ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಎನಿಸಿಕೊಳ್ಳೋದು ಸುಲಭವಲ್ಲ..

Last Updated 17 ಜನವರಿ 2020, 19:30 IST
ಅಕ್ಷರ ಗಾತ್ರ

ತಂದೆ– ಮಗಳ ನಡುವಿನ ಬಾಂಧವ್ಯ ಗಟ್ಟಿಯಾದರೆ, ಅದು ಮಗಳ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿದಂತೆ. ಆಕೆಯ ಬದುಕಿನಲ್ಲಿ ಇದರಿಂದ ಹೆಚ್ಚುವರಿ ಲಾಭಗಳಾದರೆ, ತಂದೆಯೂ ಸವಿನೆನಪಿನ ಬುತ್ತಿ ಹೊತ್ತು ಸಾಗಬಹುದು.

ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಜೊತೆ ಅಪ್ಪನ ಸುಮಧುರ ಬಾಂಧವ್ಯವೂ ಶುರುವಾಗುತ್ತದೆ. ತನ್ನ ಮುದ್ದು ಮಗಳ ಮಾನಸಿಕ ಬೆಳವಣಿಗೆಯ ಮೇಲೆ ಆತನ ಅಪಾರ ಪ್ರಭಾವ ಶುರುವಾಗುವುದು ಅಲ್ಲಿಂದಲೇ. ಹಾಗೆಯೇ ಮಗಳಿಗೂ ಅಷ್ಟೆ, ತನ್ನ ಬದುಕಿನಲ್ಲಿ ಅಪ್ಪ ಎಂಬಾತನಿದ್ದರೆ ಗಟ್ಟಿಯಾದ, ಆರೋಗ್ಯಕರವಾದ ಅಸ್ಮಿತೆಯನ್ನು ಬೆಳೆಸಿಕೊಳ್ಳುತ್ತಾಳಂತೆ. ಆತ್ಮವಿಶ್ವಾಸವಲ್ಲದೇ, ಬದುಕಿನಲ್ಲಿ ಏನು ಸಾಧಿಸಬೇಕು ಎಂಬುದರ ಕುರಿತೂ ಗಟ್ಟಿಯಾದ ನಿಲುವು ತಾಳುವಂತಹ ಶಕ್ತಿಯನ್ನು ಆಕೆಗೆ ನೀಡುವುದು ಅಪ್ಪನೆಂಬ ಭದ್ರತೆಯ ಭಾವ.

ಇದು ಇಲ್ಲಿಗೇ ನಿಲ್ಲುವುದಿಲ್ಲ ಎನ್ನುತ್ತಾರೆ ತಜ್ಞರು. ಹುಡುಗರ ಜೊತೆಗಿನ ಮಗಳ ಸಂಬಂಧದ ಮೇಲೆಯೂ ಅಪ್ಪ ಗಾಢ ಪ್ರಭಾವ ಬೀರುತ್ತಾನಂತೆ. ಇಂತಹ ಸಂಬಂಧಗಳಿಗೆ ಒಂದು ಅಲಿಖಿತ ನಿಯಮವನ್ನು ರೂಪಿಸುವುದು ಅಪ್ಪನೇ. ಹೀಗಾಗಿ ಆತನ ಪ್ರಭಾವ ಮಗಳ ಭವಿಷ್ಯದ ಮೇಲೆಯೂ ಆಗುವುದು ಪಕ್ಕಾ.

ನಿಮ್ಮ ಮಗಳ ಜೊತೆಗಿನ ಬಾಂಧವ್ಯ ಗಟ್ಟಿಯಾಗಿದ್ದರೆ ಆಕೆ ಶೈಕ್ಷಣಿಕವಾಗಿಯೂ ಸಾಧನೆ ಮಾಡಬಲ್ಲಳು. ಯಾವುದೇ ಹಿಂಜರಿಕೆಯಿಲ್ಲದೇ ತನ್ನ ನಿಲುವನ್ನು ವ್ಯಕ್ತಪಡಿಸಬಲ್ಲಳು. ತನ್ನ ಬದುಕಿನ ಬಗ್ಗೆ ಭದ್ರತೆಯ ಭಾವವನ್ನು ಹೊಂದಬಲ್ಲಳು.

ಹುಟ್ಟಿದಾಗಲೇ ಮುನ್ನುಡಿ ಹಾಕಿಕೊಳ್ಳಿ

ಇಷ್ಟೆಲ್ಲ ಸಕಾರಾತ್ಮಕತೆ ತಂದೆ– ಮಗಳ ಸಂಬಂಧದಲ್ಲಿ ತುಂಬಿದೆ ಎಂದರೆ ಅದಕ್ಕೆ ಮುನ್ನುಡಿಯಾಗಿ ಮಗಳ ಜೊತೆ ಯಾವ ರೀತಿಯ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಮಗಳು ಹುಟ್ಟಿದ ಕೂಡಲೇ ಶುರು ಮಾಡುವುದು ಒಳಿತು. ಇದರಿಂದ ಆಕೆಯ ಭವಿಷ್ಯಕ್ಕೆ ಒಂದು ಒಳ್ಳೆಯ ವೇದಿಕೆಯನ್ನು ನೀವು ಸೃಷ್ಟಿಸಿಕೊಳ್ಳಬಹುದು.

ಮಗಳು ಹುಟ್ಟಿದಾಗ ಆಕೆಯ ಜೊತೆ ಆದಷ್ಟು ಹೆಚ್ಚು ಸಮಯ ಕಳೆಯಲು ಶುರು ಮಾಡಿ. ಪುಟ್ಟ ಮಗುವಿನ ಡಯಾಪರ್‌ ಬದಲಿಸುವುದು, ಸ್ನಾನ ಮಾಡಿಸುವುದು, ಅತ್ತಾಗ ಎತ್ತಿಕೊಂಡು ಸುಮ್ಮನಿರಿಸುವುದು... ಇದರಿಂದ ನಿಮ್ಮ ಪತ್ನಿಗೂ ಸಹಾಯ ಮಾಡಿದಂತಾಗುತ್ತದೆ.

ಮಗಳಿಗೆ ಆಟ ಆಡಿಸುವುದು, ಓದಲು– ಬರೆಯಲು ಕಲಿಸುವುದು, ಸೈಕಲ್‌ ಸವಾರಿ ಕಲಿಸುವುದು... ಇವೆಲ್ಲ ಆಕೆಯಲ್ಲಿ ನಿಮ್ಮ ಬಗ್ಗೆ ಆಪ್ತ ಭಾವ ಬೆಳೆಸುತ್ತದೆ. ಆದರೆ ಇದಕ್ಕಿಂತ ಹೆಚ್ಚಿನದು ಅಂದರೆ ಗಂಡುಮಕ್ಕಳು ಮಾಡುವಂತಹ ಕೆಲಸಗಳನ್ನು ಕಲಿಸಿದರೆ ಆಕೆಗೆ ತನ್ನ ಅಪ್ಪನೇ ನಿಜವಾದ ಹೀರೊ ಎನ್ನಿಸುವುದು ಖಚಿತ. ಕಾರಿನ ಚಕ್ರ ಬದಲಿಸುವಾಗ ನೆರವು ಪಡೆಯಿರಿ. ಸುಮ್ಮನೆ ಚೆಂಡು ಎಸೆಯುವ ಬದಲು ಕ್ರಿಕೆಟ್‌ ಆಟ ಕಲಿಸಿ.

ಗಟ್ಟಿ ಮನೋಭಾವ

ಇಂತಹ ಕೌಶಲಗಳನ್ನು ಕಲಿತರೆ ಆಕೆಯಲ್ಲಿ ಆತ್ಮವಿಶ್ವಾಸ ಗಟ್ಟಿಯಾಗುತ್ತದೆ. ಯಾವುದೇ ಸಮಸ್ಯೆಯನ್ನಾದರೂ ಎದುರಿಸಬಲ್ಲೆ ಎಂಬ ಗಟ್ಟಿ ಮನೋಭಾವ ಬೆಳೆಸಿಕೊಳ್ಳುವುದು ಖಚಿತ.

ಹೆಣ್ಣುಮಕ್ಕಳು ಬೆಳೆಯುತ್ತ ಹೋದಂತೆ ಮಾತನಾಡುವುದೂ ಜಾಸ್ತಿ. ತನ್ನ ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಬೇಕೆಂಬ ತಹತಹ ಇರುತ್ತದೆ ಆಕೆಯಲ್ಲಿ. ಹೀಗಾಗಿ ಮಗಳ ಮಾತುಗಳಿಗೆ ಕಿವಿಗೊಡುತ್ತ, ಮಧ್ಯೆ ನಿಮ್ಮ ಅಭಿಪ್ರಾಯ ಹೇಳುತ್ತ ಹೋದರೆ ಬಾಂಧವ್ಯ ಇನ್ನಷ್ಟು ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಆಕೆಯ ಕನಸುಗಳಿಗೆ, ಗುರಿಗಳಿಗೆ ನೀರೆರೆಯುತ್ತ ಹೋದಂತೆ ಮಗಳು ಮತ್ತಷ್ಟು ಸಮೀಪವಾಗುತ್ತಾಳೆ. ಆಕೆ ವೈಯಕ್ತಿಕ ವಿಷಯ ಹೇಳಿಕೊಂಡರೆ ಸಮಾಧಾನದಿಂದ ಆಲಿಸಿ. ಇದರಿಂದ ವಿಶ್ವಾಸ ಮೂಡುತ್ತದೆ.

ಇಷ್ಟೇ ಅಲ್ಲ, ಇತರ ಮಹಿಳೆಯರ ಜೊತೆ ನೀವು ಹೇಗೆ ನಡೆದುಕೊಳ್ಳುತ್ತೀರಿ ಎಂಬುದು ಕೂಡ ನಿಮ್ಮ ಮಗಳ ಮೇಲೆ ಪ್ರಭಾವ ಬೀರುತ್ತದೆ. ನೀವು ನಿಮ್ಮ ಪತ್ನಿ ಮತ್ತು ಮಗಳಿಗೆ, ಆಕೆಯ ಸ್ನೇಹಿತೆಯರ ಬಗ್ಗೆ ಗೌರವ ತೋರಿಸಿದರೆ, ವಿಶ್ವಾಸ, ಸೌಹಾರ್ಧದಿಂದ ನಡೆದುಕೊಂಡರೆ ಮುಂದೆ ಅಂತಹ ಗುಣಗಳಿರುವ ಹುಡುಗನನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು.

ಅತ್ಯಂತ ಮುಖ್ಯವಾದದ್ದು, ನೀವು ಮತ್ತು ನಿಮ್ಮ ಪತ್ನಿಯ ಮಧ್ಯೆ ಇರುವ ಸಂಬಂಧ. ದೈಹಿಕವಾಗಿ, ಮಾನಸಿಕವಾಗಿ ಪತ್ನಿಯನ್ನು ಹಿಂಸಿಸಿದರೆ ಇದು ಸಂಬಂಧದಲ್ಲಿ ಸಾಮಾನ್ಯ ಎಂದು ಆಕೆ ತಿಳಿದುಕೊಳ್ಳುವ ಸಾಧ್ಯತೆ ಇದೆ. ಸಂಬಂಧದ ಬಗ್ಗೆ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಹೀಗಾಗಿ ಆಕೆಗೆ ಒಂದು ಮಾದರಿಯಾಗಿ ನೀವು ನಿಲ್ಲಬೇಕಾಗುತ್ತದೆ. ಪ್ರಾಮಾಣಿಕ, ನಂಬಿಕಸ್ಥ, ಶ್ರಮಜೀವಿ ಎನಿಸಿಕೊಂಡ ಹುಡುಗನನ್ನು ನಿಮ್ಮ ಮಗಳು ವರಿಸಬೇಕು ಎಂಬ ಬಯಕೆ ಇದ್ದರೆ, ನೀವೂ ಕೂಡ ಹಾಗೆಯೇ ಇರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT