ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎನ್‌ ಹವಾಮಾನ ಬದಲಾವಣೆ ಸಲಹಾ ಸಮಿತಿಗೆ ಭಾರತೀಯ ಯುವತಿ

Last Updated 28 ಜುಲೈ 2020, 19:45 IST
ಅಕ್ಷರ ಗಾತ್ರ

ಅರ್ಚನಾ ಸೋರೆಂಗ್‌. ಹದಗೆಡುತ್ತಿರುವ ಜಾಗತಿಕ ಹವಾಮಾನ ಪರಿಸ್ಥಿತಿಯ ಸುಧಾರಣೆಗೆ ವಿಶ್ವಸಂಸ್ಥೆಯು ರಚಿಸಿರುವ ಹೊಸ ಸಲಹಾ ಸಮಿತಿಗೆ ನಾಮಕರಣಗೊಂಡಿರುವ ಭಾರತೀಯ ಯುವತಿ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್‌ ಹೊಸದಾಗಿ ರಚಿಸಿರುವ ‘ಹವಾಮಾನ ಬದಲಾವಣೆ ಮೇಲಿನ ಯುವ ಸಲಹಾ ಸಮಿತಿ’ಗೆ ಅರ್ಚನಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ 18ರಿಂದ 28 ವರ್ಷದೊಳಗೆ ಏಳು ಮಂದಿ ಯುವ ನಾಯಕರನ್ನು ನಾಮಕಾರಣ ಮಾಡಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಅರ್ಚನಾ ಸಂಶೋಧನೆ ಕೆಲಸದಲ್ಲಿ ಎತ್ತಿದ ಕೈ. ಅದೂ ಆದಿವಾಸಿ ಜನಾಂಗಗಳ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಹವಾಮಾನ ರಕ್ಷಣೆ ಕಾರ್ಯಕರ್ತೆಯಾಗಿರುವ ಅರ್ಚನಾ ಒಡಿಶಾದ ರೂರ್ಕೆಲಾದವರು. ಪಾಟ್ನಾ ಮಹಿಳಾ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದ ಮೇಲೆ ಬಿಎ (ಆನರ್ಸ್‌) ಓದಿದ್ದು, ನಂತರ ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಿಐಎಸ್‌ಎಸ್‌)ಯಲ್ಲಿ ‘ರೆಗ್ಯುಲೇಟರಿ ಗವರ್ನನ್ಸ್‌’ ವಿಷಯದಲ್ಲಿ ಎಂಎ ಮಾಡಿದ್ದಾರೆ.

ಅಖಿಲ ಭಾರತ ಕ್ಯಾಥೊಲಿಕ್‌ ವಿಶ್ವವಿದ್ಯಾಲಯ ಒಕ್ಕೂಟದ ಆದಿವಾಸಿ ಯುವ ಚೇತನ ಮಂಚ್‌ನ ಬುಡಕಟ್ಟು ಆಯೋಗದ ರಾಷ್ಟ್ರೀಯ ಸಂಚಾಲಕಿಯಾಗಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಹಾಗೆಯೇ ಟಿಐಐಎಸ್‌ನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಒಡಿಶಾದ ಟಿಐಎಸ್‌ಎಸ್‌ನ ಅರಣ್ಯ ಹಕ್ಕು ಮತ್ತು ಆಡಳಿತ ಯೋಜನೆಯ ಸಂಶೋಧನ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಆದಿವಾಸಿಗಳ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಕ ಪದ್ಧತಿಗಳ ಬಗ್ಗೆ ಅಧ್ಯಯನ ನಡೆಸಿರುವ ಅರ್ಚನಾ ಸಂಶೋಧನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ‘ಸಾವಿರಾರು ವರ್ಷಗಳಿಂದ ನಮ್ಮ ಅರಣ್ಯ ಹಾಗೂ ಪ್ರಕೃತಿಯನ್ನು ರಕ್ಷಣೆ ಮಾಡಿಕೊಂಡು ಬಂದಿರುವ ನಮ್ಮ ಪೂರ್ವಜರು ತಮ್ಮ ಸಾಂಪ್ರದಾಯಕ ಜ್ಞಾನದಿಂದಲೇ ಇದನ್ನೆಲ್ಲ ಮಾಡಿದ್ದರು. ಈಗ ಹವಾಮಾನ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಹೊಣೆ ನಮ್ಮ ಮೇಲಿದೆ’ ಎನ್ನುವ ಅವರು ಹವಾಮಾನ ಬದಲಾವಣೆ ಕುರಿತಂತೆ ಕುತೂಹಲಕರ ವಿಷಯಗಳನ್ನು ದಾಖಲಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಳದಂತಹ ಸಮಸ್ಯೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲು, ಈ ವಿಷಯದ ಬಗ್ಗೆ ಯುವಜನರ ಗಮನ ಸೆಳೆಯಲು ತಮ್ಮಂತಹ ಯುವತಿಯರು ಮುಂಚೂಣಿಯಲ್ಲಿರುವುದು ಅಗತ್ಯ ಎಂಬ ಗುಟೆರಸ್‌ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಅರ್ಚನಾ ಟ್ವೀಟ್‌ ಮೂಲಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT