ಶನಿವಾರ, ಮಾರ್ಚ್ 25, 2023
26 °C

ಮತ್ತೆ ಮರಳಿದ ಕಫ್ತಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫ್ಯಾಷನ್ ಮಾರುಕಟ್ಟೆಯಲ್ಲಿ ಪೂರ್ಣವಿರಾಮ ಎಂಬುದಿಲ್ಲ. ಸದಾ ನಿರಂತರವಾಗಿರುವ ಫ್ಯಾಷನ್ ಜಗತ್ತಿನಲ್ಲಿ ದಿನಕ್ಕೊಂದು ಹೊಸತು ಉಗಮವಾಗುತ್ತದೆ. ಜೊತೆಗೆ ಹಳೆಯದಕ್ಕೆ ಹೊಸರೂಪ ನೀಡುವುದು ಟ್ರೆಂಡ್‌. ಈ ಟ್ರೆಂಡ್‌ಗೆ ಈಗ ಹೊಸತಾಗಿ ಸೇರ್ಪಡೆಯಾಗಿದೆ ಕಫ್ತಾನ್‌. ಕಫ್ತಾನ್‌ ದಿರಿಸು ಉಗಮವಾಗಿದ್ದು 60ರ ದಶಕದಲ್ಲಿ. 

20 ವರ್ಷಗಳ ಹಿಂದೆ ಕಫ್ತಾನ್ ಫ್ಯಾಷನ್‌ ದುಬೈನಲ್ಲಿ ಮರಳಿ ಬಂದಿತ್ತು. ಉದ್ದದ ನಿಲುವಂಗಿಯಂತೆ ಕಾಣುವ ಇದು ಬೀಚ್ ಡ್ರೆಸ್ ಎಂದೇ ದುಬೈ ರಾಷ್ಟ್ರಗಳಲ್ಲಿ ಖ್ಯಾತಿ ಪಡೆದಿತ್ತು. ಈಗ ಮತ್ತೆ ಈ ಟ್ರೆಂಡ್ ಭಾರತದಲ್ಲಿ ಸದ್ದು ಮಾಡುತ್ತಿದೆ. ಧರಿಸಲು ಸುಲಭವಾಗಿರುವ ಕಫ್ತಾನ್ ವಿವಿಧ ವಿನ್ಯಾಸಗಳಲ್ಲಿ, ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮನೆಯಲ್ಲಿ ಧರಿಸುವುದರಿಂದ ಹಿಡಿದು ಪಾರ್ಟಿ, ಕಾರ್ಯಕ್ರಮಗಳಿಗೂ ಧರಿಸಲು ಸೂಕ್ತವಾಗುವಷ್ಟು ಬೇರೆ ಬೇರೆ ವಿನ್ಯಾಸಗಳಲ್ಲಿ ಕಫ್ತಾನ್ ಇಂದು ಲಭ್ಯವಿದೆ. 

ಪ್ರಿಂಟ್‌, ಪ್ಲೇನ್ ವಿನ್ಯಾಸದಲ್ಲಿ ಸಿಗುವ ಈ ದಿರಿಸು ನಟಿಯರಿಗೂ ಅಚ್ಚುಮೆಚ್ಚು. ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ತಮ್ಮ ಮದುವೆಯ ಪಾರ್ಟಿ ಹಾಗೂ ಮೆಹಂದಿಯಂತಹ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಯ ಹೆಚ್ಚು ಕಸೂತಿ ಇರುವ ಕಫ್ತಾನ್ ಧರಿಸಿದ್ದೂ ಇದೆ.


ಕಫ್ತಾನ್‌ನಲ್ಲಿ ಸೋನಂ ಕ‍ಪೂರ್‌

ನೈಟಿಯಂತೆ ಕಾಣುವ ಕಫ್ತಾನ್

ಈ ಕಫ್ತಾನ್ ಕೂಡ ನೋಡಲು ನೈಟಿಯಂತೆ ಕಾಣುತ್ತದೆ. ನೈಟಿ ಬರುವುದಕ್ಕಿಂತ ಮೊದಲು ಹೆಣ್ಣುಮಕ್ಕಳು ಮನೆಯಲ್ಲಿ ಇದನ್ನೇ ಧರಿಸುತ್ತಿದ್ದರು. ಮನೆಯಲ್ಲಿ ಧರಿಸಲು ಆರಾಮವಾಗಿರುತ್ತದೆ. ಮಲಗುವ ಸಮಯದಲ್ಲೂ ಇದನ್ನು ಧರಿಸಬಹುದು. ವಿವಿಧ ಸಂದರ್ಭದಲ್ಲಿ ಧರಿಸಲು ವಿವಿಧ ರೂಪ ಹಾಗೂ ವಿನ್ಯಾಸದಲ್ಲಿ ಇದು ಲಭ್ಯವಿದೆ.

ಕಫ್ತಾನ್‌ನಲ್ಲಿ ಮಿಂಚಿದ್ದ ಕರೀನಾ

ಲಾಕ್‌ಡೌನ್ ಅವಧಿಯಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್ ಹಳದಿ ಬಣ್ಣದ ಕಪ್ಪು ಪ್ರಿಂಟ್‌ಗಳಿರುವ ಕಫ್ತಾನ್ ಧರಿಸಿ ಫೋಟೊಗೆ ಪೋಸ್ ನೀಡಿದ್ದರು. ಇದು ಮನೆಯಲ್ಲಿ ಧರಿಸಲು ತುಂಬಾ ಆರಾಮದಾಯಕ ಎಂದೂ ಹೇಳಿಕೊಂಡಿದ್ದರು. ಆಗಿನಿಂದ ಕಫ್ತಾನ್ ಡ್ರೆಸ್‌ಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಿದೆ.

ಮನೆಯಿಂದಲೇ ಕೆಲಸ ಮಾಡುವಾಗ ಧರಿಸಲು ಸೂಕ್ತ

ಸರಳ ಉಡುಪಾಗಿರುವ ಇದನ್ನು ಮನೆಯಿಂದಲೇ ಕಚೇರಿ ಕೆಲಸ ಮಾಡುವಾಗ ಧರಿಸಲು ಸೂಕ್ತ. ಮೈಗೆ ಅಂಟಿಕೊಳ್ಳದೆ ಸಡಿಲವಾಗಿರುವ ಕಫ್ತಾನ್ ಹತ್ತಿ ಬಟ್ಟೆಯಲ್ಲೂ ಲಭ್ಯ. ಬೇಸಿಗೆ ಹಾಗೂ ಮಳೆಗಾಲ ಎರಡಕ್ಕೂ ಈ ದಿರಿಸು ಹೊಂದುತ್ತದೆ.

ಗರ್ಭಿಣಿಯರಿಗೆ ಗಿಡ್ಡನೆಯ ಕಫ್ತಾನ್

ಸಾಮಾನ್ಯವಾಗಿ ಕಫ್ತಾನ್ ಎಂದರೆ ಪಾದ ಮುಚ್ಚುವಷ್ಟು ಉದ್ದವಿರುತ್ತದೆ. ಆದರೆ ಗರ್ಭಿಣಿಯರಿಗೆಂದೇ ಗಿಡ್ಡನೆಯ ಕಫ್ತಾನ್ ಲಭ್ಯವಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು