ಭಾನುವಾರ, ಸೆಪ್ಟೆಂಬರ್ 26, 2021
21 °C

ವೈರಲ್ | ತನ್ನ ಹೆಸರು ಹೇಳಿ ಕರೋಡ್‌ಪತಿ ಸೋತ ಸ್ಪರ್ಧಿಗೆ ತೇಜಸ್ವಿ ಸೂರ್ಯ ಸಾಂತ್ವನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘17ನೇ ಲೋಕಸಭೆಯಲ್ಲಿರುವ ಯಾವ ಸಂಸದ ಜಪಾನಿನ ಸಮರಕಲೆ ಅಕಿಡೊದಲ್ಲಿ ಬ್ಲಾಕ್‌ಬೆಲ್ಟ್‌ ಪಡೆದಿದ್ದಾರೆ...’

ಸೋನಿ ಟೀವಿಯಲ್ಲಿ ಪ್ರಸಾರವಾದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಕೇಳಿದ ಈ ಪ್ರಶ್ನೆಗೆ ಉತ್ತರ ನೀಡಲು ಇದ್ದ ಆಯ್ಕೆಗಳು ಗೌತಮ್ ಗಂಭೀರ್, ರಾಹುಲ್ ಗಾಂಧಿ, ಅನುರಾಗ್ ಠಾಕೂರ್ ಮತ್ತು ತೇಜಸ್ವಿ ಸೂರ್ಯ.

₹ 6.40 ಲಕ್ಷ ಮೌಲ್ಯದ ಈ ಪ್ರಶ್ನೆಗೆ ಹಾಟ್‌ ಸೀಟ್‌ನಲ್ಲಿದ್ದ ಉತ್ತರ ಪ್ರದೇಶದ ಮಥುರಾದಿಂದ ಬಂದಿದ್ದ ಸ್ಪರ್ಧಿ ನರೇಂದ್ರ ಕುಮಾರ್ ಕೊಟ್ಟ ಉತ್ತರ ತೇಜಸ್ವಿ ಸೂರ್ಯ. ಈ ಹೆಸರು ಹೇಳಿದ್ದಕ್ಕೆ ಅವರು ಸ್ಪರ್ಧೆಯಲ್ಲಿ ಸೋತು ಹೊರ ನಡೆಯಬೇಕಾಯಿತು. ರಾಹುಲ್‌ ಗಾಂಧಿ ಸರಿಯಾದ ಉತ್ತರವಾಗಿತ್ತು.

ಕೇವಲ ಇಷ್ಟೇ ಆಗಿದ್ದರೆ ಇದೇನು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಓರ್ವ ಸ್ಪರ್ಧಿ ತನ್ನ ಹೆಸರು ಹೇಳಿದ್ದನ್ನು ಗಮನಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಡಿದ ಟ್ವೀಟ್‌ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಕಾರ್ಯಕ್ರಮದಲ್ಲಿ ತನ್ನ ಹೆಸರಿದ್ದ ಪ್ರಶ್ನೆಯ ಸಂಚಿಕೆಯ ಸ್ಕ್ರೀನ್‌ಶಾಟ್‌ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ‘ಸೋದರ ನಿನಗಾಗಿ ವಿಷಾದಿಸುವೆ. ನಾನು ಅಕಿಡೊದಲ್ಲಿ ಬ್ಲಾಕ್‌ಬೆಲ್ಟ್‌ ಪಡೆದುಕೊಂಡಿದ್ದರೆ ನಿನಗೆ ಒಂದಿಷ್ಟು ದುಡ್ಡ ಬರ್ತಿತ್ತು’ (Bro. I feel so bad for you. I wish I was indeed a black belt in Aikido. You would have been a richer man today) ಎಂದು ಒಕ್ಕಣೆ ಬರೆದಿದ್ದಾರೆ.

ತೇಜಸ್ವಿಗೆ ಟ್ವಿಟರ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ. ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳು ಹರಿದುಬರಲು ತಡವಾಗಲಿಲ್ಲ. 1900 ಕಾಮೆಂಟ್, 5500 ರಿಟ್ವೀಟ್, 38,000 ಲೈಕ್‌ಗಳು ಈ ಟ್ವೀಟ್‌ಗೆ ಸಿಕ್ಕಿದೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು