ಭಾನುವಾರ, ಮೇ 22, 2022
22 °C

ಮಾಲ್‌ವೇರ್‌ನಿಂದ ಮೊಬೈಲ್‌ ರಕ್ಷಿಸಿಕೊಳ್ಳಿ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಮೊಬೈಲ್‌ ಬಳಕೆ ಹೆಚ್ಚುತ್ತಿರುವಷ್ಟೇ ವೇಗವಾಗಿ ಅದು ಹಲವು ರೀತಿಯ ದಾಳಿಗಳಿಗೂ ಒಳಗಾಗುತ್ತಿದೆ. ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ ಮತ್ತು ಮೊಬೈಲ್‌ ಡೇಟಾ ಲಭ್ಯವಾಗುತ್ತಿರುವುದು ಈ ರೀತಿಯ ದಾಳಿಗಳಿಗೆ ಪ್ರಮುಖ ಕಾರಣ ಆಗಿವೆ. ಕಚೇರಿ ಕೆಲಸಕ್ಕೂ ಮೊಬೈಲ್‌ ಬಳಕೆ ಆಗುತ್ತಿರುವುದರಿಂದ ಸೈಬರ್‌ ಅಪರಾಧಿಗಳು ಮೊಬೈಲ್‌ನಲ್ಲಿ ಇರುವ ಮಾಹಿತಿಗಳನ್ನು ದೋಚಲು ಹಲವು ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತಾರೆ.

2020ರ ಅಕ್ಟೋಬರ್‌ನಿಂದ 2021ರ ಮಾರ್ಚ್‌ ಅವಧಿಯಲ್ಲಿ ಭಾರತದಲ್ಲಿ ಮೊಬೈಲ್‌ಗಳು ಮಾಲ್‌ವೇರ್‌ ದಾಳಿಗೆ ತುತ್ತಾಗಿರುವ ಪ್ರಮಾಣ ಶೇ 845ರಷ್ಟು ಪ್ರಮಾಣದಲ್ಲಿ ಏರಿಕೆ ಆಗಿದೆ. 2020ರಲ್ಲಿ ಭಾರತದ ಶೇ 97ರಷ್ಟು ಸಂಘಸಂಸ್ಥೆಗಳು ಮೊಬೈಲ್‌ಗೆ ಸಂಬಂಧಿಸಿದ ದಾಳಿಗಳನ್ನು ಎದುರಿಸಿದ್ದರೆ ಜಾಗತಿಕವಾಗಿ ಶೇ 46ರಷ್ಟು ಸಂಘಸಂಸ್ಥೆಗಳು ಈ ತರಹದ ದಾಳಿಗೆ ಒಳಗಾಗಿವೆ. ಸೈಬರ್ ಸೆಕ್ಯುರಿಟಿ ಸಂಸ್ಥೆ ಚೆಕ್‌ ಪಾಯಿಂಟ್‌ ಟೆಕ್ನಾಲಜೀಸ್‌ನ 2021ರ ಮೊಬೈಲ್‌ ಸೆಕ್ಯುರಿಟಿ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.

‘ಮೊಬೈಲ್‌ಗಳ ಮೇಲೆ ನಮ್ಮ ಹೆಚ್ಚುತ್ತಿರುವ ಅವಲಂಬನೆಯನ್ನು ಬಳಸಿಕೊಳ್ಳಲು ಸೈಬರ್‌ ಅಪರಾಧಿಗಳು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.  ಇಂದಿನ ಸುಧಾರಿತ ಸೈಬರ್ ಬೆದರಿಕೆಗಳಿಂದ ಮೊಬೈಲ್‌ಗಳನ್ನು ರಕ್ಷಿಸಿಕೊಳ್ಳಲು ಉದ್ಯಮಗಳು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಬಳಕೆದಾರರು ತಮ್ಮ ಅಪಾಯವನ್ನು ಕಡಿಮೆ ಮಾಡಲು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಇರುವ ಅಪ್ಲಿಕೇಶನ್‌ಗಳನ್ನು ಮಾತ್ರವೇ ಬಳಸಬೇಕು’ ಎಂದು ಚೆಕ್‌ಪಾಯಿಂಟ್‌ ಸಾಫ್ಟ್‌ವೇರ್‌ನ ಉಪಾಧ್ಯಕ್ಷ ನೀಟ್ಸನ್‌ ಜೀವ್‌ ಸಲಹೆ ನೀಡಿದ್ದಾರೆ.

ವಂಚಿಸಲು ಮಾಲ್‌ವೇರ್‌ ಅಲ್ಲದೆ, ಭಾರಿ ಮೊತ್ತದ ಬಹುಮಾನ, ಕ್ಯಾಷ್‌ಬ್ಯಾಕ್‌ ಹೆಸರಿನಲ್ಲಿ ಮೊಬೈಲ್‌ಗೆ ಟೆಕ್ಸ್ಟ್‌ ಮೆಸೇಜ್‌, ಇ–ಮೇಲ್‌ ಬರುತ್ತಲೇ ಇರುತ್ತವೆ. ಅಂತಹ ಮೆಸೇಜ್‌ಗಳಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿದರೆ, ಮೊಬೈಲ್‌ನಲ್ಲಿರುವ ಮಾಹಿತಿ ಸೋರಿಕೆ ಆಗುತ್ತದೆ. ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬದಲಿಸುವುದಾಗಿ ಬ್ಯಾಂಕ್‌ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡುವುದಂತೂ ತೀರಾ ಸಹಜವಾಗಿಬಿಟ್ಟಿದೆ. ಇಂತಹ ಸಂದರ್ಭಗಳಲ್ಲಿ ಅಪರಿಚಿತ ಮೊಬೈಲ್‌ ನಂಬರ್‌, ಟೆಕ್ಸ್ಟ್‌ ಮೆಸೇಜ್‌, ಇ–ಮೇಲ್‌ ಬಂದಾಗ ನಾವು ಬಹಳ ಸಮಾಧಾನ ಮತ್ತು ವಿವೇಚನೆಯಿಂದ ಹೆಜ್ಜೆ ಇಡಬೇಕು. ನಷ್ಟವಾದ ಮೇಲೆ ಪಶ್ಚಾತಾಪ ಪಡುವ ಬದಲು ಮುನ್ನೆಚ್ಚರಿಕೆ ವಹಿಸುವುದೇ ಸೂಕ್ತ.

ಮಾಲ್‌ವೇರ್‌ ಹೇಗೆ ನುಸುಳುತ್ತದೆ?

ಅನಧಿಕೃತ ಮೂಲಗಳಿಂದ ಆ್ಯಪ್‌ ಡೌನ್‌ಲೋಡ್

ಮೊಬೈಲ್‌ ಸಾಫ್ಟ್‌ವೇರ್‌ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡದೇ ಇರುವುದು

 ಅನುಮಾನಾಸ್ಪದ/ಅಪರಿಚಿತ ಇ–ಮೇಲ್‌ ತೆರೆಯುವುದರಿಂದ

ಸುರಕ್ಷಿತವಲ್ಲದ ವೈಫೈ/ಯುಆರ್‌ಎಲ್‌ ಬಳಕೆ

ಟೆಕ್ಸ್ಟ್‌ ಮೆಸೇಜ್‌/ವಾಯ್ಸ್‌ ಮೆಸೇಜ್‌ ಮೂಲಕ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವುದರಿಂದ

ಸುರಕ್ಷತೆ ಹೇಗೆ

ಮಾಲ್‌ವೇರ್‌ಗಳಿಂದ ಮೊಬೈಲ್‌ ಅನ್ನು ರಕ್ಷಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳಿತು.

ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌ ಬಳಕೆ

 ಗೂಗಲ್‌ ಮತ್ತು ಆ್ಯಪಲ್‌ನ ಅಧಿಕೃತ ಪ್ಲೇ ಸ್ಟೋರ್‌ಗಳಿಂದಲೇ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದು

 ನಿಯಮಿತವಾಗಿ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಅಪ್‌ಡೇಟ್‌ ಮಾಡುವುದು

 ಕೆಲಸದ ಉದ್ದೇಶಕ್ಕೆ ಮೊಬೈಲ್‌ ಬಳಸುತ್ತಿದ್ದರೆ ಕಂಪನಿಯ ಇ–ಮೇಲ್‌ಗೆ ಟು ಫ್ಯಾಕ್ಟರ್‌ ಅಥೆಂಟಿಕೇಷನ್‌ನಂತಹ ಸುರಕ್ಷತೆಗೆ ಕ್ರಮಗಳನ್ನು ಅನುಸರಿಸುವಂತೆ ಉದ್ಯೋಗಿಗೆ ಸೂಚನೆ ನೀಡುವುದು ಸೂಕ್ತ

ಸಾರ್ವಜನಿಕ ವೈಫೈ ಬಳಕೆಯನ್ನು ಆದಷ್ಟೂ ಕಡಿಮೆ ಮಾಡುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು