ತಿಗೆ ‘ಶುಂಠಿ ಕಾಪಿ’ ಎಂದೋ, ‘ಏಲಕ್ಕಿ ಚಾ’ ಎಂದೋ ಹೆಸರಿಟ್ಟರೆ ಯಾರಾದರೂ ನಕ್ಕಾರು. ಆದರೆ ಜಾವಾ ಎಂಬ ಪ್ರೋಗ್ರಾಮಿಂಗ್ ಭಾಷೆಯ ಹೆಸರು ಬಂದದ್ದು ‘ಜಾವಾ’ ಎಂಬ ಒಂದು ತರಹದ ಕಾಫಿಯಿಂದಲೇ!

***

‘ಹೆಸರಲ್ಲೇನಿಲ್ಲ? ಸೃಷ್ಟಿ ಏನು, ಯಾರೂ ಮಾಡಬಹುದು. ಆದರೆ ಹೆಸರಿಡುವುದು ಮಾತ್ರ ಬಹು ದೊಡ್ಡ ಕೆಲಸ. 300 ಪುಟಗಳ ಪುಸ್ತಕವೊಂದನ್ನು ಮೂರೇ ರಾತ್ರಿಗಳಲ್ಲಿ ಬರೆದು ಮುಗಿಸಿದ ಸ್ಫೂರ್ತಿಯ ಮೂರ್ತಿಯೊಬ್ಬರು, ಆ ಗ್ರಂಥಕ್ಕೆ ಹೆಸರು ಹುಡುಕಲು ಮೂರು ತಿಂಗಳು ತಿಣಿಕಿ, ಕಡೆಗೆ ‘ಮೂರುನೂರು ಪುಟಗಳು’ ಎಂದೇ ಹೆಸರಿಕ್ಕಿದರಂತೆ, ರೈಲ್ವೆ ಗೈಡಿನಂತಹ ತಮ್ಮ ಹಿರಿ ಹೊತ್ತಗೆಗೆ’ ಎಂಬ ಬೀಚಿಯವರ ಮಾತು ತಂತ್ರಜ್ಞಾನದ ಉತ್ಪನ್ನಗಳಿಗೂ ಎಷ್ಟೋ ಸಲ ಅನ್ವಯಿಸುವುದಿದೆ.

ಈಗ ಗೂಗಲ್ ಎಂಬ ಹೆಸರನ್ನೇ ತೆಗೆದುಕೊಳ್ಳಿ. ಇದು‘Googol’ ಎಂಬ ಪದದ ಸ್ಪೆಲ್ಲಿಂಗ್ ಅನ್ನು ಬದಲಾಯಿಸಿ ಕಟ್ಟಲ್ಪಟ್ಟಿರುವ ಹೊಸ ಪದ. Googol ಪದವನ್ನು ನಾನು ನಿಜವಾಗಿಯೂ ಮೊದಲು ನೋಡಿದ್ದು ಶಕುಂತಲಾದೇವಿಯವರ ಪುಸ್ತಕವೊಂದರಲ್ಲಿ; ಏಕೆಂದರೆ ಒಂದರ ಮುಂದೆ ನೂರು ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆಗೆ Googol ಎಂದು ಹೆಸರು. ಇಂಥದ್ದೊಂದು ಮಾರುದ್ದದ ಸಂಖ್ಯೆ ಶಕುಂತಲಾದೇವಿಯವರ ಪುಸ್ತಕದಲ್ಲಲ್ಲದೆ ಮತ್ತೆಲ್ಲಿ ಸಿಗಬೇಕು? ಗಣಿತಪ್ರಿಯರಾಗಿದ್ದ ಗೂಗಲ್ಲಿನ ಸಂಸ್ಥಾಪಕರು ಅಷ್ಟು ದೊಡ್ಡ ಪ್ರಮಾಣದ ಮಾಹಿತಿ ನಮ್ಮಲ್ಲಿ ಸಿಗುತ್ತದೆ ಎಂಬರ್ಥ ಬರುವಂತೆ ತಮ್ಮ ಸಂಸ್ಥೆಗೆ ಆ ಹೆಸರನ್ನಿಟ್ಟರು. ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ವಿವರಗಳನ್ನು ತಿಳಿಸುವ ಕೈಪಿಡಿಯಂತಹ ಪುಸ್ತಕವನ್ನು ಎಲ್ಲರಿಗೂ ಕೊಡುತ್ತಿದ್ದರಂತೆ, ಅದರಲ್ಲಿ ವಿದ್ಯಾರ್ಥಿಯ ಚಿತ್ರ, ಒಂದಷ್ಟು ಪ್ರಾಥಮಿಕ ವಿವರಗಳು ಎಲ್ಲ ಇರುತ್ತಿದ್ದವು, ಆ ಪುಸ್ತಕಕ್ಕೆ ಇದ್ದ ಹೆಸರು - ‘ಫೇಸ್ ಬುಕ್’. ಇಂಥ ಪುಸ್ತಕವೊಂದರ ಆನ್‌ಲೈನ್ ಆವೃತ್ತಿಯಾಗಿ ಬಂದದ್ದರಿಂದ ಆ ಜಾಲತಾಣಕ್ಕೂ ಅದೇ ಹೆಸರಿಡಲಾಯಿತು. ‘ಹುಟ್ಟುಹೆಸರು ಸುಟ್ಟರೂ ಹೋಗದು’ ಎಂಬ ಮಾತನ್ನು ನಾವಿನ್ನು ಚಾಲ್ತಿಗೆ ತರಬಹುದು.

‘ವೈರಲ್ ಆಗುವುದು’ ಎಂದರೆ ‘ವೈರಸ್’ ಎಂಬ ಸೂಕ್ಷ್ಮರೋಗಾಣು ಹಬ್ಬಿದಂತೆ ಹಬ್ಬುವುದು ಎಂದರ್ಥ. ಕೋವಿಡ್‌ನ ಕಾಲದಲ್ಲಿ ಬೇಕಾದರೆ ಈ ಉಪಮೆಯನ್ನು ಉಲ್ಟಾ ಮಾಡಿ, ಯುಟ್ಯೂಬಿನ ವಿಡಿಯೊವೊಂದು ವೈರಲ್ ಆಗುವಂತೆ ಕೋವಿಡ್ ರೋಗ ಹಬ್ಬಿತು ಎಂದಿದ್ದರೂ ನಡೆಯುತ್ತಿತ್ತೇನೋ! ಯಾವುದಾದರೂ ವಿಚಾರವೋ ಕಲ್ಪನೆಯೋ ಜನರಿಂದ ಜನರಿಗೆ ವೈರಲ್ ಆಗಿ ಹರಡುವುದನ್ನು ಸೂಚಿಸಲಿಕ್ಕೆ ಪ್ರಸಿದ್ಧ ವಿಚಾರವಾದಿ, ವಿಜ್ಞಾನಿ, ಲೇಖಕ ರಿಚರ್ಡ್ ಡಾಕಿನ್ಸ್ ಬಳಸಿದ ಪದ ‘meme’. ಅದು ಹೇಗೋ ಬೇರೆಯೇ ಅರ್ಥಕ್ಕೆ ತಿರುಗಿ, ಈಗ ಆ ಪದದ ಮೂಲಾರ್ಥವನ್ನು ಯುವಜನತೆಗೆ ತಿಳಿಸಲಿಕ್ಕೆ ಯಾರಾದರೂ ಟ್ರಾಲ್ ಪೇಜಿನವರು ತಯಾರಿಸಿದ meme ಅನ್ನೇ ಬಳಸಬೇಕಾದೀತೋ ಏನೋ!

ನಮ್ಮಲ್ಲಿ ಮೊದಮೊದಲು ರೇಡಿಯೋ ಬಂದಾಗ, ಅದಕ್ಕೊಂದು ನಮ್ಮೂರಿನ ಪದ ಬೇಕಾಗಿತ್ತು. ಆಗ ‘ಆಕಾಶವಾಣಿ’ ಎಂಬ ಸುಂದರವಾದ ಪದವನ್ನು ಸೂಚಿಸಿದ್ದು ವಿದ್ವಾಂಸರಾಗಿದ್ದ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು. ಎಷ್ಟೊಳ್ಳೆಯ ಹೆಸರು. ಪುರಾಣಗಳ ಅಶರೀರವಾಣಿಯ ಕಲ್ಪನೆಯನ್ನೂ ನೆನಪಿಗೆ ತರುವ ಹೆಸರು. ಛಾಯಾಗ್ರಹಣ ಎಂದರೆ ನೆರಳನ್ನು ಹಿಡಿದಿಡುವುದು ಎಂದು ಅರ್ಥ. ಬೆಳಕನ್ನೂ ನೆರಳನ್ನೂ ಹಿಡಿಯುವುದೇ ಕ್ಯಾಮೆರಾ ಹಿಡಿದವನ ಕೆಲಸ, ಆದ್ದರಿಂದ ಸಿನೆಮಾಟೋಗ್ರಫಿ ಎಂಬ ಪ್ರಯೋಗಕ್ಕಿಂತ ‘ಛಾಯಾಗ್ರಹಣ’ವೇ ಅರ್ಥಪೂರ್ಣವಾದ ಸಂಜ್ಞೆ ಎಂದು ಛಾಯಾಗ್ರಾಹಕ ಜಿ. ಎಸ್. ಭಾಸ್ಕರ್ ಒಂದು ಸಲ ಹೇಳಿದ್ದರು. ಆದರೆ ಎಲ್ಲ ಹೆಸರುಗಳೂ ಹೀಗೆ ಅರ್ಥಪೂರ್ಣವಾಗಿರುತ್ತವೆ ಎಂದೇನಿಲ್ಲ.

ಒಂದು ತಂತ್ರಜ್ಞಾನದ ಉತ್ಪತ್ತಿಗೆ ‘ಶುಂಠಿ ಕಾಪಿ’ ಎಂದೋ, ‘ಏಲಕ್ಕಿ ಚಾ’ ಎಂದೋ ಹೆಸರಿಟ್ಟರೆ ಯಾರಾದರೂ ನಕ್ಕಾರು. ಆದರೆ ಜಾವಾ ಎಂಬ ಪ್ರೋಗ್ರಾಮಿಂಗ್ ಭಾಷೆಯ ಹೆಸರು ಬಂದದ್ದು ‘ಜಾವಾ’ ಎಂಬ ಒಂದು ತರಹದ ಕಾಫಿಯಿಂದಲೇ! ಜಾವಾದಂತೆ ’ಜಾವಾಸ್ಕ್ರಿಪ್ಟ್’ ಅಂತಲೂ ಒಂದು ಪ್ರೋಗ್ರಾಮಿಂಗ್ ಭಾಷೆಯಿದೆ. ಇದಕ್ಕೆ ಮೊದಲು ‘ECMAScript’ ಎಂಬ ಹೆಸರಿಡುವ ಯೋಚನೆಯಿತ್ತಂತೆ; ಇದು ಚರ್ಮರೋಗವೊಂದರ ಹೆಸರಿನಂತಿದೆ, ಎಂದು ಅದರ ನಿರ್ಮಾತೃ ಗೇಲಿ ಮಾಡಿದ್ದ. ಹೇಗೂ ಜನಪ್ರಿಯವಾಗಿದ್ದ ಜಾವಾದಂತೆ ಕೇಳಿಸಲಿ ಎಂಬ ವ್ಯಾಪಾರೀ ತಂತ್ರದಿಂದ ಆಮೇಲೆ ಇದಕ್ಕೆ ‘ಜಾವಾಸ್ಕ್ರಿಪ್ಟ್’ ಎಂಬ ನಾಮಕರಣವಾಯಿತು; ನಿಜವಾಗಿ ಇದು ಜಾವಾದಿಂದ ಸಂಪೂರ್ಣ ಬೇರೆಯೇ ತರಹದ್ದಾದ ಭಾಷೆಯಾದರೂ! ಇನ್ನು ‘ವೈಫೈ’ಗೆ ಹಾಗ್ಯಾಕೆ ಹೆಸರಿಟ್ಟರು ಎಂದು ಯಾರಾದರೂ ಕೇಳಿದರೆ, ‘ಅಷ್ಟೂ ಗೊತ್ತಿಲ್ವೇ? ಅದು ವಯರ್ಲೆಸ್ ಫಿಡೆಲಿಟಿ ಎಂಬುದರ ಹ್ರಸ್ವರೂಪ’ ಅಂದುಬಿಡುತ್ತಿದ್ದೆ ಒಂದು ಕಾಲದಲ್ಲಿ. ಅನಂತರ ಗೊತ್ತಾದ ವಿಷಯ ಏನೆಂದರೆ, ಇದು ಯಾವ ಅರ್ಥವೂ ಇಲ್ಲದ ಹೆಸರಾಗಿತ್ತು.‘IEEE 802’ ಅಂತೇನೋ ವಿಜ್ಞಾನಿಗಳಿಗೆ ಮಾತ್ರ ಅರ್ಥ ಆಗಬಹುದಾದ ಹೆಸರಿಡುವ ಬದಲು ಏನಾದರೂ ಆಕರ್ಷಕವಾದ ನಾಮಧೇಯವೇ ಇರಲಿ ಎಂಬ ನಿಟ್ಟಿನಲ್ಲಿ ಯೋಚನೆ ಮಾಡಿದಾಗ ಹೊಳೆದದ್ದು ‘ಹೈಫೈ’ ಎಂಬುದಕ್ಕೆ ಪ್ರಾಸ ಸರಿಹೊಂದುವ ವೈಫೈ ಎಂಬ ಪದ. ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ, ಅಷ್ಟೇ!

‘ಬ್ಲೂಟೂತ್’ ಎಂದರೆ ನೀಲಿಬಣ್ಣದ ಹಲ್ಲು ಎಂಬರ್ಥವಲ್ಲವೇ? ಮತ್ತೆ ಬ್ಲೂಟೂತಿಗೆ ಯಾಕೆ ಆ ಅಭಿಧಾನ? ಬ್ಲೂಟೂತನ್ನು ವಿನ್ಯಾಸ ಮಾಡಿದ ಪುಣ್ಯಾತ್ಮ ಆ ಕಾಲದಲ್ಲಿ ವೈಕಿಂಗುಗಳ ಇತಿಹಾಸದ ಬಗ್ಗೆ ಯಾವುದೋ ಪುಸ್ತಕ ಓದುತ್ತಿದ್ದನಂತೆ. ಅದರಲ್ಲಿ ಹರಾಲ್ಡ್ ಎಂಬ ಹತ್ತನೆಯ ಶತಮಾನದ ರಾಜನೊಬ್ಬನ ಹೆಸರು ಬಂದಿತ್ತಂತೆ. ಅವನು ಯೂರೋಪಿನ ಒಂದಷ್ಟು ಭಾಗಗಳನ್ನು ಸಂಘಟಿಸಿ ಒಂದಾಗಿಸುವ ಕೆಲಸದಲ್ಲಿ ಯಶಸ್ವಿಯಾಗಿದ್ದನಂತೆ, ಆ ಆಸಾಮಿಗೆ ಇದ್ದ ಅಡ್ಡಹೆಸರೇ ಬ್ಲೂಟೂತ್! ಅದ್ಯಾಕೆ ಅಂಥ ಅಡ್ಡ ಹೆಸರೋ ದೇವರೇ ಬಲ್ಲ. ‘ಅವನ ಒಂದು ಹಲ್ಲು ಹುಳುಕಾಗಿ ನೀಲಿಬಣ್ಣಕ್ಕೆ ತಿರುಗಿತ್ತಂತೆ’. ‘ಅವನು ಸಿಕ್ಕಾಬಟ್ಟೆ ಬ್ಲೂಬೆರಿ ಹಣ್ಣುಗಳನ್ನು ತಿನ್ನುತ್ತಿದ್ದನಂತೆ’ ಮುಂತಾದ ಕಥೆಗಳು ಅಂತರ್ಜಾಲದಲ್ಲಿ ಸಿಗುತ್ತವೆ. ನನಗಂತೂ ಇವೆರಡನ್ನೂ ನಂಬುವುದು ಕಷ್ಟ ಎನಿಸಿತು. ಏನೇ ಇದ್ದರೂ ಅವನಿಗೆ ‘ಬ್ಲೂಟೂತ್’ ಎಂಬ ಅಡ್ಡಹೆಸರಿದ್ದದ್ದಂತೂ ಹೌದು.

ಬೀಚಿಯವರು ಸರಿಯಾಗಿಯೇ ಹೇಳಿದ್ದರು: ಸೃಷ್ಟಿ ಏನು, ಯಾರೂ ಮಾಡಬಹುದು. ಆದರೆ ಹೆಸರಿಡುವುದು ಮಾತ್ರ ಬಹು ದೊಡ್ಡ ಕೆಲಸ!

‘ಮೌಸ್’ ಎಂದರೆ ಇಲಿಯಲ್ಲವೇ?
ಲ್ಯಾಪ್ ಟಾಪಿನ ಪಕ್ಕದಲ್ಲಿ ಕೂತುಕೊಳ್ಳುವ ಉಪಕರಣಕ್ಕೇಕೆ ಈ ನಾಮ? ಅದು ನೋಡಲು ಆಕಾರದಲ್ಲಿ ಇಲಿಯಂತೆ ಕಾಣುತ್ತದೆ, ಅದರಿಂದ ಹೊರಡುವ ವಯರು ಬಾಲದಂತೆ ಗೋಚರಿಸುತ್ತದೆ ಎಂಬುದು ಒಂದು ವಿವರಣೆ. ಆದರೆ ಸ್ವಲ್ಪ ಸಂಶೋಧನೆ ಮಾಡಿದವರು ಬೇರೆಯೇ ಕಥೆ ಹೇಳುತ್ತಾರೆ. ಮೌಸನ್ನು ಮೂಲದಲ್ಲಿ ವಿನ್ಯಾಸ ಮಾಡಿದವರು ಅದಕ್ಕೆ ನಾಮಕರಣವೇ ಮಾಡಿರಲಿಲ್ಲವಂತೆ. ಮೌಸಿನ ಸೃಷ್ಟಿಕರ್ತರಲ್ಲಿ ಒಬ್ಬರ ಜೊತೆ ಕೆಲಸ ಮಾಡಿದ್ದ ರೋಜರ್ ಬೇಟ್ಸ್ ಎಂಬವರು ಹೇಳುವಂತೆ, ಆ ಕಾಲದಲ್ಲಿ, ಪರದೆಯಲ್ಲಿ ಓಡಾಡುವ ಕರ್ಸರಿಗೆ ‘ಅಂಖಿ’ ಎಂಬ ಹೆಸರಿತ್ತಂತೆ. ಅದು ಈ ಉಪಕರಣವನ್ನು ಓಡಿಸಿದಂತೆ ಕಾಣುತ್ತದಾದ್ದರಿಂದ ಇದನ್ನು ‘ಮೌಸ್’ ಎನ್ನಲಾಯಿತಂತೆ. ಹಾಗಾದರೆ, ‘ಕರ್ಸರಿಗೆ ಅಂಖಿ ಎಂಬ ಹೆಸರೇಕೆ ಇತ್ತು’ ಎಂಬ ಪ್ರಶ್ನೆಗೆ ಮಾತ್ರ, ‘ಮರೆತುಹೋಗಿದೆ’ ಎಂಬುದೇ ಅವರ ಉತ್ತರವಾಗಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT