ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆಮನೆಯೆಂಬ ಪುಟ್ಟ ಶಾಲೆ

Last Updated 29 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಅಡುಗೆಮನೆ ಎಂದರೆ ಅದು ತಾಯಿಗಷ್ಟೇ ಅಲ್ಲ; ಮಗುವೂ ಅಡುಗೆಮನೆಯಿಂದ ಹಾಗೂ ಅಡುಗೆ ಮಾಡುವುದರಿಂದ ಕಲಿಯುವುದು ಸಾಕಷ್ಟಿದೆ. ಅಡುಗೆಮನೆಯನ್ನು ಗಣಿತ ಹಾಗೂ ವಿಜ್ಞಾನದ ತರಗತಿ ಎಂದೂ ಹೇಳಬಹುದು. ಮಕ್ಕಳನ್ನು ಬಾಲ್ಯದಿಂದಲೇ ಅಡುಗೆಮನೆಗೆ ಕರೆತಂದು ಅಡುಗೆಯೊಂದಿಗೆ ಪಾಠವನ್ನೂ ಕಲಿಸಬಹುದು.

ತಾಯಿ ಅಡುಗೆಮನೆಯಲ್ಲಿರುವಾಗಲೆಲ್ಲಾ ಪುಟ್ಟ ಕಂದಮ್ಮ ಅಡುಗೆಮನೆಯತ್ತ ಧಾವಿಸಿ ಬರುವುದು, ಅದೇನು? ಇದೇನು? ಎಂದು ಪ್ರಶ್ನೆಗಳನ್ನು ಕೇಳುವುದು ಪ್ರತಿಯೊಬ್ಬರ ಮನೆಯಲ್ಲೂ ನಡೆಯುವ ಸಾಮಾನ್ಯ ಸಂಗತಿ. ನಿಮ್ಮ ಮನೆಯಲ್ಲೂ ಮುದ್ದಿನ ಕಂದ ಅಡುಗೆಮನೆಯಲ್ಲಿ ಸಹಾಯ ಮಾಡಲು ಹವಣಿಸುತ್ತದೆಯೇ? ಚಪಾತಿ ಲಟ್ಟಿಸುವುದು, ತರಕಾರಿಗಳನ್ನು ತೊಳೆದು ಕೊಡುವುದು, ಬ್ರೆಡ್‌ಗೆ ಜಾಮ್ ಹಚ್ಚುವುದು ಇಂತಹ ಸಣ್ಣ–ಪುಟ್ಟ ಕೆಲಸದಲ್ಲಿ ಕೈ ಜೋಡಿಸಲು ಮುಂದಾಗುತ್ತದೆಯೇ? ಅಂತಹ ಸಂದರ್ಭದಲ್ಲಿ ‘ಇಲ್ಲಿ ನಿನಗೇನು ಕೆಲಸ, ಆಟ ಆಡಿಕೋ ಹೋಗು’ ಎಂದು ಸಾಗ ಹಾಕಬೇಡಿ. ಬಾಲ್ಯದಿಂದಲೇ ಅಡುಗೆಮನೆ ನಿರ್ವಹಣೆ ಹಾಗೂ ಅಡುಗೆ ಕೆಲಸ ರೂಢಿಸಿದರೆ ಮಕ್ಕಳಲ್ಲಿ ಕೆಲವು ಕೌಶಲಗಳು ಬೆಳೆಯುತ್ತವೆ.

ಅಡುಗೆ ಕೆಲಸದಲ್ಲಿ ಮಗು ಸಹಾಯ ಮಾಡುವುದರಿಂದ ಕೌಶಲ ಅಭಿವೃದ್ಧಿಯ ಜೊತೆಗೆ ಮಗುವಿನ ಕೈ ಹಾಗೂ ಕಣ್ಣಿನ ನಡುವೆ ಉತ್ತಮ ಸೌಹಾರ್ದತೆ ಬೆಳೆಯುತ್ತದೆ. ಅದರೊಂದಿಗೆ ಯಾವ ಆಹಾರ ಆರೋಗ್ಯಕ್ಕೆ ಉತ್ತಮ, ಯಾವುದು ಉತ್ತಮವಲ್ಲ ಎಂಬುದು ಅರಿವಿಗೆ ಬರುತ್ತದೆ. ಸಾಮಾನ್ಯ ಗಣಿತ ಹಾಗೂ ವಿಜ್ಞಾನದ ಅರಿವೂ ಮೂಡುತ್ತದೆ.

ಅಡುಗೆ ಎನ್ನುವುದು ಎಲ್ಲಾ ವಯಸ್ಸಿನ ಮಕ್ಕಳಿಗೂ ಉತ್ತಮ ಸಂವೇದನ ಅನುಭವನ್ನು ನೀಡುವ ಕಲೆ. ಅಡುಗೆ ಮಾಡುವಾಗ ಬರುವ ಹೊಸ ಹೊಸ ಪರಿಮಳಗಳು ಮಕ್ಕಳಲ್ಲಿ ಆಸ್ವಾದಿಸುವ ಕಲೆಯನ್ನು ಕಲಿಸುತ್ತದೆ.

ಅಡುಗೆಮನೆ ಹಾಗೂ ಶಿಕ್ಷಣ

ಮಕ್ಕಳನ್ನು ಅಡುಗೆಮನೆಗೆ ಕರೆದಾಗ ಅವುಗಳಿಗೆ ಗಣಿತದ ಕುರಿತು ಸಾಮಾನ್ಯಜ್ಞಾನ ಮೂಡುವಂತಹ ಕೆಲಸಗಳನ್ನು ನೀಡಿ. ಹಣ್ಣು, ತರಕಾರಿಗಳನ್ನು ಲೆಕ್ಕ ಮಾಡುವಂತಹ ಸಣ್ಣ ಪುಟ್ಟ ಕೆಲಸಗಳನ್ನು ನೀಡಿ. ಕಪ್‌ನಲ್ಲಿ ನೀರನ್ನು ಅಳತೆ ಮಾಡಿ ಹಾಕುವಂತೆ ತಿಳಿಸಿ. ಅಡುಗೆಮನೆಗೆ ಬೇಕಾದ ವಸ್ತುಗಳನ್ನು ಷಾಪಿಂಗ್ ಮಾಡುವಾಗ ಅವರದೇ ಆದ ರೀತಿಯಲ್ಲಿ ವಸ್ತುಗಳನ್ನು ಎಣಿಸಲು ಬಿಡಿ. ಹಣ್ಣು, ತರಕಾರಿಗಳ ಬಣ್ಣಕ್ಕೆ ಕಾರಣಗಳನ್ನು ತಿಳಿಸಿ. ದೋಸೆಹಿಟ್ಟು ಉಬ್ಬಲು ಕಾರಣ ಏನು ಎಂದು ತಿಳಿಸಿ. ಹೀಗೆ ಗಣಿತ, ವಿಜ್ಞಾನ ಜ್ಞಾನವನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಮೂಡಿಸಬಹುದು

ಜೀವನ ಕೌಶಲಗಳು

  • ಅಡುಗೆಮನೆಯಲ್ಲಿ ಮಕ್ಕಳು ಹೊಸರುಚಿಯನ್ನು ತಯಾರಿಸಲು ಪ್ರಯತ್ನಿಸುತ್ತವೆ. ಇದರಿಂದ ಹೊಸ ಹೊಸ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಯಾವುದರ ಜೊತೆಗೆ ಯಾವುದನ್ನು ಹಾಕಬೇಕು ಎಂಬ ಅರಿವೂ ಮೂಡುತ್ತದೆ.
  • ಮಕ್ಕಳು ಗ್ರಹಿಕೆಗಳಿಗೆ ತೆರೆದುಕೊಳ್ಳಲು ನೆರವಾಗುತ್ತದೆ. ಉದಾಹರಣೆಗೆ ಈರುಳ್ಳಿಯಿಂದ ಬರುವ ಕಣ್ಣೀರು, ಬೆಳ್ಳುಳ್ಳಿಯ ವಾಸನೆ ಇವುಗಳ ಬಗ್ಗೆಲ್ಲಾ ತಿಳಿವಳಿಕೆ ಬರುತ್ತದೆ.
  • ಸ್ವತಂತ್ರವಾಗಿ ಅಡುಗೆ ಕಲಿಯುವುದರಿಂದ ಸಂತೋಷದ ಜೊತೆಗೆ ಆತ್ಮವಿಶ್ವಾಸವು ಮೂಡುತ್ತದೆ.
  • ಗುಂಪುನಲ್ಲಿ ಕೆಲಸ ಮಾಡುವುದು ಹಾಗೂ ಹಂಚಿಕೊಳ್ಳುವಿಕೆಯಂತಹ ಮನೋಭಾವ ಬೆಳೆಯುತ್ತದೆ.
  • ದೈಹಿಕ ಕೌಶಲಗಳು ಅಭಿವೃದ್ಧಿಗೊಳ್ಳುತ್ತವೆ.
  • ಕೌಟುಂಬಿಕ ಸೌಹಾರ್ದವೂ ಹೆಚ್ಚುತ್ತದೆ.
  • ಮಾರ್ಗದರ್ಶನವನ್ನು ಅನುಸರಿಸುವುದನ್ನು ಮಕ್ಕಳು ಕಲಿಯುತ್ತವೆ.
  • ಪ್ರತಿದಿನ ಮಕ್ಕಳ ಜೊತೆ ಅಡುಗೆ ಮಾಡುವುದರಿಂದ ಪ್ರತಿನಿತ್ಯದ ಜೀವನಕ್ಕೆ ಬೇಕಾಗುವ ಪ್ರಮುಖ ಅಂಶಗಳನ್ನು ಕಲಿಯುತ್ತವೆ.

ಕಲಿಕೆಯ ಅಂಶಗಳು

  • ಅಡುಗೆ ಎನ್ನುವುದು ವಿಜ್ಞಾನ ಹಾಗೂ ಮಗು ಅಡುಗೆ ಮಾಡುವುದರಿಂದ ಮನೆಯ ಸದಸ್ಯರಿಗೆ ಮೋಜಿನೊಂದಿಗೆ ಸಂತೋಷವು ಸಿಗುತ್ತದೆ.
  • ಮಗುವಿನೊಂದಿಗೆ ಅಡುಗೆ ಮಾಡುವುದರಿಂದ ಕಲೆಯನ್ನು ಅರಳಿಸಬಹುದು.
  • ಮಲ್ಟಿಟಾಸ್ಕಿಂಗ್ ತತ್ವದ ಬಗ್ಗೆ ತಿಳಿಸಬಹುದು.
  • ಮಕ್ಕಳೊಂದಿಗೆ ಅಡುಗೆ ಮಾಡುವುದರಿಂದ ಅವರೊಂದಿಗೆ ಹೇಗೆ ತಾಳ್ಮೆಯಿಂದ ಇರಬೇಕು ಎಂಬುದನ್ನು ಕಲಿತಂತಾಗುತ್ತದೆ.
  • ಯಾವುದು ಆರೋಗ್ಯಕರ ಹಾಗೂ ಅನಾರೋಗ್ಯಕರ ಆಹಾರ ಎಂಬುದು ಅರಿವಿಗೆ ಬರುತ್ತದೆ.
  • ಹೇಗೆ ಸ್ವಚ್ಚವಾಗಿರಬೇಕು ಎಂಬುದನ್ನು ಕಲಿಯಬಹುದು.
  • ಅಡುಗೆಮನೆಯಲ್ಲಿ ಹೇಗೆ ಸುರಕ್ಷತೆಯಿಂದ ಇರಬೇಕು ಎಂಬುದರ ಅರಿವೂ ಮೂಡುತ್ತದೆ. ಹಾಗಾಗಿ ಬೆಂಕಿ, ಕಾದ ಎಣ್ಣೆ ಹಾಗೂ ಚಾಕು, ಕತ್ತಿಯಂತಹ ಚೂಪಾದ ವಸ್ತುಗಳೊಂದಿಗೆ ಹೇಗೆ ಜಾಗರೂಕತೆ ವಹಿಸಬೇಕು ಎಂಬುದರ ಬಗ್ಗೆ ತಿಳಿಯುತ್ತದೆ.
  • ಜವಾಬ್ದಾರಿಯನ್ನು ಕಲಿಸುತ್ತದೆ.
  • ಸ್ವಚ್ಛತೆ ಬಗ್ಗೆ ಅರ್ಥಮಾಡಿಸಲು ಸಾಧ್ಯವಾಗುತ್ತದೆ.
  • ಅಡುಗೆ ಮಾಡಲು ಎಷ್ಟು ಶ್ರಮ ಹಾಗೂ ಸಮಯ ಬೇಕು ಎಂಬುದರ ಅರಿವು ಮೂಡಿಸಲು ಸಾಧ್ಯವಾಗುತ್ತದೆ.

ಮಕ್ಕಳು ಅಡುಗೆಮನೆಯಲ್ಲಿ ಮಾಡಬಹುದಾದ ಸಹಾಯಗಳು

  • ಹಣ್ಣು ಹಾಗೂ ತರಕಾರಿಗಳನ್ನು ತೊಳೆಯುವುದು
  • ಸಲಾಡ್‌ಗೆ ಸೊಪ್ಪುಗಳನ್ನು ತೊಳೆಯುವುದು
  • ಬೌಲ್‌ನಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಕಲೆಸುವುದು.
  • ಪಾತ್ರೆಗೆ ಹಾಲನ್ನು ಹಾಕುವುದು (ಹಿರಿಯರ ಸಹಾಯದಿಂದ)
  • ಪುಟಗಳನ್ನು ತಿರುವಿ ಹಾಕುವ ಮೂಲಕ ರೆಸಿಪಿಗಳನ್ನು ಓದಿ ಹೇಳುವುದು.
  • ಎಲೆಕ್ಟ್ರಿಕಲ್ ಮಿಕ್ಸರ್ ಸಹಾಯದಿಂದ ಆಲೂಗೆಡ್ಡೆ ಸ್ಮ್ಯಾಶ್ ಮಾಡುವುದು
  • ಖಾದ್ಯಗಳ ಮೇಲೆ ಚೀಸ್ ಅಥವಾ ಪೆಪ್ಪರ್ ಸಿಂಪಡಿಸುವುದು
  • ಓವನ್ ಬಿಸಿ ಮಾಡುವುದು
  • ಮೊಟ್ಟೆ ಸಿಪ್ಪೆ ತೆಗೆಯುವುದು
  • ಸಿಪ್ಪೆ ತೆಗೆಯುವ ಸಾಧನಗಳಿಂದ ಸಿಪ್ಪೆ ತೆಗೆಯುವುದು
  • ಹಿಟ್ಟನ್ನು ಜರಡಿ ಹಿಡಿಯುವುದು
  • ದಿನಸಿ ವಸ್ತುಗಳ ಪಟ್ಟಿ ತಯಾರಿಸುವುದು

ಮಕ್ಕಳು ಬೆಳೆದಂತೆ ಅವರು ಅಡುಗೆಮನೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು. ಅವರಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುವ ಮೂಲಕ ಅಡುಗೆಮನೆಯಲ್ಲಿ ಸುರಕ್ಷತೆ ಬಗ್ಗೆ ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT