ಪ್ರಪಂಚದಲ್ಲಿಯೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೂರವಾಣಿ ಮಾರುಕಟ್ಟೆ ಭಾರತ. ಪ್ರಸಕ್ತ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ದೇಶದಲ್ಲಿ ಒಟ್ಟು 5.02 ಕೋಟಿ ಮೊಬೈಲ್ ಹ್ಯಾಂಡ್ಸೆಟ್ ಮಾರಾಟವಾಗಿವೆ ಎಂದು ಸೈಬರ್ ಮೀಡಿಯ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
2011ರ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಹ್ಯಾಂಡ್ಸೆಟ್ ಮಾರಾಟ ಶೇ 9.1ರಷ್ಟು ಪ್ರಗತಿ ಕಂಡಿದೆ. ಈ ಬಾರಿಯೂ ಶೇ 23ರಷ್ಟು ಮಾರುಕಟ್ಟೆ ಪಾಲಿನೊಂದಿಗೆ `ನೋಕಿಯಾ~ ಮುಂಚೂಣಿಯಲ್ಲಿದೆ. ಶೇ 14 ಮತ್ತು ಶೇ 5.8ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಸ್ಯಾಮ್ಸಂಗ್ ಮತ್ತು ಮೈಕ್ರೊಮ್ಯಾಕ್ಸ್ ನಂತರದ ಸ್ಥಾನಗಳಲ್ಲಿವೆ.
ಜನವರಿ-ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಸ್ಮಾರ್ಟ್ಫೋನ್ಗಳೇ 27 ಲಕ್ಷದಷ್ಟು ಮಾರಾಟವಾಗಿವೆ. ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 40.04ರಷ್ಟು ಸಿಂಹಪಾಲನ್ನು ಸ್ಯಾಮ್ಸಂಗ್ ಪಡೆದುಕೊಂಡಿದೆ. ಶೇ 25.5ರಷ್ಟು ಪಾಲು ಹೊಂದಿರುವ ನೋಕಿಯಾ ಮತ್ತು ಶೇ 12.3ರಷ್ಟು ಪಾಲಿನೊಂದಿಗೆ `ರಿಸರ್ಚ್ ಇನ್ ಮೂಷನ್~(ಆರ್ಐಎಂ) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
2012ರ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ರೂ 7,500ರಿಂದ ರೂ 27000 ನಡುವಿನ ದರ ಶ್ರೇಣಿಯ 7 ಹೊಸ ಹ್ಯಾಂಡ್ಸೆಟ್ಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ ಸ್ಮಾರ್ಟ್ಫೋನ್ಗಳ ಮಾರಾಟ ಈ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ. ಜತೆಗೆ `ಡ್ಯುಯಲ್ ಸಿಮ್~ ಮೊಬೈಲ್ಗಳ ಬೇಡಿಕೆಯೂ ಹೆಚ್ಚಳವಾಗಿದೆ. `ಡ್ಯುಯಲ್ ಸಿಮ್~ ಹ್ಯಾಂಡ್ಸೆಟ್ಗಳು ಶೇ 67.7ರಷ್ಟು ರಫ್ತಾಗಿರುವುದು ವಿಶೇಷ.
2012ರ ಮೊದಲ ತ್ರೈಮಾಸಿಕದಲ್ಲಿ ಮೂರನೆಯ ತಲೆಮಾರಿನ ತರಂಗಾಂತರ ಸೌಲಭ್ಯ (3ಜಿ) ಹೊಂದಿರುವ 47 ಲಕ್ಷ ಹ್ಯಾಂಡ್ಸೆಟ್ ರಫ್ತು ಮಾಡಲಾಗಿದೆ ಎಂದು ಈ ಅಧ್ಯಯನ ಹೇಳಿದೆ.
ಪ್ರಪಂಚದಲ್ಲಿಯೇ ಅತಿ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿರುವ ಎರಡನೇ ದೇಶ ಭಾರತ. ಸದ್ಯ ದೇಶದಲ್ಲಿ 91.90 ಕೋಟಿ ಮೊಬೈಲ್ಫೋನ್ ಚಂದಾದಾರರಿದ್ದಾರೆ. 75ಕ್ಕೂ ಹೆಚ್ಚು ಹ್ಯಾಂಡ್ಸೆಟ್ ತಯಾರಿಕಾ ಕಂಪೆನಿಗಳಿವೆ.