ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದೇಹಿ ಬರಹ: ಹೆಣ್ಣೇ ಟಾರ್ಗೆಟ್‌ ಸಂಶಯವಿಲ್ಲ

Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

‘ಇನ್ನಿನ್ನು ಹೆಣ್ಣುಮಕ್ಕಳು ಭೂಮಿಯ ಮೇಲೆ ಹುಟ್ಟಲೇಬಾರದು. ಭೂಮಿ ಮೇಲೆ ಬಂದು ಇಂಥವರ ಕೈಯಲ್ಲೆಲ್ಲ ಯಾಕೆ ಸಿಕ್ಕಿ ಹಾಕಿಕೋಬೇಕು?’ – ಅಂತೊಬ್ಬರು ನೊಂದು ನುಡಿದರು. ‘ಇದು ಮಾತೇ ಅಲ್ಲ. ಯಾವ ರೀತಿಯಲ್ಲಿಯೂ ಇದು ಮಾತಲ್ಲ.’ ಎಂದೆ. ಗೊತ್ತು ನನಗೆ, ಅದು ಮಾತಲ್ಲ ಎನ್ನುವುದು ಅವರಿಗೂ ತಿಳಿದಿದೆ. ಆದರೂ ಅದನ್ನು ಆಡಿದರು; ಯಾಕೆ,
ವಿವರಿಸಬೇಕಿಲ್ಲವಷ್ಟೆ?

ಮನಸ್ಸು ವಿಹ್ವಲಗೊಂಡಿದೆ. ಒಂದೆಡೆ ಹೆಣ್ಣಿನ ಮೇಲೆ ಭೌತಿಕವಾಗಿ ನಡೆಯುವ ಅವ್ಯಾಹತ ಅತ್ಯಾಚಾರ, ಹನನ. ಇನ್ನೊಂದೆಡೆ ಆಪಾದಿತ ಹೆಣ್ಣುಮಕ್ಕಳ ಮೇಲೆ ನಿರಂತರ ನಡೆಯುವ ವಾಚಿಕ ಅತ್ಯಾಚಾರ. ಇವೆರಡು ಇಲ್ಲದೆ ದಿನವೇ ಹೋಗದು ಎನ್ನುವಂತಾಗಿದೆ. ಇವೆರಡರಲ್ಲಿ ಯಾವುದು ಹೆಚ್ಚು ಮನೋವೇದಕ?!... ಅಳತೆಗೆ ದಕ್ಕುವುದೇ?

ವಿಶೇಷ ಎಂದರೆ ಡ್ರಗ್ಸ್ ಪ್ರಕರಣದಲ್ಲಂತೂ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಿರುವುದು, ಅದು ಎದ್ದು ಕಾಣುತ್ತಿದೆ. ಇಷ್ಟಕ್ಕೂ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಸಂಬಂಧಪಟ್ಟ ಇಲಾಖೆ, ಆಪಾದಿತ ವ್ಯಕ್ತಿ ಕುರಿತ ಶಂಕೆ, ಅವರ ಕುಟುಂಬ ಇತ್ಯಾದಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾದರೂ ಯಾಕೆ? ಆಪಾದಿತರನ್ನು ಅಪರಾಧಿ ಎಂಬಂತೆಯೆ ಮಾಧ್ಯಮಗಳು ಬಿಂಬಿಸಿ, ವಾಚಾಮಗೋಚರವಾಗಿ ಹೀಗಳೆಯಲು ಇದು ಎಡೆ ಮಾಡಿಕೊಟ್ಟಂತೆ ಅಲ್ಲವೆ?

ಸರಿ, ಆಪಾದಿತರು ಸಿಲುಕಿದ ಪ್ರಸಂಗಗಳ ಕುರಿತು ಮಾಧ್ಯಮಗಳು ತಿಳಿಸಬೇಕಾದ್ದು ಕರ್ತವ್ಯ ಎಂದುಕೊಳ್ಳೋಣ. ವಾರ್ತೆಗಳು ವಾರ್ತೆಗಳ ಮಟ್ಟಕ್ಕೇ ಉಳಿದರೆ ಅದು ಉಚಿತವೇ. ಆದರೆ ತಿಳಿಸುವ ಕಾರ್ಯವನ್ನು ಅಷ್ಟಕ್ಕೇ ನಿಲ್ಲಿಸದೆ ಗೆರೆದಾಟಿ ಅಲ್ಲಿಂದ ಮುಂದೆ ಅವು ‘ಹೆಣ್ಣು’ ಎಂಬುದಕ್ಕೆ ವಿಶೇಷ ಒತ್ತು ಕೊಡುತ್ತವೆ. ಮೊದಲೇ ವಿಷಮ ವಿಷಯ, ಅದಕ್ಕೆ ವರದಿಯ ವೇಷದಲ್ಲಿ ವಿಷ ಬೆರೆಸುತ್ತವೆ. ಆಪಾದಿತ ಹೆಣ್ಣಿನ ಕುರಿತು ಸಿಕ್ಕ ವಿಡಿಯೊಗಳನ್ನು ಬಿಡದೆ ಪದೆ ಪದೇ ತೋರಿಸುವುದು, ವಾರ್ತೆಯ ಹೆಸರಿನಲ್ಲಿ ಅಸಹ್ಯವನ್ನೂ ಮೀರುವ ಗಲೀಜು ಭಾಷೆ ಪ್ರಯೋಗಿಸುವುದು, ಸಮಾಜಕ್ಕೆ ಅಮಲು ಏರಿಸಿದಂತೆಯೇ ಅಲ್ಲವೆ? ಈಗಾಗಲೇ ಹೆಣ್ಣೆಂಬುದು ಸುಲಭಕ್ಕೆ ಎರಗಲು ಸುಡಲು ಸಿಗುವ ಪ್ರಾಣಿ ಎಂಬಂಥ ಘಟನೆಗಳನ್ನು ದಿನದಿನ ಕೇಳುತ್ತಿದ್ದೇವೆ. (ನಿನ್ನೆ ಮೊನ್ನೆಯಷ್ಟೇ ನುಂಗಲಸಾಧ್ಯ ಪೈಶಾಚಿಕ ಕೃತ್ಯಗಳು ನಡೆದಿವೆ) ಈ ಬಗ್ಗೆ ಒಂದಿಷ್ಟೂ ಸೂಕ್ಷ್ಮವಂತಿಕೆ ಮಾಧ್ಯಮಗಳಿಗೆ ಇಲ್ಲದೆ ಹೋಯಿತೆ!

ತನಿಖೆಯ ಮುಕ್ತಾಯದಲ್ಲಿ ಆಪಾದಿತರಲ್ಲಿ ಕೆಲವರು ಅಪರಾಧಿಗಳಾಗಲೂಬಹುದು, ಆಗದೆಯೂ ಇರಬಹುದು. ಯಾವುದೇ ಆಪಾದಿತರಿಗೆ ಅವರ ಮೇಲಿನ ಆಪಾದನೆಯ ಆಚೆ ಒಂದು ಘನತೆ ಇದೆ, ಅದನ್ನು ಕುಂದಿಸುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನೇ ಮರೆತು, ಸಿಕ್ಕಿತು ಒಂದು (ಹೆಣ್ಣು) ಮಿಕ ತಮ್ಮ ಟಿಆರ್‌ಪಿಗೆ ಎಂಬಂತೆ ಸಂಭ್ರಮ ಪಡುವುದೇನು. ತಮ್ಮದೇ ಘನತೆಯನ್ನೂ ಮರೆತು ದಭದಭದಭ ‘ವಾರ್ತಿಸುವ’ ಪರಿಯೇನು! ಟಿಆರ್‌ಪಿ ಎಂಬುದು ಒಬ್ಬ ಹೆಣ್ಣಿನ ಆತ್ಮಹನನಕ್ಕಿಂತ ಮುಖ್ಯವೇ? ವಾರ್ತೆಗಳಾದರೋ ಇವತ್ತು ನಮ್ಮನ್ನು ತಲುಪುವುದು ತೀರ್ಪಿನಂತೆ. ತಮತಮಗೆ ಬೇಕಾದ ತೀರ್ಪಿನಂತೆ. ತನಿಖೆಗಳು, ಮಾಧ್ಯಮಗಳು ಗೊತ್ತೇ ಆಗದಂತೆ ಆಪಾದಿತ ಮಹಿಳೆಯರಿಗೆ ಮಾಡುವ ಮಾನಹಾನಿ ಮತ್ತು ವಾಚಿಕ ಅತ್ಯಾಚಾರಗಳ ವಿಚಾರಣೆ ಮಾಡುವವರೇ ಇಲ್ಲದ ಪರಿಸ್ಥಿತಿ ನಮ್ಮದು! ಅಪರಾಧಗಳು ಸಂಭವಿಸಲಿ (ಅದೂ ಹೆಣ್ಣುಮಕ್ಕಳಿಂದ) ಎಂದು ಹರಕೆ ಹೊತ್ತಂತೆ ಕಾಣುವ ಮಾಧ್ಯಮಗಳಿಗೆ ಅಂತಹ ಪ್ರಕರಣಗಳು ತಮ್ಮ ಉಳಿವಿಗೆ ಒದಗುವ ಪ್ರಾಣವಾಯುವೆಂಬಂತೆ ಕಾಣುತ್ತಿದೆ. ಬಿಡಿ, ತಪ್ಪು ಯಾರು ಮಾಡಿದರೂ ತಪ್ಪೇ ಎಂಬುದಕ್ಕಿಂತ ತಪ್ಪು ಹೆಣ್ಣಿನಿಂದ ಸಂಭವಿಸಿದ್ದೇ ಹೌದಾದರೆ ಅದು ಮಹಾತಪ್ಪು ಆಗಿಬಿಡುವುದು ಇಂದು ನಿನ್ನೆಯದಲ್ಲ.

ಯಾರೂ ಅಪರಾಧಿಗಳನ್ನು ತೊಟ್ಟಿಲು ಕಟ್ಟಿ ತೂಗಿ ಎನ್ನುವುದಿಲ್ಲ, ಅವರ ಪರವಾದ ವಾದವೂ ಅಲ್ಲ ಇದು. ಅಪರಾಧ ಎಸಗಿದ್ದೇ ಹೌದಾದರೆ ಅವರು ಮಹಿಳೆಯಾಗಲಿ ಪುರುಷನಾಗಲಿ ಯಾವ ಭೇದವಿಲ್ಲ. ಅಪರಾಧಕ್ಕೆ ತಕ್ಕ ಶಿಕ್ಷೆ ಇದೆ. ಯಾವ ಒತ್ತಡಕ್ಕೂ ಮಣಿಯದೆ, ಶಿಕ್ಷೆ ಆಗಲೇಬೇಕು. ಅದರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT