ಬುಧವಾರ, ಸೆಪ್ಟೆಂಬರ್ 23, 2020
20 °C

ನಮಸ್ಕಾರ ಪೊಲೀಸಮ್ಮ | ಮಕ್ಕಳಿಗೆ ಮಾತೃ ಮಮತೆಯ ಚಾದರ ಹೊದೆಸಿದ ಕಾನ್‌ಸ್ಟೆಬಲ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹತಿ: ತಾಯಂದಿರು ತಮ್ಮ ಎಳೆಯ ಕಂದಮ್ಮಗಳನ್ನು ಅಪರಿಚಿತರ ಕೈಗಳಿಗೆ ನೀಡುವುದಕ್ಕೆ ಸಹಜವಾಗಿ ಭಯಪಡುತ್ತಾರೆ. ಆದರೆ, ಇಲ್ಲಿ ತಮ್ಮ ಕಂದಮ್ಮಗಳನ್ನು ಮಹಿಳಾ ಕಾನ್‌ಸ್ಟೆಬಲ್‌ಗಳ ಕೈಗೆ ಒಪ್ಪಿಸಿದ ತಾಯಂದಿರು ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿದರು.

ತಾತ್ಕಾಲಿಕವಾಗಿ ಅಮ್ಮಂದಿರಿಂದ ದೂರವಾಗಬೇಕಾದ ಆ ಕಂದಮ್ಮಗಳನ್ನು ಸಮಾಧಾನದಿಂದ ಆರೈಕೆ ಮಾಡಿದ, ಅವರಿಗೆ ಮಾತೃ ಮಮತೆಯ ಚಾದರ ಹೊದಿಸಿ ಮಲಗಿಸಿದ ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ಹೊಗಳಿಕೆಯ ಮಹಾಪೂರವೇ ಹರಿದುಬಂದಿದೆ.

ಈ ಘಟನೆ ನಡೆದದ್ದು ಅಸ್ಸಾಂ ರಾಜ್ಯದ ದರಾಂಗ್ ಜಿಲ್ಲೆಯ ಮಂಗಲದೋಯಿ ಎಂಬ ಊರಲ್ಲಿ. ಅಲ್ಲಿನ ಡಾನ್‌ ಬಾಸ್ಕೊ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ನೇಮಕಾತಿಗೆ ನ.10ರಂದು ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾಗಲು ಎಳೆವಯಸ್ಸಿನ ಪುಟ್ಟ ಕಂದಮ್ಮಗಳೊಂದಿಗೆ ಇಬ್ಬರು ತಾಯಂದಿರು ಬಂದಿದ್ದರು.

ಇದನ್ನೂ ಓದಿ: ವೈರಲ್ ವಿಡಿಯೊ | ಅಪ್ಪನ ಕಾಳಜಿ, ಪುಟ್ಟಿಯ ಸುಳ್ಳು

ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ, ಭದ್ರತೆಗೆ ನೇಮಿಸಿದ್ದ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಕೈಗೆ ತಮ್ಮ ಪುಟ್ಟ ಕಂದಮ್ಮಗಳನ್ನು ಒಪ್ಪಿಸಿದರು. ಕಾನ್‌ಸ್ಟೆಬಲ್ಗಳು ಆ ಮಕ್ಕಳನ್ನು ಸಮಾಧಾನದಿಂದ ಆರೈಕೆ ಮಾಡಿದ್ದಾರೆ. ಅವರ ಸುಕೋಮಲ ಕೈಗಳಲ್ಲಿ ಕಂದಮ್ಮಗಳು ನೆಮ್ಮದಿಯ ನಿದ್ರೆಗೆ ಜಾರಿವೆ. ಕಾಳಜಿ, ಪ್ರೀತಿ ಮತ್ತು ಮಮತೆಯಿಂದ ಕೂಡಿದ ‍ಆತಿಥ್ಯ ಆ ಪುಟ್ಟ ಮಕ್ಕಳಲ್ಲಿ ನೆಮ್ಮದಿಯ ಭಾವ ತಂದಿದೆ. 

ಕಂದಮ್ಮಗಳನ್ನು ತಮ್ಮ ಕೈಯಲ್ಲಿ ಹಿಡಿದು ನಿಂತಿರುವ ಪೊಲೀಸಮ್ಮಗಳ ಫೋಟೊಗಳನ್ನು ಅಸ್ಸಾಂ ರಾಜ್ಯ ಪೊಲೀಸ್‌ ಇಲಾಖೆಯು ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ‘ಐ ಲವ್‌ ಯು ಪಾಪು’ ಅಪ್ಪ ಹೇಳುವ ಮೊದಲೇ ಮಗಳಿಗೆ ಮಾತು ಅರ್ಥವಾಗಿತ್ತು...

‘ತಾಯಿ ಎನ್ನುವುದೊಂದು ಕ್ರಿಯಾಪದ. ನೀವು ಯಾರೆಂಬುದಲ್ಲ. ಏನು ಮಾಡುತ್ತೀರಿ ಎಂಬುದು ಪರಿಗಣನೆಗೆ ಬರುತ್ತದೆ! ತಾಯಂದಿರು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ, ಅವರ ಪುಟ್ಟ ಕಂದಮ್ಮಗಳನ್ನು ಅಸ್ಸಾಂ ಪೊಲೀಸ್ ಸಿಬ್ಬಂದಿ ಆರೈಕೆ  ಮಾಡುತ್ತಿದ್ದಾರೆ’ ಎಂದು ಫೋಟೊ ಸಮೇತ ಟ್ವೀಟ್‌ ಮಾಡಲಾಗಿದೆ. 

ಈ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿರುವ ಅಸ್ಸಾಂ ಡಿಜಿಪಿ, ‘ತಾಯಿಯ ಕೋಮಲ ತೋಳುಗಳಲ್ಲಿ ಮಕ್ಕಳು ಚೆನ್ನಾಗಿ ನಿದ್ರಿಸುತ್ತವೆ. ಅಮ್ಮಂದಿರು ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಅವರ ಮಕ್ಕಳು ಸುರಕ್ಷಿತ ಆರೈಕೆ ಅಸ್ಸಾಂ ಪೊಲೀಸರು ಖಾತ್ರಿಪಡಿಸಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಪೊಲೀಸರ ಟ್ವೀಟ್‌ಗೆ ನೆಟ್ಟಿಗರಿಂದ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ‘ಕಂದಮ್ಮಗಳ ಕಾಳಜಿ ವಹಿಸಿಕೊಂಡ ಪೊಲೀಸರು ತಾವು ಎಂತಹ ಸಮಾಜದಿಂದ ಬಂದಿದ್ದೇವೆಂದು ಪ್ರತಿಬಿಂಬಿಸಿದ್ದಾರೆ. ಇದೇ ಅಸ್ಸಾಂ ಸಮಾಜ,’ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. 

‘ಅಪರಾಧಿಗಳನ್ನು ಹಿಡಿಯುವುದಷ್ಟೇ ಪೊಲೀಸ್‌ ವೃತ್ತಿಯಲ್ಲ. ಸಮಾಜಕ್ಕೆ ಸಹಾಯ ಮಾಡುವುದು ಅಪರಾಧಿಗಳನ್ನು ಕಂಬಿಗಳ ಹಿಂದೆ ಕಳುಹಿಸಿದಷ್ಟೇ ಮುಖ್ಯ,’ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.  

ಇನ್ನಷ್ಟು... 

ಮನೆಯೊಡತಿ ಮಾಡಿಕೊಟ್ಟ ವಿಸಿಟಿಂಗ್‌ ಕಾರ್ಡ್‌ನಿಂದ ಕೆಲಸದಾಕೆಗೆ ಬಂತು ಬಹುಬೇಡಿಕೆ 

ಯುಟ್ಯೂಬ್‌ ಸ್ಟಾರ್‌ | ಅಜ್ಜನ ಅಡುಗೆ ಖ್ಯಾತಿಯ ನಾರಾಯಣ ರೆಡ್ಡಿ ನಿಧನ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು