ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯೂ ನಾರ್ಮಲ್‌’ಗೆ ತಂತ್ರಜ್ಞಾನದ ಕೊಡುಗೆ

Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ವೈಯಕ್ತಿಕ ಬದುಕು, ವೃತ್ತಿ ಜೀವನ ಎರಡೂ ಹೆಚ್ಚು ಕಡಿಮೆ ಮನೆಗೇ ಸೀಮಿತವಾಗಿ ವರ್ಷ ಸಮೀಪಿಸುತ್ತಿದೆ. ಆದರೆ ‘ನ್ಯೂ ನಾರ್ಮಲ್‌’ಗೆ ಹೊಂದಿಕೊಂಡಿರುವ ನಮಗೆ ಹೊಸ ಹೊಸ ತಂತ್ರಜ್ಞಾನಗಳು ಕೈ ಜೋಡಿಸಿದ್ದು, ಬಹುತೇಕ ಕೆಲಸಗಳನ್ನು ಸರಳಗೊಳಿಸಿವೆ. ಈ ಬೆಳವಣಿಗೆ ಈ ವರ್ಷ ಇನ್ನಷ್ಟು ಚುರುಕಾಗಿ ನಡೆಯಬಹುದು.

ಹೊಸ ವರ್ಷದಲ್ಲಿ ಎರಡು ವಾರಗಳೂ ಮುಗಿದು ಹೋದವು. ಕೋವಿಡ್‌ ವಿರುದ್ಧ ನಮ್ಮ ಹೋರಾಟ ಬೇರೆ ಬೇರೆ ರೀತಿಯಲ್ಲಿ ಇನ್ನೂ ಮುಂದುವರಿಯುತ್ತಲೇ ಇದೆ. ಇದರ ಮಧ್ಯೆ ನಮ್ಮ ವೈಯಕ್ತಿಕ ಬದುಕು, ವೃತ್ತಿ ಜೀವನ ಎರಡೂ ಹೆಚ್ಚು ಕಡಿಮೆ ಮನೆಗೇ ಸೀಮಿತವಾಗಿ ವರ್ಷ ಸಮೀಪಿಸುತ್ತಿದೆ. ಆದರೆ ‘ನ್ಯೂ ನಾರ್ಮಲ್‌’ಗೆ ಹೊಂದಿಕೊಂಡಿರುವ ನಮಗೆ ಹೊಸ ಹೊಸ ತಂತ್ರಜ್ಞಾನಗಳು ಕೈ ಜೋಡಿಸಿದ್ದು, ಬಹುತೇಕ ಕೆಲಸಗಳನ್ನು ಸರಳಗೊಳಿಸಿವೆ. ಇದು ಸಂಕಷ್ಟದ ಮಧ್ಯೆ ನೆಮ್ಮದಿ ನೀಡಿದ್ದಂತೂ ನಿಜ.

ಬೇರೆ ವಿಷಯವಿರಲಿ, ಸೋಂಕಿನಿಂದ ರಕ್ಷಣೆ ಪಡೆಯಲು ಧರಿಸುತ್ತಿರುವ ಮಾಸ್ಕ್‌ ಕೂಡ ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ರೂಪದಲ್ಲಿ ನಮ್ಮ ಮುಖಕ್ಕೆ ಅಂಟಿಕೊಂಡಿದೆ. ಸೋಂಕು ನಿವಾರಕ, ಲ್ಯಾಪ್‌ಟಾಪ್‌, ವೆಬ್‌ಕ್ಯಾಮ್‌, ತರಾವರಿ ಆಯ್ಕೆ ನೀಡಿರುವ ಆನ್‌ಲೈನ್‌ ಶಾಪಿಂಗ್‌, ಸರಳ ಅಡುಗೆಗೆ ಸುಲಭ ಸೂತ್ರಗಳು... ಹೀಗೆ ಕೋವಿಡ್‌ಗಿಂತ ಮುನ್ನ ಕಲ್ಪಿಸಿಕೊಳ್ಳಲೂ ಆಗದಂತಹ ವೈವಿಧ್ಯಗಳು, ಆಯ್ಕೆಗಳು ನಮ್ಮ ಮುಂದಿವೆ. ಉದ್ಯಮಗಳೂ ಕೂಡ ಇದನ್ನು ನಗದೀಕರಿಸಿಕೊಳ್ಳಲು ಸಾಲಿನಲ್ಲಿ ನಿಂತಿವೆ.

ಮಾಸ್ಕ್‌ಗೂ ಸ್ಮಾರ್ಟ್‌ ತಂತ್ರಜ್ಞಾನ

ಆರಂಭದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆ ಪಡೆಯಲು ಹ್ಯಾಂಡ್‌ ಸ್ಯಾನಿಟೈಜರ್‌ ಮಾರುಕಟ್ಟೆಗೆ ಬಂದವು. ಇದೀಗ ನಮ್ಮ ಗ್ಯಾಜೆಟ್‌ಗಳಿಗೆ ಸೋಂಕು ನಿವಾರಕವಾಗಿ ಅತಿ ನೇರಳೆ ಕಿರಣವಿರುವ ಚಿಕ್ಕ ಗಾತ್ರದ ಸ್ಯಾನಿಟೈಜರ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಫೋನ್‌, ಲ್ಯಾಪ್‌ಟಾಪ್‌ ಮೊದಲಾದವುಗಳನ್ನು ಸೋಂಕು ಮುಕ್ತಗೊಳಿಸುವ ಸಾಧನವಿದು. ಇದನ್ನು ನಿಮ್ಮ ಜೇಬಿನಲ್ಲೇ ಇಟ್ಟುಕೊಂಡು ಓಡಾಡಬಹುದು. ಹಾಗೆಯೇ ಮಾಸ್ಕ್‌ ಕೂಡ ಬ್ಲೂಟೂಥ್‌ನಂತಹ ಸ್ಮಾರ್ಟ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರ ಮುಂದೆ ನಿಂತಿದೆ.

ಕ್ರಾಂತಿಯಾಗಿದ್ದು ಕೇವಲ ವೈರಸ್‌ನಿಂದ ಸುರಕ್ಷತೆ ನೀಡುವ ಸಾಧನಗಳಲ್ಲಿ ಮಾತ್ರವಲ್ಲ, ಮನೆಯಿಂದಲೇ ಕಚೇರಿ ಕೆಲಸ ಮಾಡುವಂತಹ ಈ ಸಮಯದಲ್ಲಿ, ಆನ್‌ಲೈನ್‌ ತರಗತಿ ಎಂದು ಪುಟ್ಟ ಮಕ್ಕಳು ಕೂಡ ಕಂಪ್ಯೂಟರ್‌ಗೆ ಕಣ್ಣು ಕೀಲಿಸಿಕೊಂಡು ಕೂರುವ ಸಂದರ್ಭದಲ್ಲಿ ಹೊಸ ಬಗೆಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟಿವೆ. ಆ್ಯಪಲ್‌ನ ಮ್ಯಾಕ್‌ಬುಕ್‌ ಏರ್‌ ಇದಕ್ಕೊಂದು ಉದಾಹರಣೆ. ಆ್ಯಂಡ್ರಾಯ್ಡ್‌ ಫೋನ್‌ ತಂತ್ರಜ್ಞಾನವನ್ನು ಕೂಡ ಲ್ಯಾಪ್‌ಟಾಪ್‌ಗೆ ಅಳವಡಿಸಿ ಹೊರ ತರುತ್ತಿವೆ ಪ್ರಮುಖ ಕಂಪನಿಗಳು. ಅಂದರೆ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಬಳಸುವಂತಹ ಪ್ರೊಸೆಸರ್‌ಗಳು, 5ಜಿ ತಂತ್ರಜ್ಞಾನ ಅಳವಡಿಸಿರುವ ಲ್ಯಾಪ್‌ಟಾಪ್‌ಗಳು ನಿಮ್ಮ ಕೈ ಸೇರುವ ದಿನಗಳು ದೂರವಿಲ್ಲ.

ನೆಚ್ಚಿನ ಸಿನಿಮಾ ನೋಡಲು ಥಿಯೇಟರ್‌ಗೇ ಹೋಗಬೇಕಾಗಿಲ್ಲ. ಜನಪ್ರಿಯ ಚಲನಚಿತ್ರಗಳೆಲ್ಲ ಒಟಿಟಿಯಲ್ಲಿ ಬಿಡುಗಡೆಗೊಂಡು ಮನೆಯಲ್ಲೇ ಕುಳಿತು ವೀಕ್ಷಿಸುವ ಸೌಭಾಗ್ಯ ಒದಗಿಸಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌.. ಶಬ್ದಗಳು ಚಿಕ್ಕಮಕ್ಕಳ ನಾಲಗೆಯ ಮೇಲೂ ನಲಿಯುತ್ತಿವೆ.

ಚುರುಕಾದ ಆನ್‌ಲೈನ್‌ ಶಾಪಿಂಗ್‌

ಹಾಗೆಯೇ ತರಕಾರಿ– ಹಣ್ಣು, ಕಾಳುಬೇಳೆಯಿಂದ ಹಿಡಿದು ಔಷಧಿ, ಲ್ಯಾಪ್‌ಟಾಪ್‌, ಟಿವಿಯವರೆಗೂ ಆನ್‌ಲೈನ್‌ನಲ್ಲಿ ತರಿಸಿಕೊಂಡು ಮನೆಯಿಂದಲೇ ಶಾಪಿಂಗ್‌ ಖುಷಿ ಅನುಭವಿಸುತ್ತಿದ್ದೇವೆ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೊಡ್ಡ ಇ ಕಾಮರ್ಸ್‌ ಕಂಪನಿಗಳು ಮಾತ್ರವಲ್ಲ, ಸಣ್ಣಪುಟ್ಟ ಉದ್ಯಮಿಗಳೂ ಕೂಡ ಆನ್‌ಲೈನ್‌ ವಿಲೇವಾರಿ ಶುರು ಮಾಡಿ ಲಾಭ ಗಳಿಸುತ್ತಿದ್ದಾರೆ. ಪುಟ್ಟ ಊರುಗಳಲ್ಲಿರುವವರೂ ಕೂಡ ಉದ್ಯಮಿಗಳಾಗುವ ಅವಕಾಶ ಕಲ್ಪಿಸಿದ್ದು ಈ ಕೊರೊನಾ ಸಂದರ್ಭದಲ್ಲಿ ಚುರುಕು ಪಡೆದ ಆನ್‌ಲೈನ್‌ ವಹಿವಾಟು.

ಇನ್ನೊಂದು ಮಹತ್ವದ ಬೆಳವಣಿಗೆಯೆಂದರೆ ಹೆಚ್ಚಿನ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಾಗ ಹಣ ತೆರಬೇಕು. ಉಚಿತ ಎಂಬ ಶಬ್ದವೇ ಬಹುತೇಕ ಮಾಯವಾಗಿದೆ, ಉಚಿತವಾಗಿ ಕೊಟ್ಟರೂ ವಾರ ಅಥವಾ ತಿಂಗಳು ಮಾತ್ರ. ಈ ಎಲ್ಲಾ ಬದಲಾವಣೆ ಈ ವರ್ಷ ಇನ್ನೊಂದಿಷ್ಟು ವೇಗ ಪಡೆಯುವುದರಲ್ಲಿ ಸಂಶಯವಿಲ್ಲ.

ಆರೋಗ್ಯ ಕ್ಷೇತ್ರಕ್ಕೆ ಬಂದರೆ ಬೇರೊಂದು ರೀತಿಯ ಕ್ರಾಂತಿಯೇ ಆಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಮನೆಯಲ್ಲೇ ಕುಳಿತು ವೈದ್ಯರ ಜೊತೆ ಸಂವಾದ ಮಾಡುತ್ತ, ವಿಡಿಯೊ ಮೂಲಕ ಕಾಯಿಲೆಯ ಗುಣಲಕ್ಷಣ ತೋರಿಸುತ್ತ, ಟೆಲಿಮಿಡಿಸಿನ್‌ ಪಡೆಯುವುದು ಈಗ ಸಾಮಾನ್ಯ ಎಂಬಂತಾಗಿದೆ. ಜಿಮ್ನಾಶಿಯಂ ತೆರೆದರೂ ಕೂಡ ಫಿಟ್‌ನೆಸ್‌ ಪ್ರಿಯರಲ್ಲಿ ಹಲವರು ಅಲ್ಲಿಗೆ ಹೋಗಲು ಹೆದರುತ್ತಿದ್ದಾರೆ. ಆನ್‌ಲೈನ್‌ ಫಿಟ್‌ನೆಸ್‌ ತರಗತಿಗೆ ಸೇರಿಕೊಂಡು ಮನೆಯಲ್ಲೇ ಕಸರತ್ತು ನಡೆಸುವವರ ಸಂಖ್ಯೆ ಜಾಸ್ತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT