ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಕಿವಿಗೆ ಚಂದದ ಓಲೆ

Published 30 ಮಾರ್ಚ್ 2024, 0:20 IST
Last Updated 30 ಮಾರ್ಚ್ 2024, 0:20 IST
ಅಕ್ಷರ ಗಾತ್ರ

ಕಿವಿಯೋಲೆ ಎಂಬುದು ಹೆಂಗಳೆಯರ ಬದುಕಿನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಯಾವುದೇ ಆಭರಣವಿಲ್ಲದೆ ಸರಳವಾಗಿರಬೇಕು ಎಂದುಕೊಳ್ಳುವವರಿಗೆ ಸಣ್ಣ ಕಲ್ಲಿನ ಸ್ಟಡ್‌ಗಳು ಹಿತವೆನಿಸಿದರೆ ಇನ್ನೂ ಆಭರಣಪ್ರಿಯರಿಗೆ ಚಾಂಡೇಲಿಯರ್‌(ಗೊಂಚಲು) ಕಿವಿಯೋಲೆಗಳಿಂದ ಹಿಡಿದು, ‌ಜೀಕುವ ಲೋಲಾಕುಗಳು, ಜುಮ್ಕಿಗಳು ಇಷ್ಟವೆನಿಸುತ್ತವೆ. ಧರಿಸುವ ಕಿವಿಯೋಲೆಗಳ ಗಾತ್ರ, ಬಣ್ಣ, ಕುಸುರಿ ಎಲ್ಲವೂ ಹೋಗುವ ಸಮಾರಂಭಕ್ಕೆ ತಕ್ಕಂತೆ ಆದ್ಯತೆಯನ್ನು ಪಡೆದಿರುತ್ತದೆ. ಈಗಂತೂ ಚಿನ್ನದ ಬದಲಿಗೆ ತರಹೇವಾರಿ ಕುಸುರಿ ಇರುವ ಬೆಳ್ಳಿಯೋಲೆಗಳು, ಮಣ್ಣಿನೋಲೆಗಳು, ಆಕ್ಸಿಡೈಸ್ಡ್‌ ಕಿವಿಯೋಲೆಗಳು ಮೆಚ್ಚುಗೆ ಗಳಿಸಿವೆ. ಅಂಥದ್ದೆ ಕೆಲವು ಕಿವಿಯೋಲೆಗಳ ಪರಿಚಯ ಇಲ್ಲಿದೆ.

ಸ್ಟಡ್‌: ಎಲ್ಲ ಕಾಲಕ್ಕೂ, ಎಲ್ಲ ಸಮಾರಂಭಗಳಿಗೂ ಒಪ್ಪುವ ಈ ಸ್ಟಡ್‌ಗಳು ಎಲ್ಲರ ಬಳಿಯೂ ಇರುವ ಕಿವಿಯೋಲೆ. ಸರಳತೆಗೆ ಮೆರಗು ನೀಡುವಲ್ಲಿ ಇದರ ಪಾತ್ರ ದೊಡ್ಡದು. ವಿವಿಧ ವಿನ್ಯಾಸ ಹಾಗೂ ಆಕಾರಗಳಲ್ಲಿಯೂ ಈ ಸ್ಟಡ್‌ ಲಭ್ಯವಿದ್ದು, ಉರುಟು ಆಕಾರದಲ್ಲಿರುವ ಸ್ಟಡ್‌ಗಳಿಗೆ ಬಹುಬೇಡಿಕೆ ಇದೆ. ಅದರಲ್ಲಿಯೂ ವಜ್ರ, ಮುತ್ತು, ಪಚ್ಚೆ, ಹವಳ ಹೀಗೆ ನವರತ್ನಗಳ ಹರಳಿರುವ ಸ್ಟಡ್‌ಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಉರುಟು, ಆಯಾತಾಕಾರ, ಚೌಕಾಕಾರ, ಅಂಡಾಕಾರ ಹೀಗೆ ಬೇರೆ ಬೇರೆ ಆಕಾರಗಳಲ್ಲಿರುವ ಸ್ಟಡ್‌ಗಳು ಉಡುಪು ಹಾಗೂ ಕತ್ತಿನ ಆಭರಣಕ್ಕೆ ಹೊಂದಿಸಿ ಹಾಕಿಕೊಳ್ಳಲಾಗುತ್ತದೆ.

ಹೂಪ್‌ ಕಿವಿಯೋಲೆ: ಅಗಲವಾದ ರಿಂಗ್‌ನಂತೆ ಕಾಣುವ ಹೂಪ್‌ ಕಿವಿಯೋಲೆಗಳು ಲೋಹದಿಂದ ಮಾಡಲಾಗುತ್ತದೆ. ಸಾಮಾನ್ಯವಾಗಿ ರೌಂಡ್‌ ಆಕಾರದಲ್ಲಿರುವ ಹೂಪ್‌ಗಳು ಈಗ ಚೌಕ, ಡೈಮಂಡ್‌, ಅಂಡಾಕಾರದಲ್ಲಿಯೂ ಸಿಗುತ್ತದೆ. ತೆಳು ಲೋಹದಲ್ಲಿ ತಯಾರಾದ ಹೂಪ್‌ಗಳು, ದಪ್ಪ ಟ್ಯೂಬ್‌ನಂತಿರುವ ಹೂಪ್‌ಗಳು ಮುಖದ ಆಕಾರಕ್ಕೆ ಹೊಂದಿಕೆಯಾಗುವಂತೆ ಧರಿಸಬಹುದು. ಈಗೀಗ ಈ ಹೂಪ್‌ಗಳ ಗಾತ್ರ ದೊಡ್ಡದಾಗಿದ್ದು, ಕೆಲವೊಮ್ಮೆ ಕೈಗೆ ಹಾಕಿಕೊಳ್ಳುವ ಬಳೆಯಷ್ಟು ದೊಡ್ಡದಿದ್ದು, ಭುಜಕ್ಕೆ ತಗುಲುವಂತೆ ಕಾಣುತ್ತಿರುತ್ತದೆ. ಇದು ಆಫ್ರಿಕಾದಲ್ಲಿ 4ನೇ ಶತಮಾನದಲ್ಲಿಯೇ ಬಹುಚಾಲ್ತಿಯಲ್ಲಿದ್ದ ಆಭರಣವಾಗಿದ್ದು, ಈಜಿಪ್ಟ್‌ನಲ್ಲಿಯೂ ವಯೋಭೇದವಿಲ್ಲದೇ, ಪುರುಷರು ಹಾಗೂ ಸ್ತ್ರೀಯರು ಇದನ್ನು ಬಳಸುತ್ತಿದ್ದರು.

ಕ್ಲಸ್ಟರ್‌ ಕಿವಿಯೋಲೆ: ರತ್ನಗಳ ಸಮೂಹವಿರುವ ಕಿವಿಯೋಲೆಗಳಿದು. ಹಲವು ಸ್ಟಡ್‌ಗಳು ಸೇರಿ ಒಂದು ಕ್ಲಸ್ಟರ್‌ ಆಗುತ್ತದೆ. ಹೂವಿನ ಸ್ಟಡ್‌ಗಳು, ಎಸಳಿನ ಸ್ಟಡ್‌ಗಳು ಹೀಗೆ ನವರತ್ನಗಳಲ್ಲಿಯೂ ಕ್ಲಸ್ಟರ್‌ ಕಿವಿಯೋಲೆಗಳು ಲಭ್ಯವಿದೆ. ಕೆಲವೊಮ್ಮೆ ಇವು ಲೋಲಾಕುಗಳಂತೆ ಜೀಕುತ್ತವೆ. ಮುತ್ತಿನ ಸ್ಟಡ್‌ಗಳ ಕ್ಲಸ್ಟರ್‌ ಕಿವಿಯೋಲೆಗಳು ಸದ್ಯಕ್ಕೆ ಬೇಡಿಕೆಯಲ್ಲಿದೆ. ಸರಳ ಸ್ಟಡ್‌ ಅನ್ನು ಸ್ವಲ್ಪ ಶೈಲಿಯುತವಾಗಿ ಎಲಿಗೆಂಟ್‌ ಲುಕ್‌ ನೀಡಲು ಮರುವಿನ್ಯಾಸ ಮಾಡಿದಂತೆ ಕಾಣುವ ಕಿವಿಯೋಲೆಗಳಿವು.

ಚಾಂಡೇಲಿಯರ್‌ ಕಿವಿಯೋಲೆ: ಇದು ನೋಡಲು ತೇರಿನಂತಿರುವ ಕಿವಿಯೋಲೆಗಳು. ಆದರೆ ಹಗುರವಾದ ಲೋಹಗಳಿಂದ ತಯಾರಿಸಿರುತ್ತಾರೆ. ಎಲಿಗೆಂಟ್ ಲುಕ್ ನೀಡುವ ಚಾಂಡೇಲಿಯರ್‌ ಕಿವಿಯೋಲೆಗಳು ಮಧ್ಯ ಏಷ್ಯಾ, ಗ್ರೀಕ್‌ ಮೂಲದ್ದಾಗಿದ್ದು, ಐದನೇ ಶತಮಾನದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ತೂಗುವ ಈ ಕಿವಿಯೋಲೆಗಳನ್ನು ಬಗೆ ಬಗೆಯ ಬಣ್ಣದ ನವರತ್ನಗಳಲ್ಲಿ ತಯಾರಿಸಲಾಗುತ್ತದೆ. ತುಂಬಾ ಉದ್ದಕ್ಕಿದ್ದು ಕಾಲರ್‌ಬೋನ್‌ವರೆಗೆ ಬರುವುದರಿಂದ ಇವುಗಳನ್ನು ‘ಶೋಲ್ಡರ್‌ ಡಸ್ಟರ್‌’ ಎಂದೂ ಕರೆಯಲಾಗುತ್ತದೆ.

ಟಿಯರ್‌ಡ್ರಾಪ್‌ ಕಿವಿಯೋಲೆ: ಇದು ಸ್ಟಡ್‌ನಂತೆ ಕಂಡರೂ ಖುಷಿಯ ಕಣ್ಣೀರಿನ ಹನಿಯಂತೆ ಕಾಣುವ ಕಿವಿಯೋಲೆ. ಎಲ್ಲ ಸಮಾರಂಭಗಳಿಗೂ ಹೇಳಿ ಮಾಡಿಸಿದ ಕಿವಿಯೋಲೆ ಇದು. ಮಧ್ಯಮ ಹಾಗೂ ಅತಿ ಉದ್ದ ಶೈಲಿಯಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT