ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ಡಿಜಿಟಲ್‌ ಒತ್ತಡ?

Last Updated 10 ಜನವರಿ 2020, 19:30 IST
ಅಕ್ಷರ ಗಾತ್ರ

ಈ ಡಿಜಿಟಲ್‌ ಜಗತ್ತು ಒಂದು ರೀತಿ ಮಾಯಾವಿ ಇದ್ದಂತೆ. ನೀವು ದೂರ ಹೋಗಬೇಕು ಎಂದುಕೊಂಡರೂ ಬಿಡದೆ ನಿಮ್ಮನ್ನು ಸೆಳೆಯುತ್ತಿರುತ್ತದೆ. ಇಡೀ ದಿನ ಡಿಜಿಟಲ್‌ ಆಗಿ ಕ್ರಿಯಾಶೀಲರಾಗಿರುವುದು ಕೆಲವರಿಗೆ ಜೀವನದ ಒಂದು ಭಾಗ ಎಂಬಂತಾಗಿಬಿಟ್ಟಿದೆ. ಕೆಲವರಂತೂ ನಿತ್ಯ 10– 12 ತಾಸು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಟಿ.ವಿ., ಟ್ಯಾಬ್ಲೆಟ್‌, ಸಾಮಾಜಿಕ ಜಾಲತಾಣದಲ್ಲೇ ಮುಳುಗಿರುತ್ತಾರೆ ಎನ್ನುತ್ತದೆ ಇತ್ತೀಚೆಗೆ ನಮ್ಮ ದೇಶ ಸೇರಿದಂತೆ 10 ದೇಶಗಳಲ್ಲಿ ಸಮೀಕ್ಷೆ ನಡೆಸಿರುವ ನೀಲ್ಸನ್‌ ಸಂಸ್ಥೆಯ ವರದಿ.

ನಿಮ್ಮ ಈ ಡಿಜಿಟಲ್‌ ಹವ್ಯಾಸ ಒಂದು ರೀತಿಯ ಒತ್ತಡವನ್ನು ಸೃಷ್ಟಿಸುತ್ತದೆ. ಅದು ಚಟವಾಗಿ ಮಾರ್ಪಟ್ಟು ನಿಮ್ಮ ಒಟ್ಟಾರೆ ದೈಹಿಕ, ಮಾನಸಿಕ ನಡವಳಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ಮೊಬೈಲ್‌ ಡಿವೈಸ್‌ ಇಲ್ಲದೇ ನಿತ್ಯದ ಚಟುವಟಿಕೆಗಳನ್ನು ನಡೆಸಲು ಸಾಧ್ಯವೇ ಇಲ್ಲ ಎಂದು ಆಗಾಗ ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌, ಸಾಮಾಜಿಕ ಜಾಲತಾಣ, ಇಮೇಲ್‌ ಪರಿಶೀಲನೆ ನಡೆಸುವುದರಿಂದ ಒತ್ತಡ ಇನ್ನಷ್ಟು ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಜೊತೆಗೆ ನಿದ್ರಾಹೀನತೆ, ಖಿನ್ನತೆ, ಆತಂಕ ಕೂಡ ಜಾಸ್ತಿಯಾಗುತ್ತದೆ. ಅದರಲ್ಲೂ ರಾತ್ರಿ ಇದನ್ನು ಬಳಕೆ ಮಾಡಿದರೆ ಸಮಸ್ಯೆಗಳು ಹೆಚ್ಚುತ್ತವೆ. ಬೊಜ್ಜು ಕೂಡ ಹೆಚ್ಚಾಗುತ್ತದೆ.

ಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ಕಳೆಯುವುದರಿಂದ ತಮ್ಮ ಬದುಕನ್ನು ಸ್ನೇಹಿತರು, ಸೆಲೆಬ್ರಿಟಿಗಳು ಅಥವಾ ಪರಿಚಿತರ ಬದುಕಿನೊಂದಿಗೆ ಹೋಲಿಸಿಕೊಂಡು ಪರಿತಾಪ ಪಡುವವರೂ ಇದ್ದಾರೆ. ಅಂದರೆ ಅವರೆಲ್ಲ ಅದ್ಭುತವಾದ, ಸಂತಸದ, ಸಿರಿವಂತಿಕೆಯ ಜೀವನವನ್ನು ನಡೆಸುತ್ತಿದ್ದಾರೆ ಎಂಬ ಭ್ರಮೆಗೆ ಒಳಗಾಗುವುದೂ ಇದೆ. ಇದು ನಮ್ಮ ಖುಷಿಯನ್ನು ಕಿತ್ತುಕೊಂಡು ಇನ್ನಷ್ಟು ಒತ್ತಡ ಸೃಷ್ಟಿಸುತ್ತದೆ. ಬೇರೆಯವರು ಅನುಭವಿಸುವ ಸಂತಸ ತನಗಿಲ್ಲ (ಫೀಯರ್‌ ಆಫ್‌ ಮಿಸ್ಸಿಂಗ್‌ ಔಟ್‌) ಎಂದು ಖಿನ್ನತೆಗೆ ಒಳಗಾಗುತ್ತಾರೆ.

ದೂರ ಇರಿ!
ಈ ಸಮಸ್ಯೆಗಳಿಗೆ ಡಿಜಿಟಲ್‌ ನಿರ್ವಿಷೀಕರಣ (ಡಿಟಾಕ್ಸ್‌) ಒಂದೇ ಪರಿಹಾರ ಎನ್ನುತ್ತಾರೆ ತಜ್ಞರು. ಅಂದರೆ ಸ್ಮಾರ್ಟ್‌ಫೋನ್‌ ಅಥವಾ ಇನ್ನಾವುದೇ ಡಿಜಿಟಲ್‌ ಸಾಧನಗಳಿಂದ ದೂರ ಇರುವುದು. ಸಂಪೂರ್ಣ ದೂರ ಇದ್ದವರು ಒತ್ತಡರಹಿತರಾಗಿ, ಖುಷಿಯಿಂದ ಇರುವುದಾಗಿ ಹೇಳಿಕೊಂಡಿದ್ದಾರೆ. ಸಂಪೂರ್ಣ ದೂರ ಇರುವುದು ಸಾಧ್ಯವಿಲ್ಲದವರು ಅಗತ್ಯವಿದ್ದಾಗ ಮಾತ್ರ, ಅಂದರೆ ಕರೆ ಸ್ವೀಕರಿಸಲು, ವ್ಯವಹಾರಗಳನ್ನು ಮಾಡಲು ಮಾತ್ರ ಬಳಸಬಹುದು.

ಮೊಬೈಲ್‌ನಲ್ಲಿ ಸಂಗೀತ ಕೇಳಬೇಕು ಅಥವಾ ಸಾಮಾಜಿಕ ಜಾಲತಾಣ ಪರಿಶೀಲಿಸಬೇಕು ಎಂಬ ಅದಮ್ಯ ಬಯಕೆ ಉಂಟಾದಾಗ ಅದನ್ನು ಸೈಲೆಂಟ್‌ ಮೋಡ್‌ಗೆ ಅಥವಾ ಏರೋಪ್ಲೇನ್‌ ಮೋಡ್‌ಗೆ ಹಾಕಿ. ಇದರಿಂದ ಯಾವುದೇ ಸಂದೇಶಗಳು, ನೋಟಿಫಿಕೇಶನ್‌ ನಿಮ್ಮನ್ನು ಬಾಧಿಸಲಾರದು. ಅಗತ್ಯವಿರುವ ಆ್ಯಪ್‌ಗಳನ್ನು ಮಾತ್ರ ಡೌನ್‌ಲೋಡ್‌ ಮಾಡಿಕೊಳ್ಳಿ.

ಯಾವಾಗ ಡಿಜಿಟಲ್‌ ಸಾಧನದ ಬಳಕೆ ಕಡಿಮೆ ಮಾಡಬಹುದು?

* ಊಟ ಮಾಡುವಾಗ

* ವಾಕಿಂಗ್‌ ಮಾಡುವಾಗ

* ಕಚೇರಿಯಲ್ಲಿ ಕೆಲಸ ಮಾಡುವಾಗ

* ಸ್ನೇಹಿತರು ಅಥವಾ ಕುಟುಂಬದವರ ಜೊತೆ ಕಾಲ ಕಳೆಯುವಾಗ

* ರಾತ್ರಿ ಮಲಗುವ ಮುನ್ನ

ನಿತ್ಯ ಅರ್ಧ ತಾಸಿನ ಕಾಲ ಸ್ಮಾರ್ಟ್‌ಫೋನ್‌ ಅಥವಾ ಇತರ ಡಿಜಿಟಲ್‌ ಸಾಧನಗಳ ಬಳಕೆ ಕಡಿಮೆ ಮಾಡಿದರೂ ನಿಮಗೆ ಖಿನ್ನತೆ, ಒಂಟಿತನದ ಭಾವನೆ ಕಡಿಮೆಯಾಗುತ್ತದೆ. ಒಂದು ರೀತಿಯ ಉತ್ಸಾಹ, ಖುಷಿಯ ಭಾವನೆಗಳು ನಿಮ್ಮಲ್ಲಿ ಮನೆ ಮಾಡುತ್ತವೆ ಎನ್ನುತ್ತಾರೆ ತಜ್ಞರು.

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌, ಪಿಂಟರೆಸ್ಟ್‌, ನ್ಯೂಸ್‌ ವೆಬ್‌ಸೈಟ್‌ಗಳು ನೋಟಿಫಿಕೇಶನ್‌ ಕಳಿಸುವುದನ್ನು ಆಫ್‌ ಮಾಡಿಕೊಳ್ಳಿ. ನಿತ್ಯ 10– 20 ನಿಮಿಷಗಳ ಕಾಲ ಈ ಬಗ್ಗೆ ಗಮನ ಹರಿಸಿದರೆ ತಪ್ಪೇನಿಲ್ಲ.

ಸಾಮಾಜಿಕ ಜಾಲತಾಣದ ಆ್ಯಪ್‌ ತೆಗೆದುಹಾಕಿ. ಮೊಬೈಲ್‌ ಬಳಸುವ ಸಮಯದಲ್ಲಿ ನಿಮ್ಮ ಇತರ ಹವ್ಯಾಸಗಳನ್ನು, ಓದನ್ನು ಮುಂದುವರಿಸಬಹುದು.

ಒತ್ತಡದ ಲಕ್ಷಣಗಳು

*ಫೋನ್‌ ಕಾಣಿಸದಿದ್ದರೆ ಆತಂಕಗೊಳ್ಳುವುದು.

*ಪದೇ ಪದೇ ಫೋನ್‌ನಲ್ಲಿ ಪರಿಶೀಲನೆ ನಡೆಸುವುದು.

*ಸಾಮಾಜಿಕ ಜಾಲತಾಣ ವೀಕ್ಷಿಸಿದ ನಂತರ ಖಿನ್ನತೆ, ಆತಂಕ ಅಥವಾ ಕೋಪ ಆವರಿಸುವುದು.

*ನಿಮ್ಮ ಪೋಸ್ಟ್‌ಗೆ ಬಂದ ಲೈಕ್‌, ಕಮೆಂಟ್‌, ಶೇರಿಂಗ್‌ ಅನ್ನು ಪದೇ ಪದೇ ಲೆಕ್ಕ ಹಾಕುವುದು.

*ಫೋನ್‌ ಪರಿಶೀಲನೆ ನಡೆಸದಿದ್ದರೆ ಏನನ್ನೋ ಕಳೆದುಕೊಂಡಂತೆ ಪರಿತಪಿಸುವುದು.

*ತಡರಾತ್ರಿಯವರೆಗೆ ಅಥವಾ ಮುಂಜಾನೆ ಎದ್ದು ಫೋನ್‌ ಪರಿಶೀಲಿಸುವುದು.

*ಏಕಾಗ್ರತೆ ಕಡಿಮೆಯಾಗುವುದು.

(ಪೂರಕ ಮಾಹಿತಿ: ಡಾ.ಪ್ರಮೀಳಾ ಎಸ್‌., ಮನಃಶಾಸ್ತ್ರಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT