ಮಂಗಳವಾರ, ಸೆಪ್ಟೆಂಬರ್ 21, 2021
21 °C
ಸ್ಯಾನ್‌ ಫ್ರಾನ್ಸಿಸ್ಕೊ

ಮುಖ ನೋಡಿ ಗುರುತು ಪರಿಶೀಲಿಸುವ ’ಫೇಶಿಯಲ್‌ ರೆಕಗ್ನಿಷನ್‌’ ತಂತ್ರಾಂಶ ನಿಷೇಧ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸ್ಯಾನ್‌ಫ್ರಾನ್ಸಿಸ್ಕೊ: ಮುಖದ ಗುರುತು ಪರಿಶೀಲಿಸಿ ಪರದೆ ತೆರೆದುಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಂಡ ಐಫೋನ್‌ ಬಹಳಷ್ಟು ಸುದ್ದಿಯಾಯಿತು. ಸಿನಿಮಾಗಳಲ್ಲಿ ಕಾಣಸಿಗುತ್ತಿದ್ದ ತಂತ್ರಜ್ಞಾನವನ್ನು ನಿತ್ಯ ಬಳಸಲು ಜಗತ್ತಿನಾದ್ಯಂತ ಕೋಟ್ಯಂತರ ಜನರು ಮುಗಿ ಬಿದ್ದರು. ಮುಖ ಗುರುತಿಸುವ ವ್ಯವಸ್ಥೆ ದಿನೇ ದಿನೇ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದರೆ, ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊ ನಗರ ’ಫೇಶಿಯಲ್‌ ರೆಕಗ್ನಿಷನ್‌’ ತಂತ್ರಾಂಶವನ್ನೇ ನಿಷೇಧಿಸಿದೆ. 

ಪೊಲೀಸರು ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಫೇಶಿಯಲ್‌ ರೆಕಗ್ನಿಷನ್‌ ತಂತ್ರಾಂಶ ಬಳಕೆಗೆ ಮಂಗಳವಾರ ನಿಷೇಧ ಹೇರಲಾಗಿದೆ. ಈ ಮೂಲಕ ಮುಖ ನೋಡಿ ಗುರುತು ಪರಿಶೀಲಿಸುವ ವ್ಯವಸ್ಥೆಯನ್ನು ನಿಷೇಧಿಸಿದ ಅಮೆರಿಕದ ಮೊದಲ ನಗರ ಸ್ಯಾನ್‌ ಫ್ರಾನ್ಸಿಸ್ಕೊ ಎಂದು ಸುದ್ದಿಯಾಗಿದೆ. 

ವಿಡಿಯೊ ಅಥವಾ ಫೋಟೊ ಗಮನಿಸಿ ವ್ಯಕ್ತಿಯ ಗುರುತು ಪರಿಶೀಲಿಸಲು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಪೊಲೀಸರು ಹಾಗೂ ಇತರೆ ಸಂಸ್ಥೆಗಳು ಅಳವಡಿಸಿಕೊಳ್ಳುವುದಕ್ಕೆ ನಗರದ ಮೇಲ್ವಿಚಾರಕರ ಮಂಡಳಿಯಿಂದ ವಿರೋಧ ವ್ಯಕ್ತವಾಗಿತ್ತು. ಖಾಸಗಿತನ ಮತ್ತು ನಾಗರಿಕ ಹಕ್ಕುಗಳ ಪರವಾಗಿ ವಾದಿಸುವವರು ಈ ತಂತ್ರಜ್ಞಾನ ಬಳಕೆಯಿಂದ ಸಾರ್ವಜನಿಕವಾಗಿ ನಿಗಾ ಇಡುವ ವ್ಯವಸ್ಥೆ ದುರುಪಯೋಗವಾಗಬಹುದು ಎಂದಿದೆ. ಇದರಿಂದ ತಪ್ಪಾದ ವ್ಯಕ್ತಿಗಳನ್ನು ಬಂಧಿಸುವ ಸಾಧ್ಯತೆ ಹೆಚ್ಚಲಿದೆ ಎನ್ನಲಾಗಿದೆ.

ಈ ಹಿಂದೆ ಅಮೆರಿಕದ ‘ಕ್ಯಾಪಿಟಲ್ ಗ್ಯಾಜೆಟ್’ ಪತ್ರಿಕಾ ಕಚೇರಿ ಮೇಲೆ ಗುಂಡಿನ ದಾಳಿ ನಡೆದ ನಂತರ ಫೇಶಿಯಲ್ ರೆಕಗ್ನಿಷನ್ ವಿಚಾರ ಮತ್ತೆ ಚರ್ಚೆಗೆ ಒಳಗಾಗಿತ್ತು. ಈ ದಾಳಿಯಲ್ಲಿ ಪತ್ರಿಕೆಯ ಸಿಬ್ಬಂದಿ ಹತ್ಯೆ ನಡೆಸಿದವನನ್ನು ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಮೂಲಕ ಪೊಲೀಸರು ಪತ್ತೆ ಮಾಡಿದ್ದರು.

ಇದನ್ನೂ ಓದಿ: ಫೇಶಿಯಲ್ ರೆಕಗ್ನೀಷನ್‌ನಿಂದ ₹ 62 ಸಾವಿರ ಕೋಟಿ ಆದಾಯ 

ಗೂಗಲ್‌ ಮತ್ತು ಫೇಸ್‌ಬುಕ್‌ ಸಂಸ್ಥೆಗಳ ಎಂಜಿನಿಯರ್‌ಗಳು ವ್ಯಾಪಾರ ಮತ್ತು ಗ್ರಾಹಕರ ಬಳಕೆಗಾಗಿ ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯನ್ನು ರೂಪಿಸಿ ಬಳಕೆಗೆ ತಂದಿವೆ. ’ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯನ್ನು ಹಲವು ಮಂದು ರೂಪಿಸುತ್ತಿದ್ದಾರೆ. ಅದರ ನಿಷೇಧ ತಂತ್ರಜ್ಞಾನದ ಅಪಾಯಗಳನ್ನು ಸೂಚಿಸುತ್ತದೆ’ ಎಂದು ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಜೇವನ್‌ ಹಟ್ಸನ್‌ ಹೇಳಿದ್ದಾರೆ. 

’ಸ್ವತಂತ್ರವಾಗಿ ಬದುಕುವುದು ಹಾಗೂ ಪ್ರಜಾಪ್ರಭುತ್ವಕ್ಕೆ ಹೊಡೆತ ನೀಡುವಂತಹ ತಂತ್ರಜ್ಞಾನದ ಬಳಕೆ ಬೇಡ ಎಂಬುದನ್ನು ಮತ್ತೆ ಹೇಳುತ್ತಿದ್ದೇವೆ’ ಎಂದಿದ್ದಾರೆ. 

ಅಮೆರಿಕದ ಹಲವು ಭಾಗಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಪತ್ತೆ ಮಾಡಲು ಸ್ಥಳೀಯ ಪೊಲೀಸರು ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯನ್ನು ಬಳಕೆ ಮಾಡಿದ್ದಾರೆ. ಆದರೆ, ರಾಷ್ಟದಲ್ಲಿ ಈ ವ್ಯವಸ್ಥೆಯ ನಿಯಂತ್ರಣಕ್ಕೆ ಯಾವುದೇ ಕಾನೂನು ಕ್ರಮಗಳಿಲ್ಲ. 

ಓಕ್‌ಲ್ಯಾಂಡ್‌, ಕ್ಯಾಲಿಫೋರ್ನಿಯಾ ಹಾಗೂ ಮಸಾಚುಸೆಟ್ಸ್‌ನಲ್ಲಿ ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯ ಬಳಕೆಗೆ ನಿಷೇಧ ತರಲಾಗಿದೆ. ಪೂರ್ವ ಸೂಚನೆ ಇಲ್ಲದೆಯೇ ಅಥವಾ ಗಮನಕ್ಕೆ ತರದೆಯೇ ಫೇಶಿಯಲ್‌ ರೆಕಗ್ನಿಷನ್‌ ತಂತ್ರಜ್ಞಾನದ ಮೂಲಕ ಮಾಹಿತಿ ಕಲೆ ಹಾಕುವ ಖಾಸಗಿ ಸಂಸ್ಥೆಗಳನ್ನು ನಿಷೇಧಿಸಲು ಅಮೆರಿಕ ಸಂಸತ್‌ನಲ್ಲಿ ಮಸೂದೆ ಪ್ರಸ್ತುತ ಪಡಿಸಲಾಗಿದೆ. ಆದರೆ, ಸರ್ಕಾರಿ ಸಂಸ್ಥೆಗಳನ್ನು ಇದರಿಂದ ಹೊರತುಪಡಿಸಲಾಗಿತ್ತು. 

ಕಾಣೆಯ ಮಕ್ಕಳ ಹುಡುಕಾಟಕ್ಕೆ ಅಥವಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಪತ್ತೆಗೆ ಸಹಕಾರಿಯಾಗಬಲ್ಲ ಫೇಶಿಯಲ್‌ ರೆಕಗ್ನಿಷನ್‌ ತಂತ್ರಾಂಶವನ್ನು ಪೊಲೀಸ್‌ ಇಲಾಖೆಗಳಿಗೆ ಮಾರಾಟ ಮಾಡಲು ಅಮೆಜಾನ್‌ನಂತಹ ಸಂಸ್ಥೆಗಳು ಮುಂದಾಗಿವೆ. ಆದರೆ, ಈ ವ್ಯವಸ್ಥೆಯನ್ನು ನಿಷೇಧಿಸುವ ಮೂಲಕ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವ ಸಂಸ್ಥೆಗಳಿಗೂ ಹೊಡೆತ ಬಿದ್ದಂತಾಗಿದೆ.

2023ರ ವೇಳೆಗೆ ವಿಮಾನ ಪ್ರಯಾಣ ಮಾಡುವ ಪ್ರಯಾಣಿಕರಲ್ಲಿ ಶೇ 97ರಷ್ಟು ಮಂದಿ ಫೇಶಿಯಲ್‌ ರೆಕಗ್ನಿಷನ್‌ ಸ್ಕ್ಯಾನ್‌ಗೆ ಒಳಗಾಗುವಂತೆ ಆಗಬೇಕು ಎಂದು ಕಳೆದ ತಿಂಗಳು ಅಮೆರಿಕದ ಗೃಹ ಇಲಾಖೆ ಹೋಮ್‌ಲ್ಯಾಂಡ್‌ ಸೆಕ್ಯುರಿಟಿ ಹೇಳಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು