ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಟಿವಿ ಖರೀದಿಸುವಾಗ ಗೊಂದಲವೇ?: ಏನಿದು LED, OLED, QLED ಪರದೆ?

Last Updated 21 ಸೆಪ್ಟೆಂಬರ್ 2021, 12:36 IST
ಅಕ್ಷರ ಗಾತ್ರ

ಡೂಮ್ ಇರುವ ಅಂದರೆ ಕ್ಯಾಥೋಡ್ ರೇ ಟ್ಯೂಬ್ (ಸಿಆರ್‌ಟಿ) ಟಿವಿಗಳು ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತಿದ್ದವು ಮತ್ತು ಈಗಾಗಲೇ ಹೆಚ್ಚಿನವರ ಮನೆಗಳಿಂದ ಕಾಲ್ಕಿತ್ತಿವೆ. ಅವುಗಳ ಸ್ಥಾನದಲ್ಲಿ ನೋಡಲು ತೆಳ್ಳಗಿರುವ, ಗೋಡೆಯ ಮೇಲೆ ಅಂಟಿಸುವಂತೆ ಇರಿಸಬಹುದಾದ, ಸ್ಥಳಾವಕಾಶ ಕಡಿಮೆ ಬೇಕಿರುವ ಸ್ಲಿಮ್ ಟಿವಿಗಳು ಬಂದಿವೆ. ಕೆಲವು ಮನೆಗಳಲ್ಲಿ ಇಂಟರ್ನೆಟ್ ಸಂಪರ್ಕದ ಮೂಲಕ ಕೆಲಸ ಮಾಡುವ ಸಾಮರ್ಥ್ಯದ ಸ್ಮಾರ್ಟ್ ಟಿವಿಗಳಿವೆ. ಆದರೆ, ಇನ್ನೂ ಸ್ಲಿಮ್ ಇಲ್ಲವೇ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿರುವವರಿಗೆ ಎಲ್‌ಇಡಿ, ಎಲ್‌ಸಿಡಿ, ಒಎಲ್ಇಡಿ (ಒಲೆಡ್), ಕ್ಯುಲೆಡ್ ಮುಂತಾದ ಪದಗಳು ಗೊಂದಲವುಂಟು ಮಾಡಬಹುದು. ಖರೀದಿ ಮಾಡುವ ಮುನ್ನ ಅವೇನೆಂದು ತಿಳಿದರೆ ಆಯ್ಕೆಗೆ ಅನುಕೂಲ. ಈ ಪದಗಳೆಲ್ಲವೂ ಟಿವಿ ಪರದೆಯ ಡಿಸ್‌ಪ್ಲೇ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ.

OLED
ಇದು ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್ ಎಂಬುದರ ಹ್ರಸ್ವರೂಪ. ಯಾವುದೇ ದೃಶ್ಯ ಮಾಧ್ಯಮ (ಚಿತ್ರ ಅಥವಾ ವಿಡಿಯೊ) ಗುಣಮಟ್ಟವನ್ನು ಪಿಕ್ಸೆಲ್ ಎಂಬ ಮೂಲಾಂಶದಿಂದ ಅಳೆಯಲಾಗುತ್ತದೆ. ವಿದ್ಯುತ್ ಪ್ರವಾಹಕ್ಕೆ ತಕ್ಕಂತೆ ಪ್ರತಿಯೊಂದು ಪಿಕ್ಸೆಲ್ ಕೂಡ ತನ್ನದೇ ರೀತಿಯಲ್ಲಿ ಬೆಳಕನ್ನು ಹೊರಸೂಸುತ್ತದೆ. ಸಂದರ್ಭಕ್ಕನುಗುಣವಾಗಿ ಒಂದೊಂದು ಪಿಕ್ಸೆಲ್ ಸಂಪೂರ್ಣವಾಗಿ ಆಫ್ ಕೂಡ ಆಗಬಹುದು. ಇದರ ಪರಿಣಾಮವಾಗಿ, ಕಡು ಕಪ್ಪು, ಗರಿಷ್ಠ ಕಾಂಟ್ರಾಸ್ಟ್ ಮತ್ತು ನೈಜ ಬಣ್ಣಗಳನ್ನು ನೋಡುವುದು ಸಾಧ್ಯವಾಗುತ್ತದೆ. ಇದಕ್ಕೆ ಹಿಂದಿನಿಂದ ಬೆಳಕು ಅಥವಾ ಹಿಂಬೆಳಕು (ಬ್ಯಾಕ್‌ಲೈಟ್) ಅಗತ್ಯವಿಲ್ಲದಿರುವುದರಿಂದ OLED (ಒಲೆಡ್) ಟಿವಿಗಳು ಹೆಚ್ಚು ತೆಳ್ಳಗಿರಬಲ್ಲವು. ಬೇರೆ ಬೇರೆ ಕೋನಗಳಲ್ಲಿಯೂ ಚಿತ್ರಗಳು ಸ್ಫುಟವಾಗಿ ಗೋಚರಿಸಬಲ್ಲವು. ಆದರೆ OLED ನಲ್ಲಿ ಒಂದು ದೌರ್ಬಲ್ಯವಿದೆ. ಅದೇನೆಂದರೆ, QLED ಅಥವಾ LED ಟಿವಿಗಳಿಗೆ ಹೋಲಿಸಿದರೆ, OLED ಟಿವಿಯಲ್ಲಿ, ವಿಶೇಷವಾಗಿ ಹೈ ಡೈನಮಿಕ್ ರೇಂಜ್ (HDR) ಇರುವ ದೃಶ್ಯಗಳ ಪ್ರಖರತೆ ಕೊಂಚ ಕಡಿಮೆ ಇರುತ್ತದೆ. ಇದು ಉಪೇಕ್ಷಿಸಬಹುದಾದ ವಿಷಯವಾದರೂ, ಒಟ್ಟಾರೆಯಾಗಿ ಚಿತ್ರ ಗೋಚರತೆಯ ಗುಣಮಟ್ಟಕ್ಕೆ OLED ಟಿವಿಯೇ ಅತ್ಯುತ್ತಮ. ಇದರ ಸ್ಫುಟತೆಗಾಗಿಯೇ ಬೆಲೆಯೂ ಹೆಚ್ಚು.

LED:

ಎಲ್ಇಡಿ ತಂತ್ರಜ್ಞಾನ ತೀರಾ ಹೊಸದೇನಲ್ಲ. ಚಪ್ಪಟೆ ಪರದೆಯ ಟಿವಿಗಳಲ್ಲಿ ಅಗ್ಗದ ತಂತ್ರಜ್ಞಾನದಲ್ಲಿ ಉತ್ತಮ ಗುಣಮಟ್ಟದ ದೃಶ್ಯಗಳನ್ನು ಮೂಡಿಸಬಲ್ಲ ಈ ತಂತ್ರಜ್ಞಾನದಲ್ಲಿ, ಎಲ್ಇಡಿ ಹಿಂಬೆಳಕಿರುವ ಟಿಎಫ್‌ಟಿ-ಎಲ್‌ಸಿಡಿ ಪ್ಯಾನೆಲ್‌ಗಳನ್ನೇ ಬಳಸಲಾಗುತ್ತದೆ. ಇಡೀ ಎಲ್‌ಸಿಡಿ ಪ್ಯಾನೆಲ್‌ಗೆ ಒಂದೇ ಬ್ಯಾಕ್‌ಲೈಟ್ ಇರುವ ಕಾರಣದಿಂದಾಗಿ ಕಡುಕಪ್ಪು ಹಿನ್ನೆಲೆಯ ಗುಣಮಟ್ಟವು LED ಯಷ್ಟು ತೀಕ್ಷ್ಣವಾಗಿರುವುದಿಲ್ಲ. ಉತ್ತಮ ಎನ್ನಿಸಬಹುದಾದ ಗುಣಮಟ್ಟದಲ್ಲಿ ಚಿತ್ರಗಳು ಮೂಡಿಬರುವುದರಿಂದ ಅಗ್ಗದ ಬಜೆಟ್‌ನಲ್ಲಿ ಇದನ್ನು ಪರಿಗಣಿಸಬಹುದು.

QLED:

ಇವೆರಡರ ಮಧ್ಯದಲ್ಲಿರುವುದು QLED. ಎಂದರೆ, ಕ್ವಾಂಟಮ್ ಡಾಟ್ ಎಲ್‌ಇಡಿ. ಇದು ಕೂಡ ಮೂಲತಃ ಎಲ್‌ಇಡಿ ಸ್ಕ್ರೀನೇ ಆಗಿದ್ದರೂ, ಎಲ್‌ಇಡಿ ಹಿಂಬೆಳಕು ಮತ್ತು ಎಲ್‌ಸಿಡಿ ಪದರದ ಮಧ್ಯೆ ಒಂದು ಕ್ವಾಂಟಂ-ಡಾಟ್ ಫಿಲ್ಟರ್ ಇರುತ್ತದೆ. ಸ್ಕ್ರೀನ್‌ನಲ್ಲಿ ಉತ್ತಮವಾಗಿ ಬಣ್ಣಗಳನ್ನು ಮೂಡಿಸುವಲ್ಲಿ ಇದು ನೆರವು ನೀಡುತ್ತದೆ. ಹೀಗಾಗಿ, QLED ಪರದೆಯ ಟಿವಿಗಳಲ್ಲಿ ಎಲ್‌ಇಡಿಗಿಂತ ಚೆನ್ನಾಗಿರುವ ಬಣ್ಣಗಳು, ಪ್ರಖರತೆ ಇರುತ್ತದೆ. ಆದರೆ OLED ಗೆ ಹೋಲಿಸಿದರೆ ಕಾಂಟ್ರಾಸ್ಟ್ ಮಟ್ಟ ಹಾಗೂ ಕಡು ಕಪ್ಪು ವರ್ಣ ವೀಕ್ಷಣೆಯ ಗುಣಮಟ್ಟ ಸ್ವಲ್ಪ ಕಡಿಮೆ. QLED ಪ್ಯಾನೆಲ್ ತಯಾರಿಗೆ ವೆಚ್ಚ ಹೆಚ್ಚು ಮತ್ತು ಸಾಮಾನ್ಯವಾಗಿ ಚಿಕ್ಕ ಪರದೆಯ ಟಿವಿಗಳಲ್ಲಿ ಇದನ್ನು ಬಳಸಲಾಗುವುದಿಲ್ಲ.

LCD:

ಎಲ್ಲ LED ಟಿವಿಗಳು ಮೂಲತಃ ಲಿಕ್ವಿಡ್ ಕ್ರಿಸ್ಟಲ್ಸ್ ಡಿಸ್‌ಪ್ಲೇ (ಎಲ್‌ಸಿಡಿ) ಪ್ಯಾನೆಲ್ ಅನ್ನೇ ಹೊಂದಿರುತ್ತವೆ. ಪರದೆಯ ಮೇಲೆ ಬೆಳಕು ಪ್ರದರ್ಶಿತವಾಗುವುದನ್ನು ನಿಯಂತ್ರಿಸಲು ಎಲ್‌ಸಿಡಿ ಪ್ಯಾನೆಲ್ ಬಳಸಲಾಗುತ್ತದೆ. ಎರಡು ಪದರಗಳ ನಡುವೆ ದ್ರವೀಕೃತ ಸೂಕ್ಷ್ಮ ಸ್ಫಟಿಕಗಳ ಪದರ ಇರುತ್ತದೆ. ದ್ರವದ ಮೂಲಕ ವಿದ್ಯುತ್ ಪ್ರವಹಿಸಿದಾಗ, ಸೂಕ್ಷ್ಮ ಸ್ಫಟಿಕಗಳು ಹೊಂದಾಣಿಕೆ ಮಾಡಿಕೊಂಡು, ತಮ್ಮ ಮೂಲಕ ಬೆಳಕು ಹಾದುಹೋಗಲು ಅನುವು ಮಾಡಿಕೊಡುತ್ತದೆ.

ಹಾಗಿದ್ದರೆ ಎಲ್‌ಸಿಡಿ ಮತ್ತು ಎಲ್‌ಇಡಿ ಮಧ್ಯೆ ವ್ಯತ್ಯಾಸವೇನು? ವೈಜ್ಞಾನಿಕವಾಗಿ ಸಾಕಷ್ಟು ವ್ಯತ್ಯಾಸವಿದ್ದರೂ, ಎಲ್‌ಸಿಡಿಯಿಂದಲೇ ಎಲ್‌ಇಡಿ ಕೂಡ ಕೆಲಸ ಮಾಡುತ್ತದೆ. ಹಳೆಯ ಎಲ್‌ಸಿಡಿ ಟಿವಿಗಳಲ್ಲಿ ಪರದೆಯನ್ನು ಬೆಳಗುವುದಕ್ಕೆ 'ಕೋಲ್ಡ್ ಕ್ಯಾಥೋಡ್ ಫ್ಲೂರಸೆಂಟ್ ಲ್ಯಾಂಪ್' (CCFL) ಬಳಸುತ್ತಿದ್ದರೆ, ಎಲ್‌ಸಿಡಿ ಆಧಾರಿತ ಎಲ್‌ಇಡಿ ಟಿವಿಗಳಲ್ಲಿ ಮತ್ತಷ್ಟು ಕಿರಿದಾದ, ಹೆಚ್ಚು ಸಾಮರ್ಥ್ಯವುಳ್ಳ ಬೆಳಕು ಹೊರಸೂಸುವ (ಲೈಟ್ ಎಮಿಟಿಂಗ್) ಡಯೋಡ್‌ಗಳನ್ನು ಬಳಸಲಾಗುತ್ತಿದೆ. ತಂತ್ರಜ್ಞಾನ ಆಧುನಿಕ ಮತ್ತು ಗುಣಮಟ್ಟದ್ದಾಗಿರುವುದರಿಂದಾಗಿ ಎಲ್‌ಇಡಿ ಟಿವಿಗಳೇ ಹೆಚ್ಚು ಚಾಲ್ತಿಯಲ್ಲಿವೆ. ಅದರ ಉನ್ನತೀಕರಿಸಿದ ಭಾಗಗಳೇ QLED ಹಾಗೂ OLED.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT