ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೊಂದು ಮೊಬೈಲ್‌ ಕಥೆ

Last Updated 24 ಮೇ 2022, 19:30 IST
ಅಕ್ಷರ ಗಾತ್ರ

‘I like to compare the history of the mobile industry to the work of Umberto Eco: you get what is going on, but it makes your head hurt in the process’ – (ಇದರ ತಾತ್ಪರ್ಯ: ಮೊಬೈಲ್‌ ತಯಾರಿಕೆಯ ಉದ್ದಿಮೆಯ ಕಥೆ ಅಂದರೆ ಅದು ಒಂಥರಾ ನವ್ಯದವರು ಬರೆದ ಸಣ್ಣಕಥೆಯ ಹಾಗೆ, ಮೊದಲು ಇದಾಯಿತು, ಆಮೇಲೆ ಅದಾಯಿತು, ಅನಂತರ ಏನಾಯಿತು ಅಂತ ಹೇಳಿಬಿಡಬಹುದು, ಹೇಳಿ ಮುಗಿಸುವಷ್ಟರಲ್ಲಿ ನಮ್ಮ ತಲೆ ಮಾತ್ರ ಚಿತ್ರಾನ್ನ ಆಗಿರುತ್ತದೆ.) ಅಂತ ಒಬ್ಬರು ಚತುರೋಕ್ತಿಪ್ರಿಯರು ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡೇ ಮೊಬೈಲ್‌ ಫೋನುಗಳ ಬಾಲ್ಯ ಮತ್ತು ಕಿಶೋರಾವಸ್ಥೆಗಳ ಕಡೆಗೊಂದು ದೃಷ್ಟಿ ಹಾಯಿಸಿ ನೋಡೋಣ.

ಮೊಬೈಲ್‌ಗಳನ್ನು ಆಧುನಿಕ, ಅತ್ಯಾಧುನಿಕ ತಂತ್ರಜ್ಞಾನದ ಶಿಶುಗಳು ಅಂತ ಹೇಳುತ್ತೇವಾದರೂ, ತತ್ತ್ವದ, ತಂತ್ರಜ್ಞಾನದ ದೃಷ್ಟಿಯಿಂದ ಇವುಗಳ ಪೂರ್ವಗಾಮಿಗಳು, ವಂಶದ ಹಿರೀಕರು ಅನ್ನಬಹುದಾದ ಉತ್ಪನ್ನಗಳು ಸುಮಾರು ಎಂಬತ್ತು-ನೂರು ವರ್ಷಕ್ಕೂ ಮೊದಲೇ ಇದ್ದವು ಅಂದರೆ ಹಲವರು ಹುಬ್ಬೇರಿಸಬಹುದು.

ರೇಡಿಯೊ ಮತ್ತು ಮೊಬೈಲ್‌ಗಳು ಒಂದೇ ಮನೆತನದ ಕುಡಿಗಳು ಎಂಬುದೂ ಹಲವರ ತಲೆಗೆ ಬಂದಿರಲಿಕ್ಕಿಲ್ಲ. ಯೋಚಿಸಿ ನೋಡಿ. ಎಲ್ಲೋ ಆಕಾಶವಾಣಿ ಕೇಂದ್ರದಲ್ಲಿ ಕುಳಿತು ಯಾರೋ ಮಾತಾಡಿದ್ದು, ನಮ್ಮ ಮನೆಯಲ್ಲಿ ಕೇಳುತ್ತಿತ್ತು. ನಾವು ತಿರುಗಿ ಮಾತಾಡಿದ್ದು ಆಕಾಶವಾಣಿ ಕೇಂದ್ರದವರಿಗೆ ಕೇಳುತ್ತಿರಲಿಲ್ಲ ಎನ್ನುವುದನ್ನು ಬಿಟ್ಟರೆ, ಆಕಾಶವಾಣಿಯು ಹೆಚ್ಚುಕಡಿಮೆ ಏಕಮುಖಿ ಮೊಬೈಲೇ ಅಲ್ಲವೇ (ಸಿಗ್ನಲ್‌ ಸಿಕ್ಕದೆ, ‘ಹಲೋ... ಕೇಳ್ತಾ ಇದೆಯಾ? ಕೇಳ್ತಾ ಇಲ್ಲ, ಈಗ ಕೇಳ್ತಾ ಇದೆ, ಮತ್ತೆ ಕೇಳ್ತಾ ಇಲ್ಲ’ ಅಂತೆಲ್ಲ ಪರದಾಡುವಾಗ ನಮ್ಮ ಮೊಬೈಲ್‌ ಒಂದು ರೀತಿ ಆಕಾಶವಾಣಿಯ ಹಾಗೆ ಒಂದೇ ಕಡೆಯಿಂದ ಸಂಭಾಷಣೆಗೆ ಎಡೆಗೊಡುತ್ತಿರುತ್ತದೆ). ಇನ್ನು ಹಳೆಯ ಹಾಲಿವುಡ್ ಸಿನಿಮಾಗಳಲ್ಲಿ, ಯುದ್ಧಗಳಲ್ಲಿ ಸೈನಿಕರು ವಾಕಿಟಾಕಿ ಬಳಸಿ ಮಾತಾಡುವುದನ್ನು ನೋಡಿರುತ್ತೇವೆ. ಅದು ಆಕಾಶವಾಣಿಗಿಂತ ಸ್ವಲ್ಪ ವಾಸಿ, ಅದರಲ್ಲಿ ಇಬ್ಬರೂ ಮಾತಾಡಬಹುದು, ಆದರೆ ಒಟ್ಟಿಗೆ ಅಲ್ಲ! ಒಬ್ಬರ ಮಾತು ಮುಗಿದಾದ ಮೇಲೆ ಇನ್ನೊಬ್ಬರು ಶುರುಹಚ್ಚಿಕೊಳ್ಳಬಹುದು. ಹಾಗಾಗಿಯೇ, ನನ್ನ ಮಾತು ಮುಗಿಯಿತು, ನಿಮ್ಮ ಮಾತು ಕೇಳಿಸಿತು ಅಂತೆಲ್ಲ ತಿಳಿಸಲಿಕ್ಕೆ, ‘ಓವರ್’, ‘ಕಾಪಿ ದಟ್’ ಮುಂತಾದ ಪದಬಳಕೆ ಮಾಡುವುದನ್ನು ಸಿನಿಮಾಗಳಲ್ಲಿ ನಾವು ನೋಡಿದ್ದೇವೆ. ಈ ವಾಕಿಟಾಕಿಗಳಲ್ಲಿ ಮಾತಾಡಿದ್ದು ಹೆಚ್ಚು ದೂರ ಸಾಗುತ್ತಿರಲಿಲ್ಲ ಅನ್ನುವುದು ಅದರ ಇನ್ನೊಂದು ಕೊರತೆ.

ಹಾಗೆ ನೋಡಿದರೆ, ಇಪ್ಪತ್ತರ ದಶಕದಲ್ಲೇ ಜರ್ಮನಿಯಲ್ಲಿ ರೈಲುಗಳಲ್ಲಿ ತಂತಿಗಳಿಲ್ಲದ ರೇಡಿಯೊ ಫೋನುಗಳನ್ನು ಅಳವಡಿಸಲಾಗಿತ್ತು. ಇದನ್ನು ನೋಡಿದ ಅಮೆರಿಕದವರು ಕಾರುಗಳಲ್ಲಿ ಬಳಸಬಹುದಾದ ಕಾರ್ ಫೋನುಗಳನ್ನು ನಲವತ್ತರ ದಶಕದಲ್ಲಿ ತಂದರು. ಇವುಗಳನ್ನು ಬಳಸಿದರೆ ಕಾರಿನ ಡಿಕ್ಕಿಯಲ್ಲಿ ಮತ್ತೇನನ್ನೂ ಇಡಲು ಸ್ಥಳವಿಲ್ಲ ಅನಿಸುವಷ್ಟು ದೊಡ್ಡ ಬ್ಯಾಟರಿಗಳನ್ನು ಇಡಬೇಕಾಗುತ್ತಿತ್ತು. ಈ ಜಾಲಗಳ ಪ್ರಸಾರವ್ಯಾಪ್ತಿ ಅದೆಷ್ಟು ದುರ್ಬಲವಾಗಿತ್ತೆಂದರೆ ನ್ಯೂಯಾರ್ಕಿನಲ್ಲಿ ಈ ಕಾರು ಫೋನುಗಳನ್ನು ಬಳಸಿ ಏಕಕಾಲಕ್ಕೆ ನೂರೈವತ್ತು ಜನರಿಗಿಂತ ಹೆಚ್ಚು ಜನ ಮಾತಾಡುವಂತಿಲ್ಲ ಎಂಬಷ್ಟು! ಈ ತಲೆನೋವಿಗೆ ಔಷಧ ಕಂಡುಹಿಡಿಯಲು ಹೊರಟದ್ದು ಅಮೆರಿಕದ ದೂರವಾಣಿಗಳ ಸಾರ್ವಭೌಮನಾಗಿದ್ದ AT&T ಸಂಸ್ಥೆಯ ಬೆಲ್ ಲ್ಯಾಬ್ಸ್. ಆಗ ಹುಟ್ಟಿದ್ದು ‘ಸೆಲ್’ ಎಂಬ ಪರಿಕಲ್ಪನೆ. ಇಡೀ ಊರನ್ನು ಒಂದಷ್ಟು ಸೆಲ್ಲುಗಳಾಗಿ ವಿಭಾಗಿಸಿ ಒಂದೊಂದು ಸೆಲ್ಲಿಗೂ ಒಂದೊಂದು ಟವರ್‌ ಎಂಬಂತೆ ವಿನ್ಯಾಸ ಮಾಡಲಾಯಿತು. ಉದಾಹರಣೆಗೆ, ಬೆಂಗಳೂರಿನಲ್ಲಾದರೆ ಜಯನಗರವು ಒಂದು ಸೆಲ್‌, ಮಲ್ಲೇಶ್ವರವು ಇನ್ನೊಂದು ಸೆಲ್‌, ಬಸವನಗುಡಿ ಮತ್ತೊಂದು ಸೆಲ್‌ – ಹೀಗೆ ಭಾವಿಸಿಕೊಳ್ಳಬಹುದು. ಒಂದು ಸೆಲ್ಲಿನಿಂದ ಮತ್ತೊಂದಕ್ಕೆ ನೀವು ಹಾದುಹೋಗುವಾಗ ನಿಮ್ಮನ್ನು ಒಂದು ಸೆಲ್ಲಿನ ಟವರಿನಿಂದ ಮತ್ತೊಂದಕ್ಕೆ ಹಸ್ತಾಂತರ ಮಾಡುವ ‘ಟವರಿಗೆ ಬಾ ತಂಗಿ!’ ಕೆಲಸವನ್ನು ಕಂಪ್ಯೂಟರುಗಳೇ ನಿರ್ವಹಿಸುತ್ತವೆ. ಈ ತಂತ್ರಜ್ಞಾನದಿಂದಾಗಿಯೇ ಈ ಫೋನಿಗೆ ಸೆಲ್ ಫೋನ್ ಎಂಬ ಹೆಸರು.

ಇದಾಗುತ್ತಿರುವಾಗ ಮತ್ತೊಂದು ಕಡೆಯಲ್ಲಿ ಕುಳಿತು, ‘ಸ್ಥಾವರವಾಗಿದ್ದ ದೂರವಾಣಿಯು ಜಂಗಮವಾದರೆ ಹೇಗೆ’ ಎಂಬ ನಿಟ್ಟಿನಲ್ಲಿ ಯೋಚಿಸತೊಡಗಿದ್ದು (ಆಗಿನ್ನೂ ಚಿಕ್ಕ ಸಂಸ್ಥೆಯಾಗಿದ್ದ) ಮೋಟೊರೋಲದವರು. ಇಂಥ ಫೋನನ್ನು ತಯಾರಿಸಲು ಹವಣಿಸಿದ ಮಾರ್ಟಿನ್ ಕೂಪರ್ ಅವರದ್ದೇ ಮಾತಿನಲ್ಲಿ ಹೇಳುವುದಾದರೆ, ‘People are mobile, they are naturally, inherently, fundamentally mobile. Everybody is rushing off somewhere, nobody is where they want to be, everybody is going somewhere else’, ಹೀಗಿರುವಾಗ, ಜನರಂತೆ ಅವರ ಫೋನು ಕೂಡ ಚಲನಶೀಲವಾಗಲಿ ಎಂಬ ಸಿದ್ಧಾಂತ ಅವರದು. ಸೆಲ್ ಫೋನ್‌ ಮೊಬೈಲ್‌ ಫೋನ್‌ (ಅಂದರೆ ಚಲಿಸುವ ಫೋನು) ಆದದ್ದು ಹೀಗೆ.

1973ರಲ್ಲಿ ಹೀಗೆ ತಯಾರಾದ ಫೋನ್‌, ಉಸಿರು ಬಿಗಿ ಹಿಡಿದುಕೊಳ್ಳಿ, ಸುಮಾರು ಒಂದು ಕಿಲೋ ಭಾರ ಇತ್ತಂತೆ. ಅದರ ಬ್ಯಾಟರಿ ನಿಲ್ಲುತ್ತಿದ್ದದ್ದು - ತಲೆ ಮೇಲೆ ಕೈ ಇಟ್ಟುಕೊಳ್ಳಿ - ಬರೀ ಇಪ್ಪತ್ತು ನಿಮಿಷ ! ‘ಇದೊಂದು ಸಮಸ್ಯೆಯೇ ಆಗಲಿಲ್ಲ. ಏಕೆಂದರೆ ಈ ಒಂದು ಕೆಜಿ ಭಾರದ ಫೋನನ್ನು ಇಪ್ಪತ್ತು ನಿಮಿಷ ಎತ್ತಿ ಹಿಡಿಯುವ ಗಟ್ಟಿ ಜೀವದ ಹುರಿಯಾಳುಗಳು ಎಷ್ಟಿದ್ದಾರು’ ಅಂತ ಮಾರ್ಟಿನ್ ಕೂಪರ್ ತಮಾಷೆ ಮಾಡಿದ್ದುಂಟು. ಈ ಮೊದಲ ಮಾದರಿಯನ್ನು ಮಾರ್ಪಡಿಸಿ Motorola DynaTAC 8000x ಎಂಬ ಫೋನನ್ನು ತರಲಿಕ್ಕೆ ಮತ್ತೆ ಹತ್ತು ವರ್ಷಗಳೇ ಹಿಡಿದವು. ಇದೂ ಭಾರ ಎತ್ತುವ ಸ್ಪರ್ಧೆಗೆ ಹೇಳಿಮಾಡಿಸಿದ ಫೋನೇ.

ನಮ್ಮ ನಿಮ್ಮಂಥ ಹುಲುಮಾನವರು ಕೈಯ್ಯಲ್ಲಿ ಹಿಡಿಯಬಹುದಾದ ದೂರವಾಣಿಯನ್ನು ಕಡೆಗೂ 1992ರಲ್ಲಿ ನೋಕಿಯಾದವರು ತಂದ ಮೇಲೆ ಹಂತ ಹಂತವಾಗಿ ರೆಕ್ಕೆಪುಕ್ಕ ಸೇರಿಸಿಕೊಂಡು, ಸಿಂಗಾರ ಬಂಗಾರ ಮಾಡಿಕೊಂಡು ಬೆಳೆದ ಈ ಕೈಪಿಡಿ ಫೋನು ಹೇಗೆ ಓಡಿತೆಂದರೆ ಅದನ್ನು ಹಿಡಿಯುವವರೇ ಇರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT