ಸೋಮವಾರ, ಜನವರಿ 24, 2022
20 °C

ಆಸ್ಪತ್ರೆಗೆ ಸೈಕಲ್‌ ಏರಿ ಬಂದು, ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಸಂಸದೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಸಂಸದೆ ಜ್ಯೂಲಿ ಅನ್ನೆ ಜೆಂಟರ್‌ ಭಾನುವಾರ ಹೆರಿಗೆ ಆಸ್ಪತ್ರೆಗೆ ಸೈಕಲ್‌ ಮೂಲಕ ತೆರಳಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಭಾನುವಾರ ನಸುಕಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸೈಕಲ್‌ ಏರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆ ತಲುಪಿದ 1 ಗಂಟೆಯ ಬಳಿಕ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಆರೋಗ್ಯಯುತ ಹೆರಿಗೆ ಮೂಲಕ 2ನೇ ಮಗುವಿಗೆ ಜನ್ಮ ನೀಡಿದ ಸಂಸದೆ ಜ್ಯೂಲಿ 2018ರಲ್ಲಿ ಮೊದಲ ಹೆರಿಗೆ ಸಂದರ್ಭವೂ ಹೀಗೆ ಸೈಕಲ್‌ ಮೂಲಕ ಆಸ್ಪತ್ರೆಗೆ ಬಂದಿದ್ದರು.

ಮಗುವಿಗೆ ಜನ್ಮ ನೀಡಿದ ಬಳಿಕ ಫೇಸ್‌ಬುಕ್‌ನಲ್ಲಿ ಖುಷಿಯ ಸಮಾಚಾರವನ್ನು ಹಂಚಿಕೊಂಡಿದ್ದಾರೆ. 'ಬೆಳಗ್ಗೆ 3.04 ಗಂಟೆಗೆ ಸರಿಯಾಗಿ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಆಹ್ವಾನಿಸಿಕೊಂಡೆವು. ಹೆರಿಗೆ ಆಸ್ಪತ್ರೆಗೆ ಸೈಕಲ್‌ನಲ್ಲಿ ಬರುವ ಬಗ್ಗೆ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಕೊನೆಗೆ ಸೈಕಲ್‌ನಲ್ಲೇ ಆಸ್ಪತ್ರೆಗೆ ಬಂದಿದ್ದಾಯ್ತು.' ಎಂದು ವಿವರಿಸಿದ್ದಾರೆ.

'ಮದ್ಯರಾತ್ರಿ 2ಕ್ಕೆ ಮನೆಯಿಂದ ಹೊರಟಾಗ ಹೆಚ್ಚು ನೋವು ಇರಲಿಲ್ಲ. ಸೈಕಲ್‌ ಏರಿ ಆಸ್ಪತ್ರೆಗೆ ಹೊರಟೆವು(ಪತಿಯ ಜೊತೆ). 10 ನಿಮಿಷದೊಳಗೆ ಆಸ್ಪತ್ರೆ ಸೇರಿದೆವು. ಸುಲಲಿತವಾಗಿ ಹೆರಿಗೆಯಾಯಿತು. ಆರೋಗ್ಯಕರ ಹೆರಿಗೆಗೆ ಸಹಕರಿಸಿದ ಆಸ್ಪತ್ರೆಯ ತಂಡಕ್ಕೆ ಧನ್ಯವಾದ' ಎಂದು ಸಂಸದೆ ಜ್ಯೂಲಿ ತಿಳಿಸಿದ್ದಾರೆ.

ಜ್ಯೂಲಿ ಅವರ ಪೋಸ್ಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು