ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ನ್ಯಾನೊ ತಂತ್ರಜ್ಞಾನದ ಅಂಕುಶ: ಕನ್ನಡಿಗ ವಿಜ್ಞಾನಿಯ ಸಾಧನೆ

Last Updated 8 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಕೋವಿಡ್‌–19 ರೋಗಿಗಳ ಚಿಕಿತ್ಸೆಯಲ್ಲಿ ನೆರವಾಗಬಲ್ಲ ನ್ಯಾನೊ ತಂತ್ರಜ್ಞಾನ ಆಧಾರಿತ ವಿಧಾನವೊಂದನ್ನು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಧಾರವಾಡದ ವಿಜ್ಞಾನಿ ಮಹಂತೇಶ ನವಾತಿ ನೇತೃತ್ವದ ತಂಡವು ಅಭಿವೃದ್ಧಿ‍ಪಡಿಸಿದೆ.

ನೈಟ್ರಿಕ್‌ ಆಕ್ಸೈಡ್‌ನ (ಎನ್‌ಒ) ಬಳಕೆ ಈ ಚಿಕಿತ್ಸಾ ವಿಧಾನದ ಪ್ರಮುಖ ಅಂಶ. ನೈಟ್ರೊಜನ್‌ ಆಕ್ಸೈಡ್ ಎಂದರೆ ನೈಟ್ರೊಜನ್‌ ಮತ್ತು ಆಮ್ಲಜನಕದ ಸಂಯುಕ್ತ. ಇದು ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ನಿಯಂತ್ರಣಕ್ಕೆ ನೈಟ್ರಿಕ್‌ ಆಕ್ಸೈಡ್‌ ವೈದ್ಯಕೀಯವಾಗಿ ಬಳಕೆ ಆಗುತ್ತದೆ. ನೈಟ್ರಿಕ್‌ ಆಕ್ಸೈಡ್‌ನ ಇನ್ನೊಂದು ಮಹತ್ವದ ಗುಣವೆಂದರೆ, ರಕ್ತನಾಳಗಳನ್ನು ಅಗಲಗೊಳಿಸಲೂ ಇದು ಉಪಯುಕ್ತ ಎಂದು ಮಹಂತೇಶ ವಿವರಿಸುತ್ತಾರೆ.

ನೈಟ್ರಿಕ್‌ ಆಕ್ಸೈಡ್‌ನ ಈ ಗುಣವನ್ನೇ ಇರಿಸಿಕೊಂಡು ಈ ಚಿಕಿತ್ಸಾ ವಿಧಾನವನ್ನು ರೂಪಿಸಲಾಗಿದೆ. ಕೋವಿಡ್‌ಗೆ ಒಳಗಾದವರಲ್ಲಿ ನೈಟ್ರಿಕ್ ಆಕ್ಸೈಡ್‌ನ ಪ್ರಮಾಣ ಕುಗ್ಗುತ್ತದೆ. ಇದು ದೇಹದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ನ್ಯಾನೊ ತಂತ್ರಜ್ಞಾನದ ಮೂಲಕ ದೇಹಕ್ಕೆ ನೈಟ್ರಿಕ್ ಆಕ್ಸೈಡ್‌ ಪೂರೈಸುವ ಮೂಲಕ ಈ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂದು ಮಹಂತೇಶ ಅವರು ವಿವರಿಸುತ್ತಾರೆ.

ಕೊರೊನಾ ವೈರಾಣುವು ಮನುಷ್ಯ ದೇಹಕ್ಕೆ ಪ್ರವೇಶಿಸಿ ಕೆಂಪು ರಕ್ತಕಣಗಳನ್ನು ನಾಶಪಡಿಸುತ್ತದೆ. ಕೆಂಪು ರಕ್ತಕಣಗಳಿಂದ ಬಿಳಿ ರಕ್ತಕಣ ಪ್ರತ್ಯೇಕಗೊಳ್ಳುವಂತೆ ಮಾಡುತ್ತದೆ. ಹೀಗೆ ಬಿಡುಗಡೆಯಾದ ಬಿಳಿರಕ್ತಕಣದ ಸರಪಳಿಯನ್ನು ಕೋವಿಡ್‌ ವೈರಾಣು ಆಕ್ರಮಿಸುತ್ತದೆ. ನಂತರ, ಇದು ಹೀಮ್‌ನ (ಬಿಳಿರಕ್ತಕಣದ ಒಂದು ಭಾಗ– ಹಿಮೊಗ್ಲೊಬಿನ್‌ನಿಂದ ಗ್ಲೊಬಿನ್‌ ಪ್ರತ್ಯೇಕವಾದರೆ ಉಳಿಯುವ ಅಂಶ) ಚಟುವಟಿಕೆ ತಡೆಗಾಗಿ ಪೋರ್ಫಿರಿನ್‌ ಎಂಬ ಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.

ಕೆಂಪು ರಕ್ತಕಣವು ನಾಶವಾಗಿ, ಪ್ರತ್ಯೇಕಗೊಂಡ ಬಿಳಿ ರಕ್ತ ಕಣವು ರಕ್ತದಲ್ಲಿರುವ ನೈಟ್ರಿಕ್‌ ಆಕ್ಸೈಡ್‌ ಅನ್ನು ಹೀರಿಕೊಳ್ಳಲು ಆರಂಭಿಸುತ್ತದೆ. ಇದು ದೇಹದಲ್ಲಿ ರಕ್ತದ ಕೊರತೆಗೆ ಕಾರಣವಾಗಬಹುದು. ಸ್ನಾಯುಗಳಲ್ಲಿ ಸೃಷ್ಟಿಯಾಗುವ ಕ್ರಿಯೇಟಿನೈನ್‌ ಎಂಬ ವ್ಯರ್ಥ ಉತ್ಪನ್ನವನ್ನು ಮೂತ್ರಪಿಂಡವು ಹೊರಹಾಕುತ್ತದೆ. ಕೋವಿಡ್‌ ರೋಗಿಗಳಲ್ಲಿ ಕ್ರಿಯೇಟಿನೈನ್‌ ಅತಿಯಾದ ಪ್ರಮಾಣದಲ್ಲಿ ಕಂಡು ಬಂದಿದೆ. ದೇಹದಲ್ಲಿ ಕಬ್ಬಿಣದ ಅಂಶವನ್ನು ಸಂಗ್ರಹಿಸಿ ಇರಿಸಿಕೊಳ್ಳುವ ಫೆರಿಟಿನ್‌ ಎಂಬ ಕಣಗಳ ಸಂಖ್ಯೆಯು ದೇಹದಲ್ಲಿ ಹೆಚ್ಚಳವಾಗುತ್ತದೆ. ಈ ಇಡೀ ಪ್ರಕ್ರಿಯೆಯು ಮೂತ್ರಪಿಂಡದ ವೈಫಲ್ಯ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೊರೊನಾ ವೈರಾಣು ಸೃಷ್ಟಿಸುವ ಸಮಸ್ಯೆಗಳನ್ನು ಮಹಂತೇಶ ವಿವರಿಸುತ್ತಾರೆ.

ದೇಹದೊಳಗೆ ಬಿಡುಗಡೆ ಆಗುವ ಕಬ್ಬಿಣದ ಅಂಶವು ರಕ್ತಕಣಗಳ ಒಳಗೆ ಇರುವ ನಿಯಂತ್ರಿತ ಕಬ್ಬಿಣದ ಅಂಶಗಳಿಗಿಂತ ಸಾವಿರ ಪಟ್ಟು ಹೆಚ್ಚು ವೇಗವಾಗಿ ನೈಟ್ರಿಕ್‌ ಆಕ್ಸೈಡ್‌ ಅನ್ನು ಹೀರಿಕೊಳ್ಳುತ್ತದೆ. ನೈಟ್ರಿಕ್‌ ಆಕ್ಸೈಡ್‌ ತ್ವರಿತವಾಗಿ ಕರಗುತ್ತಾ ಹೋದಂತೆ ರಕ್ತವಾಹಿನಿಗಳಲ್ಲಿ ಅಧಿಕ ರಕ್ತದ ಒತ್ತಡ, ರಕ್ತ ಹೆಪ್ಪುಗಟ್ಟುವಿಕೆ, ಉರಿಯೂತ ಉಂಟಾಗಬಹುದು. ಬಿಳಿ ರಕ್ತಕಣ ಕಡಿಮೆ ಆಗುವುದರಿಂದ ರೋಗ ನಿರೋಧಕ ಶಕ್ತಿ ಕುಂದುತ್ತದೆ ಮತ್ತು ನೈಟ್ರಿಕ್ ಆಕ್ಸೈಡ್‌ ಕೊರತೆಯಿಂದ ಆಮ್ಲಜನಕದ ಸಾಗಾಟ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಕೊರೊನಾ ವೈರಾಣು ದೇಹದಲ್ಲಿ ಸೃಷ್ಟಿಸುವ ಅವಾಂತರಗಳನ್ನು ಅವರು ವಿಶ್ಲೇಷಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ದೇಹಕ್ಕೆ ನೈಟ್ರಿಕ್‌ ಆಕ್ಸೈಡ್‌ ಪೂರೈಸುವ ವಿಧಾನವನ್ನು ಮಹಂತೇಶ್‌ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದೆ. ನ್ಯಾನೊ ತಂತ್ರಜ್ಞಾನ ಆಧಾರಿತ (NanoNoxTM) ಕಣಗಳು ಶ್ವಾಸಕೋಶದಲ್ಲಿ ನೈಟ್ರಿಕ್ ಆಕ್ಸೈಡ್‌ ನಿರಂತರವಾಗಿ ಲಭ್ಯ ಇರುವಂತೆ ನೋಡಿಕೊಳ್ಳುತ್ತದೆ. ಮೀಟರ್ಡ್‌ ಡೋಸ್‌ ಇನ್‌–ಹೇಲಿಂಗ್‌ ಎಂದು ಕರೆಯಲಾಗುವ ಈ ಕಣಗಳು ಹಲವು ಗಂಟೆಗಳವರೆಗೆ ನೈಟ್ರಿಕ್‌ ಆಕ್ಸೈಡ್‌ ಅನ್ನು ಬಿಡುಗಡೆ ಮಾಡಬಲ್ಲವು. ಈ ಕಣಗಳನ್ನು ಪೂರೈಸುವುದು ಸಂಕೀರ್ಣ ಪ್ರಕ್ರಿಯೆ ಏನಲ್ಲ. ಸಾಮಾನ್ಯ ಉಸಿರಾಟದ ಮೂಲಕ ಅಥವಾ ನೆಬುಲೈಝರ್‌ ಮೂಲಕ ಶ್ವಾಸಕೋಶಕ್ಕೆ ಹೋಗುವಂತೆ ಮಾಡಬಹುದು.

ಪರಿಣಾಮ ಏನು?

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನುನೈಟ್ರಿಕ್‌ ಆಕ್ಸೈಡ್‌ ನಾಶ ಮಾಡುತ್ತದೆ. ಜತೆಗೆ, ಇದು ರಕ್ತನಾಳಗಳನ್ನು ಅಗಲ ಮಾಡುತ್ತದೆ. ವೈರಸ್‌ನಿಂದಾಗಿ ಸಂಕುಚಿತಗೊಂಡ ರಕ್ತನಾಳಗಳು ಅಗಲವಾದಂತೆ ರಕ್ತದ ಚಲನೆ ವೇಗ ಪಡೆದುಕೊಳ್ಳುತ್ತದೆ. ರಕ್ತದಲ್ಲಿ ನೈಟ್ರಿಕ್‌ ಆಕ್ಸೈಡ್‌ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ವೈರಾಣುಗಳು ಸಾಯುತ್ತವೆ ಮತ್ತು ಅವುಗಳ ವೃದ್ಧಿ ಕುಂಠಿತವಾಗುತ್ತದೆ.

ಈ ಪ್ರಕ್ರಿಯೆ ಮುಂದುವರಿದಂತೆ ರೋಗಿಯು ಕೋವಿಡ್‌ನಿಂದ ಗುಣಮುಖನಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ನ್ಯಾನೊ ಕಣಗಳ ಉಸಿರಾಟದ ಮೂಲಕವೇ ರೋಗದಿಂದ ಹೊರಗೆಬರುವುದು ಸಾಧ್ಯ. ಆಸ್ಪತ್ರೆಗೆ ದಾಖಲಾಗುವಂತಹ ಅಗತ್ಯ ಇರುವುದಿಲ್ಲ ಎಂದು ತಮ್ಮ ಉತ್ಪನ್ನದ ಬಗ್ಗೆ ಮಹಂತೇಶ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕರ್ನಾಟಕ ವಿ.ವಿಯಲ್ಲಿ ಪದವಿ ಪಡೆದ ಮಹಂತೇಶ, ಕಾನ್ಪುರ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಭೌತಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿರುವ ಇವರು ಸದ್ಯ, ನ್ಯೂಯಾರ್ಕ್‌ನ ಎನ್‌ಎಂಬಿ ಥೆರಪ್ಯೂಟಿಕ್ಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾರೆ. ಕಂಪನಿಯ ಅಧ್ಯಕ್ಷ ಡಾ. ಮೆಲ್‌ ಎಹಿಲ್ರಿಕ್‌‌, ಶರೀರ ವಿಜ್ಞಾನ ವಿಭಾಗದ ಪ್ರೊಫೆಸರ್‌ ಜೋಯಲ್‌ ಎಂ. ಫ್ರೀಡ್‌ಮನ್‌ ಈ ಸಂಶೋಧನೆಯಲ್ಲಿ ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT