ಮಂಗಳವಾರ, ಜನವರಿ 25, 2022
24 °C

ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Instagram/@anwar

ವಿಮಾನ ನಿಲ್ದಾಣಕ್ಕೆ ತಾಯಿಯನ್ನು ಸ್ವಾಗತಿಸಲು ಹೂಗುಚ್ಛ ಮತ್ತು ಸ್ವಾಗತ ಫಲಕದೊಂದಿಗೆ ಆಗಮಿಸಿದ್ದಾಗ ನಡೆದ ಘಟನೆ ಸಾಮಾಜಿಕ ತಾಣಗಳಲ್ಲಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಮಗನನ್ನು ನೋಡಿದ್ದೇ ತಾಯಿ ತೋರಿಸಿದ 'ಹೆಚ್ಚುವರಿ ಪ್ರೀತಿ'ಗೆ ಬಿದ್ದುಬಿದ್ದು ನಗುತ್ತಿದ್ದಾರೆ.

ವಿಮಾನ ನಿಲ್ದಾಣದ ಹೊರಗೆ 'ವಿ ಮಿಸ್ಡ್‌ ಯು' ಎಂದು ಬರೆದ ಫಲಕದೊಂದಿಗೆ, ಹೂಗುಚ್ಛವನ್ನು ತಂದಿದ್ದ ಯುವಕ ನಗುತ್ತ ತಾಯಿಯನ್ನು ಬರಮಾಡಿಕೊಳ್ಳಲು ಬಂದಾಗ ಅನಿರೀಕ್ಷಿತ ಘಟನೆ ಎದುರಾಗಿದೆ. ಮಗನನ್ನು ನೋಡಿದ್ದೇ ತಾಯಿ ಚಪ್ಪಲಿಯನ್ನು ಬಿಚ್ಚಿಕೊಂಡು ಮನಬಂದಂತೆ ಥಳಿಸಿದ್ದಾರೆ. ದೂರ ಸರಿಯಲು ಯತ್ನಿಸಿದ ಮಗನತ್ತ ಚಪ್ಪಲಿಯನ್ನು ಒಗೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ಯಾಲೆಸ್ತೀನ್‌-ಪಾಕಿಸ್ತಾನ ಮೂಲದ ಪ್ರಸಿದ್ಧ ಕಲಾವಿದ ಅನ್ವರ್‌ ಜಿಬಾವಿ ಅವರು ಇನ್‌ಸ್ಟಾಗ್ರಾಂನಲ್ಲಿ ನವೆಂಬರ್‌ 22ಕ್ಕೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. 'ನನ್ನ ಅಮ್ಮ ವಾಪಸ್‌ ಬಂದಿದ್ದಾರೆ!' ಎಂದು ಪೋಸ್ಟ್‌ನಲ್ಲಿ ಬರೆದಿರುವ ಅನ್ವರ್‌ ಹೃದಯದ ಎಮೋಜಿಯನ್ನು ಶೇರ್‌ ಮಾಡಿದ್ದಾರೆ.

ಅನ್ವರ್‌ ಅವರ ಪೋಸ್ಟ್‌ಗೆ 60 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸುಮಾರು 68 ಸಾವಿರ ಮಂದಿ ಕಾಮೆಂಟ್‌ ಮಾಡಿದ್ದಾರೆ. 'ಇದೇ ನಿಜವಾದ ಅಮ್ಮನ ಪ್ರೀತಿ' ಎಂದು ಸಾಕಷ್ಟು ಮಂದಿ ಕಾಲೆಳೆದಿದ್ದಾರೆ. 'ದಕ್ಷಿಣ ಏಷ್ಯಾದ ತಾಯಂದಿರಿಗೆ ಸೂಕ್ತ ಉದಾಹರಣೆ' ಎಂದು ಮನಸೋಇಚ್ಛೆ ನಗುತ್ತಿದ್ದಾರೆ. 'ಈ ವಿಡಿಯೊವನ್ನು ಎಷ್ಟು ಬಾರಿ ನೋಡಿದರೂ, ಎಷ್ಟು ಬಾರಿ ನಕ್ಕರೂ ಸಾಕಾಗುವುದಿಲ್ಲ' ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಮಗನನ್ನು ಹೊಡೆಯುತ್ತಿರುವ ಭಂಗಿಯನ್ನು ನೋಡಿದರೆ ಆಕೆಗೆ ಮಗನ ಮೇಲಿನ ಪ್ರೀತಿಯ ಅಗಾಧತೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಕೆಲವು ದಿನಗಳ ಕಾಲ ಮಗನನ್ನು ನೋಡದೆ ಆಕೆ ಅದೆಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದರು ಎಂಬುದು ಅರಿವಾಗುತ್ತದೆ ಎಂದು ಕೆಲವು ನೆಟ್ಟಿಗರು ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು