ಬೆಂಗಳೂರು: ಬೆಂಗಳೂರಿನ ‘ಟಾಂಬೊ ಇಮೇಜಿಂಗ್’ನವೋದ್ಯಮ ಸಂಸ್ಥೆ ರೂಪಿಸಿರುವ ‘ ವೂಲ್ಫ್ ಪ್ಯಾಕ್’ ಸೇನೆಯ ಟ್ಯಾಂಕರ್‌ಗಳಿಗೆ ಮೂರನೇ ಕಣ್ಣು ನೀಡುವ ಮೂಲಕ ಅವುಗಳ ‘ರಾತ್ರಿ ಕುರುಡುತನ’ದ ಕೊರತೆಯನ್ನು ನೀಗಿಸಲಿದೆ.
’ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಶತ್ರುಗಳು ಬೆಟ್ಟ ಗುಡ್ಡಗಳ ಮರೆಯಲ್ಲಿ ನಿಂತು ದಾಳಿ ನಡೆಸುತ್ತಿದ್ದರೆ, ಭಾರತೀಯ ಸೇನೆಯ ಟ್ಯಾಂಕರ್‌ಗಳಲ್ಲಿದ್ದ ಭಾರತೀಯ ಯೋಧರಿಗೆ ಸುತ್ತ ಮುತ್ತ ಏನಾಗುತ್ತಿದೆ ಎಂಬುದೇ ತಿಳಿಯದ ಸ್ಥಿತಿ. ರಾತ್ರಿಯೂ ಆಸುಪಾಸಿನ ದೃಶ್ಯಗಳನ್ನು ಸ್ಪಷ್ಟವಾಗಿ ನೋಡುವ ವ್ಯವಸ್ಥೆ ಟ್ಯಾಂಕರ್‌ಗಳಲ್ಲಿ ಇಲ್ಲದ ಕಾರಣ ಅನೇಕ ಯೋಧರ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಗಿತ್ತು. ನಮ್ಮ ಸಂಸ್ಥೆಯ ಉತ್ಪನ್ನ ಈ ಕೊರತೆಯನ್ನು ನೀಗಿಸಲಿದೆ’ ಎಂದು ನಿವೃತ್ತ ಯೋಧರಾಗಿರುವ ‘ಟಾನ್ಬೊ ಇಮೇಜಿಂಗ್‘ ಕಂಪನಿಯ ನಿರ್ದೇಶಕ ಲೆಫ್ಟಿನೆಂಟ್ ಕಮಾಂಡರ್ ಡಿ.ರಾಜೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಥರ್ಮಲ್ ಇಮೇಜಿಂಗ್ ತಂತ್ರಜ್ಞಾನದ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ವೂಲ್ಫ್‌ಪ್ಯಾಕ್ ರಾತ್ರಿ ವೇಳೆಯೂ 500 ಮೀ. ದೂರದಲ್ಲಿರುವ ಸೈನಿಕರನ್ನು ಪತ್ತೆ ಹಚ್ಚಬಲ್ಲುದು. 2 ಕಿ.ಮೀ ದೂರದಲ್ಲಿರುವ ಟ್ಯಾಂಕರ್‌ಗಳನ್ನು ಗುರುತಿಸಬಲ್ಲುದು. ಟ್ಯಾಂಕರ್ ಒಳಗೆ ಕುಳಿತ ಯೋಧರು 360 ಡಿಗ್ರಿ ವ್ಯಾಪ್ತಿಯಲ್ಲೂ ಏನಾಗುತ್ತಿದೆ ಎಂದು ನೋಡಲು ಸಹಾಯ ಮಾಡಬಲ್ಲುದು’ ಎಂದು ಅವರು ವಿವರಿಸಿದರು.
‘ಬಂದೂಕಿಗೂ ಅಳವಡಿಸಲು ಇದೇ ರೀತಿಯ ಸಾಧನವನ್ನು ಅಳವಡಿಸಿದ್ದೇವೆ. ರಾತ್ರಿ ವೇಳೆ ಗುರಿಗೆ ನಿಖರವಾಗಿ ಗುಂಡು ಹೊಡೆಯಲು ಇದು ನೆರವಾಗುತ್ತದೆ’ ಎಂದರು.
ರಕ್ಷಣಾ ಉತ್ಕೃಷ್ಟತೆಗಾಗಿ ಆವಿಷ್ಕಾರ (ಐಡೆಕ್ಸ್) ಕಾರ್ಯಕ್ರಮದಡಿ ರಕ್ಷಣಾ ಇಲಾಖೆಯು ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಮುಂದೆ ವಿವಿಧ ಸವಾಲುಗಳನ್ನು 2018ರಲ್ಲಿ ಇಟ್ಟಿತ್ತು. 68 ಕಂಪನಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ‘ಟಾನ್ಬೊ ಇಮೇಜಿಂಗ್‘ ಕಂಪನಿ ರೂಪಿಸಿರುವ ‘ವೂಲ್ಫ್ ಪ್ಯಾಕ್’ ಬಹುಮಾನ ಪಡೆದಿದೆ. ಹಾಗಾಗಿ ಏರೋ ಇಂಡಿಯಾದ ಈ ಬಾರಿಯ ಆವೃತ್ತಿಯಲ್ಲಿ ಈ ಉತ್ಪನ್ನವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.
‘ನಾವು ಈಗಾಗಲೇ ವರ್ಷಕ್ಕೆ 2ಸಾವಿರದಿಂದ 3 ಸಾವಿರ ವೂಲ್ಫ್ ಪ್ಯಾಕ್ ಮಾರಾಟ ಮಾಡುತ್ತಿದ್ದೇವೆ. ಭಾರತೀಯ ಭೂಸೇನೆಯ ‘ಬಿಎಂಪಿ 2 ಸಾರಥಿ’ ಟ್ಯಾಂಕರ್‌ನಲ್ಲಿ ಇದನ್ನು ಅಳವಡಿಸಲು ಸಿದ್ಧತೆ ನಡೆದಿದೆ. ರಕ್ಷಣಾ ಇಲಾಖೆ ನಮ್ಮಿಂದ 3 ಸಾವಿರ ವೂಲ್ಫ್ ಪ್ಯಾಕ್‌ಗಳನ್ನು ಖರೀದಿಸಲು ಮುಂದಾಗಿದೆ. ಅಲ್ಲದೇ ಅರೆ ಸೇನಾ ಪಡೆಗಳು, ಗಡಿ ಭದ್ರತಾ ಪಡೆಗಳೆಲ್ಲ ಸೇರಿ ಸುಮಾರು 7500 ವೂಲ್ಫ್‌ಪ್ಯಾಕ್ ಖರೀದಿಸುವ ನಿರೀಕ್ಷೆ ಇದೆ’ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
‘2020ರಲ್ಲಿ 4800 ಉತ್ಪನ್ನಗಳನ್ನು ಮಾರಾಟ ಮಾಡಿದ್ದೇವೆ. ಮುಂದಿನ ವರ್ಷ 21 ಸಾವಿರ ಉತ್ಪನ್ನಗಳನ್ನು ಸೇನೆಗೆ ಹಾಗೂ ವಿವಿಧ ಸಂಸ್ಥೆಗಳಿಗೆ ಪೂರೈಸಲಿದ್ದೇವೆ’ ಎಂದೂ ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.