ಮಂಗಳವಾರ, ಅಕ್ಟೋಬರ್ 4, 2022
27 °C

ವಿಡಿಯೊ: ಹೆಡ್‌ಫೋನ್‌ ಧರಿಸಲು ತಡವರಿಸಿದ ಪಾಕ್‌ ಪ್ರಧಾನಿ, ನಗಾಡಿದ ಪುಟಿನ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಉಜ್ಬೇಕಿಸ್ತಾನ: ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರು ಹೆಡ್‌ಫೋನ್‌ ಧರಿಸಲು ತಡವರಿಸಿದ್ದನ್ನು ನೋಡಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ನಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಉಜ್ಬೇಕಿಸ್ತಾನದ ಸಮರ್‌ಕಂಡ್‌ನಲ್ಲಿ ಶಾಂಘೈ ಕೋ ಆಪರೇಷನ್‌ ಆರ್ಗನೈಜೇಶನ್‌ (ಎಸ್‌ಸಿಒ) ವತಿಯಿಂದ ನಡೆಯುತ್ತಿರುವ 22ನೇ ಪ್ರಾದೇಶಿಕ ಸಮ್ಮೇಳನದಲ್ಲಿ ಗುರುವಾರ ಉಭಯ ನಾಯಕರು ಭಾಗವಹಿಸಿದ್ದ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ.

ಸಭೆಯಲ್ಲಿ ಮಾತನಾಡಲು ಆರಂಭಿಸುತ್ತಿದ್ದಾಗ ಶರೀಫ್‌ ಅವರ ಕಿವಿಯಿಂದ ಹೆಡ್‌ಫೋನ್‌ ಜಾರಿದೆ. ಇದು ಪುಟಿನ್‌ ಅವರಿಗೆ ನಗು ತರಿಸಿದೆ. ನಂತರ ಶರೀಫ್‌ ಅವರು ಹೆಡ್‌ಫೋನ್‌ಅನ್ನು ಕಿವಿಗೆ ಧರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಅಧಿಕಾರಿಗಳ ಸಹಾಯದಿಂದ ಹೆಡ್‌ಫೋನ್‌ ಧರಿಸಿ ಮಾತನಾಡಲು ಆರಂಭಿಸಿದರು.

ಈ ಘಟನೆಯು ಮಾತುಕತೆ ಆರಂಭಗೊಳ್ಳುವುದಕ್ಕೂ ಮೊದಲು ಸಂಭವಿಸಿದ್ದಾಗಿದೆ. ಶರೀಫ್‌ ಅವರು ಹೆಡ್‌ಫೋನ್‌ ಧರಿಸಲಾಗದೆ ತಡವರಿಸುವುದನ್ನು ನೋಡಿ ಪುಟಿನ್‌ ಅವರಿಗೆ ನಗು ತಡೆಯಲಾಗಿಲ್ಲ. ಈ ವಿಚಾರವಾಗಿ ಪುಟಿನ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಈ ಘಟನೆಯು ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದೆ ಎಂದು ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ್ಸ್‌ ನ್ಯಾಷನಲ್‌ ಅಸೆಂಬ್ಲಿಯ ಮಾಜಿ ಉಪ ಸಭಾಪತಿ ಖಾಸಿಮ್‌ ಖಾನ್‌ ಸುರಿ ಅವರು, ಶರೀಫ್‌ ಅವರು ಇತರ ರಾಷ್ಟ್ರಗಳ ನಾಯಕರ ಜೊತೆ ಕುಳಿತಿರುವ ಫೋಟೊವೊಂದನ್ನು ಟ್ವೀಟ್‌ ಮಾಡಿ, ಭಿಕ್ಷುಕ ಇಡ್ಲಿಗಾಗಿ ಕಾದು ಕುಳಿತಂತೆ ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಚಿತ್ರದಲ್ಲಿ ಒಂದು ಬದಿಯ ನಿಯೋಗ ಸಭೆಯ ಕುರಿತಾದ ಪ್ರಮುಖಾಂಶಗಳನ್ನು ಬರೆದುಕೊಳ್ಳುತ್ತಿದ್ದಾರೆ. ಮತ್ತೊಂದು ಬದಿಯಲ್ಲಿ ಕುಳಿತಿರುವ ನಮ್ಮ ರಾಷ್ಟ್ರದ ನಾಯಕರು ಭಿಕ್ಷುಕರು ಇಡ್ಲಿಗಾಗಿ ಕಾದು ಕುಳಿತಂತೆ ಕೂತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪಾಕಿಸ್ತಾನದ ನಿಯೋಗದಲ್ಲಿ ಶರೀಫ್‌ ಅವರ ಜೊತೆಗೆ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಜರ್ದಾರಿ, ವಿತ್ತ ಸಚಿವ ಮಿಫ್‌ತಹ್‌ ಇಸ್ಮೈಲ್‌ ಮತ್ತು ರಕ್ಷಣಾ ಸಚಿವ ಖವಾಜಾ ಆಸಿಫ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು