ಬುಧವಾರ, ಸೆಪ್ಟೆಂಬರ್ 29, 2021
19 °C

ಮೊಬೈಲ್‌ ಫೋನ್ ಹ್ಯಾಕ್‌ ಆಗಿದೆಯೆ?...

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಪೆಗಾಸಸ್‌ ಸ್ಪೈ ವೇರ್‌. ಪ್ರಸ್ತುತ ವಿಶ್ವದಾದ್ಯಂತ ಈ ಕು–ತಂತ್ರಾಂಶದ್ದೇ ಚರ್ಚೆ. ನಿಗಾ ಚಟುವಟಿಕೆಗಳಿಗಾಗಿ ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆ ಅಭಿವೃದ್ಧಿಪಡಿಸಿದ ಈ ಸ್ಪೈವೇರ್‌, ವಿಶ್ವದ ಹಲವು ಗಣ್ಯರ ಮೊಬೈಲ್‌ಫೋನ್‌ಗಳನ್ನು ಹೊಕ್ಕಿದೆ ಎಂಬ ಅನುಮಾನ ಈಗ ಕಾಡುತ್ತಿದೆ. ಈ ಸ್ಪೈವೇರ್‌ ಒಮ್ಮೆ ನಮ್ಮ ಸ್ಮಾರ್ಟ್‌ಫೋನ್‌ಗೆ ಹೊಕ್ಕರೆ ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತಂತ್ರಜ್ಞರು. ಇದರಿಂದ ನಮ್ಮ ಫೋನ್‌ನಲ್ಲಿರುವ ಫೋಟೊ ಗ್ಯಾಲರಿ, ಕರೆ, ಸಂದೇಶಗಳ ವಿವರವೆಲ್ಲಾ ಮತ್ತೊಬ್ಬರ ಕೈಗೆ ಸುಲಭವಾಗಿ ಸಿಗುತ್ತವೆ. ಒಂದು ವೇಳೆ ಇಂಥ ಸ್ಪೈ ವೇರ್‌ಗಳು ನಮ್ಮ ಫೋನ್‌ನಲ್ಲಿದ್ದರೆ ತಿಳಿಯುವುದು ಹೇಗೆ?

ಬ್ಯಾಟರಿ ಹಾಗೂ ಆ್ಯಪ್‌ಗಳನ್ನು ಪರಿಶೀಲಿಸಿ
ಮೊಬೈಲ್‌ಫೋನ್‌ ಬ್ಯಾಟರಿ ಸಾಮರ್ಥ್ಯ ವೇಗವಾಗಿ ಕುಗ್ಗುತ್ತಿದ್ದರೆ ಅಪಾಯಕಾರಿ ಆ್ಯಪ್‌ಗಳ ಮೂಲಕ ಮಾಲ್‌ವೇರ್‌ ಅಥವಾ ಸ್ಪೈವೇರ್‌ ಫೋನ್‌ಗೆ ಹೊಕ್ಕಿರುವ ಸಾಧ್ಯತೆ ಇರುತ್ತದೆ. ಆದರೆ ಬ್ಯಾಕ್‌ಗ್ರೌಂಡ್‌ನಲ್ಲೂ ಕೆಲವು ಆ್ಯಪ್‌ಗಳು ಕ್ರಿಯಾಶೀಲವಾಗಿರುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ. ಹೀಗಾಗಿ ಮೊದಲು ಅಂಥ ಆ್ಯಪ್‌ಗಳನ್ನು ನಿಯಂತ್ರಿಸಬೇಕು. ಆದರೂ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುತ್ತಿದ್ದರೆ ಪರಿಶೀಲಿಸಬೇಕು. ನಿಮ್ಮ ಪ್ರಮೇಯವಿಲ್ಲದೆ ಆ್ಯಪ್‌ಗಳು ಡೌನ್‌ಲೋಡ್‌ ಆಗಿದ್ದರೆ, ಡಿಲೀಟ್‌ ಮಾಡಿದ ನಂತರವೂ ಪುನಃ ಡೌನ್‌ಲೋಡ್‌ ಆಗುತ್ತಿದ್ದರೆ ನಿಮ್ಮ ಮೊಬೈಲ್‌ಫೋನ್‌ ಹ್ಯಾಕಿಂಗ್‌ಗೆ ಗುರಿಯಾಗಿರುವ ಸಂಕೇತವದು.

ಹೆಚ್ಚು ಡೇಟಾ ಖರ್ಚಾದರೆ
ನಿತ್ಯ ಬಳಸುವ ಡೇಟಾ ಪ್ರಮಾಣಕ್ಕಿಂತ ಹೆಚ್ಚು ಖರ್ಚಾಗುತ್ತಿದ್ದರೆ ಮಾಲ್‌ವೇರ್‌ಗಳು ಮೊಬೈಲ್‌ಫೋನ್‌ನಲ್ಲಿ ಕ್ರಿಯಾಶೀಲವಾಗಿರುವ ಸಾಧ್ಯತೆ ಇರುತ್ತದೆ. ಹಾನಿಕಾರಕ ಆ್ಯಪ್‌ಗಳು ಅಥವಾ ತಂತ್ರಾಂಶಗಳು ಹಿನ್ನೆಲೆಯಲ್ಲಿ ಡೇಟಾ ಬಳಸುತ್ತಿರಬಹುದು. ಇದ್ದಕ್ಕಿದ್ದಂತೆಯೇ ಫೋನ್‌ ಸ್ಲೋ ಆಗುವುದು, ಯಾವುದಾದರೂ ಆ್ಯಪ್ ಅಥವಾ ಗೇಮಿಂಗ್‌ ತಂತ್ರಾಂಶ ತೆರೆದಾಗ ಕಿರಿಕಿರಿ ಎನಿಸಿದರೆ ಕುತಂತ್ರಾಂಶಗಳು ಹೊಕ್ಕಿರಬಹುದು.

ಸ್ಮಾರ್ಟ್‌ಫೋನ್‌ ಕಾರ್ಯವೈಖರಿ ಬದಲಾಗುವುದು
ಇದ್ದಕ್ಕಿದ್ದಂತೆ ಫೋನ್ ಕ್ರ್ಯಾಶ್‌ ಆಗುವುದು, ಲೋಡಿಂಗ್‌ ಸಮಯದಲ್ಲಿ ವಿಫಲವಾಗುವುದು – ಇಂತಹ ಸಮಸ್ಯೆಗಳು ಎದುರಾದರೆ ಎಚ್ಚರದಿಂದಿರಬೇಕು. ಈ ಮುಂಚೆ ನೋಡುತ್ತಿದ್ದ ವೆಬ್‌ಸೈಟ್‌ಗಳ ರೂಪುರೇಷೆಗಳು ಬದಲಾಗಿದ್ದರೂ ಮಾಲ್‌ವೇರ್‌, ಸ್ಪೈ ವೇರ್‌ಗಳು ಹೊಕ್ಕಿರುವ ಸಾಧ್ಯತೆ ಇರುತ್ತದೆ. ಫೋನ್‌ಲಾಗ್‌ನಲ್ಲಿ ನಿಮ್ಮ ಪ್ರಮೇಯವಿಲ್ಲದೆ ಯಾವುದಾದರೂ ಸಂದೇಶ ಅಥವಾ ಕರೆಗಳು ಕಾಣಿಸಿಕೊಂಡರೆ ಫೋನ್‌ ಹ್ಯಾಕ್‌ಗೆ ಗುರಿಯಾಗಿದೆ ಎಂದು ಭಾವಿಸಬಹುದು.

ಫ್ಲ್ಯಾಶ್‌ ಲೈಟ್‌ ಹಾಗೂ ಗ್ಯಾಲರಿ
ನಿಮ್ಮ ಗ್ಯಾಲರಿಯಲ್ಲಿ ನೀವು ಚಿತ್ರೀಕರಿಸದ ಚಿತ್ರಗಳು, ವಿಡಿಯೊಗಳು ಕಾಣಿಸಿಕೊಂಡರೆ ಅಥವಾ ಇತರರ ಮೊಬೈಲ್‌ಫೋನ್‌ಗಳಿಂದ ನಿಮ್ಮ ಫೋನ್‌ಗೆ ಬಂದಿದ್ದರೆ ಪರಿಶೀಲಿಸಬೇಕು. ನಿಮ್ಮ ಫೋನ್‌ ಕ್ಯಾಮೆರಾ ಇತರರ ನಿಯಂತ್ರಣಕ್ಕೆ ಸಿಕ್ಕಿದೆ ಎಂಬುದಕ್ಕೆ ಇದೊಂದು ಸಂಕೇತ. ನಿಮ್ಮ ಫೋನ್‌ ಬಳಕೆಯಲ್ಲಿ ಇಲ್ಲದಿದ್ದರೂ ಫ್ಲ್ಯಾಶ್‌ಲೈಟ್‌ ಮಿನುಗುತ್ತಿದ್ದರೆ ಎಚ್ಚರಿಕೆಯಾಗಿ ಪರಿಗಣಿಸಬೇಕು. ಹೆಚ್ಚು ಹೊತ್ತು ಬಳಸಿದರೆ ಹಲವು ಸ್ಮಾರ್ಟ್‌ಫೋನ್‌ಗಳು ಬಿಸಿಯಾಗುತ್ತವೆ. ಬಳಸದಿದ್ದರೂ ಬಿಸಿಯಾಗುತ್ತಿದ್ದರೆ ಹಿನ್ನೆಲೆಯಲ್ಲಿ ಕುತಂತ್ರಾಂಶಗಳು ಕ್ರಿಯಾಶೀಲವಾಗಿರುವ ಸಾಧ್ಯತೆ ಇರುತ್ತದೆ.

ಒಂದಿಷ್ಟು ಸಲಹೆ
ಹ್ಯಾಕರ್‌ಗಳು ಹೆಚ್ಚಾಗಿ ಬಳಕೆಯಲ್ಲಿರುವ ಆಪರೇಟಿಂಗ್‌ ಸಿಸ್ಟಂಗಳ ಮೇಲೆಯೇ ದಾಳಿ ಮಾಡುತ್ತಾರೆ. ಕಾರಣ ಸಮಯ, ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಕುತಂತ್ರಾಂಶಗಳು ಹೆಚ್ಚು ಜನ ಬಳಸುವ ಆಪರೇಟಿಂಗ್‌ ತಂತ್ರಾಂಶಗಳ ಮೇಲೆ ದಾಳಿ ಮಾಡಿದರಷ್ಟೇ ಅವರಿಗೆ ಅನುಕೂಲ. ಹೀಗಾಗಿ ಕೋಟ್ಯಂತರ ಹಣ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಪೆಗಾಸಸ್‌ ವೈರಸ್‌ ಐಒಎಸ್‌ ಹಾಗೂ ಆಂಡ್ರಾಯ್ಡ್‌ ತಂತ್ರಾಂಶಗಳಿಗೆ ಹೊಕ್ಕಿದೆ ಎಂಬ ಅನುಮಾನ ಹಲವರನ್ನು ಕಾಡುತ್ತಿದೆ. ಇದಕ್ಕೆ ಪರ್ಯಾಯವಾಗಿ ಕೆಲವು ತಂತ್ರಾಂಶಗಳು ಇಲ್ಲಿವೆ.

ಉಬಂಟು ಟಚ್‌ ಅಥವಾ ಪ್ಲಾಸ್ಮಾ ಮೊಬೈಲ್‌ನಂಥ ಓಪನ್‌ ಸೋರ್ಸ್‌ ತಂತ್ರಾಂಶಗಳು ಆಂಡ್ರಾಯ್ಡ್‌ ಹಾಗೂ ಐಒಎಸ್‌ಗಿಂತ ಹೆಚ್ಚು ಸುರಕ್ಷಿತ. ಇವುಗಳ ನಿರ್ವಹಣೆ ಹಾಗೂ ಬೆಲೆಯೂ ಕಡಿಮೆ.

ಮೊಜಿಲ್ಲಾ ಫೈರ್‌ಫಾಕ್ಸ್‌, ಬ್ರೇವ್‌ ಅಥವಾ ಟಿಒಆರ್‌ನಂಥ ಓಪನ್‌ ಸೋರ್ಸ್‌ ಬ್ರೌಸರ್‌ಗಳಲ್ಲಿ ಹ್ಯಾಕಿಂಗ್‌ ಸಮಸ್ಯೆ ಕಡಿಮೆ. ಇದರೊಂದಿಗೆ ವಿಪಿಎನ್‌ ಬಳಸಿದರೆ ಇನ್ನೂ ಸುರಕ್ಷಿತ.

ಮೆಸೆಂಜರ್‌ ತಂತ್ರಾಂಶಗಳ ಪೈಕಿ ವಾಟ್ಸ್‌ಆ್ಯಪ್ಗಿಂತ ಸಿಗ್ನಲ್‌ ಉತ್ತಮ ಎಂದು ಹೇಳಲಾಗುತ್ತಿದೆ. ಇವಲ್ಲದೆ ಟೆಲಿಗ್ರಾಮ್‌, ಎಲಿಮೆಂಟ್‌, ವೈರ್‌ ಆ್ಯಪ್‌ಗಳೂ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟೆಡ್‌ ಸೌಲಭ್ಯ ಒದಗಿಸುತ್ತಿವೆ.

 ಇಮೇಲ್‌ ಸೌಲಭ್ಯಕ್ಕಾಗಿ ಉಚಿತವಾಗಿ ಲಭ್ಯವಿರುವ ಪ್ರೊಟೊಮೇಲ್‌ ಹಾಗೂ ಔಟ್‌ಲುಕ್‌ನಂತಹ ಓಪನ್‌ ಸೋರ್ಸ್‌ ಸೌಲಭ್ಯಗಳನ್ನು ಬಳಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು