ಬುಧವಾರ, ಜುಲೈ 15, 2020
28 °C

ಸುಮಾರು 1 ಲಕ್ಷ ಭಾರತೀಯರ ಆಧಾರ್, ಪಾನ್ ಪ್ರತಿಗಳು ಡಾರ್ಕ್ ವೆಬ್‌ನಲ್ಲಿ ಮಾರಾಟ!

ಪಿಟಿಐ Updated:

ಅಕ್ಷರ ಗಾತ್ರ : | |

ಸೈಬರ್‌ ಕ್ರೈಮ್‌– ಸಾಂಕೇತಿಕ ಚಿತ್ರ

ನವದೆಹಲಿ: ಭಾರತೀಯರ ಸುಮಾರು 1 ಲಕ್ಷ ರಾಷ್ಟ್ರೀಯ ಗುರುತು ಚೀಟಿಗಳ ಸ್ಕ್ಯಾನ್‌ ಆಗಿರುವ ಪ್ರತಿಗಳು ಡಾರ್ಕ್‌ ವೆಬ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಆಧಾರ್‌, ಪಾನ್‌ ಕಾರ್ಡ್ ಹಾಗೂ ಪಾಸ್‌ಪೋರ್ಟ್‌ಗಳು ಮಾರಾಟಕ್ಕಿರುವುದಾಗಿ ಸೈಬರ್‌ ಇಂಟೆಲಿಜೆನ್ಸ್‌ ಸಂಸ್ಥೆ ಸೈಬಲ್‌ ಬುಧವಾರ ಹೇಳಿದೆ.

ಸೈಬಲ್ ವರದಿ ಪ್ರಕಾರ, ಸೋರಿಕೆಯಾಗಿರುವ ಮಾಹಿತಿ ಸರ್ಕಾರದ ಸಂಗ್ರಹದಿಂದ ಆಗಿರುವುದಲ್ಲ.

'ಸುಮಾರು 1 ಲಕ್ಷ ಭಾರತೀಯರ ಗುರುತಿನ ಚೀಟಿಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಮಾಹಿತಿಯ ಪ್ರಮಾಣ ಹಾಗೂ ಹಂಚಿಕೊಳ್ಳಲಾದ ಅಂಶಗಳಿಂದಾಗಿ ಆಸಕ್ತಿ ಹೆಚ್ಚಿ ಪರಿಶೀಲಿಸಲಾಯಿತು. ಭಾರತದ ಬೇರೆ ಬೇರೆ ಸ್ಥಳಗಳಿಂದ ಸುಮಾರು 1 ಲಕ್ಷ ಗುರುತಿನ ಚೀಟಿಗಳನ್ನು ಹೆಕ್ಕಿ ತೆಗೆದು ಮಾರಾಟ ಮಾಡಲಾಗುತ್ತಿದೆ' ಎಂದು ಸೈಬಲ್‌ ಹೇಳಿದೆ.

ವೈಯಕ್ತಿಕ ಮಾಹಿತಿ ಸೋರಿಕೆಯು ಗುರುತು ಕಳ್ಳತನ, ಹಗರಣಗಳು ಹಾಗೂ ಬೇಹುಗಾರಿಕೆಗಳಿಗೆ ಸಹಕಾರಿಯಾಗಬಹುದಾಗಿದೆ. ಮೋಸ ಮಾಡುವ ಕಾರ್ಯಗಳಿಗೆ ಗುರುತು ಚೀಟಿಗಳು, ವಿವರಗಳನ್ನು ಬಳಸಿಕೊಂಡು ಫೋನ್‌ ಕರೆಗಳ ಮೂಲಕ ಜನರಲ್ಲಿ ನಂಬಿಕೆ ಹುಟ್ಟಿಸಲಾಗುತ್ತದೆ.

ಸೈಬರ್‌ ಪರಿಶೀಲನೆ ನಡೆಸುತ್ತಿರುವವರು ಮಾರಾಟಗಾರನಿಂದ ಸುಮಾರು 1,000 ಗುರುತಿನ ಚೀಟಿಗಳನ್ನು ಪಡೆದಿದ್ದು, ಸ್ಕ್ಯಾನ್‌ ಆಗಿರುವ ಆ ಗುರುತಿನ ಚೀಟಿಗಳು ಭಾರತೀಯರದ್ದು ಎಂದು ದೃಢಪಟ್ಟಿದೆ. ಸರ್ಕಾರದ ವ್ಯವಸ್ಥೆಯ ಮೂಲದಿಂದ ಬಂದಿಲ್ಲದ್ದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ. ಇನ್ನಷ್ಟು ತನಿಖೆ ಮುಂದುವರಿದಿದ್ದು, ಶೀಘ್ರದಲ್ಲಿಯೇ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂದು ಸೈಬಲ್ ಹೇಳಿದೆ.

ಕಂಪನಿಗಳು ಕೆವೈಸಿಗಾಗಿ ಪಡೆಯಲಾಗಿರುವ ಸ್ಕ್ಯಾನ್‌ ಮಾಡಿರುವ ಗುರುತಿನ ಚೀಟಿಗಳು ಸೋರಿಕೆಯಾಗಿರುವ ಸಾಧ್ಯತೆಗಳಿವೆ.  ಕೆವೈಸಿಯಿಂದ ಮಾಹಿತಿ ಸೋರಿಕೆಯಾಗುತ್ತಿದ್ದು, ಹಿರಿಯ ವ್ಯಕ್ತಿಗಳನ್ನು ಗುರಿಯಾಗಿಸಿ ವಂಚಿಸಲು, ಬ್ಯಾಂಕಿಂಗ್‌ ಹಗರಣಗಳಿಗೆ ಮಾಹಿತಿ ಬಳಕೆಯಾಗುತ್ತಿವೆ. ಫೋನ್‌, ಇ–ಮೇಲ್ ಅಥವಾ ಎಸ್‌ಎಂಎಸ್‌ ಮೂಲಕ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

ಮೇ ತಿಂಗಳಲ್ಲಿ 7.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಡಾರ್ಕ್‌ ವೆಬ್‌ನಲ್ಲಿ ಮಾರಾಟಕ್ಕಿಟ್ಟಿರುವ ಎರಡು ಪ್ರಕರಣಗಳನ್ನು ಸೈಬಲ್‌ ಬಹಿರಂಗ ಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು