ಸೋಮವಾರ, ಜುಲೈ 4, 2022
23 °C

ಗೂಗಲ್‌ಗೆ 'ಡಕ್‌ಡಕ್‌ಗೋ' ಪರ್ಯಾಯ?; ಟ್ವಿಟರ್‌ ಸಿಇಒ ಸಹ ಇದರ ಬಳಕೆದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನ ಅಂತರ್ಜಾಲ ಜಗತ್ತಿನ ಮಹಾಗುರುವಿನಂತೆ ಪರಿಗಣಿತವಾಗಿರುವ ಹುಡುಕು ವೇದಿಕೆ 'ಗೂಗಲ್‌', ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಆರೋಪವನ್ನೂ ಎದುರಿಸುತ್ತಿದೆ. ಇದೇ ವಿಚಾರವಾಗಿ ಯುರೋಪ್‌ನಲ್ಲಿ ಗೂಗಲ್‌ ಕೋರ್ಟ್‌ ಕಟಕಟೆಯಲ್ಲೂ ನಿಂತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಸಂಪರ್ಕ ಮಾಧ್ಯಮ 'ಟ್ವಿಟರ್‌'ನ ಸಿಇಒ ಜಾಕ್‌ ಡಾರ್ಸೆ ತಾನು ಗೂಗಲ್‌ ಹೊರತಾದ ಸರ್ಚ್‌ ಇಂಜಿನ್‌ ಬಳಸುತ್ತಿರುವುದಾಗಿ ಪ್ರಕಟಿಸಿಕೊಂಡಿರುವುದು ಮತ್ತಷ್ಟು ಚರ್ಚೆ ಹುಟ್ಟು ಹಾಕಿದೆ. 

'ನಾನು ಈಗ ಡಕ್‌ಡಕ್‌ಗೊ ಇಷ್ಟಪಡುತ್ತಿದ್ದೇನೆ. ಕೆಲ ಸಮಯದಿಂದ ಇದೇ ನನ್ನ ಡಿಫಾಲ್ಟ್‌ ಸರ್ಚ್‌ ಇಂಜಿನ್‌ ಆಗಿದೆ...' ಎಂದು ಜಾಕ್‌ ಡಾರ್ಸೆ ಟ್ವೀಟಿಸಿಕೊಂಡಿದ್ದಾರೆ. 

2019ರ ಸೆಪ್ಟೆಂಬರ್‌ ವರೆಗೂ ಗೂಗಲ್‌ ಸರ್ಚ್‌ ಇಂಜಿನ್‌ ಬಳಕೆಯಲ್ಲಿ ಶೇ 81.5ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಆದರೆ, ಶೇ 0.28ರಷ್ಟು ಬಳಕೆದಾರರನ್ನು ಹೊಂದಿರುವ 'ಡಕ್‌ಡಕ್‌ಗೊ' ಸರ್ಚ್‌ ಇಂಜಿನ್‌ನನ್ನು ಜಾಕ್‌ ಪ್ರಚುರಪಡಿಸುತ್ತಿದ್ದಾರೆ. ಗೂಗಲ್‌ ಬಳಕೆದಾರರ ಎಲ್ಲ ಚಟುವಟಿಕೆಗಳ ಬೆನ್ನತ್ತಿ ಅದಕ್ಕೆ ತಕ್ಕಂತಹ ಜಾಹೀರಾತು ಹಾಗೂ ಸಂಬಂಧಿತ ಸಲಹೆಗಳನ್ನು ನೀಡುತ್ತದೆ. ಇದು ಹಲವು ಬಳಕೆದಾರರ ಕಣ್ಣು ಕೆಂಪಾಗಿಸಿದೆ. 

ಗೂಗಲ್‌ ರೀತಿ ಡಕ್‌ಡಕ್‌ಗೋ ಬಳಕೆದಾರರ ಚಟುವಟಿಕೆಗಳನ್ನು ಗಮನಿಸುವುದಾಗಲಿ, ಐಪಿ ಅಡ್ರೆಸ್‌ ಟ್ರ್ಯಾಕ್‌ ಮಾಡುವುದು ಅಥವಾ ಹುಡುಕಾಟದ ಆಧಾರದ ಮೇಲೆ ಜಾಹೀರಾತು ಬರುವಂತೆ ಮಾಡುವುದು, ಹುಡುಕಾಟದ ಇತಿಹಾಸವನ್ನು ಸಂಗ್ರಹಿಸಿಕೊಳ್ಳುವುದಾಗಲೀ ಮಾಡುವುದಿಲ್ಲ. ಇದರಿಂದ ಖಾಸಗಿತನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಟೆಕ್‌ ಜಗತ್ತಿನ ಹಲವರು ನಂಬಿದ್ದಾರೆ. ಆದರೆ, ಗೂಗಲ್‌ನಷ್ಟೇ ವೇಗವಾಗಿ ಹಾಗೂ ಸಾಕಷ್ಟು ಮಾಹಿತಿಯನ್ನು ಡಕ್‌ಡಕ್‌ಗೋ ನೀಡುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು