ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗೆ ಓದಿಸಲು ಅಮ್ಮನೇ ಬೇಕು!

Last Updated 17 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

‘ಸ್ಸಾರಿ, ಮಗನಿಗೆ ಟೆಸ್ಟ್ ನಡೀತಿದೆ. ನಿಮ್ಮ ಮನೆಯ ಸಮಾರಂಭಕ್ಕೆ ಬರಲು ಕಷ್ಟ, ಶುಭವಾಗಲಿ’ ಎಂಬ ನೇತ್ರಾಳ ಸಂದೇಶಕ್ಕೆ ‘ಮಗ ಇನ್ನೂ ಎರಡನೇ ಕ್ಲಾಸ್. ಏನೋ ಐಎಎಸ್ ಪರೀಕ್ಷೆ ಅನ್ನೋ ಹಾಗೆ ಆಡ್ತಿಯಲ್ಲ’ ಕಹಿಯಾದ ಮರುಸಂದೇಶ ನಯನಾಳಿಂದ ಹೋಯಿತು.

‘ನಿನಗೆ ಅರ್ಥವಾಗಲ್ಲ ಅವನಿಗೆ ಹೊರೆಹೊರೆ ಪುಸ್ತಕಗಳು. ನಾವು ಓದಿದಂತಲ್ಲ’ ಎಂದು ಸಮಾಧಾನ ಹಾಕಿ ನೇತ್ರಾ ಸುಮ್ಮನಾದಳು.

ಈ ತೆರನಾದ ಸಂಭಾಷಣೆಗಳು ಸರ್ವೇ ಸಾಮಾನ್ಯ. ಸಮಾರಂಭಕ್ಕೆ ಬರದಿರಲು ಇದೊಂದು ನೆಪ ಎಂದು ಆತಿಥೇಯರಿಗೆ ಅನ್ನಿಸಿದರೂ ಸ್ವಲ್ಪ ಆಳವಾಗಿ ಯೋಚಿಸಿದರೆ ಇದರಲ್ಲಿ ನಿಜಾಂಶ ಇಲ್ಲದಿಲ್ಲ.

‘ಚಿಕ್ಕ ಕ್ಲಾಸ್, ಏನು ಮಹಾ?’ ಎಂದು ಮೂದಲಿಸಿದರೆ ನಾಳೆ ಗಂಭೀರ ಪರಿಣಾಮ ಬೀರುವುದು ಮಕ್ಕಳ ಮೇಲೆ ಎಂಬುದನ್ನು ಮರೆಯಬಾರದು.

ಈಗ ನಪಾಸು ಪದ್ಧತಿ ಇಲ್ಲದೆ ತರಗತಿಯಿಂದ ತರಗತಿಗೆ ಮುಂದಕ್ಕೆ ಹೋಗುವುದು ಸುಲಭ. ಆದರೆ ಮಕ್ಕಳು ಎಷ್ಟರಮಟ್ಟಿಗೆ ಪಾಠ ಪ್ರವಚನಗಳನ್ನು ಕಲಿಯುತ್ತಾರೆ ಎಂಬುದು ಶಾಲೆಯಲ್ಲಿ ಕಲಿಸುವ ಶಿಕ್ಷಕರಿಗಿಂತ ಮೊದಲ ಗುರು ಅಮ್ಮನನ್ನೂ ಅವಲಂಬಿಸಿದೆ. ಈ ದಿಸೆಯಲ್ಲಿ ಆಕೆಯ ಕೊಡುಗೆ, ಪ್ರಭಾವ ಸಾಕಷ್ಟು ಪರಿಣಾಮಕಾರಿ.

‘ಇವತ್ತು ಸಂಜೆಯತನಕ ವಿದ್ಯುತ್‌ ಬರೋದಿಲ್ಲವಂತೆ. ನನ್ನ ಸೀರೆಗೆ ಫಾಲ್ ಹೊಲಿದುಕೊಳ್ಳಬೇಕು. ನಿನ್ನ ಪ್ಲಾನ್ ಏನು?’ ಮಧ್ಯಾಹ್ನದ ಊಟ ಮುಗಿಯುತ್ತಲೇ ಒಂದನೆಯ ಕ್ಲಾಸ್‌ನಲ್ಲಿ ಓದುತ್ತಿರುವ ಮಗನಿಗೆ ಹೇಳಿದಳು ಅದಿತಿ.

ಭಾನುವಾರ ಗೆಳೆಯರು ಅವರವರ ಮನೆಯಲ್ಲಿ ಇರುವುದರಿಂದ, ಹೊರಗೆ ಆಟಕ್ಕೆ ಯಾರೂ ಬಾರರು ಎಂದು ಅರಿತಿದ್ದರಿಂದ ‘ಅಮ್ಮ ನಾನು ಟೆಸ್ಟ್‌ಗೆ ಕೊಟ್ಟಿರುವ ರಿವಿಷನ್ ಓದಿದ್ದೇನೆ. ನೀನು ಪ್ರಶ್ನೆಪತ್ರಿಕೆ ತಯಾರಿಸಿಕೊಟ್ಟರೆ ನಾನು ಬರೆಯಬಹುದು. ಸಂಜೆ ಆಟಕ್ಕೆ ಹೋಗ್ತೀನಿ’ ಎಂದ ಮಗನಿಗೆ, ಅವನ ಪುಸ್ತಕಗಳಿಂದಲೇ ಅಣಕು ಟೆಸ್ಟ್ ಪೇಪರ್ ಅಣಿಮಾಡಿ ‘ಒಂದು ಗಂಟೆಯ ಅವಧಿಯಲ್ಲಿ ಬರೆದು ಮುಗಿಸಬೇಕು’ ಎಂದ ಅದಿತಿ ತನ್ನ ಸೀರೆ ಕೆಲಸದಲ್ಲಿ ತೊಡಗಿದಳು. ಮಗ ಬರೆದು ಮುಗಿಸಿದಾಗ ಪೇಪರ್‌ ಮೌಲ್ಯಮಾಪನ ಮಾಡಿ, ಬರೆದ ಉತ್ತರಗಳನ್ನು ಮಗನ ಬಾಯಲ್ಲಿ ಹೇಳಿಸಿ, ಸಣ್ಣ ಪುಟ್ಟ ದೋಷಗಳನ್ನು ತಿದ್ದಿ, ಮೂರು ಸ್ಟಾರ್ ಕೊಟ್ಟಾಗ ಮಗ ಫುಲ್ ಖುಷ್. ಅಮ್ಮ ಅಂದಿನ ಪಾಠಗಳನ್ನು ಅಂದೇ ಒಮ್ಮೆ ಓದಿಸಿ, ಬರೆಸಿದ್ದರಿಂದ ಮಗ ಪೂರ್ವತಯಾರಿ ಇಲ್ಲದೆಯೂ ಶಾಲೆಯ ಪ್ರಶ್ನೆಪತ್ರಿಕೆ ಎದುರಿಸಲು ಸಿದ್ಧನಾಗಿದ್ದ.

ಇಲ್ಲಿ ಕೆಲವು ಅಂಶಗಳನ್ನು ಗಮನಿಸಬಹುದು. ಅಮ್ಮ– ಮಗನ ನಡುವೆ ಒಳ್ಳೆಯ ಸ್ನೇಹಭಾವವಿದೆ. ಸಮಯದ ಸದುಪಯೋಗಕ್ಕೆ ಮಗನಿಗೆ ಪ್ರೇರಣೆ ನೀಡಲೋಸುಗ ತಾನೂ ಕೆಲಸದಲ್ಲಿ ವ್ಯಸ್ತಳಾಗುವ ಮೂಲಕ ಸೂಚ್ಯವಾಗಿ ತಿಳಿಸಿದ್ದಾಳೆ. ‘ಓದಿಕೋ’ ಎಂದು ಹೇಳದೆಯೇ ಅವನಿಗೆ ತಾನು ಮಾಡಬಹುದಾದ ಕೆಲಸ ಮನಮುಟ್ಟಿದೆ. ಮುಖ್ಯವಾದ ಅಂಶವೆಂದರೆ, ಇದಕ್ಕೆ ಪೂರಕವಾಗಿ ಮನೆಯಲ್ಲೂ ಕಲಿಕೆಯ ವಾತಾವರಣ ನಿರ್ಮಿಸಿಕೊಟ್ಟಿದ್ದು. ಮೊಬೈಲ್‌ ಎಂಬ ಗೀಳಿಗೆ ಬಲಿಯಾಗದೇ ಮಗನ ಪುರೋಭಿವೃದ್ಧಿಯತ್ತ ಗಮನ ನೀಡಿರುವುದು.

ಒಬ್ಬ ಪೋಷಕರಾಗಿ ನಿಮ್ಮ ಮಗು ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಲು ನಿಮ್ಮ ನೆರವು ಅದಕ್ಕೆ ಬೇಕೇಬೇಕು. ನಿತ್ಯದ ಹೋಂವರ್ಕ್‌, ಪರೀಕ್ಷೆಗೆ ತಯಾರಿ, ಉಳಿದ ಚಟುವಟಿಕೆಗಳನ್ನು ಮಾಡಲು ಮಾತ್ರವಲ್ಲ, ಆ ಮಗುವಿಗೆ ಉತ್ತೇಜನ ನಿರಂತರವಾಗಿರಬೇಕು. ಇದರ ಜೊತೆಗೆ ಮಗುವಿನ ಮೇಲೆ ತೋರಿಸುವ ಪ್ರೀತಿ– ವಾತ್ಸಲ್ಯ ಮಾತ್ರವಲ್ಲ, ಬೆಂಬಲವೂ ಯಾವುದೇ ಷರತ್ತಿಲ್ಲದೇ ಮನಸ್ಸಿನಾಳದಿಂದ ಬಂದಿರಬೇಕು. ಏಕೆಂದರೆ ಯಾವುದೋ ಆಮಿಷವೊಡ್ಡಿ ಓದಿಸುವ ಕೆಲಸ ಕ್ಷಣಿಕ ಅಷ್ಟೇ.

***

* ಮಗುವಿನ ಜೊತೆ ಒಂದಿಷ್ಟು ಸಹನೆಯಿಂದ ನಡೆದುಕೊಳ್ಳಿ.

* ಚಿಣ್ಣರ ಪರೀಕ್ಷೆ ಅವರವರ ಮಟ್ಟಕ್ಕೆ ಹೆಚ್ಚಿನದು ಮತ್ತು ಮಹತ್ವದ್ದು ಎಂಬುದನ್ನು ಮರೆಯಬಾರದು.

* ಈ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಸ್ವಲ್ಪಸ್ವಲ್ಪವಾಗಿ ತಿಳಿಸದಿದ್ದರೆ ಮುಂದೆ ಎಂದೂ ತಿಳಿಸಲಾಗದು.

* ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ಮೊಬೈಲ್‌, ಟಿವಿ ಸಂಪರ್ಕವಿಲ್ಲದೇ ಬೆಳೆಯಬೇಕೆ ಎಂಬ ಪ್ರಶ್ನೆಗೂ ಉತ್ತರವಿದೆ. ಟಿವಿಯಲ್ಲಿ ಮಕ್ಕಳ ಜೊತೆಗೂಡಿ ಶೈಕ್ಷಣಿಕ /ಕ್ರೀಡೆ /ಸಾಮಾನ್ಯಜ್ಞಾನ ಕುರಿತಾದ ರಸಪ್ರಶ್ನೆ, ಆರ್ಟ್ ಅಂಡ್ ಕ್ರಾಫ್ಟ್ , ವಿಜ್ಞಾನ, ಪ್ರಾಣಿ- ಸಸ್ಯಸಂಕುಲಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ನೋಡಬಹುದು.

* ಮೊಬೈಲ್‌ನಲ್ಲೂ ಕಲಿಕೆಯ ಸಂಬಂಧಿ ಆಟಗಳನ್ನು ಆಡಿ,ಆಡಿಸಿ ರಂಜಿಸಬಹುದು. ಕುತೂಹಲವಿರಲಿ- ಕೆಟ್ಟ ಕುತೂಹಲ ಬಾರದಂತೆ ಜಾಗ್ರತೆವಹಿಸಿ.

* ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸಿ. ಸ್ಪರ್ಧೆಯ ತೀರ್ಪಿಗಿಂತ, ಭಾಗವಹಿಸುವುದೇ ಮುಖ್ಯ ಎಂಬುದನ್ನು ಮನವರಿಕೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT