ಹರದನಹಳ್ಳಿ: ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌, ಕಸ

ಭಾನುವಾರ, ಮೇ 26, 2019
22 °C
ರಸ್ತೆಯ ಬದಿಯಲ್ಲೇ ಬಹಿರ್ದೆಸೆ; ಜನರಿಗೆ ಅರಿವಿನ ಕೊರತೆ, ಕಸದ ತೊಟ್ಟಿ ನಿರ್ಮಾಣಕ್ಕೆ ಆಗ್ರಹ

ಹರದನಹಳ್ಳಿ: ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌, ಕಸ

Published:
Updated:
Prajavani

ಚಾಮರಾಜನಗರ: ರಸ್ತೆ ಬದಿಯಲ್ಲಿ ಸಂಚರಿಸಿದರೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ, ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಸಂಜೆ ವೇಳೆ ರಸ್ತೆ ಬದಿಯೇ ಬಹಿರ್ದೆಸೆಯ ತಾಣವಾಗುತ್ತದೆ. ಒಂದು ಮಳೆ ಬಿದ್ದರಂತೂ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಸ್ಥಿತಿ.

ಇದು ತಾಲ್ಲೂಕಿನ ಹರದನಹಳ್ಳಿಯಲ್ಲಿ‌ಯ ಸ್ಥಿತಿ. ಕಸ ವಿಲೇವಾರಿ ಸಮರ್ಪಕವಾಗದೇ ಇಡೀ ಊರಿನ ಸೌಂದರ್ಯವೇ ಹಾಳಾಗಿದೆ.

ಗ್ರಾಮದ 2ನೇ ಬಸ್‌ ನಿಲ್ದಾಣದ ಸಮೀಪವಿರುವ 3 ಎಕರೆ ಪ್ರದೇಶದ ಅರ್ಧ ಜಾಗವನ್ನು ಪ್ಲಾಸ್ಟಿಕ್‌, ಇತರ ತ್ಯಾಜ್ಯಗಳೇ ಆವರಿಸಿವೆ. 

ಇಲ್ಲಿ ಸುಮಾರು 660 ಕುಟುಂಬಗಳು ನೆಲೆಸಿವೆ. ಈ 3 ಎಕರೆ ಪ್ರದೇಶ ಸಮಿಪವೇ 30ರಿಂದ 40 ಮನೆಗಳಿರುವ ಹೊಸ ಬಡಾವಣೆಯೂ ಇದೆ. ಇತ್ತೀಚೆಗೆ ಸ್ಥಳೀಯರು ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ.

ಕಸ ವಿಲೇವಾರಿ ಮಾಡುತ್ತಿಲ್ಲ: ‘ಹರದನಹಳ್ಳಿ, ಬಂಡಿಗೆರೆ ವ್ಯಾಪ್ತಿಯ ರಸ್ತೆ ಬದಿ ಕಸ ಹಾಗೂ ಚರಂಡಿಗಳಲ್ಲಿನ ಹೂಳು ತೆಗೆಸಲು ಗ್ರಾಮ ಪಂಚಾಯತಿ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹಿಂದೆ ಮೂರ್ನಾಲ್ಕು ತಿಂಗಳಿಗೊಮ್ಮೆ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಬಂಡಿಗೆರೆಯ ಕಸದ ತೊಟ್ಟಿಗಳಲ್ಲಿ ಹೆಚ್ಚು ಕಸ ತುಂಬುತ್ತವೆ. ತಕ್ಷಣವೇ ಕಸ ವಿಲೇವಾರಿ ಮಾಡಬೇಕು. ಇಲ್ಲವಾದರೆ ಕಸ ತುಂಬಿ ಹೊರ ಚೆಲ್ಲುತ್ತದೆ. ವಾರಕ್ಕೊಮ್ಮೆಯಾದರೂ ಕಸ ವಿಲೇವಾರಿಗೆ ಸ್ಥಳೀಯ ಆಡಳಿತ ಗಮನ ಹರಿಸಬೇಕು’ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಶಿವನಾಯಕ.

ಹಬ್ಬ, ಜಾತ್ರೆಗೆ ಮಾತ್ರ ಸ್ವಚ್ಛತೆ: ‘ಇಲ್ಲಿಗೆ ಸಮೀಪದಲ್ಲೇ ಲಕ್ಷ್ಮಿದೇವಸ್ಥಾನವಿದೆ. ಇಲ್ಲಿ ಪೂಜಾ ಕೈಂಕರ್ಯ, ಜಾತ್ರೆಯ ಸಂದರ್ಭ ಹಾಗೂ ಹಬ್ಬದ ಹಿಂದಿನ ದಿನಗಳಂದು ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಜಾತ್ರೆ ಮುಗಿದ ಮರುದಿನವೇ ಪ್ಲಾಸ್ಟಿಕ್‌ ಕಸ ಮರುಕಳಿಸುತ್ತದೆ. ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತದೆ. ಅಲ್ಲಿಯವರೆಗೂ ಪಂಚಾಯಿತಿಯವರು ಇತ್ತ‌ ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ರಂಗಸ್ವಾಮಿ ನಾಯಕ ‘ಪ್ರಜಾವಾಣಿ’ಗೆ ಹೇಳಿದರು.

ರಸ್ತೆ ಬದಿಯಲ್ಲೇ ಬಹಿರ್ದೆಸೆ: ಚಾಮರಾಜನಗರದಿಂದ ಹರದನಹಳ್ಳಿ ಮಾರ್ಗವಾಗಿ ಗ್ರಾಮದ 2ನೇ ಬಸ್‌ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆಯ ಬದಿ ಸಂಜೆ ವೇಳೆ ಬಹಿರ್ದೆಸೆಯ ತಾಣವಾಗುತ್ತದೆ. ರಸ್ತೆಯ ಉದ್ದಕ್ಕೂ ಜನರು ಬಹಿರ್ದೆಸೆಗೆ ಕುಳಿತಿರುತ್ತಾರೆ.

‘ಇದರಿಂದ ಹರದನಹಳ್ಳಿಯಲ್ಲಿರುವ (ಅಮಚವಾಡಿಗೆ ಹೋಗುವ ರಸ್ತೆ) ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಗಿರಿಜನ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಸುತ್ತಮುತ್ತ ಅನೈರ್ಮಲ್ಯ ಹಾಗೂ ಕೆಟ್ಟ ವಾಸನೆಯೂ ಮೂಗಿಗೆ ರಾಚುತ್ತದೆ. ತ್ವರಿತವಾಗಿ ಶುಚಿತ್ವಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಹಾಸ್ಟೆಲ್‌ ವಿದ್ಯಾರ್ಥಿನಿಯೊಬ್ಬರು ಹೇಳಿದರು.

ಸ್ವಚ್ಛತೆ ನಡೆಯುತ್ತಿದೆ: ‘ಗ್ರಾಮದ ಸುತ್ತಲೂ ಸ್ವಚ್ಛತೆಕಾರ್ಯ ಆರಂಭವಾಗಿದೆ. ಮೇ 14ರಂದು ಲಕ್ಷ್ಮಿದೇವಿ ಕೊಂಡೋತ್ಸವ ಇರುವುದರಿಂದ ಎಂಟು ದಿನಗಳಲ್ಲಿ ಆ ಪ್ರದೇಶವನ್ನು ಸ್ವಚ್ಛಗೊಳಿಸಲಾಗುವುದು. ಗ್ರಾಮದಲ್ಲಿ ಶೇ 90ರಷ್ಟು ಮನೆಗಳಿಗೆ ಶೌಚಾಲಯವಿದೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೂ ಅರಿವಿಲ್ಲದ ಜನರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜು ‘ಪ್ರಜಾವಾಣಿ’ಗೆ ತಿಳಿಸಿದರು.   

ಕಸದ ತೊಟ್ಟಿ ನಿರ್ಮಾಣಕ್ಕೆ ಒತ್ತಾಯ
ಇಲ್ಲೊಂದು ಕಸದ ತೊಟ್ಟಿ ನಿರ್ಮಿಸಿ, ಗ್ರಾಮಸ್ಥರು ಅದಕ್ಕೇ ಕಸ ಹಾಕುವಂತೆ ಸೂಚನೆ ನೀಡಬೇಕು ಎಂದು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಹೇಳಲಾಗಿದೆ. ಆದರೂ ಕಸದ ತೊಟ್ಟಿ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಮಳೆ ಸುರಿದಾಗ, ಗಾಳಿ ಬೀಸಿದಾಗ ಪ್ಲಾಸ್ಟಿಕ್‌ ತ್ಯಾಜ್ಯ ಅಕ್ಕ ಪಕ್ಕದ ಮನೆಗಳಿಗೆ ಹಾಗೂ ರಸ್ತೆಗೆ ಬಂದು ಸೇರುತ್ತದೆ. ಇದರಿಂದ ಮನೆಯ ಮುಂದಿನ ಕಸ ವಿಲೆವಾರಿಯೇ ತಲೆನೋವಾಗುತ್ತದೆ. ರಸ್ತೆಯಲ್ಲಿ ನಡೆದು ಹೋಗಲು ತೊಂದರೆಯಾಗುತ್ತದೆ. ಶೀಘ್ರವೇ, ಸ್ಥಳೀಯ ಆಡಳಿತ ಕನಿಷ್ಠ ಎರಡು ಕಸದ ತೊಟ್ಟಿ ನಿರ್ಮಿಸಿ ಪ್ರತಿ 15 ದಿನಗಳಿಗೊಮ್ಮೆ ಕಸ ವಿಲೇವಾರಿಗೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಜಾನುವಾರು, ಸಾಕುಪ್ರಾಣಿಗಳಿಗೆ ಕಂಟಕ: ಈ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಕಸವೇ ಹೆಚ್ಚಿರುವುದರಿಂದ ಪ್ರತಿನಿತ್ಯ ಜಾನುವಾರು, ಕುರಿ, ಮೇಕೆಯಂತಹ ಸಾಕುಪ್ರಾಣಿಗಳು ಮೇಯಲು ಬರುತ್ತವೆ. ಪ್ಲಾಸ್ಟಿಕ್‌ ಸೇವಿಸಿ ಅವುಗಳ ಪ್ರಾಣಕ್ಕೆ ಕುತ್ತು ಬರುವಂತಹ ಸಂದರ್ಭಗಳೂ ಇವೆ. ಆದ್ದರಿಂದ ಈಗಲಾದರೂ ಗ್ರಾಮ ಪಂಚಾಯಿತಿ ಕಸದ ತೊಟ್ಟಿ ನಿರ್ಮಿಸಲು ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !