ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಬಾಲೆಯರ ಬಂಗಾರದ ಬೆಡಗು

ಫಾಲೋ ಮಾಡಿ
Comments

ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಳುಗಳು ಬೆರಳೆಣಿಕೆಯ ಪದಕಗಳೊಂದಿಗೆ ದೇಶಕ್ಕೆ ಮರಳುತ್ತಿದ್ದ ದಿನಗಳು ಬಹಳ ಹಿಂದಿನ ಕತೆ ಏನೂ ಅಲ್ಲ. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕಗಳ ಸುರಿಮಳೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸವಿಯನ್ನು ಇನ್ನಷ್ಟು ಹೆಚ್ಚಿಸಿದೆ. ಮಹಿಳಾ ಕ್ರೀಡಾಳುಗಳ ಸಾಧನೆ ಹುಬ್ಬೇರಿಸುವಂತೆ ಮಾಡಿದೆ. ಭಾರತದ ನಾರಿಯರು ಒಟ್ಟು 28 ಪದಗಳನ್ನು ಗೆದ್ದಿದ್ದಾರೆ. ಅದರ ಪೈಕಿ 9 ಪದಕಗಳು ಬಂಗಾರದ್ದು ಎಂಬುದು ಈ ಸಾಧನೆಯ ಮಹತ್ವವನ್ನು ಸಾರುತ್ತದೆ. ಉಳಿದಂತೆ 10 ಬೆಳ್ಳಿ ಮತ್ತು 9 ಕಂಚಿನ ಪದಕಗಳು. ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ವಿನೇಶ್‌ ಪೋಗಟ್, ಮೀರಾ ಬಾಯಿ ಚಾನು ಅವರಂತಹ ಅನುಭವಿಗಳ ಜತೆಗೆ, ಈ ಬಾರಿ ಭವೀನಾ ಪಟೇಲ್‌, ನೀತು, ನಿಖತ್‌ ಜರೀನ್‌ ಮತ್ತು ಶ್ರೀಜಾ ಅವರಂತಹ ಉದಯೋನ್ಮುಖ ಆಟಗಾರ್ತಿಯರು ಚಿನ್ನಕ್ಕೆ ಕೊರಳೊಡ್ಡಿ ಭರವಸೆ ಮೂಡಿಸಿದರು. ಭಾರತದ ಬಂಗಾರದ ಬೆಡಗಿಯರ ಕುರಿತ ಸ್ಫೂರ್ತಿದಾಯಕ ವಿವರಗಳು ಇಲ್ಲಿವೆ.

***

ಶಿಕ್ಷಕಿಯಾಗಬೇಕಿದ್ದವರಪದಕ ಬೇಟೆ

ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ, ಅಂಗವೈಕಲ್ಯದ ಕಾರಣ ಸಂದರ್ಶನದ ಸಂದರ್ಭದಲ್ಲಿ ಆ ಯುವತಿಗೆ ಕೆಲಸ ಸಿಗದೇ ಹೋಗುತ್ತದೆ. ಸಾಮಾನ್ಯರಂತೆ ನಡೆದಾಡಲು ಅವರಿಗೆ ಸಾಧ್ಯವಿಲ್ಲ ಎಂಬ ಒಂದೇ ಕಾರಣದಿಂದ ಅವರಿಗೆ ಶಿಕ್ಷಕಿಯ ಹುದ್ದೆಯನ್ನು ನಿರಾಕರಿಸಲಾಗುತ್ತದೆ. ಶಿಕ್ಷಕಿಯಾಗಬೇಕು ಎಂದು ಚಿಕ್ಕಂದಿನಿಂದ ಕಂಡಿದ್ದ ಕನಸು, ತನ್ನದಲ್ಲದ ತಪ್ಪಿನಿಂದಾಗಿ ಆ ಯುವತಿಯ ಕೈತಪ್ಪಿಹೋಗುತ್ತದೆ. ಆದರೆ ವಾರದ ಹಿಂದಷ್ಟೇ ಅವರು ದೇಶಕ್ಕಾಗಿ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾಗಿ ಅವರು ತಂದುಕೊಟ್ಟ 28ನೇ ಪದಕ. 2007ರಲ್ಲಿ ಅವರಿಗೆ ಶಿಕ್ಷಕಿಯ ಹುದ್ದೆ ದೊರೆತಿದ್ದಿದ್ದರೆ, ಬಹುಶಃ ಭಾರತಕ್ಕೆ ಅಷ್ಟೊಂದು ಪದಕಗಳು ಕೈತಪ್ಪಿಹೋಗುತ್ತಿದ್ದವು.

ಈಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ಯಾರಾ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ಭವೀನಾ ಪಟೇಲ್‌ ಅವರ ಕಥೆಯಿದು. ಹುಟ್ಟಿದಂದಿನಿಂದ ಒಂದು–ಒಂದೂವರೆ ವರ್ಷದವರೆಗೂ ಸಾಮಾನ್ಯ ಮಕ್ಕಳಂತೆಯೇ ಇದ್ದ ಭವೀನಾ ಅವರ ಕಾಲುಗಳ ಶಕ್ತಿಯನ್ನು ಕಿತ್ತುಕೊಂಡದ್ದು ಪೋಲಿಯೊ.

ಶಿಕ್ಷಕಿ ಹುದ್ದೆಗೆ ತಿರಸ್ಕೃತರಾದ ನಂತರ ಭವೀನಾ ಅವರು ಬ್ಲೈಂಡ್‌ ಪೀಪಲ್ಸ್‌ ಅಸೋಸಿಯೇಷನ್‌ನಲ್ಲಿ ಐಟಿಐ ಕೋರ್ಸ್‌ಗೆ ಸೇರಿದರು. ಆದರೆ, ಅಲ್ಲಿ ಅವರ ಆಸಕ್ತಿ ಸೆಳೆದದ್ದು ಟೇಬಲ್ ಟೆನಿಸ್‌. ಹೀಗೆ ಭವೀನಾ ಅವರು ಟೇಬಲ್ ಟೆನಿಸ್‌ ಆಡಲು ಆರಂಭಿಸಿದ್ದೇ 2007ರಲ್ಲಿ. ಆದರೆ, ನಾಲ್ಕೇ ವರ್ಷಗಳಲ್ಲಿ ಅವರು ಅದರಲ್ಲಿ ಮಾಸ್ಟರ್ ಎನಿಸಿದ್ದರು. 2011ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಪ್ಯಾರಾ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಗೆದ್ದರು. ಜತೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಏರಿದರು. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇ ಇಲ್ಲ.

ಸೋತು, ಗೆದ್ದ ಶ್ರೀಜಾ

ಆಗಸ್ಟ್‌ 7: ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳಾ ಟೇಬಲ್‌ ಟೆನಿಸ್‌ನ ಸೆಮಿಫೈನಲ್‌ ಪಂದ್ಯ. ಒಂದೆಡೆ ಭಾರತವನ್ನು ಪ್ರತಿನಿಧಿಸುತ್ತಿದ್ದ 24 ವರ್ಷದ ಶ್ರೀಜಾ ಅಕುಲಾ ಅವರ ಆರಂಭ ಉತ್ತಮವಾಗಿತ್ತು. ಮೊದಲ ಸೆಟ್‌ನಲ್ಲಿ ಅವರು ತಮ್ಮ ಎದುರಾಳಿ ಆಸ್ಟ್ರೇಲಿಯಾದ ಯಂಗ್ಜಿ ಲ್ಯೂ ಅವರನ್ನು 11–3ರ ಅಂತರದಿಂದ ಮಣಿಸಿದ್ದರು.

ಮೊದಲ ಸೆಟ್‌ನಲ್ಲಿನ ಶ್ರೀಜಾ ಅವರ ಆಟವು ಮಹಿಳಾ ಟಿಟಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ ದೊರೆಯುತ್ತದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ, ನಂತರದ ಸೆಟ್‌ಗಳಲ್ಲಿ ಅವರು ಹಿನ್ನಡೆ ಅನುಭವಿಸಿದರು. ಒಟ್ಟು ಮೂರು ಸೆಟ್‌ಗಳನ್ನು ಗೆದ್ದರೂ, ಎದುರಾಳಿಗೆ ನಾಲ್ಕು ಸೆಟ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಪದಕದ ಆಸೆ ಕಮರಿತು. ಆದರೆ, ಆ ಬೇಸರ ಕೆಲವು ಗಂಟೆಗಳದ್ದಾಗಿತ್ತು ಅಷ್ಟೆ. ಅದೇ ದಿನ ನಡೆದ ಮಿಶ್ರ ಡಬಲ್‌ ಟಿಟಿಯಲ್ಲಿ ಶ್ರೀಜಾ ಮತ್ತು ಶರತ್ ಕಮಲ್‌ ಅವರ ಜೋಡಿ ಚಿನ್ನದ ಪದಕ ಗೆದ್ದಿತು. ತೆಲಂಗಾಣದವರಾದ ಶ್ರೀಜಾ ಅವರು ಟಿಟಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಹೈದರಾಬಾದ್‌ ಪ‍ರವಾಗಿ 58 ವರ್ಷಗಳ ನಂತರ ಚಿನ್ನ ಗೆದ್ದು ಹೆಸರು ಮಾಡಿದ್ದರು. 1964ರಲ್ಲಿ ಮೀರ್ ಖಾಸಿಂ ಆಲಿ ಅವರು ಹೈದರಾಬಾದ್‌ ಅನ್ನು ಪ್ರತಿನಿಧಿಸಿ, ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದಿದ್ದರು. ಆನಂತರ ಹೈದರಾಬಾದ್‌ನವರೊಬ್ಬರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದದ್ದು, 2022ರಲ್ಲೇ.

ಬ್ಯಾಡ್ಮಿಂಟನ್ ತಾರೆ

ಎರಡು ಒಲಿಂಪಿಕ್‌ಗಳಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಶ್ರೇಯ ಹೊಂದಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಸಿಂಧು ಅವರಿಗೆ ಕ್ರೀಡೆ ಹೊಸದಲ್ಲ. ಅವರ ತಂದೆ ಮತ್ತು ತಾಯಿ ಇಬ್ಬರೂ ರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರರು. ಆದರೆ ಸಿಂಧು ಅವರ ಆಸಕ್ತಿ ಹೊರಳಿದ್ದು ಬ್ಯಾಡ್ಮಿಂಟನ್ ಕಡೆಗೆ. ತಮ್ಮ ಎಂಟನೇ ವಯಸ್ಸಿನಲ್ಲೇ ಕೋರ್ಟ್‌ಗೆ ಇಳಿದ ಅವರದ್ದು ನಿರಂತರವಾದ ಯಶಸ್ಸು.

ಕುಸ್ತಿ ಅಖಾಡದ ಸಾಕ್ಷಿ

2016ರ ರಿಯೊ ಒಲಿಂಪಿಕ್ಸ್ ನಲ್ಲಿ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಸಾಕ್ಷಿ ಮಲಿಕ್ ಹರಿಯಾಣದವರು. ಅವರು ದೇಶಕ್ಕಾಗಿ ಪದಕ ಗೆದ್ದ ದಿನ, ಜನರು ಗೂಗಲ್‌ನಲ್ಲಿ ಹುಡುಕಿದ್ದು ಸಾಕ್ಷಿ ಅವರ ಧರ್ಮ ಯಾವುದು ಮತ್ತು ಜಾತಿ ಯಾವುದು ಎಂದು. ಆದರೆ, ಸಾಕ್ಷಿ ಅವರು ಇಂತಹದ್ದಕ್ಕೆ ಲಕ್ಷ್ಯವೇ ನೀಡಲಿಲ್ಲ. ಅವರ ಪದಕಗಳ ಬೇಟೆ ಮುಂದುವರಿದಿದೆ. ಕುಸ್ತಿಯ ಅಖಾಡದಲ್ಲಿ ತನ್ನ ತಾತನ ಪಟ್ಟುಗಳನ್ನು ನೋಡುತ್ತಾ, ತಾವೂ ಅಖಾಡಕ್ಕೆ ಇಳಿದವರು ಸಾಕ್ಷಿ. ತಮ್ಮ 12ನೇ ವಯಸ್ಸಿನಲ್ಲಿ ತರಬೇತಿ ಆರಂಭಿಸಿ, 17ನೇ ವಯಸ್ಸಿನಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದರು.

ಈಶಾನ್ಯದ ಚಿನ್ನದ ಹುಡುಗಿ

‘ಹೆಗಲ ಮೇಲೆ ಕಟ್ಟಿಗೆಯನ್ನು ಹೊತ್ತು ತರುತ್ತಿದ್ದ ಮಗಳು, ವೇಟ್‌ಲಿಫ್ಟಿಂಗ್‌ನಲ್ಲಿ ಇಡೀ ದೇಶದ ನಿರೀಕ್ಷೆಯ ಭಾರವನ್ನು ಹೊತ್ತು ಪದಕ ಗೆದ್ದಿದ್ದಾಳೆ’ – ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಅವರು ಪದಕಕ್ಕೆ ಕೊರಳೊಡ್ಡಿದಾಗ ಅವರ ತಾಯಿ ಹೇಳಿದ ಮಾತಿದು. ಐವರು ಮಕ್ಕಳಲ್ಲಿ ಮೀರಾಬಾಯಿ ಕೊನೆಯವರು. ಒಂದೊಂದು ದಿನ ಮನೆಯ ಎಲ್ಲರಿಗೂ ಹೊಟ್ಟೆತುಂಬ ಊಟವೇ ಸಿಗುತ್ತಿರಲಿಲ್ಲ. ಸ್ವಂತ ಜಮೀನು ಇರಲಿಲ್ಲ. ಇಂತಹ ಕಷ್ಟದಲ್ಲೇ ಬೆಳೆದ ಮೀರಾಬಾಯಿ 2009ರಲ್ಲಿ ಜ್ಯೂನಿಯರ್ ನ್ಯಾಷನಲ್ ಚಾಂಪಿಯನ್ ಎನಿಸಿಕೊಂಡರು. ಈಗ ಕಾಮನ್‌ವೆಲ್ತ್‌ ಚಿನ್ನ ಅವರ ಪದಕಪಟ್ಟಿಗೆ ಸೇರಿದೆ.

ಸೋಲುಗಳಿಗೆ ಸವಾಲೆಸೆದ ನೀತು ಘಣಘಸ್

ಹರಿಯಾಣದ ಭಿವಾನಿ ಜಿಲ್ಲೆಯ ಧನಾನಾ ಎಂಬ ಚಿಕ್ಕ ಗ್ರಾಮದಲ್ಲಿ 2000ನೇ ಇಸ್ವಿಯಲ್ಲಿ ಹುಟ್ಟಿದ ನೀತು ಘಣಘಸ್ ಇಂದು ಬಾಕ್ಸಿಂಗ್ ಕ್ಷೇತ್ರದ ನಕ್ಷತ್ರವಾಗಿ ಹೊಳೆಯುತ್ತಿದ್ದಾರೆ. ಆದರೆ, ಈ ಹೆಸರು, ಪ್ರಶಸ್ತಿಗಳು ಸುಲಭಕ್ಕೆ ದಕ್ಕಿದವಲ್ಲ. ಯಶಸ್ಸಿನ ಹಿಂದೆ ಕಷ್ಟದ ದಿನಗಳ ಕಥೆಯಿದೆ. ಅದು 2012ರ ಆರಂಭದ ದಿನಗಳು. 12 ವರ್ಷದ ನೀತು ಅವರ ಚಿತ್ತ ಬಾಕ್ಸಿಂಗ್‌ನತ್ತ ಹರಿಯಿತು. ಆದರೆ, ಅವರಿದ್ದ ಊರಿನಿಂದ ಬಾಕ್ಸಿಂಗ್ ತರಬೇತಿ ನೀಡುತ್ತಿದ್ದ ಕೇಂದ್ರಕ್ಕೆ 20 ಕಿಲೋಮೀಟರ್ ಅಂತರವಿತ್ತು. ದೃಢನಿಶ್ಚಯ ಮಾಡಿದ್ದ ನೀತು, ಪ್ರತಿನಿತ್ಯವೂ ಬಸ್‌ನಲ್ಲಿ ಪ್ರಯಾಣ ಮಾಡಿ ಬಾಕ್ಸಿಂಗ್ ತರಬೇತಿಗೆ ಸೇರಿಕೊಂಡರು. ಈ ಓಡಾಟ, ಅಭ್ಯಾಸ, ಆರಂಭದ ಸೋಲುಗಳಿಂದ ಧೃತಿಗೆಟ್ಟ ಅವರು, ಕ್ರೀಡೆಯನ್ನೇ ತೊರೆಯಬೇಕು ಎಂದು ಒಮ್ಮೆ ಯೋಚಿಸಿದ್ದೂ ಉಂಟು. ಆದರೆ, ತಂದೆ ಜೈ ಭಗವಾನ್ ಅವರ ಗಟ್ಟಿ ಬೆಂಬಲದಿಂದ ಮನಸ್ಸು ಬದಲಿಸಿದರು. ನೀತು ಅವರು ಮೊದಲ ಪದಕ ಪಡೆಯಲು ಐದು ವರ್ಷ ತೆಗೆದುಕೊಂಡರು. ಮಗಳ ಪರಿಶ್ರಮ, ಛಲವನ್ನು ಅರಿತ ತಂದೆ ತಮ್ಮ ವೃತ್ತಿಯನ್ನು ಕೆಲಕಾಲ ಬದಿಗಿಸಿರಿ, ನೆರವು ನೀಡಿದರು. ಹರಿಯಾಣದ ವಿಧಾನಸಭೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಮಗಳ ಕ್ರೀಡಾ ಸಾಧನೆಗೆ ಸಮಯ ನೀಡಲು ಮೂರುವರ್ಷ ವೇತನರಹಿತ ರಜೆ ಪಡೆದಿದ್ದರು. ಕಾಮನ್‌ವೆಲ್ತ್‌ನಲ್ಲಿ ಮೊನ್ನೆ ಚಿನ್ನ ಗೆದ್ದ ನೀತು, ತಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆಗೆ ಪ್ರಶಸ್ತಿಯನ್ನು ಅರ್ಪಿಸಿ ಧನ್ಯರಾದರು.

ಹುಡುಗರನ್ನು ಮಣ್ಣುಮುಕ್ಕಿಸಿದ್ದ ನಿಖತ್ ಜರೀನ್

ಅದು ನಿಜಾಮಾಬಾದ್‌ನ ವಿನಾಯಕ ನಗರದ ಪುಟ್ಟ ಮನೆ. ಮೂವರು ಅಕ್ಕತಂಗಿಯರಲ್ಲಿ ಕೊನೆಯವರಾಗಿ 1990ರಲ್ಲಿ ಜನಿಸಿದ ಜರೀನ್ ಸ್ವಭಾವತಃ ಹುಡುಗಾಟದ ಹುಡುಗಿ. ಏನಾದರೊಂದು ಕೀಟಲೆ ಮಾಡಿ ತಾಯಿಯಿಂದ ಬೈಸಿಕೊಳ್ಳುವುದು, ಏಟು ತಿನ್ನುವುದು ಸಾಮಾನ್ಯ ಸಂಗತಿಯಾಗಿತ್ತು. ಜರೀನ್ ಎಂಟನೇ ತರಗತಿ ಓದುತ್ತಿದ್ದಾಗ ತಮ್ಮ ತಂದೆಯೊಂದಿಗೆ ನಿಜಾಮಾಬಾದ್‌ನ ಕಲೆಕ್ಟರ್ ಮೈದಾನಕ್ಕೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅದೇ ಮೈದಾನದಲ್ಲಿ ಕೆಲವು ಹುಡುಗರು ತರಬೇತುದಾರ ಸಂಶುದ್ದೀನ್ ಅವರಿಂದ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದರು. ಜರೀನ್‌ಗೆ ಬಾಕ್ಸಿಂಗ್ ಕಲಿಯುವ ಮನಸ್ಸಾಗಿ, ತಂದೆಗೆ ಹೇಳಿಯೇಬಿಟ್ಟರು. ಸ್ವತಃ ಕ್ರೀಡಾಪಟುವಾಗಿದ್ದ ಅವರ ತಂದೆ, ಬಾಕ್ಸಿಂಗ್‌ನಂತಹ ಕಠಿಣ ಸ್ಪರ್ಧೆ ಬೇಡ ಎಂದು ಮನವರಿಕೆ ಮಾಡಿಕೊಟ್ಟರು. ಆದರೆ ತಂದೆಯ ಮಾತನ್ನು ಕಿವಿಗೆ ಹಾಕಿಕೊಳ್ಳದ ಜರೀನ್, ಹಟ ಹಿಡಿದು ಹುಡುಗರ ಜೊತೆ ತರಬೇತಿಗೆ ಸೇರಿಕೊಂಡರು. ಬಾಕ್ಸಿಂಗ್ ಪಟ್ಟುಗಳನ್ನು ಕಲಿಯುವಾಗ ಹತ್ತಾರು ಗಾಯಗಳಾದರೂ, ಅವರ ಕಲಿಯುವ ಛಲ ಸೋಲಲಿಲ್ಲ. ಹುಡುಗರನ್ನೇ ಬಾಕ್ಸಿಂಗ್‌ನಲ್ಲಿ ಮಣ್ಣುಮುಕ್ಕಿಸಿ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡರು. ಅಂದು ಅವರು ತಿಂದ ಪೆಟ್ಟುಗಳೇ ಇಂದು ಅವರ ಕೊರಳಿಗೆ ಚಿನ್ನದ ಪದಕವನ್ನು ತಂದು ಕೊಟ್ಟಿವೆ.

ಕುಸ್ತಿಯಲ್ಲಿ ಪಳಗಿದ ವಿನೇಶ್ ಪೋಗಟ್

ಕುಸ್ತಿಯಲ್ಲಿ ಹೆಸರು ಮಾಡಿದ್ದ ಹರಿಯಾಣದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಅವರ ಕುಟುಂಬದಲ್ಲಿ ಹುಟ್ಟಿದ ವಿನೇಶ್ ಪೋಗಟ್ ಸಹ ಕ್ರೀಡೆಯಲ್ಲಿ ಮಿಂಚು ಹರಿಸಿದವರು. ತಮ್ಮ ಏಳನೇ ವಯಸ್ಸಿಗೇ ಕುಸ್ತಿ ಅಭ್ಯಾಸದಲ್ಲಿ ತೊಡಗಿದ ಅವರು ಹುಡುಗರಂತೆ ಕೂದಲು ಕತ್ತರಿಸಿಕೊಂಡು ಗೇಲಿಗೊಳಗಾಗಿದ್ದೂ ಉಂಟು. ಕೇವಲ ಕ್ರೀಡೆಯ ಕಡೆಗಷ್ಟೇ ಅವರ ಗಮನ ಇದ್ದುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಹಾಗೆಯೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನಕ್ಕೆ ಮುತ್ತಿಕ್ಕಲು ಸಾಧ್ಯವಾಯಿತು.

ಆಧಾರ: ಒಲಿಂಪಿಕ್ಸ್ ಅಧಿಕೃತ ಜಾಲತಾಣ, ಕಾಮನ್‌ವೆಲ್ತ್ ಸ್ಪೋರ್ಟ್ಸ್ ಅಧಿಕೃತ ಜಾಲತಾಣ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT