ಕ್ರೀಡಾಪಟುಗಳಿಗೆ ರಾಜ್ಯವರ್ಧನ್ ಸಿಂಗ್ ಆಹಾರ ಬಡಿಸಿದರೆ? ನಿಜ ಸಂಗತಿ ಏನು?

7

ಕ್ರೀಡಾಪಟುಗಳಿಗೆ ರಾಜ್ಯವರ್ಧನ್ ಸಿಂಗ್ ಆಹಾರ ಬಡಿಸಿದರೆ? ನಿಜ ಸಂಗತಿ ಏನು?

Published:
Updated:

ನವದೆಹಲಿ: 'ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿರುವ ಭಾರತದ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ಆಹಾರ ಬಡಿಸುತ್ತಿದ್ದಾರೆ' ಎಂಬ ಒಕ್ಕಣೆಯೊಂದಿಗೆ ರಾಥೋಡ್ ಅವರ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರದ ಸತ್ಯಾಸತ್ಯತೆ ಏನು ಎಂಬುದನ್ನು ಆಲ್ಟ್ ನ್ಯೂಸ್ ವರದಿ ಮಾಡಿದೆ.

ಮೂರು ತಟ್ಟೆಗಳನ್ನು ಇಟ್ಟಿರುವ ಟ್ರೇ ಒಂದನ್ನು ಹಿಡಿದುಕೊಂಡು ಕ್ರೀಡಾಪಟುಗಳೊಂದಿಗೆ ಮಾತನಾಡುತ್ತಿರುವ ಫೋಟೊ ಅದಾಗಿದ್ದು, ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ಆಹಾರ ಬಡಿಸುತ್ತಿರುವ ಕೇಂದ್ರ ಸಚಿವರು ಎಂಬ ಶೀರ್ಷಿಕೆ ನೀಡಲಾಗಿತ್ತು.
Frustrated Indian ಎಂಬ ಫೇಸ್‍ಬುಕ್ ಪುಟ ಮತ್ತು ಟ್ವಿಟರ್‌ನಲ್ಲಿ ಈ ಫೋಟೊ ಶೇರ್ ಆಗಿದ್ದು, ಟ್ರೇ ಹಿಡಿದಿರುವ ಆ ವ್ಯಕ್ತಿ ನಮ್ಮ ಕ್ರೀಡಾ ಸಚಿವರು (“the dude holding the tray is our sports minister”) ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಪೋಸ್ಟ್  16,000ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದೆ. 5 ವರ್ಷಗಳ ಹಿಂದೆ ಆಗಿರುತ್ತಿದ್ದರೆ  ಸಚಿವರೊಬ್ಬರು ಕ್ರೀಡಾಪಟುಗಳಿಗೆ ಆಹಾರ ಬಡಿಸುತ್ತಿರುವ ಚಿತ್ರವನ್ನು ಊಹಿಸಲು ಅಸಾಧ್ಯವಾಗುತ್ತಿತ್ತು ಎಂದು ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದ್ದು ಇದು 1,500ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ.

ಸುಳ್ಳು ಸುದ್ದಿ ಹರಡುವ ಪೋಸ್ಟ್ ಕಾರ್ಡ್ ನ್ಯೂಸ್ ನ ಸಂಸ್ಥಾಪಕ ಮಹೇಶ್ ಹೆಗ್ಡೆ ಈ ಫೋಟೊ ಟ್ವೀಟಿಸಿದ್ದು, ಇದು 900 ಬಾರಿ ರೀಟ್ವೀಟ್ ಆಗಿದೆ.

ಬಿಜೆಪಿ ತೆಲಂಗಾಣ ರಾಜ್ಯ ಅಧ್ಯಕ್ಷ  ಮತ್ತು ಶಾಸಕ ಡಾ.ಕೆ.ಲಕ್ಷ್ಮಣ್, ಕರ್ನಾಟಕದ ಬಿಜೆಪಿ ಶಾಸಕ ರಘುಪತಿ ಭಟ್ ಮತ್ತು ದೆಹಲಿ ಆಮ್ ಆದ್ಮಿ ಪಕ್ಷದ ಶಾಸಕ ಕಪಿಲ್ ಮಿಶ್ರಾ ಅವರು ಕೂಡಾ ಈ ಫೋಟೊವನ್ನು ಶೇರ್ ಮಾಡಿದ್ದರು.  India First ಫೇಸ್‍ಬುಕ್ ಪುಟದಲ್ಲಿ ಶೇರ್ ಆದ ಈ ಫೋಟೊ 17,000 ಬಾರಿ ಶೇರ್ ಆಗಿತ್ತು.

ಮಾಧ್ಯಮಗಳಲ್ಲಿಯೂ ಅದೇ ಸುದ್ದಿ!

 

ಇಷ್ಟೇ ಅಲ್ಲದೆ ಎನ್‍ಡಿಟಿವಿ, ಡಿಎನ್‍ಎ, ದೈನಿಕ್ ಜಾಗರಣ್, ಇಂಡಿಯಾ ಟಿವಿ, ರಿಪಬ್ಲಿಕ್ ವರ್ಲ್ಡ್ ಮೊದಲಾದ ಸುದ್ದಿ ಮಾಧ್ಯಮಗಳು ಇದನ್ನು ಸುದ್ದಿ ಮಾಡಿದ್ದವು. ರಿಪಬ್ಲಿಕ್ ಟಿವಿಯ ಗೌರವ್ ಆರ್ಯ, ನ್ಯೂಸ್ 18ನ ಪಲ್ಲವಿ ಜೋಷಿ, ಕರ್ನಾಟಕದ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ, ಇಂಡಿಯಾ ಟುಡೇ ಸುದ್ದಿ ಮಾಧ್ಯಮದ ರಾಜ್‍ದೀಪ್ ಸರ್ದೇಸಾಯಿ ಕೂಡಾ ಈ ಚಿತ್ರವನ್ನು ಟ್ವೀಟಿಸಿದ್ದರು. ಆದಾಗ್ಯೂ, ಸರ್ದೇಸಾಯಿ ಆಮೇಲೆ ಟ್ವೀಟ್ ಡಿಲೀಟ್ ಮಾಡಿದ್ದರು.

ನಿಜ ಸಂಗತಿ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಚಿತ್ರವನ್ನು ಆಗಸ್ಟ್ 26ರಂದು ಭಾರತೀಯ ಕ್ರೀಡಾ ಪ್ರಾಧಿಕಾರ  (SAI) ಟ್ವೀಟ್ ಮಾಡಿತ್ತು. ಜಕಾರ್ತದಲ್ಲಿರುವ ಏಷ್ಯನ್ ಗೇಮ್ಸ್ ವಿಲೇಜ್‍ನಲ್ಲಿ ಕ್ರೀಡಾಪಟುಗಳೊಂದಿಗೆ ಕ್ರೀಡಾಸಚಿವರು ಇರುವ ಹಲವಾರು ಫೋಟೊಗಳನ್ನು ಟ್ವೀಟ್ ಮಾಡಲಾಗಿತ್ತು. ಆದರೆ ರಾಥೋಡ್ ಅವರು ಆಹಾರ ಬಡಿಸುತ್ತಿದ್ದಾರೆ ಎಂಬುದಾಗಿ ಎಲ್ಲಿಯೂ ಹೇಳಿರಲಿಲ್ಲ.

ಅಂದ ಹಾಗೆ ತಾನು ಕ್ರೀಡಾಪಟುಗಳಿಗೆ ಆಹಾರ ಬಡಿಸುತ್ತಿದ್ದೆ ಎಂದು ಕ್ರೀಡಾ ಸಚಿವರು ಎಲ್ಲಿಯೂ ಹೇಳಲಿಲ್ಲ. ಕ್ರೀಡಾಪಟುಗಳೊಂದಿಗೆ ವ್ಯವಹರಿಸುತ್ತಿರುವ ಹಲವಾರು ಫೋಟೊಗಳು ಟ್ವೀಟ್‍ನಲ್ಲಿ ಇದ್ದರೂ, ರಾಥೋಡ್ ಟ್ರೇ ಹಿಡಿದರುವ ಫೋಟೊ ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಥೋಡ್ ಅವರು ತಮಗಾಗಿಯೇ ಊಟ ಬಡಿಸಿಕೊಳ್ಳುತ್ತಿರುವ ಚಿತ್ರ ಅದು ಎಂದು ಸ್ಪಷ್ಟವಾಗುತ್ತಿದೆ.

ಸಚಿವರು ಊಟ ತೆಗೆದುಕೊಳ್ಳುತ್ತಿದ್ದ ವೇಳೆ ಅಲ್ಲಿಯೇ ಉಪಸ್ಥಿತರಿದ್ದ ವ್ಯಕ್ತಿಯೊಬ್ಬರನ್ನು ಆಲ್ಟ್ ನ್ಯೂಸ್ ಮಾತನಾಡಿಸಿದ್ದು, ರಾಥೋಡ್  ತಿಂಡಿ, ಚಹಾ ಅಥವಾ ಊಟವನ್ನು ಕ್ರೀಡಾಪಟುಗಳಿಗೆ ಬಡಿಸುತ್ತಿರಲಿಲ್ಲ. ಊಟದ ಕೋಣೆಯಲ್ಲಿ ಅವರು ಕ್ರೀಡಾಪಟುಗಳೊಂದಿಗೆ ಮಾತನಾಡುತ್ತಿದ್ದರಷ್ಟೇ ಎಂದಿದ್ದಾರೆ.

ಎಬಿಪಿ ನ್ಯೂಸ್ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ವೈರಲ್ ಸಚ್ ಕಾರ್ಯಕ್ರಮದಲ್ಲಿ ಈ ಚಿತ್ರ ಆಗಸ್ಟ್ 27ರಂದು ತೆಗೆದ ಚಿತ್ರ ಎಂಬುದನ್ನು ಸಾಬೀತು ಮಾಡಲಾಗಿತ್ತು. ಅದಲ್ಲದೆ ರಾಥೋಡ್ ಅವರು ಕ್ರೀಡಾಪಟುಗಳಿಗೆ ಆಹಾರ ಬಡಿಸುತ್ತಿರಲಿಲ್ಲ, ಅವರು ಕ್ರೀಡಾಪಟುಗಳ ಜತೆ ಮಾತನಾಡುತ್ತಿದ್ದರು ಎಂದು ಕಾರ್ಯಕ್ರಮದಲ್ಲಿ ಹೇಳಲಾಗಿದೆ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ  ತಪ್ಪು ಮಾಹಿತಿಯೊಂದು ಯಾವ ರೀತಿ ಹರಡುತ್ತದೆ ಎಂಬುದಕ್ಕೆ ಈ ಫೋಟೊ ಶೀರ್ಷಿಕೆ ಒಂದು ಉದಾಹರಣೆಯಾಗಿದೆ.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 3

  Sad
 • 1

  Frustrated
 • 7

  Angry

Comments:

0 comments

Write the first review for this !