ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಅಮ್ಮನಾಗೊ ಆಯ್ಕೆ ಅವಳದೆ… ಬೆಂಬಲಕ್ಕಿದೆ ಕಾನೂನು, ಬಾಕಿ ಇದೆ ಸಂಕಟವಿನ್ನೂ

Last Updated 28 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಗರ್ಭಪಾತ ಅವಳ ಹಕ್ಕು ಎಂದು ಕೋರ್ಟ್‌ ತೀರ್ಪು ನೀಡಿದೆ. ಇದು ತಮ್ಮ ಪಾಲಿನ ಬಹುದೊಡ್ಡ ಸಂಭ್ರಮ ಎಂದು ಭ್ರಮಿಸಿದ ವರ್ಗ ಒಂದೆಡೆ ಇದ್ದರೆ, ತಮ್ಮ ಸೋಲಿನ ಪರಮಾವಧಿ ಎಂದು ಗ್ರಹಿಸಿರುವ ವರ್ಗ ಇನ್ನೊಂದು ಕಡೆ. ಆದರೆ, ಕಾನೂನಿನ ಬೆಂಬಲದ ತರುವಾಯವೂ ಗರ್ಭಪಾತದ ಸುತ್ತ ಉಳಿದುಕೊಂಡಿರುವ ಪ್ರಶ್ನೆಗಳೇನು? ಹೆಣ್ಣನ್ನು ದಿಗಿಲಿನಲ್ಲಿ ಉಳಿಸಿರುವ ಮನೋ–ಸಾಮಾಜಿಕ ಸಂಕಟಗಳೇನು? ಈ ಚರ್ಚೆ ಇಂದಿನ ಜರೂರು.

ಗರ್ಭಪಾತ ಈಗ ಅವಳ ಕಾನೂನುಬದ್ಧ ಹಕ್ಕು. ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹಿಳಾಪರ ನಿಲುವು ಪ್ರಕಟಿಸಿದೆ. ‘ಗರ್ಭಪಾತ ಸಂಪೂರ್ಣ ಅವಳದೆ ಆಯ್ಕೆ. ವಿವಾಹಿತಳೊ–ಅವಿವಾಹಿತಳೊ ಎನ್ನುವುದನ್ನು ನೋಡುವಂತಿಲ್ಲ. ಅವಳಿಗೆ ಬೇಕಿದ್ದರೆ ಬೇಕು, ಬೇಡವಾಗಿದ್ದರೆ ಬೇಡ ಎಂಬರ್ಥದ ತೀರ್ಮಾನ ಹೊರಬಿದ್ದಿದೆ.

ಇಲ್ಲಿಗೇ ಗರ್ಭಪಾತದ ಸಮಸ್ಯೆ–ಸವಾಲುಗಳು ಇತ್ಯರ್ಥವಾದವು ಎಂದರ್ಥವಲ್ಲ. ಇದು ಒಂದು ಮಟ್ಟಿಗಿನ ನಿರಾಳತೆಯನ್ನು ನೀಡಿದೆ. ಆದರೆ, ಬೇರೆ ಬೇರೆ ಸ್ವರೂಪದಲ್ಲಿ, ಬೇರೆಬೇರೆ ನೆಲೆಗಟ್ಟಿನಲ್ಲಿ ಗರ್ಭಪಾತದ ಸವಾಲುಗಳನ್ನು ಅವಲೋಕಿಸಬೇಕಿದೆ.

ಕಾರಣ ಏನೇ ಇರಲಿ, ಯಾರೇ ಆಗಲಿ, ಗರ್ಭಧಾರಣೆಯ ವಿಷಯ ಬಂದಾಗ ಇವತ್ತಿಗೂ ಮಹಿಳೆಯೇ ಅವಮಾನ ಎದುರಿಸಬೇಕಾಗುತ್ತದೆ, ಅವಳೆ ತಪ್ಪಿತಸ್ಥೆಯಾಗಿ ನಿಲ್ಲುತ್ತಾಳೆ. ಅದರಲ್ಲೂ ಬೇಡದ ಗರ್ಭಧಾರಣೆಯಾಗಿದ್ದರೆ, ಎದುರಾಗುವ ಮನೋ–ಸಾಮಾಜಿಕ ಸವಾಲುಗಳು ದಿಗಿಲು ಹುಟ್ಟಿಸುತ್ತವೆ. ಇವುಗಳನ್ನೆಲ್ಲಾ ನಿಭಾಯಿಸಲು ಕಾನೂನಿನ ನೆರವು ಬೇಕೇಬೇಕು. ಇದರ ಜೊತೆಗೆ ಅವಳಿಗೆ ಅಗತ್ಯವಾಗಿ ಬೇಕಾದ್ದು ನೈತಿಕ ಬೆಂಬಲ. ಇದಕ್ಕೆ ಅವಳ ಕುಟುಂಬ ಹಾಗೂ ಸಮಾಜ ತನ್ನ ನಿಲುವು ಮತ್ತು ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಾದುದೂ ಸಹ ಅಷ್ಟೇ ಅಗತ್ಯ.

ಗರ್ಭಪಾತದ ನಂತರ ಎದುರಾಗುವ ಆರೋಗ್ಯ ಸಮಸ್ಯೆಗಳು, ಮಾನಸಿಕ –ಕೌಟುಂಬಿಕ ವಿರೋಧ, ಸಮಾಜದ ಮೂದಲಿಕೆ, ತನ್ನನ್ನೇ ಕಾಡುವ ತನ್ನದೇ ಪಾಪಪ್ರಜ್ಞೆ... ಈ ಎಲ್ಲಾ ಸಂಗತಿಗಳನ್ನು ಅವಳು ಹೇಗೆ ನಿಭಾಯಿಸುತ್ತಾಳೆ, ಹೇಗೆ ನಿರ್ಧಾರ ಕೈಗೊಳ್ಳುತ್ತಾಳೆ ಅನ್ನುವುದನ್ನೂ ಇಲ್ಲಿ ಪರಿಗಣಿಸಬೇಕಾಗುತ್ತದೆ. ವಿವಾಹಿತಳೇ ಇರಲಿ, ಅವಿವಾಹಿತಳೇ ಇರಲಿ, ಆ ಗರ್ಭ ಯೋಜಿತವೇ ಆಗಲಿ, ಆಕಸ್ಮಿಕವೇ ಆಗಿರಲಿ ಅಥವಾ ಬೇಕಾಗಿದ್ದೇ ಇರಲಿ, ಬೇಡವಾಗಿದ್ದೇ ಇರಲಿ– ಅದು ತನಗೆ ಬೇಕೆ? ಬೇಡವೇ? ಎನ್ನುವ ನಿರ್ಧಾರ ಕ್ಷಣಾರ್ಧದಲ್ಲಿ ಮಾಡಿ ಮುಗಿಸುವಂಥದ್ದಲ್ಲ. ಬೇಡ ಎಂದು ನಿರ್ಧರಿಸಿದ ನಂತರವೂ ಮನದ ಮೂಲೆಯಲ್ಲಿ ಉಳಿದುಕೊಳ್ಳುವ ದ್ವಂದ್ವ, ತಲ್ಲಣ, ಒಡಲ ಸಂಕಟಕ್ಕೆ ಉತ್ತರವೆಲ್ಲಿದೆ?

ಕಾನೂನು ಮಹಿಳಾಪರ ನಿಲುವು ಪ್ರಕಟಿಸಿದೆ ಎಂದರೆ ಇನ್ನು ಮುಂದೆ ಯಾರು ಬೇಕಾದರೂ, ಯಾವಾಗ ಬೇಕಾದಾಗ, ಗಂಡನ ಅಥವಾ ಸಂಗಾತಿಯ ಗಮನಕ್ಕೆ ಬಾರದಂತೆ ಆಸ್ಪತ್ರೆ, ಕ್ಲಿನಿಕ್ಕುಗಳಿಗೆ ಹೋಗಿ, ಹಣ ಬಿಸಾಕಿ ಒಡಲಲ್ಲಿ ಮೂಡುತ್ತಿರುವ ಕೂಸನ್ನು ತೆಗೆಸಿಕೊಂಡು ಬಂದು ಬಿಡಬಹುದು ಎನ್ನುವಷ್ಟರ ಮಟ್ಟಿಗೆ ಈ ವಿಚಾರ ಸುಲಭವಾದುದಲ್ಲ.

‘ಕಾನೂನಿನ ನೆರವು ಒಂದು ಅಂಶವಷ್ಟೆ. ಒಂದೆಡೆ ಅನಿವಾರ್ಯ ಅಥವಾ ಅಸಹಾಯಕ ಪರಿಸ್ಥಿತಿಗಳು, ಇನ್ನೊಂದೆಡೆ ಕಾನೂನಿನ ಅಡೆತಡೆ, ಇದರಿಂದಾಗಿ ಹೆಣ್ಮಕ್ಕಳು ಅಸುರಕ್ಷಿತ ಗರ್ಭಪಾತಕ್ಕೆ ಹೋಗಿ ಆರೋಗ್ಯವನ್ನೊ, ಪ್ರಾಣವನ್ನೊ ಪಣಕ್ಕಿಡುವಂತಾಗಬಾರದು. ಈ ದೃಷ್ಟಿಯಿಂದ ಮಾಡಿರುವ ಸಣ್ಣ ಬದಲಾವಣೆ ಇದು. ಆದರೆ, ಮಹಿಳೆಯ ಜೀವನದಲ್ಲಿ ಇದೊಂದು ಬಹು ದೊಡ್ಡ ನಿರ್ಣಾಯಕ ಘಟ್ಟವಾಗಿ ಪರಿಣಮಿಸಲಿದೆ’ ಎನ್ನುತ್ತಾರೆ ಹಿರಿಯ ವಕೀಲೆ ಅಂಜಲಿ ರಾಮಣ್ಣ.

ಈ ಕಾನೂನಿನಿಂದಾಗುವ ಸಕಾರಾತ್ಮಕ ಅಂಶಗಳನ್ನು ಅಂಜಲಿ ಅವರು ಹೀಗೆ ಪಟ್ಟಿ ಮಾಡುತ್ತಾರೆ; ಮೊದಲನೆಯದಾಗಿ, ಅಸುರಕ್ಷಿತ ಗರ್ಭಪಾತಗಳ ಪ್ರಮಾಣ ತಗ್ಗುತ್ತದೆ. ಇದರಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗುತ್ತದೆ. ಎರಡನೆಯದಾಗಿ, ಹೆಣ್ಣಿನ, ಮಾನಸಿಕ, ದೈಹಿಕ ಆರೋಗ್ಯ ಮತ್ತು ಸಮಾಜದ ಸುಸ್ಥಿತಿಗೆ ಈ ಕ್ರಮ ಪೂರಕವಾಗಿದೆ. ಬೇಡದ ಅಥವಾ ಒತ್ತಾಯಪೂರ್ವಕ ಗರ್ಭವನ್ನು ತೆಗೆದುಹಾಕುವ ಮೂಲಕ ಅವಳ ಮನಸ್ಸು ಮತ್ತು ಆರೋಗ್ಯದ ಮೇಲಿನ ಒತ್ತಡವನ್ನು ತಡೆಯಬಹುದು. ಮನಸ್ಸಿಲ್ಲದೆ ಅಥವಾ ಅನಿವಾರ್ಯ ಕಾರಣಕ್ಕೆ ಅಥವಾ ವೈದ್ಯಕೀಯ ಅಥವಾ ಕಾನೂನಿನ ತೊಡಕುಗಳಿಂದ ಗರ್ಭಪಾತ ಸಾಧ್ಯವಾಗದೆ, ಮಗುವನ್ನು ಹೆತ್ತು ದೇವಸ್ಥಾನ, ಅನಾಥಾಲಯಗಳಲ್ಲಿ ಬಿಟ್ಟು ಹೋಗುವಂತಹ ದುಃಸ್ಥಿತಿಯನ್ನು ತಪ್ಪಿಸಬಹುದು.

ಕಾನೂನು ಇದೆ, ಕೋರ್ಟ್‌ ಹೇಳಿದೆ ಎನ್ನುವುದಕ್ಕಿಂತ ಗರ್ಭಪಾತದ ಬಗ್ಗೆ ಜಾಗೃತಿ ಮೂಡಿಸುವುದೇ ಬಹಳ ಮುಖ್ಯ ಎನ್ನುವುದು ಸ್ತ್ರೀರೋಗ ತಜ್ಞೆ ಡಾ. ಚಂದ್ರಿಕಾ ಆನಂದ್ ಅವರ ಅಭಿಪ್ರಾಯ. ಅವರು ಈ ಕಾನೂನು–ಕಟ್ಟಳೆಗಳ ಜೊತೆಗೆ, ಆರೋಗ್ಯದ ದೃಷ್ಟಿಯಿಂದಲೂ ಈ ತೀರ್ಪಿನ ಸಾಧಕ, ಬಾಧಕವನ್ನು ವಿಶ್ಲೇಷಿಸುತ್ತಾರೆ. ‘ಕಾನೂನಿನ ಒಪ್ಪಿಗೆ ಸಿಕ್ಕಿದೆ, ಕಾಸು ಕೊಟ್ಟರೆ ವೈದ್ಯರು ಗರ್ಭಪಾತ ಮಾಡಿಸುತ್ತಾರೆ ಎನ್ನುವಲ್ಲಿಗೆ ಮುಗಿದು ಹೋಗುವ ಸಂಗತಿ ಇದಲ್ಲ’ ಎನ್ನುತ್ತಾರೆ ಅವರು.

‘ಹೆಣ್ಣಿನ ದೇಹ, ಮನಸ್ಸು, ಆರೋಗ್ಯ, ಗರ್ಭದ ಅವಧಿ, ಗರ್ಭಪಾತದ ಅನಿವಾರ್ಯತೆ ಇದೆಲ್ಲವನ್ನು ಪರಿಗಣಿಸಬೇಕಾಗುತ್ತದೆ. ಕಾನೂನಿನ, ಕುಟುಂಬದ ಸಮ್ಮತಿಗಿಂತ ಮುಖ್ಯವಾಗಿ ಗರ್ಭಪಾತದಿಂದ ಮನಸ್ಸು–ದೇಹದ ಮೇಲೆ ಉಂಟಾಗುವ ಪರಿಣಾಮಗಳನ್ನು ತುಲನೆ ಮಾಡಬೇಕಾಗುತ್ತದೆ’ ಎಂಬುದು ಚಂದ್ರಿಕಾ ಅವರ ಅಭಿಪ್ರಾಯ.‌

-ಅಂಜಲಿ ರಾಮಣ್ಣ,ವಕೀಲೆ
-ಅಂಜಲಿ ರಾಮಣ್ಣ,ವಕೀಲೆ

ಅತ್ಯಗತ್ಯ ಕ್ರಮ
ಇಂದಿನ ಈ ಬದಲಾದ ಕಾಲಘಟ್ಟಕ್ಕೆ ಇದೊಂದು ಅತ್ಯಂತ ಅನಿವಾರ್ಯ ಮತ್ತು ಅತ್ಯಗತ್ಯ ಕ್ರಮ. ಇದು ವ್ಯವಸ್ಥೆಯ ಜವಾಬ್ದಾರಿಯೂ ಹೌದು. ಗರ್ಭಪಾತದಂತಹ ಸಾಮಾಜಿಕ ಕಳಕಳಿಯ ಕಾನೂನುಗಳು ಕಾಲಕಾಲಕ್ಕೆ ಹೀಗೆ ಪರಿವರ್ತನೆಗೊಳಗಾಗಬೇಕು. ಪ್ರತಿಕ್ಷಣ ಮುಂದೆ ಹರಿಯುವ ಸಮಾಜದಲ್ಲಿ ಕಾನೂನುಗಳು ನಿಂತಲ್ಲೇ ನಿಂತರೆ ವ್ಯವಸ್ಥೆ ಜಡವಾಗುತ್ತದೆ.
ಹಾಗಾದರೆ ಇನ್ನು, ಈ ಕಾನೂನಿನ ಅಭಯದಿಂದಾಗಿ ಗರ್ಭಪಾತ ಬಹಳ ಸುಲಭ ಎನ್ನುವವರಿಗೂ ಕಾನೂನಿನಲ್ಲಿ ಉತ್ತರವಿದೆ. ಈ ಪ್ರಕ್ರಿಯೆಗೂ ಸಹ ಕಾನೂನಿನಲ್ಲಿ ಕೆಲವು ನಿರ್ದಿಷ್ಟ ಮಾನದಂಡಗಳಿವೆ;
1. ಗರ್ಭಪಾತಕ್ಕೂ ಮುನ್ನ ಆಪ್ತ ಸಮಾಲೋಚನೆಗೆ ಒಳಗಾಗಬೇಕು. ಯಾವಾಗಲೂ ಗರ್ಭಪಾತದ ಅನಿವಾರ್ಯತೆಯನ್ನು ಪರಿಗಣಿಸಲಾಗುತ್ತದೆ.
2. ಅವಳ ಪರಿಸ್ಥಿತಿ, ದೈಹಿಕ–ಮಾನಸಿಕ ಆರೋಗ್ಯವನ್ನು ಪರಿಶೀಲಿಸಲಾಗುತ್ತದೆ. ಅವಳ ಆರೋಗ್ಯಕ್ಕೆ ಮಾರಕವಾಗಬಲ್ಲ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶ ಇದ್ದೇ ಇದೆ.
3. ಸಂಗಾತಿಯೊಂದಿಗಿನ ಅವಳ ಸಂಬಂಧವನ್ನು, ಇಬ್ಬರ ನಡುವಿನ ಸಮಸ್ಯೆಯ ಗಂಭೀರತೆಯನ್ನು ತುಲನೆ ಮಾಡಿ ನೋಡಲಾಗುತ್ತದೆ.
4. 26 ವಾರಗಳ ಅವಧಿಯನ್ನು ಮೀರಿದಲ್ಲಿ, ಅಂತಹ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ.
-ಅಂಜಲಿ ರಾಮಣ್ಣ,ವಕೀಲೆ

*

ಮುನ್ನೆಚ್ಚರಿಕೆಯೇ ಮದ್ದು
ಗರ್ಭಪಾತವನ್ನು ಎರಡು ವಿಧಾನಗಳಲ್ಲಿ ಅನುಸರಿಸಲಾಗುತ್ತದೆ. ಮಾತ್ರೆಗಳ ಮೂಲಕ ಹಾಗೂ ವೈದ್ಯಕೀಯ ವಿಧಾನದ ಮೂಲಕ. ಈ ವಿಧಾನದಲ್ಲಿ ಸಾಕಷ್ಟು ಅಪಾಯಗಳು ಎದುರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಶೇ 10ರಷ್ಟು ಅರಿವಳಿಕೆ ಅಪಾಯವಿರುತ್ತದೆ. ಇನ್ನೂ ಕೆಲ ಪ್ರಕರಣಗಳಲ್ಲಿ ರಕ್ತಸ್ರಾವ, ಗರ್ಭಕೋಶದ ಸೋಂಕು ಕಾಣಿಸಿಕೊಳ್ಳಬಹುದು. ಕೆಲವು ಅಪರೂಪದ ಪ್ರಕರಣಗಳಲ್ಲಿ ಗರ್ಭಕೋಶದಲ್ಲಿ ರಂಧ್ರ ಉಂಟಾಗಬಹುದು, ಅಕ್ಕಪಕ್ಕದ ಅಂಗಗಳಿಗೆ ಹಾನಿಯುಂಟಾಗಬಹುದು. ಪದೇಪದೇ ಈ ಕಾರ್ಯವಿಧಾನಕ್ಕೆ ಒಳಗಾಗುವುದರಿಂದ ಗರ್ಭಕೋಶದ ಸೋಂಕಿನ ಕಾರಣ ಟ್ಯೂಬ್‌ ಬ್ಲಾಕ್‌ ಆಗುವ ಅಪಾಯವೂ ಇದೆ. ಇದು ಮುಂದೆ ಮಕ್ಕಳಾಗುವ ಅವಕಾಶವನ್ನೇ ಕಿತ್ತುಕೊಳ್ಳಬಹುದು.

-ಡಾ. ಚಂದ್ರಿಕಾ ಆನಂದ್, ಸ್ತ್ರೀರೋಗ ತಜ್ಞೆ
-ಡಾ. ಚಂದ್ರಿಕಾ ಆನಂದ್, ಸ್ತ್ರೀರೋಗ ತಜ್ಞೆ

ಈ ಅಪಾಯಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳೇ ಅತ್ಯುತ್ತಮ ಮಾರ್ಗ. ವೈದ್ಯಕೀಯ ವಲಯದಲ್ಲಿ ಸಾಕಷ್ಟು ಆಯ್ಕೆಗಳಿವೆ. ನಿಮಗೆ ಮಕ್ಕಳು ಬೇಡ ಅನಿಸಿದರೆ ಅಥವಾ ಒಂದು ಮಗುವಾದ ಮೇಲೆ ಅಂತರ ಬೇಕು ಎನ್ನಿಸಿದರೆ ಕುಟುಂಬ ಯೋಜನೆ ಆಯ್ಕೆಗೆ ಹೋಗಿ. ಇದರಲ್ಲಿ ಎರಡು ವಿಧಗಳಿವೆ. ಶಾಶ್ವತ ಹಾಗೂ ತಾತ್ಕಾಲಿಕ. ಒಂದು ಮಗು ಸಾಕು ಎನ್ನುವವರು ಅಥವಾ ಎರಡು ಮಕ್ಕಳಾದವರು ಶಾಶ್ವತ ಆಯ್ಕೆಗಳಿಗೆ ಹೋಗಬಹುದು. ಮುಂದೆ ಮಕ್ಕಳು ಬೇಕು ಎನ್ನುವವರು ತಾತ್ಕಾಲಿಕ ವಿಧಾನಗಳನ್ನು ಅನುಸರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT