ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಯೇ! ಮುಂದೇನು?

Last Updated 22 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನಿವೃತ್ತಿಯ ದಿನಗಳು ಹತ್ತಿರವಾಗುತ್ತಿದ್ದಂತೆ ಕೆಲವರಿಗೆ ಯೋಚನೆಗಳು ಹೆಚ್ಚುತ್ತಾ ಹೋಗುತ್ತವೆ. ಮುಂದಿನ ದಿನಗಳ ಬಗ್ಗೆ ಆತಂಕಕ್ಕೆ ಒಳಗಾಗುವುದು ಹಾಗೂ ಮಾನಸಿಕವಾಗಿ ಕುಗ್ಗುತ್ತಾ ಹೋಗುವುದು ಸಹಜ. ಆದರೆ ಮುಂದಿನ ಬದುಕನ್ನು ಹೇಗೆ ಲವಲವಿಕೆಯಿಂದ ಕಳೆಯಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್‌.

ಸರ್ಕಾರಿ ನೌಕರರಾಗಿರಬಹುದು ಅಥವಾ ಖಾಸಗಿ ಉದ್ಯೋಗಿಗಳಾಗಿರಬಹುದು. ನಿವೃತ್ತಿ ಎಂದ ಕೂಡಲೇ ಸಮಯ, ಹಣ, ಸಮಸ್ಯೆ ಹಾಗೂ ಕುಟುಂಬ ಹೀಗೆ ಹೊಂದಾಣಿಕೆಗೆ ಕಾರಣಗಳು ಹುಟ್ಟಿಕೊಳ್ಳುತ್ತವೆ. ನಿವೃತ್ತಿ ಹೊಂದಿದ ನಂತರ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳುವವರು ಒಂದೆಡೆಯಾದರೆ, ಈ ವಯಸ್ಸಿನಲ್ಲಿ ಹೇಗೆ ಕೆಲಸ ಮಾಡುವುದು ಎಂಬುದು ಇನ್ನೊಂದೆಡೆ. ಹೀಗೆ ನಿವೃತ್ತಿಯ ಹೊಸ ಬದುಕು ಹೇಗೆ ಆರಂಭಿಸಬೇಕು ಎಂಬುವುದಕ್ಕೆ ಈ ಮಾರ್ಗಗಳು ಸಹಾಯಕಾರಿ.

ಈಗಾಗಲೇ ನೀವು ನಿವೃತ್ತಿ ಹೊಂದುವ ಹಂತದಲ್ಲಿ ಇದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ ನಿಮ್ಮ ಯೋಜನೆಗಳನ್ನು ಹಂತ ಹಂತವಾಗಿ ರೂಪಿಸಿಕೊಳ್ಳಿ. ಮುಂದಿನ ಜೀವನಕ್ಕೆ ಆರ್ಥಿಕತೆಯ ಅಗತ್ಯವಿದ್ದರೆ ಹೇಗೆ ಕೆಲಸಗಳನ್ನು ಮುಂದುವರೆಸಬೇಕು, ಆರ್ಥಿಕ ತೊಂದರೆ ಇಲ್ಲದಿದ್ದರೆ ನಿವೃತ್ತಿ ಬದುಕನ್ನು ಸಂತಸದಿಂದ ಹೇಗೆ ಕಳೆಯಬೇಕು ಎಂಬುದನ್ನು ಕಂಡುಕೊಳ್ಳಬಹುದು.

ಕೆಲದಿನಗಳ ಕಾಲ ವಿಶ್ರಾಂತಿ

ನಿವೃತ್ತಿಯ ನಂತರ ಕೆಲದಿನಗಳ ಕಾಲ ವಿಶ್ರಾಂತಿ ಪಡೆಯುವುದು ಉತ್ತಮ. ಕುಟುಂಬ, ಬಂಧು–ಬಾಂಧವರ ಜೊತೆ ಸಮಯ ಕಳೆಯುವುದರಿಂದ ಸಂತಸ ಹೆಚ್ಚುತ್ತದೆ. ಕೆಲಸದಲ್ಲಿ ಇದ್ದ ಸಂದರ್ಭದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿರುವುದಿಲ್ಲ. ಈ ವಿಶ್ರಾಂತಿ ಸಮಯದಲ್ಲಿ ಸ್ನೇಹಿತರ ಜೊತೆ ಸೇರಿ ಅನುಭವವನ್ನು ಹಂಚಿಕೊಳ್ಳಿ. ಚರ್ಚೆ, ಪ್ರವಾಸ, ಪಾರ್ಟಿಗಳನ್ನು ಆಯೋಜಿಸಿ. ಇದರಿಂದ ಸ್ನೇಹವನ್ನು ಹೆಚ್ಚಿಸಿಕೊಂಡು ದಿನಗಳನ್ನು ಆನಂದದಿಂದ ಕಳೆಯಬಹುದು.

ನಿಮ್ಮ ದಿನಗಳನ್ನು ಯೋಜಿಸಿಕೊಳ್ಳಿ

ನಿವೃತ್ತಿಗೆ ಮೊದಲಿನ ಜೀವನವೇ ಬೇರೆಯದ್ದಾಗಿರುತ್ತದೆ. ಅದನ್ನು ನಿಮ್ಮ ಅಭ್ಯಾಸವಾಗಿ ನಿವೃತ್ತಿಯ ನಂತರವೂ ಹಾಗೆಯೇ ಮುಂದುವರಿಸುವುದಕ್ಕಿಂತ ಅದನ್ನು ಬದಲಾಯಿಸಿಕೊಂಡು ಮುಂದುವರಿಯುವುದು ಆರೋಗ್ಯಕರ.

ಪ್ರತಿದಿನ ಆರೋಗ್ಯಕರ ನಿದ್ದೆ ಹಾಗೂ ವ್ಯಾಯಾಮಗಳ ಮೂಲಕ ದಿನಗಳು ಮುಂದುವರಿಯಲಿ. ನಿಮ್ಮ ಸಮಯವನ್ನು ರೂಪಿಸಿಕೊಳ್ಳುವ ಮೂಲಕ ಮುಂದಿನ ಯೋಜನೆಗಳಿಗೆ ದಾರಿ ಮಾಡಿಕೊಳ್ಳಿ. ಈ ಬಗ್ಗೆ ಒತ್ತಡ ತೆಗೆದುಕೊಂಡು ಕಟ್ಟುನಿಟ್ಟಾಗಿರಬೇಕಿಲ್ಲ, ಬದಲಾಗಿ ಅವುಗಳ ಅರಿವಿರಲಿ. ನಿಧಾನವಾಗಿ ಹೊಸತನದ ಜೀವನಶೈಲಿ ಕಟ್ಟಿಕೊಳ್ಳಿ.

ಯೋಜನೆ ರೂಪಿಸಿ

ನೀವು ಯಾವ ವೃತ್ತಿಯಿಂದ ನಿವೃತ್ತಿ ಹೊಂದಿದ್ದೀರಿ ಎಂಬುದು ಮುಖ್ಯ. ಉದಾ: ನೀವು ಶಿಕ್ಷಕರಾಗಿರಬಹುದು ಅಥವಾ ವೈದ್ಯರು ಹಾಗೂ ಇನ್ನಾವುದೇ ಕೆಲಸವಾಗಿರಬಹುದು ಅವುಗಳ ಮೂಲಕ ಮುಂದೆ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬ ತಂತ್ರಗಳನ್ನು ತಯಾರಿಸಿಕೊಳ್ಳಿ. ನಿಮಗೆ ಬೇರೆ ವೃತ್ತಿಯ ಮೇಲೆ ಆಸಕ್ತಿ ಇದ್ದರೆ ಅದರಲ್ಲಿಯೂ ಮುಂದುವರಿಯಬಹುದು. ನಿಮಗೆ ಅಗತ್ಯವಿದ್ದರೆ ನಿಮ್ಮ ಅನುಭವದ ಆಧಾರದ ಮೇಲೆ ಟ್ರೈನಿಂಗ್ ಸೆಂಟರ್‌ಗಳನ್ನು ಆರಂಭಿಸಿ ಅಥವಾ ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಕೆಲಸಗಳನ್ನು ಟೆಂಡರ್‌ಗಳ ಮೂಲಕ ಪಡೆದು ಕಾರ್ಯ ನಿರ್ವಹಿಸಬಹುದು.ದೇಹಕ್ಕೆ ಮಾತ್ರ ವಯಸ್ಸು, ಕೆಲಸಕ್ಕಲ್ಲ ಎನ್ನುವುದು ನೆನಪಿರಲಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ.

ಹೊಸ ಬಜೆಟ್‌ ರಚಿಸಿ

ನಿವೃತ್ತಿಯ ನಂತರ ಆರ್ಥಿಕವಾಗಿ ಕುಟುಂಬ ಹೊಸ ಲೋಕಕ್ಕೆ ತೆರೆದುಕೊಳ್ಳುತ್ತದೆ. ಕೆಲಸದ ಸಮಯದಲ್ಲಿ ನಿಮ್ಮ ಹಾಗೂ ಕುಟುಂಬದ ಖರ್ಚು ಸಿಗುವ ತಿಂಗಳ ಸಂಬಳದ ಮೇಲೆ ಅವಲಂಬನೆಯಾಗಿರುತ್ತದೆ. ಆದರೆ ನಿವೃತ್ತಿಯ ನಂತರ ಆದಾಯ ಕಡಿಮೆ ಇರುವ ಕಾರಣ ಖರ್ಚು ವೆಚ್ಚಗಳಲ್ಲಿ ಹೊಸ ಯೋಜನೆ ಅಗತ್ಯ. ಅದು ನೀವು ಬಳಕೆ ಮಾಡುವ ವಸ್ತುಗಳು ಹಾಗೂ ಆಹಾರ ಇತ್ಯಾದಿಗಳಿಂದ ಕೂಡಿರುತ್ತದೆ. ಯಾವುದಕ್ಕೆ ಕಡಿವಾಣ ಹಾಕಬಹುದು ಹಾಗೂ ಯಾವುದು ಅಗತ್ಯ ಎಂಬ ನಿರ್ಧಾರಗಳ ಮೇಲೆ ಹೊಸ ಬಜೆಟ್‌ ಮಾಡಿಕೊಳ್ಳಬಹುದು.

ಒಂಟಿತನ ಬೇಡ

ಕೆಲವರು ನಿವೃತ್ತಿ ಹೊಂದಿದ ಕೂಡಲೇ ಇನ್ನು ನಮ್ಮ ವಯಸ್ಸು ಮುಗಿಯಿತು, ಇನ್ನೇನು ಮಾಡಲು ಆಗುವುದಿಲ್ಲ ಎಂಬ ಮನೋಭಾವದಲ್ಲಿ ದಿನ ಕಳೆಯುತ್ತಾರೆ. ಒಂಟಿಯಾಗಿ ಇರುವುದು ಹಾಗೂ ಕುಟುಂಬ, ಮಕ್ಕಳು ಹೀಗೆ ಮನೆಯಲ್ಲಿಯೇ ನಿವೃತ್ತಿ ಬದುಕನ್ನು ಮುಗಿಸಿದವವರೇ ಹೆಚ್ಚು. ಕೆಲವರಿಗೆ ಅನಾರೋಗ್ಯದ ಸಮಸ್ಯೆಗಳ ಕಾರಣ ಹೀಗೆ ಒಂಟಿತನಕ್ಕೆ ಜಾರುವುದು ಸಹಜ. ಒಂಟಿಯಾಗಿ ದಿನ ದೂಡುವುದು ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ.

ಹೀಗೆ ಮಾಡಿ

ಮನೆ, ಮಕ್ಕಳೊಂದಿಗೆ ಸಮಯ ಕಳೆಯಿರಿ. ಜತೆಗೆ ಆರೋಗ್ಯದ ಸಮಸ್ಯೆಗಳಿಗೆ ಪ್ರತಿದಿನ ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಸುತ್ತಾಟ.. ಹೀಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಇವುಗಳನ್ನು ಪ್ರತಿದಿನದ ಅಭ್ಯಾಸಗಳನ್ನಾಗಿ ಮಾಡಿಕೊಳ್ಳಿ. ಇವುಗಳು ನಿಮ್ಮ ಅನಾರೋಗ್ಯಕ್ಕೆ ಪರಿಹಾರ ನೀಡುತ್ತವೆ. ಒಂಟಿಯಾಗಿರದೆ ನಿಮ್ಮ ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಪ್ರವಾಸದ ಸುತ್ತಾಟಗಳನ್ನು ಮಾಡಿ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮಗೆ ಖುಷಿ ಕೊಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ. ವಯಸ್ಸಿನ ಚಿಂತೆ ಬೇಡ. ಪ್ರತಿದಿನ ಸಂತಸದಿಂದ ಕಳೆಯುವ ಹವ್ಯಾಸ ರೂಢಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT