ಗುರುವಾರ , ಫೆಬ್ರವರಿ 25, 2021
29 °C
ಉತ್ತರ ಕರ್ನಾಟಕಕ್ಕೆ ಅನ್ಯಾಯ: ಮತ್ತೆ ಅಸಮಾಧಾನ ಹೊರಹಾಕಿದ ಎಸ್‌.ಆರ್‌.ಪಾಟೀಲ

ವಿಟಿಯು ವಿಭಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು (ವಿಟಿಯು) ವಿಭಜನೆ ಮಾಡುವ ಪ್ರಸ್ತಾವಕ್ಕೆ ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಸದಸ್ಯರು ಪಕ್ಷಭೇದ ಮರೆತು ವಿರೋಧ ವ್ಯಕ್ತಪಡಿಸಿದರು.

ಶೂನ್ಯ ವೇಳೆಯಲ್ಲಿ ಬುಧವಾರ ಈ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಮಹಾಂತೇಶ ಕವಟಗಿಮಠ, ‘ಸರ್ಕಾರದ ಈ ನಿರ್ಧಾರ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮೇಲೂ ಗಂಭೀರ ಪರಿಣಾಮ ಬೀರಲಿದೆ’ ಎಂದರು.

ಧ್ವನಿ ಗೂಡಿಸಿದ ಕಾಂಗ್ರೆಸ್‌ನ ಎಸ್‌.ಆರ್‌.ಪಾಟೀಲ, ‘ದಕ್ಷಿಣ ಕರ್ನಾಟಕದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ಉತ್ತರ ಕರ್ನಾಟಕದಲ್ಲಿ ವಿಟಿಯು ಇದೆ. ಈಗ ವಿಟಿಯುವನ್ನು ವಿಭಜನೆ ಮಾಡುವ ನಿರ್ಧಾರ ಆ ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಲಿದೆ’ ಎಂದು ಎಚ್ಚರಿಸಿದರು.

‘ಸರ್ಕಾರದ ಪ್ರಮುಖಸಚಿವ ಸ್ಥಾನಗಳು ದಕ್ಷಿಣ ಕರ್ನಾಟಕದವರ ಕೈಯಲ್ಲೇ ಇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಲಸಂಪನ್ಮೂಲ, ಬೃಹತ್‌ ಕೈಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ, ವಸತಿ, ಕೃಷಿ, ನಗರಾಭಿವೃದ್ಧಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಮುಂತಾದ ಸಚಿವರೆಲ್ಲರೂ ದಕ್ಷಿಣ ಭಾಗದವರು. ಈ  ಕುರಿತೂ ಅಸಮಾಧಾನ ಇದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಭಾಗದ ವಿಶ್ವವಿದ್ಯಾಲಯವನ್ನೂ ಒಡೆಯುವ ಪ್ರಯತ್ನಕ್ಕೆ ಕೈ ಹಾಕಬಾರದು’ ಎಂದು ಒತ್ತಾಯಿಸಿದರು.

‘ಹೊರಗುತ್ತಿಗೆ ನೌಕರರ ಅಹವಾಲು ಆಲಿಸಿ’

ಸಮಾನ ವೇತನ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲ್ಲೇಖಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಈ ನೌಕರರ ಅಹವಾಲು ಆಲಿಸಬೇಕು. ಅವರಿಗೂ ಸೇವಾಭದ್ರತೆ ಒದಗಿಸಬೇಕು’ ಎಂದು ಮನವಿ ಮಾಡಿದರು.

’ಶಿಕ್ಷಕರಿಗೆ 8 ತಿಂಗಳಿಂದ ವೇತನವಿಲ್ಲ’

ಸರ್ವ ಶಿಕ್ಷಣ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಎಂಟು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಅವರ ಬದುಕು ಅತಂತ್ರವಾಗಿದೆ ಎಂದು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. 

ಅನುದಾನಿತ ಶಾಲಾ ಶಿಕ್ಷಕರಿಗೆ  2018ರ ಡಿಸೆಂಬರ್‌ನಿಂದ ವೇತನ ಪಾವತಿ ಆಗದ ಕುರಿತು ಎಸ್‌.ವಿ.ಸಂಕನೂರ ಗಮನ ಸೆಳೆದರು.

ದೆಹಲಿ ಕನ್ನಡ ಭವನ ಗದ್ದಲ: ಕ್ರಮಕ್ಕೆ ಒತ್ತಾಯ

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ದೆಹಲಿಗೆ ಭೇಟಿ ನೀಡಿದ್ದ ನಿಯೋಗವು ಕನ್ನಡ ಭವನದಲ್ಲಿ ರಾತ್ರಿ ವೇಳೆ ಗದ್ದಲ ನಡೆಸುವ ಮೂಲಕ ರಾಜ್ಯವು ಮುಜುಗರ ಪಡುವಂತೆ ಮಾಡಿದೆ. ಇದಕ್ಕೆ ಕಾರಣರಾದ ವ್ಯಕ್ತಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿಯ ಅರುಣ್‌ ಶಹಾಪುರ ಶೂನ್ಯವೇಳೆಯಲ್ಲಿ ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಕಾವೇರಿ ತಾಲ್ಲೂಕು ರಚನೆ ಮಾಡಬೇಕು ಎಂದು ಬಿಜೆಪಿಯ ಸುನಿಲ್‌ ಸುಬ್ರಮಣಿ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು