ಶುಕ್ರವಾರ, ಮೇ 27, 2022
28 °C

2021ರ ಟಾಪ್ 10 ವೈರಲ್ ವಿಡಿಯೊಗಳಾವವು? ಇಲ್ಲಿವೆ ನೋಡಿ...

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ 2021 ನೇ ವರ್ಷ ತೆರೆಮರೆಗೆ ಸರಿಯುತ್ತಿದೆ. ಮಾರಕ ಸೋಂಕಿನ ಎರಡನೇ ಅಲೆ ಭಾರತ ಸೇರಿದಂತೆ ವಿದೇಶಗಳಲ್ಲೂ ಈ ವರ್ಷ ಹೆಚ್ಚು ಪ್ರಭಾವ ಬೀರಿತು.

ನೋವು, ದುಗುಡ, ದುಮ್ಮಾನಗಳಲ್ಲೇ ಜನರು ಈ 2021 ಕ್ಕೆ ವಿದಾಯ ಹೇಳುತ್ತಿದ್ದರೂ ಈ ವರ್ಷದಲ್ಲಿ ನೆನಪಿನಲ್ಲಿ ಉಳಿಯಬಹುದಾದಂತಹ ಅನೇಕ ಸಂಗತಿಗಳು ನಡೆದಿವೆ. ಅದರಲ್ಲೂ ಕೆಲವು ವೈರಲ್ ವಿಡಿಯೊಗಳು ಸಾಕಷ್ಟು ಸದ್ದು ಮಾಡಿವೆ.

ಈ ಕೆಲವು ವೈರಲ್ ವಿಡಿಯೊಗಳು ವಿವಾದಕ್ಕೆ ಕಾರಣವಾಗಿದ್ದರೆ, ಕೆಲವು ನಗುವಿನ ಬುಗ್ಗೆಯನ್ನು ಚಿಮ್ಮಿಸಿವೆ. ಇನ್ನೂ ಕೆಲವು ನೋವು ನೀಡಿವೆ. ಒಟ್ಟಿನಲ್ಲಿ ಯಾವುದ್ಯಾವುದೋ ಕಾರಣಕ್ಕೆ ಯಾವುದ್ಯಾವುದೋ ಸಂದರ್ಭಗಳಲ್ಲಿ ದುತ್ತನೆ ಜನರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೊಗಳು ಸಕತ್ ವೈರಲ್ ಆಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯುಳಿಯುತ್ತವೆ.

2021ರಲ್ಲಿ ಹೆಚ್ಚು ವೈರಲ್ ಆದ ಟಾಪ್ 10 ವಿಡಿಯೊಗಳ ಪಟ್ಟಿ ಇಲ್ಲಿದೆ

ಪೌರಿ ಹೋ ರಹಿ ಹೈ

2021ರಲ್ಲಿ ಸಾಕಷ್ಟು ವೈರಲ್ ಆದ ವಿಡಿಯೊ ಎಂದರೆ ಅದು ಪಾಕಿಸ್ತಾನಿ ಹುಡುಗಿ ದನನೀರ್ ಮೋಬಿನ್ ಅವರ 'ಪೌರಿ ಹೊ ರಹಿ ಹೈ' ವಿಡಿಯೊ. ಪ್ರವಾಸದ ಸಂದರ್ಭವೊಂದರಲ್ಲಿ ದನನೀರ್ ಹಾಗೂ ಅವಳ ಸ್ನೇಹಿತರು ಪಾರ್ಟಿ ಎಂಬುದನ್ನು ತಪ್ಪಾಗಿ ಉಚ್ಚಾರ ಮಾಡಿ ‘ಪೌರಿ ಹೋ ರಹಿ ಹೈ’ ಎಂದು ಮುದ್ದು ಮುದ್ದಾಗಿ ಹೇಳಿದ್ದ ವಿಡಿಯೊ ಹೆಚ್ಚು ಜನರ ಗಮನ ಸೆಳೆದಿತ್ತು.

ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು

ಡೋಲೊ 650 ಮಾತ್ರೆ, ಬಿಸಿ ರಾಗಿ ಹಿಟ್ಟು..ಕೊರೊನಾದೋರಿಗೆ ಅದೇಯಾ..’ ಎಂದು ಹೇಳಿದ್ದ ಮೈಸೂರಿನ ಶಶಿರೇಖಾ ಅವರ ವಿಡಿಯೊ ವೈರಲ್‌ ಆಗಿತ್ತು. ರಸ್ತೆಬದಿಯಲ್ಲಿ ಬಿದಿರಿನಬುಟ್ಟಿ ಹೆಣೆಯುತ್ತಾ ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದ ಶಶಿರೇಖಾ, ಬಡವರಿಗೆ ಕೊರೊನಾ ಬಂದರೆ ಅವರು ಏನು ಮಾಡುತ್ತಾರೆ, ಸರ್ಕಾರ ಬಡವರನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಹೇಗೆ ನೋಡಿಕೊಳ್ಳುತ್ತಿದೆ ಎಂದು ಆ ವಿಡಿಯೊದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಬಳಿಕ ಅದು ವೈರಲ್ ಆಗಿತ್ತು.

 

ಬಚ್ಪನ್‌ ಕಾ ಪ್ಯಾರ್‌

ಉತ್ತರಾಖಂಡ ರಾಜ್ಯದ ಬಾಲಕ ಸಹದೇವ್ ಡಿರ್ಡೊ ಹಾಡಿದ್ದ ’ಬಚ್ಪನ್‌ ಕಾ ಪ್ಯಾರ್‌’ ಹಾಡು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ವೈರಲ್ ಆಗಿತ್ತು. 2019ರಲ್ಲಿ ಸಹದೇವ್‌ ಶಾಲೆಯಲ್ಲಿ ಆತ್ಮವಿಶ್ವಾಸದಿಂದ ಹಾಡಿದ್ದ ಈ ಹಾಡು ಈ ವರ್ಷ ವೈರಲ್‌ ಆಗಿತ್ತು. ನೂರಾರು ಜನರು ಈ ಹಾಡಿಗೆ ಸಂಗೀತ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

 

ಕ್ರಿಸ್ಟಿಯಾನೋ ರೊನಾಲ್ಡೊ ‘ಕೋಲಾ‘ಹಲ

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸುದ್ದಿಗೋಷ್ಟಿಯಲ್ಲಿ ನೀಡಿದ ಒಂದೇ ಒಂದು ಸೂಚನೆ ‘ಕೋಲಾ‘ಹಲವನ್ನೇ ಎಬ್ಬಿಸಿತ್ತು. ಈ ವರ್ಷದ ಯುರೊ ಕಪ್‌ನ ಹಂಗೇರಿ–ಪೋರ್ಚುಗಲ್ (ಇ ಗುಂಪು) ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಲು ಬಂದ ರೊನಾಲ್ಡೊ, ಟೇಬಲ್ ಮೇಲೆ ಎರಡು ಕೋಕಾ  ಕೋಲಾ ಬಾಟಲ್‌ಗಳನ್ನು ಗಮನಿಸಿದರು. ನಂತರ ಅವುಗಳನ್ನು ದೂರ ಸರಿಸಿ, ಅಲ್ಲಿಯೇ ಇದ್ದ ನೀರಿನ ಬಾಟಲ್ ಎತ್ತಿಕೊಂಡು ‘ನೀರು ಕುಡಿಯಿರಿ, ಆರೋಗ್ಯವಾಗಿರಿ‘ ಎಂದು ಸೂಚನೆ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿತ್ತು. ‘ಕಾರ್ಬೋನೆಟೆಡ್ ಸಮ್ಮಿಶ್ರಣದ ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ‘ ಎಂದು ರೊನಾಲ್ಡೊ ಸೂಚ್ಯವಾಗಿ ಹೇಳಿದ್ದಾರೆ.

ಗುಟ್ಕಾ ಮ್ಯಾನ್

ಭಾರತ ಮತ್ತು ನ್ಯೂಜಿಲೆಂಡ್‌ ಮೊದಲ ಟೆಸ್ಟ್‌ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಬಾಯಲ್ಲಿ ಗುಟ್ಕಾ ತುಂಬಿಕೊಂಡು ಫೋನ್‌ನಲ್ಲಿ ಮಾತನಾಡುತ್ತಿರುವಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೊ ಮತ್ತು ಫೋಟೊಗಳು ಭಾರಿ ವೈರಲ್‌ ಆಗಿತ್ತು. ವಿವಿಧ ರೀತಿಯಲ್ಲಿ ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಕಾನ್ಪುರದ ಗ್ರೀನ್‌ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಟ್ಕಾ ಜಗಿಯುವ ಭಂಗಿಯಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ 'ಗುಟ್ಕಾ ಮ್ಯಾನ್‌' ಎಂದೇ ಪರಿಚಿತರಾದರು. 'ಗುಟ್ಕಾ ಮ್ಯಾನ್‌' ಎಂದು ಅಪಖ್ಯಾತಿಗೆ ಒಳಗಾದ ವ್ಯಕ್ತಿಯನ್ನು ಕಾನ್ಪುರದ ಮಹೇಶ್ವರಿ ಮಹೋಲ್‌ ನಿವಾಸಿ ಶೋಬಿತ್‌ ಪಾಂಡೆ ಎಂದು ಗುರುತಿಸಲಾಗಿತ್ತು. 'ಪಂದ್ಯದ ವೇಳೆ ಗುಟ್ಕಾ ಜಗಿಯುತ್ತಿರಲಿಲ್ಲ, ಎಲೆಯಡಿಕೆ ತಿನ್ನುತ್ತಿದ್ದೆ' ಎಂದು ಎಎನ್‌ಐಗೆ ಶೋಬಿತ್‌ ಸ್ಪಷ್ಟಪಡಿಸಿದ್ದರು.

ಮೆಡಿಕಲ್ ಕಾಲೇಜ್ ರಾಸ್‌ಪುಟಿನ್

ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ಈ ವರ್ಷ ಯುವ ಜೋಡಿಯೊಂದು ಕಾಲೇಜಿನ ಕಾರಿಡಾರ್‌ನಲ್ಲಿ ರಷ್ಯನ್ ಹಾಡಾದ ‘ರಾಸ್‌ಪುಟಿ‘ನ್ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಇದು ಸಾಕಷ್ಟು ವೈರಲ್ ಆಗಿತ್ತಲ್ಲದೇ ಹಿಂದೂ–ಮುಸ್ಲಿಂ ಯುವಕ ಯುವತಿಯ ನೃತ್ಯ ಎಂಬ ವಿವಾದ ಹುಟ್ಟುಹಾಕಿತ್ತು.

ಲವ್ ಯು ಜಿಂದಗಿ

ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಯುವತಿಯೊಬ್ಬಳು ಐಸಿಯು ವಾರ್ಡ್‌ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ‘ಲವ್ ಯು ಜಿಂದಗಿ’ ಎಂಬ ಡಿಯರ್ ಜಿಂದಗಿ ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದರು. ಬಳಿಕ ಆ ಯುವತಿಯ ವಿಡಿಯೊ ವೈರಲ್ ಆಗಿತ್ತು. ಆ ನಂತರ, ದುರದೃಷ್ಟವಶಾತ್ ಆ ಯುವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಉಗ್ರಪ್ಪ–ಸಲೀಂ ಡಿಕೆಶಿ ಬಾಂಬ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಪಕ್ಷದ ಮುಖಂಡ ವಿ.ಎಸ್. ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಸಮನ್ವಯಕಾರ ಎಂ.ಎ. ಸಲೀಂ ನಡುವೆ ನಡೆದ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣಗಳು, ಟಿವಿ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಮಂಗಳವಾರ ನಡೆದ ಈ ಇಬ್ಬರ ಖಾಸಗಿ ಸಂಭಾಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆ. ರಹಮಾನ್‌ ಖಾನ್‌ ನೇತೃತ್ವದ ಪಕ್ಷದ ಶಿಸ್ತು ಪಾಲನಾ ಸಮಿತಿ,  ಸಲೀಂ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಉಚ್ಚಾಟಿಸಿತ್ತು.

 

ಕೆಕೆ ಅಗರ್‌ವಾಲ್ ವಿಡಿಯೊ

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷರಾಗಿದ್ದ ಕೆಕೆ ಅಗರ್‌ವಾಲ್ ಅವರಿಗೆ ಸಂಬಂಧಿಸಿದ ವಿಡಿಯೊ ಒಂದು ವೈರಲ್ ಆಗಿತ್ತು. ಅಗರ್‌ವಾಲ್ ಅವರು ಎಫ್‌ಬಿ ಲೈವ್ ಒಂದರಲ್ಲಿ ಇದ್ದಾಗ ಅವರ ಹೆಂಡತಿ ಕರೆ ಮಾಡಿ, ಲಸಿಕೆ ತೆಗೆದುಕೊಳ್ಳದಿದ್ದಕ್ಕೆ ಮನಸೋ ಇಚ್ಚೆ ಗದರಿಸಿದ್ದರು.

ಸಲೂನ್‌ಗೆ ಬಂದು ಟ್ರಿಮ್‌ ಮಾಡಿಸಿಕೊಂಡ ಮಂಗ

ಸಾಮಾಜಿಕ ಜಾಲತಾಣಗಳಲ್ಲಿ ಮಂಗವೊಂದು ಸಲೂನ್‌ನಲ್ಲಿ ಮುಖದ ಕೂದಲನ್ನು ಟ್ರಿಮ್‌ ಮಾಡಿಸಿಕೊಳ್ಳುತ್ತಿರುವ ವಿಡಿಯೊ ಜನರನ್ನು ಸೆಳೆದಿತ್ತು. ಸಲೂನ್‌ ಡ್ರೆಸ್‌ನಲ್ಲಿ ಕುಳಿತ ಮಂಗ ಕೇಶ ವಿನ್ಯಾಸಕಾರ ಹೇಳಿದಂತೆ ಮುಖ ತಿರುಗಿಸುತ್ತ, ಕತ್ತು ಮೇಲೆ ಮಾಡುತ್ತ ಸಹಕರಿಸಿತ್ತು. ಎಲೆಕ್ಟ್ರಿಕ್‌ ಟ್ರಿಮ್ಮರ್‌ ಅನ್ನು ಮುಖದ ಬಳಿ ತಂದರೂ ಹೆದರದೆ ಆರಾಮವಾಗಿ ಕುಳಿತಿರುವುದು ವಿಡಿಯೊದಲ್ಲಿದೆ. ಅಬ್ಬಾಬ್ಬಾ, ಥೇಟ್‌ ಮನುಷ್ಯರಂತೇ ಕುಳಿತು ಟ್ರಿಮ್‌ ಮಾಡಿಸಿಕೊಳ್ಳುತ್ತಿದೆಯಲ್ಲಾ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು.

ಯೊಹಾನಿ ಮನಕೆ ಮಗೆ ಹಿತೆ

ಶ್ರೀಲಂಕಾದ ಗಾಯಕಿ ಯೊಹಾನಿ ಹಾಡಿರುವ ಮನಕೆ ಮಗೆ ಹಿತೆ ಆಲ್ಬಂ ಸಾಂಗ್ ಈ ವರ್ಷ ಭಾರೀ ವೈರಲ್ ಆಗಿರುವಂತದ್ದು, ಸಂಗೀತ ಪ್ರಿಯರು ಈ ಹಾಡನ್ನು ತುಂಬಾ ಇಷ್ಟಪಟ್ಟಿದ್ದಲ್ಲದೇ ಯೊಹಾನಿಗೆ ಭಾರತದಲ್ಲಿ ದೊಡ್ಡ ಹೆಸರು ತಂದು ಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು