ಗುರುವಾರ , ಏಪ್ರಿಲ್ 15, 2021
21 °C
ನಿಯಂತ್ರಣದ ಹಟ ಬೇಡ; ಕ್ರಾಂತಿಕಾರಕ ಬದಲಾವಣೆ ತರುವ ದೂರದರ್ಶಿತ್ವ ಬೇಕಿದೆ

ವಿಶ್ವವಿದ್ಯಾಲಯಗಳ ಕೂಪಮಂಡೂಕ ಜಗತ್ತು

ಡಾ. ಎನ್.ಕೆ.ಪದ್ಮನಾಭ Updated:

ಅಕ್ಷರ ಗಾತ್ರ : | |

ವಿಶ್ವವಿದ್ಯಾಲಯಗಳ ಮೇಲೆ ಹಿಡಿತ ಸಾಧಿಸುವ ರಾಜಕೀಯ ನಡೆ, ನಮ್ಮ ಅಧಿಕಾರಸ್ಥರ ದೂರದೃಷ್ಟಿ ಕೊರತೆಯ ಸಂಕುಚಿತ ದೃಷ್ಟಿಕೋನಕ್ಕೆ ಕನ್ನಡಿ ಹಿಡಿಯು ತ್ತದೆ. ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವವರು ಆಧಿಪತ್ಯ ಸ್ಥಾಪಿಸುವ ಭರದಲ್ಲಿ ಶೈಕ್ಷಣಿಕ ಚಲನಶೀಲತೆಯಸಾಧ್ಯತೆಗಳನ್ನು ಉದ್ದೇಶಪೂರ್ವಕವಾಗಿ ಮೊಟಕುಗೊಳಿಸುತ್ತಿದ್ದಾರೆ.

ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಮಾಧ್ಯಮ ದವರ ಎದುರು ಮಾತನಾಡಬಾರದು ಎಂದು ಕುಲಪತಿಗಳನ್ನು ನಿರ್ಬಂಧಿಸುವ ಉನ್ನತ ಶಿಕ್ಷಣ ಇಲಾಖೆಯ ಇತ್ತೀಚೆಗಿನ ಸುತ್ತೋಲೆಯು ಅಧಿಕಾರದಲ್ಲಿ ಇರುವವರ ಮನಃಸ್ಥಿತಿಯ ಒಂದು ಉದಾಹರಣೆ. ಶೈಕ್ಷಣಿಕ ವಲಯವನ್ನು ರಾಜಕೀಯ ಅಖಾಡದ ಆಚೆಗಿಟ್ಟು, ಯುವಪೀಳಿಗೆಯ ಭವಿಷ್ಯಕ್ಕೆ ಪ್ರಯೋಜನವಾಗುವಂತಹ ಯೋಜನೆ ರೂಪಿಸಬೇಕಾದವರೇ ನಿಯಂತ್ರಣ ಸಾಧಿಸುವ ಉತ್ಸಾಹದಲ್ಲಿ ಇರುವುದು ವಿಷಾದನೀಯ. ತಮ್ಮಿಂದಲೇ ನೇಮಕವಾದ ಕುಲಪತಿಗಳು, ಕುಲಸಚಿವರು ಮತ್ತು ಇತರ ಉನ್ನತ ಹುದ್ದೆಗಳಲ್ಲಿ ಇರುವವರು ತಮ್ಮ ಆಣತಿಗೆ ಅನುಗುಣವಾಗಿಯೇ ನಡೆದುಕೊಳ್ಳಬೇಕು ಎಂಬ ಯಜಮಾನಿಕೆ ಧೋರಣೆಯು ವಿಶ್ವವಿದ್ಯಾಲಯಗಳ ಆವರಣವನ್ನು ಕಲುಷಿತಗೊಳಿಸುತ್ತಲೇ ಇದೆ.

ಈ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯಗಳು ವಿವಿಧ ಹಗರಣ, ವಿಚಿತ್ರ ಪ್ರಕರಣ ಮತ್ತು ಅಸಂಗತ ವಿವಾದಗಳ ಕೇಂದ್ರಗಳಾಗಿವೆ. ಜಾತಿ ಸಂಘರ್ಷದ ನೆಲೆಗಳಾಗಿವೆ. ಅಧಿಕಾರದಲ್ಲಿರುವ ಪಕ್ಷ ಮತ್ತು ಆ ಪಕ್ಷದ ಮುಂದಾಳುಗಳ ಪ್ರಭಾವ, ಆಡಳಿತದ ವಿವಿಧ ಹುದ್ದೆಗಳ ನೇಮಕಾತಿಯ ವೇಳೆ ನಿರ್ಣಾಯಕ ಎನ್ನಿಸುತ್ತಿವೆ. ರಾಜಕೀಯ ಪ್ರೇರಿತ ನೆರವಿನೊಂದಿಗೆ ಹುದ್ದೆ ಅಲಂಕರಿಸುವವರು, ರಾಜಕೀಯ ವಿಷವರ್ತುಲದ ಅಪಸವ್ಯಗಳ ನಡುವೆಯೇ ಆಡಳಿತ ನಡೆಸಬೇಕಾದ ಅನಿವಾರ್ಯಕ್ಕೆ ಒಳಗಾಗಿದ್ದಾರೆ. ಅಂಥ ಕುಲಪತಿಗಳು, ಕುಲಸಚಿವರು ನಿಜದ ಶೈಕ್ಷಣಿಕ ನಾಯಕತ್ವ ನಿರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ವಿಶ್ವವಿದ್ಯಾಲಯಗಳ ರಚನಾತ್ಮಕ ಬೆಳವಣಿಗೆಯ ಬದಲು ಇಡೀ ಆಡಳಿತವನ್ನು ಯಥಾಸ್ಥಿತಿಯ ಕೂಪಕ್ಕೆ  ತಳ್ಳುತ್ತಿದ್ದಾರೆ. ಸರ್ಕಾರದ ಕೃಪಾಪೋಷಣೆಯ ಹಂಗಿನಲ್ಲೇ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ.

ಬಹುತೇಕ ಬೋಧಕರು ಶೈಕ್ಷಣಿಕ ವಿಧಾನಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲು ಉಮೇದು ತೋರುತ್ತಿಲ್ಲ. ಅಂಥ ವಾತಾವರಣವನ್ನು ಸೃಷ್ಟಿಸುವ ಬದ್ಧತೆ ಕುಲಪತಿಗಳಿಂದ ವ್ಯಕ್ತವಾಗದೇ ಇರುವುದರಿಂದ ವೃತ್ತಿಪರ ಬಿಕ್ಕಟ್ಟುಗಳು ಸೃಷ್ಟಿಯಾಗಿವೆ. ಬೋಧನೆ ಮತ್ತು ಸಂಶೋಧನೆ ಎರಡೂ ತಮ್ಮ ವೃತ್ತಿಬದುಕಿನ ಮಹತ್ವದ ಅಂಶಗಳು ಎಂದು ಮನಗಂಡವರು ಮಾತ್ರ ಇಂಥ ವಿಚಿತ್ರ ವಾತಾವರಣದ ಕುರಿತು ತಲೆಕೆಡಿಸಿಕೊಳ್ಳದೆ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಂಥ ಆಲೋಚನೆ ಇರದವರು ತಾವು ‘ಸ್ಥಗಿತ’ ಆಗುವುದಲ್ಲದೆ ವಿಶ್ವವಿದ್ಯಾಲಯಗಳ ಆಡಳಿತದ ಚುಕ್ಕಾಣಿ ಹಿಡಿದ ನಾಯಕರನ್ನೂ ದಿಕ್ಕು ತಪ್ಪಿಸುತ್ತಾರೆ.

ಈ ಹಿಂದೆ ಕುಲಸಚಿವರ ಹುದ್ದೆಗೆ ಆಡಳಿತಾತ್ಮಕ ಅನುಭವ ಇರುವ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಕುಲಪತಿ ಹುದ್ದೆಗೆ ಮಾತ್ರ ಅನುಭವಿ ಪ್ರಾಧ್ಯಾಪಕರ ನೇಮಕ ವಾಗುತ್ತಿತ್ತು. ಆದರೆ, ಈಗ ಕುಲಸಚಿವರ ಹುದ್ದೆಗಳೂ ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರಿಗೆ ದಕ್ಕುತ್ತಿವೆ. ಈಗ ಈ ಹುದ್ದೆಗಳಿಗೆ ನೇಮಕಗೊಳ್ಳಲು ಅಧಿಕಾರಸ್ಥರಿಗೆ ತೀರಾ ಹತ್ತಿರದವರಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕೋಟಿಗಟ್ಟಲೆ ಹಣ ಸುರಿಯಲು ಸಿದ್ಧರಾಗಿರಬೇಕು. ಅಷ್ಟು ಪ್ರಮಾಣದ ಹಣ ಕೊಟ್ಟು ಬಂದವರು ವಿಶ್ವವಿದ್ಯಾಲಯದ ಮುಖ್ಯಸ್ಥ ಹುದ್ದೆಗಳನ್ನು ಅಲಂಕರಿಸಿದ ಮೇಲೆ ಏನೆಲ್ಲ ಮಾಡಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಅವರ ನಡೆ, ಉನ್ನತ ಶಿಕ್ಷಣದ ಸಾಧ್ಯತೆಗಳನ್ನು ವಿಸ್ತರಿಸುವ ಕಡೆ ಇರುವುದಿಲ್ಲ. ಅವು ಮೊಟಕುಗೊಳಿಸುವ ನಿಟ್ಟಿನಲ್ಲಿ ಇರುತ್ತದೆ. ಈ ಬಗೆಯ ಕರ್ತವ್ಯವಿಮುಖ ಧೋರಣೆಯವರಿಂದಾಗಿಯೇ ವಿಶ್ವವಿದ್ಯಾಲಯಗಳು ಸಾಮಾಜಿಕ- ಆರ್ಥಿಕವ್ಯವಸ್ಥೆಯಲ್ಲಿ ಬಹುಮುಖಿ ಪಾತ್ರಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ.

ಹೊಸದಾಗಿ ಕುಲಪತಿಗಳನ್ನು, ಕುಲಸಚಿವರನ್ನು ನೇಮಿಸುವುದು ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕಲ್ಲ. ಹೊಸ ವ್ಯಕ್ತಿತ್ವದಿಂದ ಕ್ಯಾಂಪಸ್‌ನಲ್ಲಿ ಹೊಸ ಚೈತನ್ಯ ಪಸರಿಸಬೇಕು. ಅಗತ್ಯ ಬದಲಾವಣೆಯ ತುಡಿತವು ವಿದ್ಯಾರ್ಥಿಗಳಿಂದ ಹಿಡಿದು ಬೋಧಕ–ಬೋಧಕೇತರ ಸಿಬ್ಬಂದಿಗೆ ಮನವರಿಕೆಯಾಗಬೇಕು. ಅದರಿಂದ ಅವರು ಪ್ರೇರಣೆಗೆ ಒಳಗಾಗಬೇಕು. ಸಕಾಲಿಕ, ಸಾಂದರ್ಭಿಕ, ವಿವೇಚನಾತ್ಮಕ ನಿರ್ಧಾರಗಳನ್ನು ಕೈಗೊಂಡು, ಅವುಗಳಿಗೆ ಸರ್ವಸಮ್ಮತಿಯನ್ನೂ ದಕ್ಕಿಸಿಕೊಂಡು ಮುನ್ನಡೆಯುವ ಪ್ರಬುದ್ಧ ವ್ಯಕ್ತಿತ್ವಗಳು ವಿಶ್ವವಿದ್ಯಾಲಯಗಳ ಆಡಳಿತದ ನೇತೃತ್ವದ ಹೊಣೆ ವಹಿಸಿಕೊಳ್ಳಬೇಕು.

ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕಷ್ಟೇ ವಿಶ್ವವಿದ್ಯಾಲಯಗಳ ಆಡಳಿತದ ನಾಯಕತ್ವ ಸೀಮಿತಗೊಂಡರೆ, ಸ್ಪರ್ಧಾತ್ಮಕ ಜಗತ್ತಿನ ಅಗತ್ಯಗಳಿಗೆ ಅನುಗುಣವಾಗಿ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಮರುರೂಪಿಸಲು ಆಗುವುದಿಲ್ಲ. ಬೋಧನೆ, ಸಂಶೋಧನೆ ಮತ್ತು ಆಡಳಿತಾತ್ಮಕ ಕಾರ್ಯವೈಖರಿಯಲ್ಲಿ ಜಡತ್ವ ಆವರಿಸಿಕೊಳ್ಳುತ್ತದೆ. ಕಾಲದ ಅಗತ್ಯಗಳಿಗೆ ತಕ್ಕಂತಹ ಬದಲಾವಣೆ ತರುವಲ್ಲಿ ವಿಫಲವಾಗುತ್ತದೆ. ಹೊಸ ಪೀಳಿಗೆಯ ಹೊಸ ನಿರೀಕ್ಷೆಗಳಿಗೆ ತಕ್ಕಂತೆ ಸ್ಪಂದಿಸಲಾಗುವುದಿಲ್ಲ. ಈ ಕಾರಣಕ್ಕಾಗಿಯೇ ವಿಶ್ವವಿದ್ಯಾಲಯಗಳು ಕೂಪಮಂಡೂಕ ಸ್ಥಿತಿಗೆ ತಳ್ಳಲ್ಪಟ್ಟು ತಮ್ಮ ವಿಸ್ತೃತ ಸಾಧ್ಯತೆಗಳ ಅಪೂರ್ವ ಅವಕಾಶಗಳನ್ನು ಕಳೆದುಕೊಂಡು ನಿಸ್ತೇಜವಾಗುತ್ತಿವೆ.

ವಿಶ್ವವಿದ್ಯಾಲಯಗಳ ಒಳಗೇ ಸುಪ್ತವಾಗಿರುವ ಜಾತಿ ನೆಲೆಗಟ್ಟಿನ ಸಂಘರ್ಷಕ್ಕೆ ವಿಚಿತ್ರ ಆಯಾಮ ದೊರಕುತ್ತಿದೆ. ಬೋಧಕರು, ಬೋಧಕೇತರ ನೌಕರರ ನಡುವೆ ಜಾತಿ ಆಧಾರಿತ ಶೀತಲಸಮರ ಮುಂದುವರಿಯುತ್ತಿದೆ. ತಮ್ಮ ವರು ಕುಲಪತಿಗಳಾಗಿ, ಕುಲಸಚಿವರಾಗಿ ನೇಮಕವಾಗುತ್ತಿದ್ದಾರೆ ಎಂದಾಕ್ಷಣ ಅವರನ್ನು ಸುತ್ತುವರಿಯುವ ಭಟ್ಟಂಗಿಗಳ ಗುಂಪು, ತಮ್ಮ ಹಿತಾಸಕ್ತಿಗಳಿಗೆ ಬಳಸಿಕೊಳ್ಳ ಲಾರಂಭಿಸುತ್ತದೆ. ಅಲ್ಲದೆ ಅವರನ್ನು ದಾರಿ ತಪ್ಪಿಸು ವಲ್ಲಿಯೂ ಯಶಸ್ವಿಯಾಗುತ್ತದೆ. ಇಂಥವರ ಒತ್ತಡಗಳಿಗೀಡಾದ ಕುಲಪತಿ, ಕುಲಸಚಿವರ ಅವಧಿ ಪೂರ್ಣಗೊಳ್ಳುವುದನ್ನೇ ಕಾದು ಹಗೆ ಸಾಧಿಸಲು ಹವಣಿಸುವ ವಿರೋಧಿ ಗುಂಪು, ತಮ್ಮವರು ನೇಮಕಗೊಳ್ಳುವುದನ್ನು ಎದುರುನೋಡುತ್ತಿರುತ್ತದೆ. ಅವರು ನೇಮಕಗೊಂಡ ತಕ್ಷಣವೇ ಅವರನ್ನು ಸುತ್ತುವರಿದು, ತಮಗೆ ತೊಂದರೆ ನೀಡಿದ ಹಿಂದಿನ ಬೋಧಕ-ಬೋಧಕೇತರ ಸಿಬ್ಬಂದಿಗೆ ಕಿರುಕುಳ ನೀಡುವ ಕಾರ್ಯಸೂಚಿಯನ್ನು ಕಾರ್ಯಾಚರಣೆಗೆ ತರುವಲ್ಲಿ ಯಶಸ್ಸು ಕಾಣುತ್ತದೆ.

ಕಳೆದ ದಶಕದ ಆರಂಭದಿಂದಲೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಪ್ರಯೋಗಗಳ ನೆಲೆಗಳಾಗುವ ಬದಲು ವಿವಾದದ ಕೇಂದ್ರಗಳಾಗಿ ಬದಲಾಗಿರುವುದು ವಿಷಾದನೀಯ ಸಂಗತಿ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಮರ್ಥ್ಯ ರೂಢಿಸಿ, ಅವರಲ್ಲಿ ಸಕಾರಾತ್ಮಕ ವ್ಯಕ್ತಿತ್ವ
ವನ್ನು ರೂಪಿಸುವುದೇ ವಿಶ್ವವಿದ್ಯಾಲಯಗಳ ನಿಜವಾದ ಕೆಲಸ ಎಂಬುದನ್ನು ನೀತಿ ನಿರೂಪಕರು ಅರಿತುಕೊಳ್ಳಬೇಕಾದ ಅನಿವಾರ್ಯ ಈಗ ಎದುರಾಗಿದೆ. ವಿದ್ಯಾರ್ಥಿಗಳನ್ನು ಸಾಮಾಜಿಕ ಸಂಪನ್ಮೂಲಗಳನ್ನಾಗಿ ಪರಿವರ್ತಿಸುವ ಶಕ್ತಿಯು ಪ್ರಖರವಾಗಿ ಅಡಕಗೊಂಡಿರುವುದು ಇಲ್ಲೇ ಎಂಬುದನ್ನು ಮನಗಾಣಬೇಕಿದೆ. ಅವರಲ್ಲಿ ಉದಾತ್ತ ಚಿಂತನೆಗಳ ತಾರ್ಕಿಕ ಪರಾಮರ್ಶೆಯ ಭಿನ್ನ ಆಲೋಚನಾ ಕ್ರಮಗಳನ್ನು ಅವು ರೂಢಿಸುತ್ತವೆ. ಶೈಕ್ಷಣಿಕ ಕಲಿಕೆಯ ಪ್ರಕ್ರಿಯೆಯನ್ನು ಯಾಂತ್ರಿಕತೆಯ ಚೌಕಟ್ಟುಗಳಾಚೆಗೆ ಕೊಂಡೊಯ್ದು ಬೌದ್ಧಿಕ- ವಿವೇಚನಾತ್ಮಕ ದೃಷ್ಟಿಕೋನಗಳ ಒಡನಾಟವನ್ನು ದಕ್ಕಿಸಿಕೊಡುವ ಜ್ಞಾನಸಂಪನ್ಮೂಲ ವಿಶಾಲ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ಅಂಥ ವಿಶ್ವವಿದ್ಯಾಲಯಗಳು ಮಾತ್ರ ಸಾಮಾಜಿಕ- ಆರ್ಥಿಕ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರ ನಿರ್ವಹಿಸುವುದು ಸಾಧ್ಯವಾಗುತ್ತದೆ. ಆರೋಗ್ಯಕರ ಸಮಾಜ ರೂಪಿಸುವ ಹೊಣೆಗಾರಿಕೆ ನಿರ್ವಹಿಸಲು ಸುಲಭವಾಗುತ್ತದೆ.

ಇದನ್ನು ಅರ್ಥೈಸಿಕೊಂಡು ಮಹತ್ವದ ಹೆಜ್ಜೆಗಳನ್ನು ಇರಿಸುವುದರ ಕಡೆಗೆ ಅಧಿಕಾರಸ್ಥರು, ಉನ್ನತ ಅಧಿಕಾರಿಗಳ ವರ್ಗ ಮತ್ತು ಕುಲಪತಿಗಳು ಆದ್ಯತೆ ನೀಡ ಬೇಕಾಗಿದೆ. ನಿಯಂತ್ರಣದ ಹಟಕ್ಕಿಂತ, ವಿಶ್ವವಿದ್ಯಾಲಯಗಳನ್ನು ನಿಜ ಅರ್ಥದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳಾಗಿ ರೂಪಿಸುವ ಬದ್ಧತೆ ಮತ್ತು ದೂರದರ್ಶಿತ್ವವನ್ನು ಪ್ರದರ್ಶಿಸ ಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು