ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ..

Last Updated 27 ಜೂನ್ 2020, 6:45 IST
ಅಕ್ಷರ ಗಾತ್ರ

ಬದುಕಿನ ಪಥವನ್ನೇ ಬದಲಿಸಿದ ಈ ಪರಿಸ್ಥಿತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಲಾಕ್‌ಡೌನ್‌ ನಂತರದ ಈ ದಿನಗಳಲ್ಲಿ ಪೋಷಕರು ದೈನಂದಿನ ಜೀವನಾವಶ್ಯಕತೆ, ಹಣಕಾಸು ಪರಿಸ್ಥಿತಿಯ ಜೊತೆಗೆ ಪುಟ್ಟ ಮಕ್ಕಳನ್ನೂ ಸಂಭಾಳಿಸಬೇಕಾಗಿದೆ. ಶಾಲೆಯ ರಜೆ ಸುದೀರ್ಘವಾಗಿದ್ದು, ಹೊರಗಡೆ ಹೋಗಲೂ ಆಗದೆ, ಸ್ನೇಹಿತರೊಂದಿಗೆ ಆಟವಾಡಲೂ ಆಗದೆ ಮನೆಯೊಳಗೇ ಕುಳಿತ ಮಕ್ಕಳ ಮನಃಸ್ಥಿತಿ ಅರ್ಥ ಮಾಡಿಕೊಂಡು ನಿಭಾಯಿಸಬೇಕಾಗಿದೆ.

ಬೇಸಿಗೆ ರಜದಲ್ಲಾದರೆ ಪಿಕ್ನಿಕ್‌, ಪ್ರವಾಸ, ಬೇಸಿಗೆ ಶಿಬಿರ, ಸ್ನೇಹಿತರ ಜೊತೆ ಬಯಲಲ್ಲಿ ಆಟ ಎಂದೆಲ್ಲ ಸಂಭ್ರಮಿಸುತ್ತಿದ್ದ ಮಕ್ಕಳು ಈಗ ವಿಚಿತ್ರ ಸ್ಥಿತಿಯನ್ನು, ತಂದೆ–ತಾಯಂದಿರ ಕಷ್ಟವನ್ನುಅರ್ಥ ಮಾಡಿಕೊಳ್ಳಲಾರದೆ ಚಡಪಡಿಸುವುದು ಸ್ವಾಭಾವಿಕ. ಜೊತೆಗೆ ಇನ್ನೂ ಆರಂಭವಾಗದ ಶಾಲೆಯ ಬಗ್ಗೆ ಪ್ರಶ್ನೆಗಳು ಪುಟ್ಟ ಮೆದುಳಿನಲ್ಲಿ ತಿರುಗುತ್ತಿರುತ್ತವೆ.

ಮನೆಗೆಲಸದಲ್ಲಿ ಜೊತೆ

ಈ ಸಂದರ್ಭವನ್ನು ಮಕ್ಕಳಿಗೆ ಬದುಕಿನ ಕೌಶಲ ಕಲಿಸಲು ಬಳಸಬಹುದು. ಮನೆಗೆಲಸದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಪೋಷಕರ ಚಾಕಚಕ್ಯತೆಯನ್ನು ಅವಲಂಬಿಸಿದೆ. ನೆಲ ಒರೆಸುವುದು, ಪಾತ್ರೆ ತೊಳೆದ ನಂತರ ಅದನ್ನು ಬಟ್ಟೆಯಿಂದ ಒರೆಸಿ ಇಡುವುದು, ವಾಷಿಂಗ್‌ ಮಷಿನ್‌ಗೆ ಬಟ್ಟೆ ತುಂಬುವುದು.. ಇದೇ ಮೊದಲಾದ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳಬಹುದು. ಆದರೆ ಜಾಸ್ತಿ ಅಪಾಯಕಾರಿ ಕೆಲಸದಲ್ಲಿ ಅವರು ಪಾಲ್ಗೊಳ್ಳದಂತೆ ಎಚ್ಚರ ವಹಿಸುವುದು ಒಳಿತು. ಪೋಷಕರು ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ಕಣ್ಣಿಟ್ಟಿರಬೇಕಾಗುತ್ತದೆ.

ಮಕ್ಕಳಿಗೆ ಸುಸ್ಥಿರ ಹಾಗೂ ಕನಿಷ್ಠ ಸೌಲಭ್ಯದಲ್ಲಿ ಬದುಕುವ ಪಾಠವನ್ನು ಈ ಸಂದರ್ಭದಲ್ಲಿ ಹೇಳಿಕೊಡಬಹುದು. ಅವಶ್ಯಕತೆ ಇರುವಷ್ಟೇ ಖರೀದಿಸುವ ಹಾಗೂ ಅತ್ಯಂತ ಚಾಣಾಕ್ಷತೆಯಿಂದ ಉಳಿತಾಯ ಮಾಡುವ ವಿಧಾನವನ್ನು ಮಕ್ಕಳಿಗೆ ಕಲಿಸಬಹುದು. ಉದಾಹರಣೆಗೆ ಹಳೆಯ ಬಟ್ಟೆಯಿಂದ ಅಡುಗೆ ಮನೆ ಕಟ್ಟೆಯನ್ನು ಸ್ವಚ್ಛಗೊಳಿಸುವುದು, ತರಕಾರಿ ಸಿಪ್ಪೆಯನ್ನು ಮನೆಯ ಬಾಲ್ಕನಿಯಲ್ಲಿರುವ ಗಿಡದ ಪಾಟ್‌ಗೆ ಗೊಬ್ಬರದಂತೆ ಬಳಸುವುದು ಇತ್ಯಾದಿ.

ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಸಹಾಯ ಮಾಡಲು ಮಕ್ಕಳಿಗೆ ಹೇಳಬಹುದು. ತರಕಾರಿ, ಸೊಪ್ಪು ಬಿಡಿಸುವುದು, ಚಪಾತಿಗೆ ಹಿಟ್ಟನ್ನು ಹೇಗೆ ನಾದಬೇಕು ಎಂಬುದನ್ನು ಹೇಳಿಕೊಡುವುದು... ಇವೇ ಮೊದಲಾದ ಕೆಲಸಗಳು ಮಕ್ಕಳಿಗೆ ಮುಂದೆ ನೆರವಾಗುವುದಂತೂ ನಿಜ. ಜೊತೆಗೆ ಮನೆಯಲ್ಲೇ ಕುಳಿತು ಉಂಟಾಗಬಹುದಾದ ಬೇಸರವನ್ನೂ ಕಳೆಯುತ್ತವೆ.

ಆನ್‌ಲೈನ್‌ ಪರಿಚಯ

ಇವುಗಳ ಜೊತೆಗೆ ಮಕ್ಕಳಿಗೆ ಆನ್‌ಲೈನ್‌ ಕುರಿತು ಪರಿಚಯ ಮಾಡಿಕೊಡುವ ಕೆಲಸವನ್ನೂ ಪೋಷಕರು ಪಟ್ಟಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಗೂಗಲ್‌ ಮೀಟ್‌, ಝೂಮ್‌, ಮೈಕ್ರೊಸಾಫ್ಟ್‌ ಟೀಮ್‌ ಮೊದಲಾದವುಗಳನ್ನು ಬಳಸುವ ಬಗೆಯನ್ನು ಪರಿಚಯಿಸಬಹುದು. ಸ್ಪೀಕರ್‌/ ಹೆಡ್‌ಸೆಟ್‌ ಬಳಕೆ, ವಿಡಿಯೊ ಇಲ್ಲದೇ, ಮೈಕ್ರೊಫೋನ್‌ ಮ್ಯೂಟ್‌/ ಅನ್‌ಮ್ಯೂಟ್ ಮಾಡುವ ರೀತಿ ಇವೆಲ್ಲವನ್ನೂ ಹೇಳಿಕೊಡುವಾಗ ಮಕ್ಕಳಿಗೂ ಹೊಸತನ್ನು ಕಲಿಯುವ ಖುಷಿ ಇರುತ್ತದೆ.

ಇವೆಲ್ಲವನ್ನೂ ಜಬರ್‌ದಸ್ತಿಯಿಂದ ಮಾಡಿಸದೆ ಆಟಗಳ ಮೂಲಕ, ಸವಾಲುಗಳನ್ನು ಒಡ್ಡುವ ಮೂಲಕ ತಮಾಷೆ ಸೇರಿಸಿ ಮಾಡಿಸಬಹುದು. ಅದು ಪೋಷಕರ ಚಾಣಾಕ್ಷತೆಗೂ ಸವಾಲು ಒಡ್ಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT