ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಕೆಟ್ಟ ಪಾಸ್‌ವರ್ಡ್‌

Last Updated 26 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ನಾಯಿ ಬಾಲ ಡೊಂಕು ಅಂತಾರಲ್ಲ ಹಾಗೆ, ಸುರಕ್ಷಿತ ಪಾಸ್‌ವರ್ಡ್ ಬಳಸಿ ಎಂದು ಎಷ್ಟೇ ಹೇಳಿದರೂ ನಾವು ಮಾತ್ರ ಬದಲಾಗುವುದೇ ಇಲ್ಲ. ನೆನಪಿಟ್ಟುಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಅಡ್ಡ ಹೆಸರು, ಹೆಸರಿನ ಕೊನೆಗೆ ಮೊಬೈಲ್‌ನ ಕೊನೆಯ ಸಂಖ್ಯೆಗಳು ಅಥವಾ ಜನ್ಮದಿನಾಂಕ ಹೀಗೆ ನಮ್ಮೊಟ್ಟಿಗೆ ಒಡನಾಟ ಇಟ್ಟುಕೊಂಡಿರುವವರೆಲ್ಲರೂ ಅತ್ಯಂತ ಸುಲಭವಾಗಿ ಪತ್ತೆಮಾಡಬಲ್ಲ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳುತ್ತೇವೆ.

ಪ್ರತಿ ವರ್ಷದಂತೆ ಈ ವರ್ಷವೂ (2018) ಅತ್ಯಂತ ಕೆಟ್ಟ ಅಥವಾ ಅತ್ಯಂತ ಸರಳವಾದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಹಲವು ಸಂಸ್ಥೆಗಳು ಬಿಡುಗಡೆ ಮಾಡಿವೆ. ಈ ಸಂಸ್ಥೆಗಳು ಹೇಳುವ ಪ್ರಕಾರ ಜನರು ಪಾಸ್‌ವರ್ಡ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಲೇ ಇಲ್ಲ.

ಎಷ್ಟೇ ಎಚ್ಚರಿಕೆಗಳನ್ನು ನೀಡಿದರೂ ಜನರು ಸುಲಭವಾಗಿ ಅಂದಾಜು ಮಾಡಿಬಿಡಬಹುದಾದಂತಹ ‘12345’ ಮತ್ತು "password' ಪಾಸ್‌ವರ್ಡ್‌ಗಳನ್ನೇ ಇಟ್ಟುಕೊಂಡಿದ್ದಾರೆ. ಅತ್ಯಂತ ಕೆಟ್ಟ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ ಇವೆರಡೂ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.

ಸುರಕ್ಷತಾ ಅಪ್ಲಿಕೇಷನ್‌ಗಳಲ್ಲಿ ಪರಿಣತಿ ಹೊಂದಿರುವ ಸ್ಪ್ಲಾಷ್‌ ಡಾಟಾ (Splash Data) ಕಂಪನಿ ಅಂತರ್ಜಾಲದಲ್ಲಿ ಸೋರಿಕೆಯಾಗಿರುವ 50 ಲಕ್ಷಕ್ಕೂ ಅಧಿಕ ಪಾಸ್‌ವರ್ಡ್‌ಗಳನ್ನು ಪರಿಶೀಲನೆ ನಡೆಸಿ ಅತಿ ಹೆಚ್ಚು ಬಳಕೆ ಮಾಡಿದ ಪಾಸ್‌ವರ್ಡ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ, ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಜನರು ಅತ್ಯಂತ ಸುಲಭವಾಗಿ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿದ್ದಾರೆ.

‘ಜನರು ಸುರಕ್ಷಿತವಾಗಿ ಆನ್‌ಲೈನ್‌ ಚುಟವಟಿಕೆಗಳನ್ನು ನಡೆಸಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿ ವರ್ಷವೂ ಈ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ’ ಎಂದು ಸ್ಪ್ಲಾಷ್‌ ಡಾಟಾ ಕಂಪನಿಯ ಸಿಇಒ ಮಾರ್ಗನ್‌ ಸ್ಲೈನ್‌ ಹೇಳಿದ್ದಾರೆ.

ಕೆಲವರಂತೂ ಒಂದು ವರ್ಷದವರೆಗೆ ತಮ್ಮ ಪಾಸ್‌ವರ್ಡ್‌ ಬದಲಾಯಿಸೇ ಇಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಳಸಿರುವ donald&quotಎನ್ನುವ ಪಾಸ್‌ವರ್ಡ್‌ ಅತ್ಯಂತ ಕೆಟ್ಟ ಪಾಸ್‌ವರ್ಡ್‌ಗಳ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದೆ.

**

ಸುರಕ್ಷತೆಗೆ ಏನು ಮಾಡಬಹುದು?

* ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಪಾಸ್‌ವರ್ಡ್‌ ಬಳಕೆ ಬೇಡ. ಅಕ್ಷರ, ಚಿಹ್ನೆ , ಸಂಖ್ಯೆಗಳ ಮಿಶ್ರ ರೂಪದ ಪಾಸ್‌ವರ್ಡ್‌ ಗರಿಷ್ಠ ಸುರಕ್ಷತೆ ನೀಡಬಲ್ಲದು. ಹಾಗೆಂದು ಹೆಸರಿಗೆ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಜೋಡಿಸಿ ಪಾಸ್‌ವರ್ಡ್‌ ರೂಪಿಸಿದರೆ ಅದನ್ನು ಯಾರು ಬೇಕಾದರೂ ಸುಲಭವಾಗಿ ಕಂಡುಕೊಳ್ಳಬಹುದು. ಹಾಗಾಗಿ ಆದಷ್ಟೂ ಬೇರೆಯವರಿಗೆ (ಆಪ್ತರಿಗೂ) ಗೊತ್ತಿರದ ಕ್ಲಿಷ್ಟ ಪಾಸ್‌ವರ್ಡ್ ಬಳಸಿ.

* ಒಂದೇ ಪಾಸ್‌ವರ್ಡ್‌ನಿಂದ ಎಲ್ಲಾ ಖಾತೆಗೂ ಲಾಗಿನ್‌ ಆಗುವ ಆಯ್ಕೆ ಬಳಸಬೇಡಿ. ಪ್ರತಿಯೊಂದಕ್ಕೂ ಪ್ರತ್ಯೇಕ ಪಾಸ್‌ವರ್ಡ್‌ ಕಡ್ಡಾಯವಾಗಿ ಬಳಸಿ

* ಪಾಸ್‌ವರ್ಡ್‌ಗಳ ನಿರ್ವಹಣೆಗೆಂದೇ ಮೀಸಲಾಗಿರುವ ಸೇವೆಗಳನ್ನು ಬಳಸಿಕೊಳ್ಳುವುದು ಉತ್ತಮ. ‘LastPass’ ಅಥವಾ ‘1Password’ನಂತಹ ಸೇವೆಗಳು ವಿವಿಧ ಜಾಲತಾಣಗಳಿಗೆ ಸುರಕ್ಷಿತವಾದ ಪಾಸ್‌ವರ್ಡ್‌ಗಳನ್ನು ಕ್ರಿಯೇಟ್ ಮಾಡಿ ಸೇವ್ ಮಾಡಿಟ್ಟುಕೊಳ್ಳುತ್ತವೆ.

ಆಪರೇಟಿಂಗ್ ಸಿಸ್ಟಂ ಹಾಗೂ ಬ್ರೌಸರ್‌ಗಳು ಸಹ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿ ಇಡುವಲ್ಲಿ ಸಾಕಷ್ಟು ಉತ್ತಮ ಸೇವೆ ನೀಡುತ್ತಿವೆ. ಪಾಸ್‌ವರ್ಡ್‌ ಮ್ಯಾನೇಜರ್‌ಗಳು ಹ್ಯಾಕ್ ಆಗುವುದಿಲ್ಲ ಎಂದಲ್ಲ. ಆದರೆ, ಇವುಗಳ ಕೆಲಸ ನಿರ್ದಿಷ್ಟವಾಗಿ ಪಾಸ್‌ವರ್ಡ್‌ಗಳ ನಿರ್ವಹಣೆ ಮಾತ್ರ ಆಗಿರುವುದರಿಂದ ಸುರಕ್ಷತೆ ಉಲ್ಲಂಘನೆ ಆಗುವ ಸಾಧ್ಯತೆ ಕಡಿಮೆ.

ಆನ್‌ಲೈನ್‌ನಲ್ಲಿ ಖರೀದಿಸುವಾಗ ಕಾರ್ಡ್‌ ಮೂಲಕ ಹಣ ಪಾವತಿಸುವುದಾದಲ್ಲಿ ಕಾರ್ಡ್‌ ಮಾಹಿತಿಗಳನ್ನು ನೀಡಿದ ಬಳಿಕ Remember me for next time ಎಂದಿರುವಲ್ಲಿ ರೈಟ್‌ ಮಾರ್ಕ್‌ ಇದೆಯೇ ಎಂದು ಗಮನಿಸಿ. ಇದ್ದರೆ ತೆಗೆಯಿರಿ.ಬಹಳಷ್ಟು ಜನರು ಇದನ್ನು ಗಮನಿಸದೇ ಹಣ ಪಾವತಿ ಮುಂದುವರಿಸುತ್ತಾರೆ. ಹೀಗೆ ಮಾಡುವುದರಿಂದ ಆ ನಿರ್ದಿಷ್ಟ ಜಾಲತಾಣದಲ್ಲಿ ನಿಮ್ಮ ಕಾರ್ಡ್ ಮಾಹಿತಿ ಉಳಿದುಬಿಡುತ್ತದೆ. ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್ ಬೇರೆಯವರು ಬಳಸಿದಾಗ ಸುಲಭವಾಗಿ ನಿಮ್ಮ ಹಣದಿಂದ ಖರೀದಿ ನಡೆಸಬಹುದು. ಇ–ಮೇಲ್‌ಗೆ ಲಾಗಿನ್‌ ಆಗುವಾಗಲೂ ರೈಟ್‌ ಮಾರ್ಕ್‌ ತೆಗೆಯುವುದು ಹೆಚ್ಚು ಸೂಕ್ತ.

* ನೀವು ಬಳಸುವ ಬ್ರೌಸರ್‌ನಲ್ಲಿ ಪ್ರತಿ ಬಾರಿ ಲಾಗಿನ್‌ ಆಗುವಾಗ ಈ ಪಾಸ್‌ವರ್ಡ್ ಸೇವ್‌ ಮಾಡಲೇ ಎನ್ನುವ ನೋಟಿಫಿಕೇಷನ್‌ ಬ್ರೌಸರ್‌ನ ಮೇಲ್ಭಾಗದಲ್ಲಿ ಮೂಡುತ್ತದೆ. ಅದಕ್ಕೆ Not now ಎಂದು ನೀಡಿ. ಕನಿಷ್ಠ ತಿಂಗಳಿಗೊಮ್ಮೆಯಾದರೂ ಬ್ರೌಸರ್‌ ಹಿಸ್ಟ್ರಿ ಕ್ಲಿಯರ್‌ ಮಾಡಿ.

* ಎರಡು ಹಂತದ ಸುರಕ್ಷತೆ: ಜಿ–ಮೇಲ್‌ ಖಾತೆ ತೆರೆಯಲು ಬಳಕೆದಾರರ ಹೆಸರು ಮತ್ತು ರಹಸ್ಯ ಪದಗಳನ್ನು ಕೀಲಿಸಿದ ನಂತರ ಖಾತೆಗಳ ಜತೆ ಜೋಡಿಸಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ (One Time Password) ಸಂಖ್ಯೆ ಬರುತ್ತದೆ. ಬೇರೊಬ್ಬರು ನಿಮ್ಮ ಖಾತೆಯ ಪಾಸ್‌ವರ್ಡ್‌ ಹ್ಯಾಕ್‌ ಮಾಡಿ ತೆರೆಯಲು ಪ್ರಯತ್ನಿಸಿದರೆ ಕೂಡಲೆ ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರುತ್ತದೆ. ಆಗ ನೀವು ಎಚ್ಚರ ವಹಿಸಬಹುದು.ಜಿ–ಮೇಲ್ ಟೂ ಸ್ಟೆಪ್‌ ವೆರಿಫಿಕೇಷನ್‌ ಮಾಡಲುwww.google.com/landing/2step/ಎಂದು ಜಾಲ ತಾಣಪುಟದಲ್ಲಿ ಟೈಪ್ ಮಾಡಿ ಆ್ಯಕ್ಟಿವೇಟ್‌ ಮಾಡಿಕೊಳ್ಳಬಹುದು.

**

ಕೆಟ್ಟ ಪಾಸ್‌ವರ್ಡ್‌ ಸ್ಥಾನ ಪಡೆದಿರುವಂಥವು
1.123456
2. password
3. 123456789
4. 12345678
5. 12345
6. 111111
7. 1234567
8. Sunshine
9. qwerty
10. iloveyou
11. princess
12. admin
13. welcome
14.666666
15. abc123

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT