ಶುಕ್ರವಾರ, ಸೆಪ್ಟೆಂಬರ್ 17, 2021
23 °C

221 ರಸ್ತೆ ಗುಂಡಿ ಮುಚ್ಚಿಸಿದ ಪೊಲೀಸರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಮಳೆರಾಯನ ಅಬ್ಬರ ಶುರುವಾಗಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಂಚಾರ ಪೊಲೀಸರು, ವಾಹನಗಳ ಓಡಾಟಕ್ಕೆ ತೊಂದರೆ ಆಗದಂತೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಾರದಲ್ಲಿ 44 ಠಾಣೆಗಳ ವ್ಯಾಪ್ತಿಯ 221 ರಸ್ತೆಗುಂಡಿಗಳನ್ನು ಕಾರ್ಮಿಕರ ಮೂಲಕ ಸಮತಟ್ಟು ಮಾಡಿಸಿರುವ ಪೊಲೀಸರು, ಗುಂಡಿ ಮುಚ್ಚುವ ವಿಷಯದಲ್ಲಿ ಬಿಬಿಎಂಪಿಯ ನಿರ್ಲಕ್ಷ್ಯಕ್ಕೂ ಚಾಟಿ ಬೀಸಿದ್ದಾರೆ.

‘ಮಳೆ ಬಂದಾಗಲೆಲ್ಲ ನಗರದ ರಸ್ತೆಗಳು ಹೊಳೆಯಂತಾಗುತ್ತವೆ. ಆಗ ಹೆಚ್ಚು ಸಮಸ್ಯೆ ಎದುರಿಸುವವರು ಸಂಚಾರ ಪೊಲೀಸರು. ಅದರಲ್ಲೂ ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾದರೆ, ಸಂಚಾರ ನಿರ್ವಹಣೆ ವಿಪರೀತ ಕಷ್ಟವಾಗುತ್ತದೆ. ಹೀಗಾಗಿ, ಸಮಸ್ಯೆಯನ್ನು ಪರಿಹರಿಸಲು ಬಿಬಿಎಂಪಿ ಮೇಲೆ ಅವಲಂಬಿತವಾಗದೆ, ನಾವೇ ಕಾರ್ಯೋನ್ಮುಖರಾಗಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ (ಸಂಚಾರ) ಸೌಮ್ಯಲತಾ ತಿಳಿಸಿದರು.

ಸಿಗದ ಸ್ಪಂದನೆ: ‘ಸಾಮಾನ್ಯವಾಗಿ ಯಾವ ಯಾವ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ ಹಾಗೂ ಎಲ್ಲೆಲ್ಲಿ ಹೆಚ್ಚು ಗುಂಡಿಗಳಿವೆ ಎಂಬ ಬಗ್ಗೆ ಅಧ್ಯಯನ ನಡೆಸಿ ಬಿಬಿಎಂಪಿಗೆ ವರದಿ ಕೊಟ್ಟಿದ್ದೆವು. ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನವೇ ಆ ಗುಂಡಿಗಳನ್ನು ಮುಚ್ಚುವಂತೆ ಮನವಿಯನ್ನೂ ಮಾಡಿದ್ದೆವು. ಅದರೆ, ಪಾಲಿಕೆಯಿಂದ ಪೂರ್ಣ ಪ್ರಮಾಣದ ಸ್ಪಂದನೆ ಸಿಗಲಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಹೆಚ್ಚು ನೀರು ನಿಲ್ಲುವ 41 ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಮುಚ್ಚಿಸುವ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದೆವು. ಸಿಮೆಂಟ್, ಮರಳು ಹಾಗೂ ಮಣ್ಣನ್ನು ಅವರೇ ಹೊಂದಿಸಿ ಸಮತಟ್ಟು ಮಾಡಿಸಿದ್ದಾರೆ. ಕೆಲವು ಕಡೆ ಮಾತ್ರ ಬಿಬಿಎಂಪಿ ಕಾರ್ಮಿಕರೂ ಕೈ ಜೋಡಿಸಿದ್ದಾರೆ.’

‘ಕುಮಾರಸ್ವಾಮಿ ಲೇಔಟ್‌ನಲ್ಲಿ 21, ಹೆಬ್ಬಾಳದಲ್ಲಿ 16, ಹಲಸೂರಿನಲ್ಲಿ 12, ಜೆ.ಪಿ.ನಗರದಲ್ಲಿ 12, ರಾಜಾಜಿನಗರದಲ್ಲಿ 11, ಪುಲಕೇಶಿನಗರ, ಸಿಟಿ ಮಾರುಕಟ್ಟೆ, ಹಲಸೂರು ಗೇಟ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 8 ಸೇರಿದಂತೆ ಈವರೆಗೆ 221 ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು