ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಗಮದಲ್ಲಿ ಸರಿಗಮ ದಂಪತಿಯಿರಲಿ ಮುಕ್ತ.. ಮುಕ್ತ..

Last Updated 2 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ರಿಲೇಷನ್‌ಶಿಪ್‌: ಮಾನವನ ಲೈಂಗಿಕತೆ ಪ್ರಾಣಿಗಳ ಲೈಂಗಿಕತೆಗಿಂತ ಸಂಪೂರ್ಣ ಭಿನ್ನವಾದದ್ದು. ದಾಂಪತ್ಯದಂತಹ ದೀರ್ಘಕಾಲೀನ ಬದ್ಧ ಸಂಬಂಧಗಳಲ್ಲಿ ಇಬ್ಬರೂ ಲೈಂಗಿಕ ಆಸಕ್ತಿಯನ್ನು ಉಳಿಸಿಕೊಳ್ಳದಿದ್ದರೆ ಸಂಬಂಧಗಳು ಹಳಿ ತಪ್ಪಬಹುದು.

ರಮಾ ಮತ್ತು ರೋಹಿತ್‌ಗೆ ಮದುವೆಯಾಗಿ ಮೂರು ವರ್ಷಗಳಾಗಿವೆ. ದಾಂಪತ್ಯದಲ್ಲಿ ಅತೃಪ್ತಿ ಆಗಾಗ ಹೊಗೆಯಾಡುತ್ತಿತ್ತು. ಇದಕ್ಕೆ ಸ್ಪಷ್ಟ ಕಾರಣಗಳು ಯಾವವು ಅಂತ ಇಬ್ಬರಿಗೂ ತಿಳಿಯದಿದ್ದರೂ ಒಮ್ಮೊಮ್ಮೆ ವಿರಸ ಕಾಣಿಸಿಕೊಳ್ಳುತ್ತಿತ್ತು. ವಾರಾಂತ್ಯದ ರಜಗಳನ್ನು ಸಂತೋಷವಾಗಿ ಕಳೆಯುವುದಕ್ಕೆ ಪೀಠಿಕೆಯಾಗಿ ಶುಕ್ರವಾರ ರಾತ್ರಿ ಅವರು ಸಮಾಗಮವನ್ನು ಕಡ್ಡಾಯವಾಗಿ ಏರ್ಪಡಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ರಮಾ ಪ್ರತೀ ವಾರಾಂತ್ಯದಲ್ಲಿ ಮೊದಲಿನ ಉತ್ಸಾಹ ತೋರಿಸದಿರುವುದಕ್ಕಾಗಿ ರೋಹಿತ್ ಸಹಜವಾಗಿ ನಿರಾಸೆಗೊಳ್ಳುತ್ತಿದ್ದ. ಈ ಬೇಸರ ವಾರಾಂತ್ಯದ ಎರಡು ದಿನಗಳನ್ನೂ ಆವರಿಸಿಕೊಳ್ಳುತ್ತಿತ್ತು.

‘ಕೇವಲ ಒಂದು ದಿನದ ಸಮಾಗಮ ತಪ್ಪಿದ್ದಕ್ಕಾಗಿ ಇಡೀ ವಾರಂತ್ಯದ ಸಂತೋಷವನ್ನೇಕೆ ಹಾಳು ಮಾಡುತ್ತೀಯಾ? ನಮ್ಮ ಸಂಬಂಧದ ಮೂಲಾಧಾರ ಕೇವಲ ಕಾಮವೇ?’ ಎನ್ನುವ ರಮಾಳ ಪ್ರಶ್ನೆಗಳಿಗೆ ರೋಹಿತ್‌ನಲ್ಲಿ ಸ್ಪಷ್ಟ ಉತ್ತರವಿರಲಿಲ್ಲ.

ದಾಂಪತ್ಯದಂತಹ ಬದ್ಧ ಸಂಬಂಧಗಳಲ್ಲಿ ಕಾಮದ ವಿಚಾರದಲ್ಲಿನ ಭಿನ್ನಾಭಿಪ್ರಾಯ ಇತರ ವಿಚಾರಗಳಿಗೂ ಹರಡಿಕೊಳ್ಳುತ್ತದೆಯೇ? ಅಥವಾ ಇತರ ವಿಚಾರಗಳಲ್ಲಿನ ಭಿನ್ನಾಭಿಪ್ರಾಯ ಹಾಸಿಗೆಗೂ ತಲುಪುತ್ತದೆಯೋ? ಮೊಟ್ಟೆ ಮೊದಲೋ, ಕೋಳಿ ಮೊದಲೋ ಎನ್ನುವ ರೀತಿಯ ಜಿಜ್ಞಾಸೆಯಿದು.

ವಾಸ್ತವವಾಗಿ ನಮ್ಮೆಲ್ಲರ ವ್ಯಕ್ತಿತ್ವಗಳು ಮಲಗುವ ಕೋಣೆಯಲ್ಲಿ ಮಾತ್ರ ಬೇರೆ ರೀತಿಯಲ್ಲಿ ಪ್ರಕಟಗೊಳ್ಳುವುದಿಲ್ಲ. ಪತಿ–ಪತ್ನಿಯರು ದಾಂಪತ್ಯದ ಇತರ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ದೈಹಿಕ ಸಂಬಂಧದಲ್ಲಿಯೂ ತೊಡಗಿಸಿಕೊಳ್ಳುತ್ತಾರೆ. ಭಿನ್ನಾಭಿಪ್ರಾಯಗಳನ್ನು ಆಯಾಯ ವಿಚಾರಗಳಿಗೆ ಸಂಬಂಧಿಸಿದ್ದು ಎನ್ನುವ ದೃಷ್ಟಿಕೋನದಿಂದ ನೋಡಲು ಸಾಧ್ಯವಿಲ್ಲ. ಹಣಕಾಸು, ಲೈಂಗಿಕ ಸಂಬಂಧ, ಮನೆಗೆಲಸ, ಮಕ್ಕಳ ಜವಾಬ್ದಾರಿ.. ಹೀಗೆ ಎಲ್ಲಾ ವಿಚಾರಗಳಲ್ಲಿ ಪ್ರಕಟವಾಗುವ ಭಿನ್ನಾಭಿಪ್ರಾಯಗಳ ಹಿಂದೆ ಸಂಗಾತಿಗಳ ಒಂದೇ ರೀತಿಯ ಮಾನಸಿಕ ಮತ್ತು ಭಾವನಾತ್ಮಕ ಹೋರಾಟಗಳಿರುತ್ತವೆ.

ಪತಿ–ಪತ್ನಿಯರು ಮಾತ್ರ ಒಟ್ಟಾಗಿ ಬದುಕುವ ಇವತ್ತಿನ ಕುಟುಂಬಗಳಲ್ಲಿನ ದಾಂಪತ್ಯದ ಸ್ವರೂಪ ಹಿಂದಿನಂತೆ ಉಳಿದಿಲ್ಲ. ಹೀಗಾಗಿ ಕಾಮ ಎನ್ನುವುದು ದಾಂಪತ್ಯದಲ್ಲಿ ಸಹಜವಾಗಿ ನಡೆಯುವ ಕ್ರಿಯೆ, ದಂಪತಿಗಳಿಗೆ ಈ ವಿಚಾರದಲ್ಲಿ ಸಹಮತವನ್ನು ಮೂಡಿಸಿಕೊಳ್ಳಲು ವಿಶೇಷ ಪರಿಶ್ರಮದ ಅಗತ್ಯವಿಲ್ಲ ಎನ್ನುವ ನಂಬಿಕೆಯೂ ಆಧಾರರಹಿತವಾದದ್ದು. ಕಾಮಸಂಬಂಧವನ್ನು ಕಟ್ಟಿಕೊಳ್ಳುವುದಕ್ಕೆ ಪತಿ–ಪತ್ನಿಯರು ಸಹನೆಯಿಂದ ಶ್ರಮವಹಿಸಬೇಕಾಗುತ್ತದೆ.

ಲೈಂಗಿಕತೆಗೆ ಹೊಸ ಆಯಾಮ

*ಕಾಮ ಎನ್ನುವುದು ತೀರಾ ಖಾಸಗಿಯಾದ ವಿಚಾರ. ಅದನ್ನು ಹಂಚಿಕೊಳ್ಳುವ, ಅನುಭವಿಸುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದರಲ್ಲಿ ಯಾವ ಸರಿತಪ್ಪುಗಳು, ಮೇಲುಕೀಳುಗಳಿಲ್ಲ. ಒಬ್ಬರಿಗೆ ಮಾನಸಿಕ ಅಥವಾ ದೈಹಿಕ ಹಿಂಸೆ ಎನ್ನಿಸಿದ ಎಲ್ಲಾ ಕ್ರಿಯೆಗಳನ್ನು ಸಂಗಾತಿಗಳು ನಿಸ್ಸಂಕೋಚವಾಗಿ ಹಂಚಿಕೊಳ್ಳಬಹುದು.

* ಎಲ್ಲಾ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರುವಂತೆ ದೈಹಿಕ ಸಂಬಂಧದ ವಿಚಾರದಲ್ಲಿಯೂ ಒಮ್ಮತವಿರುವುದು ಸಾಧ್ಯವಿಲ್ಲ. ಭಿನ್ನಾಭಿಪ್ರಾಯಗಳು ಲೈಂಗಿಕ ಆಸಕ್ತಿಯ ಸ್ವರೂಪ, ತೀವ್ರತೆ, ಎಲ್ಲಿ ಹೇಗೆ ಯಾವಾಗ ಎಷ್ಟು ಸಾರಿ ಸೇರಬೇಕು ಮುಂತಾದ ವಿಚಾರಗಳಲ್ಲಿರಬಹುದು. ಲೈಂಗಿಕ ಆಸಕ್ತಿ ಕಡಿಮೆಯಿರುವ ಸಂಗಾತಿ ಕಾಮವನ್ನು ಇಷ್ಟಪಡುವುದಿಲ್ಲ ಎಂದಲ್ಲ ಅಥವಾ ಆಸಕ್ತಿ ಹೆಚ್ಚಿರುವ ಸಂಗಾತಿ ಕಾಮದಾಹವುಳ್ಳವರು ಎಂದಾಗಬೇಕಾಗಿಲ್ಲ. ಎಲ್ಲವೂ ಸಹಜ ಎನ್ನುವ ಮನಸ್ಥಿತಿಯಿದ್ದರೆ ಪರಿಹಾರಗಳನ್ನು ಹುಡುಕುವ ದಾರಿ ಸುಗಮವಾಗುತ್ತದೆ.

*ಇಬ್ಬರೂ ತಮ್ಮ ಆಸಕ್ತಿ, ರುಚಿ, ಆಯ್ಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಸಂಗಾತಿಯ ಲೈಂಗಿಕ ಆಯ್ಕೆ, ರುಚಿಗಳು ಎಂತಹುದೇ ಇರಲಿ, ಅವುಗಳನ್ನು ಕೀಳೆಂದು ತಿಳಿಯಬೇಕಾಗಿಲ್ಲ. ಎಲ್ಲವೂ ಅವರವರ ವೈಶಿಷ್ಟ್ಯ ಎಂದುಕೊಂಡರೆ ಹೊಸಹೊಸ ಪ್ರಯೋಗಗಳಿಗೆ ಅವಕಾಶವಾಗಿ ಸಮಾಗಮ ರೋಚಕತೆಯನ್ನ ಉಳಿಸಿಕೊಳ್ಳುತ್ತದೆ.

*ಸಮಾನ ರುಚಿ, ಆಸಕ್ತಿಗಳಿರುವವರಲ್ಲಿ ಮಾತ್ರ ರೋಚಕ ಲೈಂಗಿಕ ಸಮಾಗಮ ಸಾಧ್ಯವಾಗುತ್ತದೆ ಎನ್ನುವುದೂ ಕೂಡ ತಪ್ಪು ತಿಳಿವಳಿಕೆ. ಸಂಗಾತಿಯ ಆಸಕ್ತಿಗಳ ಪರಿಚಯವಿದ್ದರೆ ಹೊಂದಾಣಿಕೆಯ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.

*ಮತ್ತೊಬ್ಬರ ತೃಪ್ತಿಯಲ್ಲಿಯೇ ತಮ್ಮ ಸುಖವಿದೆ ಎನ್ನುವ ತ್ಯಾಗದ ಮನೋಭಾವ ಲೈಂಗಿಕತೆಯ ರೋಚಕತೆಯನ್ನು ಕಡಿಮೆಮಾಡುತ್ತದೆ. ಸಮಾಗಮ ಇಬ್ಬರಿಗೂ ತಮ್ಮದೇ ಅಗತ್ಯ ಎನ್ನಿಸದಿದ್ದಾಗ ದೀರ್ಘಕಾಲೀನ ಸಂಬಂಧಗಳಲ್ಲಿ ಲೈಂಗಿಕತೆ ಹಳಸತೊಡಗುತ್ತದೆ.

*ದಾಂಪತ್ಯದ ಸಂಬಂಧ ಮಾಗುತ್ತಾ ಬಂದಂತೆ ಇಬ್ಬರಿಗೂ ಹಾಸಿಗೆಯಲ್ಲಿ ಮುಕ್ತವಾಗಿ ವರ್ತಿಸುವುದು ಸಾಧ್ಯವಾಗುತ್ತದೆ. ಅಮೆರಿಕದ ಸುಪ್ರಸಿದ್ಧ ಲೈಂಗಿಕ ಚಿಕಿತ್ಸಕ ಡೇವಿಡ್ ಶ್ನಾರ್ಕ್ ಹೇಳುವಂತೆ ‘ದಂಪತಿಗಳು ತಮ್ಮ ಜೀವನದ ಅತ್ಯಂತ ರೋಚಕ ಲೈಂಗಿಕತೆಯನ್ನು 50ನೇ ವಯಸ್ಸಿನ ನಂತರ ಅನುಭವಿಸುತ್ತಾರೆ. ಅಲ್ಲಿಯವರೆಗೆ ನಡೆಯುವುದೆಲ್ಲಾ ಹಾರ್ಮೋನ್‌ಗಳಿಂದ ಪ್ರೇರಿತವಾದದ್ದು. ದಾಂಪತ್ಯದ ಅನ್ಯೋನ್ಯತೆಯಿಂದ ಮೂಡುವ ಆಕರ್ಷಣೆ ಲೈಂಗಿಕತೆಗೆ ಹೊಸ ಆಯಾಮಗಳನ್ನು ನೀಡುತ್ತದೆ’.

*ಆತಂಕ, ಅಜ್ಞಾನ ಅಥವಾ ಸಂಬಂಧಗಳಲ್ಲಿನ ಕೊರತೆಯೇ ಹೆಚ್ಚಿನ ಸಂದರ್ಭಗಳಲ್ಲಿ ಶೀಘ್ರಸ್ಖಲನ, ನಿಮಿರುದೋಷ, ಲೈಂಗಿಕ ನಿರಾಸಕ್ತಿಯ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಅನಗತ್ಯವಾದ ಅಥವಾ ನಕಲಿ ಔಷಧಿಗಳ ಮೊರೆಹೋಗದೆ ತಜ್ಞರಿಂದ ದಾಂಪತ್ಯಚಿಕಿತ್ಸೆ ಪಡೆದರೆ ಹೆಚ್ಚು ಉಪಯುಕ್ತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT