ಪ್ರೀತಿಯ ಬಂಧ ಬೆಸೆಯಲು ರಕ್ತಸಂಬಂಧಿಯೇ ಆಗಬೇಕೆಂದೇನೂ ಇಲ್ಲ. ಅದಕ್ಕಿಂತಲೂ ಹೆಚ್ಚು ಅಕ್ಕರೆ, ಒಡನಾಟ ಬೆಳೆಯಲು ಆ ಸಂದರ್ಭದ ಕಾಳಜಿ ಕಾರಣವಾಗಿಬಿಡುತ್ತದೆ.

ನನಗೂ ಹಾಗೇ, ರಕ್ತಸಂಬಂಧಿಯಲ್ಲದ, ಆದರೆ ಅದಕ್ಕಿಂತಲೂ ಹೆಚ್ಚಾಗಿದ್ದ ಅಜ್ಜನೊಬ್ಬನಿದ್ದ. ಅವನೇ ನನ್ನ ಪೆಣ್ಣಜ್ಜ. ಅವ ನನ್ನನ್ನು ಚಿಕ್ಕಂದಿನಲ್ಲಿ ಹಳೆಗನ್ನಡ ಭಾಷೆಯಲ್ಲಿ ಪೆಣ್ಣು (ಹೆಣ್ಣು) ಎಂದು ಕರೆಯುತ್ತಿದ್ದರಿಂದ ನನ್ನ ಬಾಯಲ್ಲಿ ಅವ ಪೆಣ್ಣಜ್ಜನೇ ಆಗಿಬಿಟ್ಟಿದ್ದ.

ಬಾಲ್ಯದಿಂದಲೂ ತಮಾಷೆ, ಕೀಟಲೆ ಮಾಡುತ್ತಾ ನನಗೆ ಹೆಚ್ಚು ಪ್ರಿಯವಾಗಿದ್ದ ಪಕ್ಕದ ಮನೆಯ ಪೆಣ್ಣಜ್ಜ, ಪ್ರೌಢಾವಸ್ಥೆಗೆ ಬರುವಾಗ ತಾಯಿಯನ್ನು ಕಳೆದುಕೊಂಡ ನನಗೆ ಹೆಚ್ಚು ಆಪ್ತನಾದ. ಮಮತೆ ತೋರುವ ತಾಯಿಯಾಗಿ, ತಿದ್ದಿ ಬುದ್ಧಿ ಹೇಳುವ ತಂದೆಯಾಗಿ, ಬೇಸರ ಕಳೆಯುವ ಸ್ನೇಹಿತನಾಗಿ, ಮಾರ್ಗದರ್ಶಕನಾಗಿ, ನನ್ನಪ್ಪ ಬೇರೆ ಊರಲ್ಲಿ ಉಳಿಯಲೇಬೇಕಾದ ಸಂದರ್ಭಗಳಲ್ಲಿ ನನ್ನ ಕಾವಲುಗಾರನಾಗಿ, ಒಬ್ಬಂಟಿ ಅನಿಸಿದಾಗಲೆಲ್ಲ ಪಗಡೆ, ಚೆನ್ನೆಮಣೆ, ಚದುರಂಗದಾಟಗಳಿಗೆ ಎದುರಾಳಿಯಾಗಿ... ಹೀಗೆ ನನ್ನ ಬದುಕಿನಲ್ಲಿ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ.

ತಾನು ಹೋಟೆಲ್, ಅಂಗಡಿಗಳಿಗೆ ಹೋಗಿ ಏನೇ ತಿಂದರೂ ಪೆಣ್ಣಿಗೆ ಎಂದು ಕಟ್ಟಿಸಿಕೊಂಡು ತರುತ್ತಿದ್ದ. ತನ್ನ ಮನೆಯಲ್ಲಿ ಯಾವುದೇ ವಿಶೇಷ ಖಾದ್ಯ ಮಾಡಿದರೂ ಈ ಪೆಣ್ಣಿಗೆ ಪಾಲಿರುತ್ತಿತ್ತು. ವರ್ಷದ ಜಾತ್ರೆಯಲ್ಲಿ ರಾತ್ರಿ ತೆಪ್ಪೋತ್ಸವಕ್ಕೆಂದೇ ಬಿಡುತ್ತಿದ್ದ ವಿಶೇಷ ಬಸ್ಸಿನಲ್ಲಿ ನಮ್ಮಿಬ್ಬರಿಗೂ ಸೀಟು ಕಾದಿರಿಸಿ, ಜೋಪಾನವಾಗಿ ಕರೆದುಕೊಂಡು ಹೋಗಿ ಬರುತ್ತಿದ್ದ. ನನಗೆ ನೆನಪಿರುವ ಹಾಗೆ, ನಾಲ್ಕನೇ ತರಗತಿಯಿಂದ ನನ್ನ ಮದುವೆಯಾಗುವ ಹಿಂದಿನ ವರ್ಷದವರೆಗೂ ಪೆಣ್ಣಜ್ಜನೇ ನನ್ನ ಜಾತ್ರೆಯ ಜೊತೆಗಾರ. ವಿದುರನಾಗಿದ್ದ ಅಜ್ಜ, ತನ್ನ ಹೆಣ್ಣುಮಕ್ಕಳ ಮದುವೆಯಾದ ಮೇಲೆ ಮಗ– ಸೊಸೆಯೊಂದಿಗೆ ವಾಸವಿದ್ದ. ನಂತರದ ಮಗಳು ನಾನೇ ಆಗಿಹೋಗಿದ್ದೆ.

ನನ್ನ ಮದುವೆ ನಿಶ್ಚಯವಾಯಿತೆಂದು ತಿಳಿದಾಗ ಪೆಣ್ಣಜ್ಜನಿಗೆ ಸಂತೋಷಕ್ಕಿಂತ ಪೆಣ್ಣು ದೂರ ಹೋಗುತ್ತಾಳೆ ಎಂಬ ದುಃಖವೇ ಜಾಸ್ತಿಯಾಗಿತ್ತು. ಅದೂ ದೂರದ ಬೆಂಗಳೂರಲ್ಲಿ ಇರುತ್ತೇನೆಂದು ತಿಳಿದು, ‘ಮದುವೆಯಾದ ಮೇಲೆ ಅಜ್ಜನನ್ನು ಮರೆತುಬಿಟ್ಟೀಯ. ಆಗಾಗ ಬಂದುಹೋಗು. ನನ್ನ ಸಾವು ಹತ್ತಿರ ಬಂದ ಸುದ್ದಿ ತಿಳಿದರೆ ಬಂದು ಬಾಯಿಗೆ ನೀರು ಬಿಡು, ನೆಮ್ಮದಿಯಾಗಿ ಕಣ್ಣು ಮುಚ್ಚುತ್ತೇನೆ’ ಎಂದಿದ್ದ. ‘ಹೀಗೇಕೆ ಮಾತನಾಡುತ್ತೀಯ ಅಜ್ಜಾ’ ಎಂದು ಪ್ರೀತಿಯಿಂದ ಗದರಿ ಎದ್ದುಹೋಗಿದ್ದೆ. ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತಾಗ, ನನ್ನಪ್ಪನಷ್ಟೇ ದುಃಖ, ಸಂಕಟವನ್ನು ಅಜ್ಜನೂ ಅನುಭವಿಸಿದ್ದ.

ವಿಪರ್ಯಾಸವೆಂದರೆ, ಅಜ್ಜನ ಕೊನೇ ಕ್ಷಣವಿರಲಿ, ಅವನ ಸಾವಿಗೂ ನನಗೆ ಹೋಗಲಾಗಲಿಲ್ಲ. ಅಜ್ಜನ ಸಾವಾದಾಗ ನಾನು ಎರಡು ತಿಂಗಳ ಗರ್ಭಿಣಿ. ವೈದ್ಯರು ಪ್ರಯಾಣ ಮಾಡಲೇ ಬಾರದೆಂದು ಖಡಾಖಂಡಿತವಾಗಿ ಹೇಳಿದ್ದರಿಂದ ನನ್ನ ಪತಿ, ಅತ್ತೆ, ಮಾವ ಕಳುಹಿಸಿಕೊಡಲು ಸಾಧ್ಯವೇ ಇಲ್ಲ ಎಂದುಬಿಟ್ಟರು. ಅತ್ತ ನನ್ನಪ್ಪನೂ ‘ಇಂತಹ ಸಮಯದಲ್ಲಿ ನೀ ಬರುವುದು ಬೇಡ’ ಎಂದಾಗ ಇದ್ದ ಒಂದು ಆಸೆಯೂ ಕಮರಿದಂತಾಗಿತ್ತು.

ಆ ಒಂದು ಕ್ಷಣ ನನ್ನ ಹಾಗೂ ಪೆಣ್ಣಜ್ಜನ ಬಾಂಧವ್ಯದ ನಂಟನ್ನು, ನಾ ಅಲ್ಲಿಗೆ ಹೋಗುವುದು ನನಗೆ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ಮನೆಯವರಿಗೆ ತಿಳಿಸುವಲ್ಲಿ ವಿಫಲಳಾದೆ ಎಂಬ ಕೊರಗು ಇಂದಿಗೂ ಕಾಡುತ್ತದೆ. ಅವರಿಗೆಲ್ಲ ಅವನು ಕೇವಲ ಪಕ್ಕದಮನೆಯ ಅಜ್ಜ. ಆದರೆ ನನಗೆ ರಕ್ತಸಂಬಂಧ ಮೀರಿ ಬೆಳೆದ ಆತ್ಮೀಯತೆಯ ಒಂದು ಜೀವ. ಆದರೆ ಅವನ ಕೊನೆಯ ಆಸೆಯಂತೆ ನನಗೆ ನಡೆದುಕೊಳ್ಳಲಾಗಲಿಲ್ಲ.

ಅಜ್ಜ ನಮ್ಮಿಂದ ದೂರಾಗಿ ಹಲವು ವರ್ಷಗಳೇ ಆಗಿವೆ. ಈಗಲೂ ತವರಿಗೆ ಹೋದಾಗ ಅವರ ಮನೆಯ ಗೋಡೆಯ ಮೇಲಿರುವ ಪೆಣ್ಣಜ್ಜನ ಭಾವಚಿತ್ರ, ‘ಕೊನೆಗೂ ನೀನು ಅಂದು ಬರಲಿಲ್ಲವಲ್ಲೇ ಪೆಣ್ಣೇ’ ಎಂದು ಕೇಳಿದಂತೆ ಭಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.