ಎವರೆಸ್ಟ್‌ ಏರಿದರೆ ಸಿಇಟಿ ಸೀಟು!

7
ಈ ವರ್ಷದಿಂದ ಎನ್‌ಸಿಸಿ ಮೀಸಲು ಕಾನೂನು ತಿದ್ದುಪಡಿ

ಎವರೆಸ್ಟ್‌ ಏರಿದರೆ ಸಿಇಟಿ ಸೀಟು!

Published:
Updated:
Prajavani

ಬೆಂಗಳೂರು: ‘ಮೌಂಟ್‌ ಎವರೆಸ್ಟ್‌’ ಏರಿ ಸಾಹಸ ಮೆರೆಯುವ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಸೀಟು ಖಚಿತ!

ಸಿಇಟಿ ಸೀಟು ಗಿಟ್ಟಿಸಲೆಂದು ಸುಖಾಸುಮ್ಮನೆ ಮೌಂಟ್‌ ಎವರೆಸ್ಟ್‌ ಹತ್ತಿದರೆ ಈ ಭಾಗ್ಯ ಸಿಗುವುದಿಲ್ಲ.  ಎನ್‌ಸಿಸಿ ನಿರ್ದೇಶನಾಲಯ ಏರ್ಪಡಿಸುವ ಚಾರಣದಲ್ಲಿ ಭಾಗವಹಿಸುವ ಎನ್‌ಸಿಸಿ ಕೆಡೆಟ್‌ಗಳಿಗೆ ಮಾತ್ರ ಈ ಅವಕಾಶ. ಇದಕ್ಕಾಗಿ ‘ವೃತ್ತಿ ಶಿಕ್ಷಣ ಸಂಸ್ಥೆಗಳ ನಿಯಮ’ಗಳಿಗೆ ತಿದ್ದುಪಡಿ ತರಲಾಗಿದೆ.

‘ಅತಿ ಸಣ್ಣ ಪ್ರಾಯದಲ್ಲೇ ಅದ್ವಿತೀಯ ಸಾಧನೆ ಮಾಡುವವರಿಗೆ ಮೀಸಲಾತಿ ನೀಡಬೇಕು ಎಂಬ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಇದು ಎನ್‌ಸಿಸಿ ಕೋಟಾದಡಿ ಎಂಜಿನಿಯರಿಂಗ್‌ ಸೇರಿದಂತೆ ಎಲ್ಲ ರೀತಿಯ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೂ ಅನ್ವಯ ಆಗುತ್ತದೆ. ಮೌಂಟ್‌ ಎವರೆಸ್ಟ್‌ ಚಾರಣಿಗರಲ್ಲದೆ, ಇನ್ನು ಹಲವು ವಿಭಾಗಗಳಲ್ಲಿ ಸಾಧನೆ ತೋರಿದವರಿಗೂ ಎನ್‌ಸಿಸಿ ಕೋಟಾದಲ್ಲಿ ಮೀಸಲಾತಿ ಸಿಗಲಿದೆ.

ಎನ್‌ಸಿಸಿ ನಿರ್ದೇಶನಾಲಯ ನಡೆಸುವ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆ ಅಥವಾ ಇತರ ಯಾವುದೇ ಅಖಿಲ ಭಾರತ ಮಟ್ಟದ ಶೂಟಿಂಗ್‌ ಸ್ಪರ್ಧೆ, ಎನ್‌ಸಿಸಿಯ ಕರ್ನಾಟಕ ಮತ್ತು ಗೋವಾ ತಂಡದ ಮೂಲಕ ನ್ಯಾಷನಲ್‌ ಗೇಮ್ಸ್‌ನಲ್ಲಿ ಭಾಗ
ವಹಿಸಿದರೆ, ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳು, ಕೋಸ್ಟ್‌ ಗಾರ್ಡ್‌ ಕವಾಯತಿನಲ್ಲಿ ಭಾಗವಹಿಸಿದರೆ ಮತ್ತು ಮೌಂಟ್‌ ಎವರೆಸ್ಟ್‌ ಅಲ್ಲದೆ, 5,500 ಮೀಟರ್‌ ಎತ್ತರದ ಪರ್ವತಗಳ ಚಾರಣ ಮಾಡಿದವರಿಗೂ ಮೀಸಲಾತಿ ಇದೆ.

ಗಣ ರಾಜ್ಯೋತ್ಸವ ಕ್ಯಾಂಪ್‌ಗೆ ತಯಾರಿ ನಡೆಸುವ ಲಾಂಚ್‌ ಕ್ಯಾಂಪ್‌, ಥಾಲ್‌ ಸೈನಿಕ್‌ ಕ್ಯಾಂಪ್‌, ನೌ ಸೈನಿಕ್‌ ಕ್ಯಾಂಪ್‌ ಅಥವಾ ವಾಯು ಸೈನಿಕ್‌ ಕ್ಯಾಂಪ್‌ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಿತ ಕ್ಯಾಂಪ್‌ಗಳಲ್ಲಿ ಭಾಗವಹಿಸಿದವರು,IMA/OTA, ಏರ್‌ಫೋರ್ಸ್‌ ಸ್ಟೇಷನ್‌, ನೌಕಾ ಅಕಾಡೆಮಿ, ಭಾರತೀಯ ನೌಕಾ ಪಡೆ ಅಥವಾ ಕೋಸ್ಟ್‌ ಗಾರ್ಡ್‌ ನೌಕೆ, ಪ್ಯಾರಾ ಬೇಸಿಕ್‌, ಎಸ್‌ಎಸ್‌ಬಿ ಸ್ಕ್ರೀನಿಂಗ್‌ ಮತ್ತು ಎನ್‌ಸಿಸಿ ನಿರ್ದೇಶನಾಲಯ ನಡೆಸುವ ಯಾವುದೇ ಸಾಹಸ ಕ್ಯಾಂಪ್‌ಗಳಲ್ಲಿ ಭಾಗವಹಿಸಿದವರಿಗೆ ಸಿಇಟಿ ಸೀಟು ಹಂಚಿಕೆಯಲ್ಲಿ ಮೀಸಲಾತಿ ಸಿಗುತ್ತದೆ.

 ‘ಬಿ’ ಸರ್ಟಿಫಿಕೇಟ್‌ ಇದ್ದವರಿಗೂ ಸೀಟ್‌: ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿ ವೈಯಕ್ತಿಕವಾಗಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆಲ್ಲುವ ‘ಬಿ’ ಸರ್ಟಿಫಿಕೇಟ್‌ ಹೊಂದಿದ ಅಭ್ಯರ್ಥಿಗಳಿಗೆ ಸೀಟುಗಳಲ್ಲಿ ಮೀಸಲಾತಿ ಸಿಗಲಿದೆ. 

ಅಲ್ಲದೆ, ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದರೆ ಅಥವಾ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ತಂಡ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಗೆದ್ದರೂ ಸೀಟು ಖಚಿತ. ‘ಬಿ’ ಸರ್ಟಿಫಿಕೇಟ್‌ ಜತೆಗೆ ಅಖಿಲ ಭಾರತ ಮಟ್ಟದ ಬೆಸ್ಟ್‌ ಕೆಡೆಟ್‌ ಎಂದು ಚಿನ್ನ ಅಥವಾ ಬೆಳ್ಳಿ ಅಥವಾ ಕಂಚು ಗೆದ್ದರೆ, ಭೂ, ವಾಯು ಮತ್ತು ನೌಕಾ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ಪದಕ ಪಡೆದರೆ ಮೀಸಲಾತಿ ಇದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !